Monday, 25th November 2024

ಚಂದ್ರನಲ್ಲಿ 4ಜಿ

ಬಡೆಕ್ಕಿಲ ಪ್ರದೀಪ
ಟೆಕ್ ಟಾಕ್

ಮನುಷ್ಯನ ಬಾಹ್ಯಾಕಾಶ ಸಾಹಸಗಳಿಗೆ ಮಿತಿ ಇಲ್ಲ ಎಂಬುದು ಈ ವಿದ್ಯಮಾನದಿಂದ ಗೊತ್ತಾಗುತ್ತದೆ. ಅಮೆರಿಕದ ನಾಸಾ ಸಂಸ್ಥೆಯು ಚಂದ್ರನ ಮೇಲೆ 4ಜಿ ತರಂಗಾಂತರ ಲಭ್ಯವಾಗುವ ಯೋಜನೆಯನ್ನು ಸಿದ್ಧಪಡಿಸಿದ್ದು, ಅದರ ಜವಾಬ್ದಾರಿಯನ್ನು ನೋಕಿಯಾ ಸಂಸ್ಥೆಗೆ ವಹಿಸಿದೆಯೆಂತೆ!

ಎಲ್ಲೆಡೆ 5ಜಿಯದೇ ಮಾತು ಕೇಳ್ತಾ ಇದ್ರೆ, ಚಂದ್ರ ಮಾತ್ರ ಒಂದು ಜನರೇಶನ್ ಹಿಂದೆ ಯಾಕೆ ಅನ್ನೋ ಮಾತು ನಿಮಗೆ ಈ ಟೈಟಲ್ ನೋಡಿದರೆ ಅನಿಸಬಹುದು. ಮತ್ತದು ಸಹಜ ಕೂಡ. ಇನ್ನು ಹೇಗಿದ್ದರೂ ಮನುಷ್ಯನೇ ಅಲ್ಲಿಗೆ ಹೋಗುವ ಯೋಚನೆ ಇನ್ನೂ ಮೂದೇ ಇರುವಾಗ, ಅಲ್ಲಿ 4ಜಿ ಇದ್ದು ಏನು ಪ್ರಯೋಜನ ಅನ್ನುವವರಿಗೆ ಈ ವಿಷಯಗಳು ಉತ್ತಮ ಓದಿಗೆ ದಾರಿಯಾಗುತ್ತವೆ
ಅನ್ನೋದು ನನ್ನ ಅನಿಸಿಕೆ.

ಚಂದ್ರನ ಮೇಲೆ ಇನ್ನೂ ಮಾನವನು ಜೀವಿಸಲು ಶುರುವಿಟ್ಟುಕೊಂಡಿಲ್ಲವಾದರೂ, ಅಲ್ಲಿನ ಅಧ್ಯಯನಕ್ಕಾಗಿ ಲೂನಾರ್
ರೋವರ್‌ಗಳು, ಆಸ್ಟ್ರೋನಾಟ್‌ಗಳು, ಜತೆಗೆ ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಶನ್‌ಗಳು ಸಂವಹನ ನಡೆಸುವುದಕ್ಕೆಂದೇ ನಾಸಾ ಈ ರೀತಿಯ 4ಜಿ ತಂತ್ರಜ್ಞಾನವನ್ನು ಅಲ್ಲಿ ಬಳಸುವ ಯೋಜನೆಯಂತೆ.

ನೋಕಿಯಾ ಜವಾಬ್ದಾರಿ?
ಈ ಯೋಜನೆಯ ಸಾಧ್ಯತೆ ಬಾಧ್ಯತೆಗಳ ಲೆಕ್ಕಾಚಾರಗಳು ನಡೆಯುತ್ತಿದ್ದು, ಇದನ್ನು ನೋಕಿಯಾ ಕೈಗೆತ್ತಿಕೊಂಡಿದೆ ಎನ್ನಲಾಗಿದೆ. 370 ಮಿಲಿಯನ್ ಡಾಲರ್‌ಗಳ 2024ರ ಯೋಜನೆಯನ್ವಯ ನಾಸಾ ಚಂದ್ರನಲ್ಲಿಗೆ ಆಸ್ಟ್ರೋನಾಟ್‌ಗಳನ್ನು ಕಳುಹಿಸುವಾಗ ಅದರೊಂದಿಗೆ ಈ 4ಜಿ ನೆಟ್ ವರ್ಕನ್ನು ಅಲ್ಲಿ ಇನ್‌ಸ್ಟಾಲ್ ಮಾಡುವುದು ಯೋಜನೆ, ಅದಕ್ಕೆಂದೇ ನಾಸಾ ಈ ಪೈಕಿ 14.1 ಮಿಲಿ ಯನ್ ಡಾಲರ್‌ಗಳನ್ನು ನೋಕಿಯಾಗೆ ನೀಡಿದೆಯಂತೆ. ಇನ್ನು 5ಜಿ ಯಾಕಿಲ್ಲ ಅನ್ನುವುದಕ್ಕೆ ಉತ್ತರ, 4ಜಿ ಹೋದಷ್ಟು ದೂರಕ್ಕೆ 5ಜಿ ತರಂಗಗಳು ಹೋಗದಿರುವುದು.

4ಜಿ ತಲುಪುವಷ್ಟು ಸ್ಥಳವನ್ನು ತಲುಪಲು ಹೆಚ್ಚು 5ಜಿ ಟವರ್‌ಗಳನ್ನು ಭೂಮಿಯ ಮೇಲೂ ಹಾಕಬೇಕಾಗಿ ಬರುತ್ತಿರುವುದು ಈ ಕುರಿತು ಕುತೂಹಲವಿದ್ದವರು ಈಗಾಗಲೇ ತಿಳಿದಿರುವ ವಿಚಾರ. ಹಾಗಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಭೂಮಿಯಿಂದ
ಅಲ್ಲಿಗೆ ಮಾಹಿತಿಯನ್ನು ತಲುಪಿಸಲು ಕೇವಲ ಸ್ಯಾಟಲೈಟ್‌ಗಳನ್ನು ಬಳಸದೇ ಈ ಮೂಲಕ ಮಾಹಿತಿಯನ್ನು ರವಾನೆ ಮಾಡುವ ಸಾಧ್ಯತೆಗಳನ್ನು ನೋಡಲಾಗುತ್ತಿದೆ. ಹಾಗೂ ಈ ಹಿಂದೆಯೇ ನೋಕಿಯಾ ಚಂದ್ರನಿಂದ ಚಿತ್ರಗಳನ್ನು ಕಳುಹಿಸುವ ಬದಲು ಎಚ್‌ಡಿ ವಿಡಿಯೋಗಳನ್ನು ಕಳುಹಿಸಬಲ್ಲ ತಂತ್ರಜ್ಞಾನವನ್ನು ಬೆಳೆಸಬೇಕೆಂಬ ಆಶಯವನ್ನು ತೋರಿತ್ತು. ಈ 4ಜಿ ತಂತ್ರಜ್ಞಾ ನವು ಭೂಮಿಯ ಮೇಲೆ ಹೇಗೆ ಕೆಲಸ ಮಾಡುತ್ತದೋ, ಅದೇ ರೀತಿ ಚಂದ್ರನಲ್ಲೂ ಕಾರ್ಯ ನಿರ್ವಹಿಸುವುದು  ಸಾಧ್ಯವಿಲ್ಲ ವಾದ್ದರಿಂದ, ಅಲ್ಲಿನ ಪರಿಸ್ಥಿತಿಗೆ 4ಜಿ ಹೇಗೆ ಒಗ್ಗಿಕೊಳ್ಳುತ್ತದೆ, ಹಾಗೂ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ 4ಜಿಯನ್ನು ಹೇಗೆ ಬದಲಾಯಿಸು  ವುದು ಎನ್ನುವುದನ್ನು ಈ ನೋಕಿಯಾದ ಉತ್ತರ ಅಮೆರಿಕಾ ವಿಭಾಗವು ರಿಸರ್ಚ್ ಮಾಡಲಿದೆ.

ಈ 2024ರ ಆರ್ಟಮಿಸ್ ಮಿಶನ್‌ನ ಪ್ರಕಾರ ನಾಸಾ ಮಾಡುತ್ತಿರುವ ತಯಾರಿಯಿಂದ 2028ರ ವೇಳೆಗೆ ಆಸ್ಟ್ರೊನಾಟ್‌ಗಳು ಅಲ್ಲಿಯೇ ಇದ್ದು ಕೆಲಸ ಮಾಡುವಂತೆ ಬೇಕಾದ ವ್ಯವಸ್ಥೆಯನ್ನು ಮಾಡುವುದಾಗಿದೆ. ಈ ಮೂಲಕ ಬೇರೆ ಗ್ರಹಗಳಿಗೆ ಪ್ರಯಾಣ ಮಾಡುವುದಕ್ಕೂ ಇದು ಒಂದು ತಂಗುದಾಣವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್ ಮೊದಲ ಸ್ಥಾನಕ್ಕೆ ಕೆಲ ತಿಂಗಳ ಹಿಂದೆಯಷ್ಟೇ ಭಾರತದಲ್ಲಿ ಚೀನಾ ಉತ್ಪನ್ನಗಳ ವಿರುದ್ಧ ಕಂಡುಬಂದಿದ್ದ ಆಕ್ರೋಶದಿಂದ ಮೊಬೈಲ್ ಫೋನ್ ಮಾರ್ಕೆಟ್‌ನ ಮೊದಲ ಬಲಿ ಆಗಿದೆ. ಅದುವೇ ಶವೋಮಿ. ಅದೆಷ್ಟೋ ವರ್ಷಗಳಿಂದ ಮಾರು ಕಟ್ಟೆಯಲ್ಲಿ ಮೊದಲ ಸ್ಥಾನದಿಂದ ಕೆಳಗೆ ಇಳಿದಿದ್ದ ಸ್ಯಾಮ್‌ಸಂಗ್ ಇದೀಗ ಮತ್ತೆ ಅದೇ ಸ್ಥಾನವನ್ನು ಗಳಿಸಿದ್ದು, ಆಗಸ್ಟ್‌ ತಿಂಗಳ ವರದಿಯ ಪ್ರಕಾರ ಸುಮಾರು ಶೇ.25 ಮಾರುಕಟ್ಟೆಯನ್ನು ಅದು ಕಬಳಿಸಿಕೊಂಡಿದ್ದು ಶೇ.21 ಮಾರುಕಟ್ಟೆ ಪ್ರಮಾಣ ಪಡೆದ ಶವೋಮಿಯನ್ನು ಎರಡನೇ ಸ್ಥಾನಕ್ಕೂ, ನಂತರದ ಸ್ಥಾನದಲ್ಲಿ ವೀವೋ ಮೊಬೈಲ್ ಕುಳಿತಿದೆ.

ಇದು ಒಂದು ರೀತಿಯಲ್ಲಿ ನಿರೀಕ್ಷಿತವೇ ಆಗಿದ್ದರೂ, ಸ್ಯಾಮ್‌ಸಂಗ್ ಏನು ಸುಮ್ಮನೆ ಕುಳಿತಿಲ್ಲ, ತನ್ನ ಎಮ್ ಸೀರೀಸ್ ಫೋನ್‌ಗಳ ಮೂಲಕ ಈ ಕಂಪೆನಿ ಅತಿ ಉಗ್ರವಾದ ಪ್ರತಿ ತಂತ್ರಗಳನ್ನು ಮಾಡುತ್ತಿದ್ದು, ಚೀನಾದ ಫೋನ್‌ಗಳು ನೀಡುತ್ತಿದ್ದ, ಕಡಿಮೆ ಬೆಲೆ, ಹೆಚ್ಚು ಫೀಚರ್‌ಗಳನ್ನು ತಾನೂ ನೀಡುವ ಮೂಲಕ ಮತ್ತೆ ಆ ಸ್ಥಾನವನ್ನು ಗಳಿಸಲು ಸಾಧ್ಯವಾದಂತಿದೆ. ಒಟ್ಟೂ ಇದೊಂದು ತಾತ್ಕಾಲಿಕ ಬದಲಾವಣೆಯೋ ಅಥವಾ ಇನ್ನು ಮುಂದಿನ ದಿನಗಳಲ್ಲೂ ಇದೇ ಮುಂದುವರೆಯಲಿದೆಯೋ ನೋಡಬೇಕಷ್ಟೇ.
ಯಾಕೆಂದರೆ, ಸ್ಯಾಮ್‌ಸಂಗ್ ಮುಂಬರುವ ಮೂರು ತಿಂಗಳ ಹಬ್ಬದ ಸೀಸನ್‌ನಲ್ಲಿ ಇದೇ ಸ್ಟ್ರಾಟಜಿಯನ್ನು ಬಳಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಸಾಧ್ಯತೆಯಿದ್ದು, ಅದು ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡೀತೇ ಅನ್ನುವುದು ಸಧ್ಯ ಕಾದು ನೋಡಬೇಕಿದೆ. ಇನ್ನು ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯ 81 ಶೇಕಡಾ ಪಾಲನ್ನು ತಾನೇ ಹಿಡಿದಿಟ್ಟು ಕೊಂಡಿದ್ದ ಚೀನಾ ಫೋನ್‌ಗಳ ಮಾರಾಟ 72 ಶೇಕಡಾಕ್ಕೆ ಕುಸಿದಿದೆ.

ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆಗಳೆರಡರಲ್ಲೂ ಸ್ಯಾಮ್‌ಸಂಗ್ ವೇಗವಾಗಿ ತನ್ನ ಮಾರಾಟದ ವ್ಯವಸ್ಥೆಯನ್ನು
ಬದಲಾಯಿಸಿಕೊಂಡುರುವುದೂ ಇದಕ್ಕೆ ಕಾರಣವಾಗಿದೆ. ಈ ಕುರಿತು ಸಮೀಕ್ಷೆ ನಡೆಸುವ ಕೌಂಟರ್‌ಪಾಯಿಂಟ್ ಸಂಶೋಧನಾ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಈ ಟ್ರೆಂಡ್ ಈ ವರ್ಷದ ಕೊನೆಯವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಭಾರತ ದಲ್ಲಿ ಚೀನಾ ವಿರೋಧಿ ಭಾವನೆ ಒಡಮೂಡಿದ್ದು, ಒಂದೆಡೆ ಜನರೂ ಚೀನಾದ ಮಾಲನ್ನು ದೂರ ಮಾಡುವ ಯೋಚನೆಗೆ ಹೋಗಿದ್ದರೆ, ಇನ್ನೊಂದೆಡೆ ಸರಕಾರವೂ ಗಲ್ವಾನ್ ಲಡಾಯಿಯ ನಂತರ ಕೆಲವೊಂದು ಆಪ್‌ಗಳನ್ನೂ ಬ್ಯಾನ್ ಮಾಡಿದ್ದೂ
ನಡೆದಿದೆ. ಇನ್ನು ವಿಶ್ವದಾದ್ಯಂತ ಕೂಡ ಸ್ಯಾಮ್‌ಸಂಗ್ ಮುಂಚೂಣಿಯ ಸ್ಥಾನ ಗಳಿಸಿಕೊಂಡಿದೆ. ಈ ಹಿಂದೆ ನಂಬರ್ ವನ್ ಆಗಿದ್ದ ಈ ಫೋನ್ ತಯಾರಕ, ಮಧ್ಯದಲ್ಲಿ ಆ ಸ್ಥಾನವನ್ನು ಹುವಾವೇಗೆ ಬಿಟ್ಟುಕೊಟ್ಟಿತ್ತು.

ಇದೀಗ 22 ಶೇಕಡಾ ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿರುವ ಸ್ಯಾಮ್ಸಂಗ್ ನಂಬರ್ ವನ್ ಆಗಿದೆ. ಇದಕ್ಕೆ ಅಮೆರಿಕವು ಹುವಾವೇಯನ್ನು ನಿಷೇಧಿಸಿದ್ದು ಸಹ ಒಂದು ಕಾರಣ ಎನಿಸಿದೆ. ಆದರೆ ಭಾರತದಲ್ಲಿ ಕೆಳಗೆ ಹೋಗಿರುವ ಶವೋಮಿ ವಿದೇಶ ಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದೆ ಅನ್ನಲಾಗುತ್ತಿದ್ದು, ಹುವಾವೇಗೆ ಮುಳ್ಳಾಗಿರುವುದು ಅದು ಚೀನಾದ ಸರಕಾರವೇ ನಡೆಸು ತ್ತಿರುವ ಕಂಪೆನಿ ಎಂದೂ, ಅದರಿಂದ ಸುರಕ್ಷತೆಗೆ ಧಕ್ಕೆ ಇದೆ ಎಂದು ಅಮೆರಿಕ ಆದಿಯಾಗಿ ಹಲವು ಕಂಪೆನಿಗಳು ಅದಕ್ಕೆ ಛೀ ತೂ ಅಂದಿರುವುದೇ ಕಾರಣ ಎನ್ನುವಂತೆ ಕಾಣುತ್ತಿದೆ. ಒಟ್ಟಿನಲ್ಲಿ, ಸ್ಯಾಮ್‌ಸಂಗ್ ಮತ್ತೆ ಗೆಲುವಿನ ನಗೆ ಬೀರಲು ಚೀನಾವೇ ಪರೋಕ್ಷ ಕಾರಣವಾಗಿರುವುದು ವಿಚಿತ್ರ.