Saturday, 14th December 2024

5 ಜಿ ಮೋಹ ಡೇಟಾ ದಾಹ

ಟೆಕ್ ಟಾಕ್

ಬಡೆಕ್ಕಿಲ ಪ್ರದೀಪ

ಇನ್ನೇನು ನಮ್ಮ ದೇಶದಲ್ಲಿ 5 ಜಿ ಕಾಲಿಡಲು ತಯಾರಾಗಿದೆ. ಇಂತಹ ಪ್ರಮುಖ ತಂತ್ರಜ್ಞಾನವು ವ್ಯಾಪಕವಾಗಲು ಇರುವ ಸವಾಲುಗಳೇನು? ಯಾವೆಲ್ಲಾ ಸಂಸ್ಥೆಗಳು 5ಜಿ ನೀಡಲು ಸಿದ್ದವಾಗಿವೆ? ಓದಿ ನೋಡಿ.

ಡೇಟಾ ಇಲ್ಲದೆ ಊಟ ಇಲ್ಲ ಇಂದಿನ ಮಂದಿ! ಯಾವುದೇ ಕೆಲಸ ಮಾಡಲೂ ಡೇಟಾ ಬೇಕು. ಒಂದೆಡೆ ಬ್ರಾಡ್‌ಬ್ಯಾಂಡ್‌ನ ಒಳಸುಳಿ ದೇಶದ ಮೂಲೆ ಮೂಲೆಗೆ ಹೋಗುವುದು ಅಸಾಧ್ಯವೆನಿಸಿರುವ ಹೊತ್ತಿನಲ್ಲಿ, ಭಾರತದ 95ಕ್ಕೂ ಹೆಚ್ಚು ಭಾಗವನ್ನು 4ಜಿ ವ್ಯಾಪಿ ಸುವ ಮೂಲಕ ಮೊಬೈಲ್ ಬ್ರಾಡ್‌ಬ್ಯಾಂಡ್ ವ್ಯಾಪಕವಾಗಿ ಮನೆ ಮನೆಯನ್ನೂ ಹೊಕ್ಕುವ ಮೂಲಕ ಇಂಟರ್ನೆಟ್ ಕ್ರಾಂತಿ ಯನ್ನು ನಾಡು ಇಂದು ಕಂಡಿದೆ.

ಹಿಂದೆಂದೂ ಮೊಬೈಲ್ ಹಿಡಿಯದವರೆಲ್ಲಾ ಈಗ ಟಿವಿಯನ್ನೂ ಬಿಟ್ಟು ಮೊಬೈಲ್‌ನಲ್ಲೇ ಮನರಂಜನೆಯನ್ನು, ಮಾಹಿತಿಯನ್ನು ಪಡೆಯಲು ಶುರುವಿಟ್ಟುಕೊಂಡಿದ್ದಾರೆ. ಇನ್ನು ಲಾಕ್ ಡೌನ್ ಇತ್ಯಾದಿಯ ಕಾರಣ ಹಳ್ಳಿ ಹಳ್ಳಿಯಲ್ಲೂ ವರ್ಕ್ ಫ್ರಮ್ ಹೋಮ್ ಮಾಡುವವರ ದೊಡ್ಡ ಸೇನೆಯೇ ಇದೆ.

ಆದರೆ ಈ ವೇಗದ ಹಸಿವು ಅವರಿಗಿದೆಯೋ ಇಲ್ಲವೋ ಗೊತ್ತಿಲ್ಲ, ಮೊಬೈಲ್ ಸೇವೆ ನೀಡುವ ಭಾರತದ ಎರಡು ದೈತ್ಯಗಳಿಗಂತೂ ಖಂಡಿತಾ ಇದೆ. ಇದೇ ಕಾರಣದಿಂದಾಗಿ, ಇನ್ನೇನು ಮೂಲೆ ಮೂಲೆಗೂ 3ಜಿಯ ಕೈಬಿಟ್ಟು ಸಂಪೂರ್ಣವಾಗಿ 2ಜಿಯ ಆಧಾರ ಒಂದೆಡೆಯಲ್ಲಿಟ್ಟುಕೊಂಡು 4ಜಿ ಸೇವೆಗಳನ್ನು ಹರಡುತ್ತಿರುವ ಏರ್‌ಟೆಲ್ ಹಾಗೂ ಕೇವಲ 4ಜಿ ಸೇವೆಯನ್ನೇ ನೀಡುವ ಜಿಯೋ ಇದೋ ಮುಂದಿನ ಜನರೇಶನ್ನಿಗೆ ಅಡಿಯಿಡುವ ತರಾತುರಿಯಲ್ಲಿವೆ.

5ಜಿಯ ಕಾಲ ಸನ್ನಿಹಿತ?
ಈ ಸುದ್ದಿ ಏರ್‌ಟೆಲ್‌ನದು. ಮೊನ್ನೆ ಮೊನ್ನೆ 1800 ಮೆಗಾಹರ್ಟ್ಸ್‌ ತರಂಗಾಂತರವನ್ನು ಬಳಸಿಕೊಂಡು ಏರ್‌ಟೆಲ್ ಹೈದರಾ ಬಾದಿನಲ್ಲಿ 5ಜಿ ತಂತ್ರಜ್ಞಾನವನ್ನು ನಿತ್ಯ ಬಳಕೆಯಲ್ಲಿ ಅಳವಡಿಸಿ ಟೆಸ್ಟ್‌ ಮಾಡಿದ್ದು, ಕೆಲವೇ ಸೆಕೆಂಡುಗಳಲ್ಲಿ ಸಿನಿಮಾಗಳನ್ನು ಡೌನ್ಲೋಡ್ ಮಾಡುವ ವೇಗವನ್ನು ನೀಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದೆ.

ದೇಶದಲ್ಲಿನ್ನೂ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ನಡೆದಿಲ್ಲವಾದರೂ, ಈಗಾಗಲೇ ಲಭ್ಯವಿರುವ 1800 ಮೆಗಾಹರ್ಟ್ಸ್‌  ತರಂಗಾಂತರದಲ್ಲೇ, ಅದು ಎನ್‌ಎಸ್‌ಏ (ನಾನ್ ಸ್ಟಾಂಡಲೊನ್- ಒಂದಕ್ಕೇ ಸೀಮಿತವಲ್ಲದ) ತಂತ್ರಜ್ಞಾನವನ್ನು ಉಪಯೋಗಿಸಿ 5ಜಿಯನ್ನು 4ಜಿಯ ಜೊತೆಯಲ್ಲೇ ನೀಡಲು ಸಾಧ್ಯವಾಗುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಗ್ರಾಹಕ ಬಳಕೆಯ 5ಜಿಯನ್ನು ಟೆಸ್ಟ್‌ ಮಾಡಿದ ಮೊಬೈಲ್ ಸೇವಾ ಕಂಪೆನಿ ತಾನೆ ಎಂದಿದೆ.

300 ಎಂಬಿಪಿಎಸ್ ವೇಗವನ್ನು ನೀಡುವುದಕ್ಕೆ ಸಾಧ್ಯವಾಗಿದೆ ಎಂದಿರುವ ಏರ್‌ಟೆಲ್, ಆದಷ್ಟು ಬೇಗ 5ಜಿಯನ್ನು ಲಾಂಚ್ ಮಾಡಲು ಸಿದ್ಧ, ನಮಗೆ ಅದಕ್ಕೆ ತಕ್ಕಷ್ಟು ಸ್ಪೆಕ್ಟ್ರಮ್ ಸಿಗಬೇಕಷ್ಟೇ ಎಂದಿದೆ. ಇದೇ ವೇಳೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಅನ್ನುವ ವಾಣಿಜ್ಯ ಸೇವೆಯನ್ನು ನೀಡುವ ಹಾಗೂ ಅವುಗಳನ್ನು ಅವಲೋಕಿಸುವ ಸಂಸ್ಥೆಯ ಪ್ರಕಾರ ಭಾರತದಲ್ಲಿ ವಾಣಿಜ್ಯ ರೂಪದಲ್ಲಿ 5ಜಿ ಸೇವೆಗಳನ್ನು ನೀಡುವಂತಹ ವ್ಯವಸ್ಥೆ ಸ್ಥಿರಗೊಳ್ಳಲು ಇನ್ನೂ ಕೆಲ ವರ್ಷಗಳೇ ಬೇಕಾಗಬಹುದು.

ಮುಖ್ಯವಾಗಿ ಇನ್ನೂ ಸ್ಪೆಕ್ಟ್ರಮ್ ಹರಾಜು ಆಗಿಲ್ಲದಿರುವುದು, 5ಜಿಗೆ ಬೇಕಾದ ಸ್ಪೆಕ್ರ್ಟಮ್ ಇಲ್ಲದಿರುವುದರಿಂದ ಅದಕ್ಕೆ ತಕ್ಕ ಸೇವೆ ಗಳನ್ನು ಮೊಬೈಲ್ ಸೇವಾ ಕಂಪೆನಿಗಳು ನೀಡಲು ಅಸಾಧ್ಯ.

ಬಹು ಬೇಗ ನೀಡಬಹುದೇ 5ಜಿ ಸೇವೆ?
ಒಂದೆಡೆ ಮೊಬೈಲ್ ಸೇವಾ ಕಂಪೆನಿಗಳು 5ಜಿ ಸೇವೆಯನ್ನು ಬೇಗ ನೀಡಲು ಸಾಧ್ಯವಿಲ್ಲುವ ವಿಶ್ಲೇಷಣೆಗಳಾದರೆ, ಇನ್ನೊಂದೆಡೆ ಕಂಪೆನಿಗಳು ತಾವು ಸ್ಪೆಕ್ಟ್ರಮ್ ಸಿಕ್ಕೊಡನೆ ಸೇವೆಗಳನ್ನು ನೀಡುವುದಕ್ಕೆ ಸಿದ್ಧ ಹಾಗೂ ಬದ್ಧ ಎನ್ನುವ ಮಾತನ್ನು ಆಡುತ್ತಿರುವುದರ ಜೊತೆಗೇ ಭಾರತೀಯ ಸರಕಾರಿ ಹಾಗೂ ಕಾನೂನಾತ್ಮಕ ಮತ್ತು ಅದಕ್ಕೆ ತಕ್ಕ ವ್ಯವಸ್ಥೆಗಳು ಬಹಳ ವೇಗದಲ್ಲಿ 5ಜಿ ತಂತ್ರಜ್ಞಾನ ವನ್ನು ನೀಡಲು ಬೇಕಾದ ವೇದಿಕೆಯನ್ನು ಸಿದ್ಧ ಮಾಡುತ್ತಿರುವುದು ಕಂಡುಬರುತ್ತಿದೆ.

ಇದಕ್ಕೆ ಕಾರಣಗಳು ಹಲವಿದೆ. ಮೊದಲನೆಯದಾಗಿ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಹಿಂದಿನ ತಂತ್ರಜ್ಞಾನ ಅಥವಾ ಜನರೇಶನ್ ಭಾರತಕ್ಕೆ ಬಂದದ್ದಕ್ಕಿಂತ ಬೇಗನೆ 5ಜಿ ಬರಲು ಬೇಕಾದೆಲ್ಲ ವ್ಯವಸ್ಥೆಗಳನ್ನು ಭಾರತ ಮಾಡು ತ್ತಿದೆ ಎಂದಿದ್ದಾರೆ.

ಇದಕ್ಕೆ ಪೂರಕ ಹಾಗೂ ಪ್ರೇರಕವೆನ್ನುವ ಹಲವು ವಿಚಾರಗಳು ನಡೆಯುತ್ತಲೂ ಇವೆ. ಅವುಗಳಲ್ಲೊಂದು, ಹೊಸದೊಂದು ಸ್ಪೆೆಕ್ಟ್ರಮ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಭಾರತದಲ್ಲಿ ಯಾವುದೇ ಕಂಪೆನಿಗೂ ಒಂದು ವರ್ಷ ನೋಟಿಸ್ ನೀಡ ಬೇಕಾದ ಅನಿವಾರ್ಯತೆಯಿತ್ತು. ಇದರಿಂದ 5ಜಿ ಅಥವಾ ಬೇರೆ ಯಾವುದೇ ತಂತ್ರಜ್ಞಾನ ಬರಲು ತಡವಾಗುತ್ತಿದ್ದುದರಿಂದ ಅದನ್ನೀಗ ಸರಕಾರ 6 ತಿಂಗಳುಗಳಿಗೆ ಇಳಿಸಿದೆ.

5ಜಿ ಇದೀಗ ವಿಶ್ವದೆಲ್ಲೆಡೆ 3300ರಿಂದ 3600 ಮೆಗಾಹರ್ಟ್ಸ್‌ ತರಂಗಾಂತರವನ್ನು 5ಜಿ ಬಳಕೆಗೆ ಎಲ್ಲಾ ವ್ಯವಸ್ಥೆಗಳೂ ಆಯ್ಕೆ ಮಾಡಿ ಕೊಂಡಿದ್ದರೂ ಜಿಯೋ ತನ್ನಲ್ಲಿರುವ ಹಾಗೂ ಮುಂದಿನ ಮಾರ್ಚ್ 1, 2021ರ 4ಜಿ ಹರಾಜಿನಲ್ಲಿ ಹರಾಜಿಗಿರುವ 700 ಮೆಗಾ ಹಟ್ಸರ್ ಅನ್ನೂ ಕೂಡ ಬಳಸಿಕೊಂಡು ತನ್ನ ಸಮ್ಮಿಳಿತಗೊಂಡ ತಂತ್ರಜ್ಞಾನ ಬಳಸಿ 4ಜಿಯೊಂದಿಗೇ 5ಜಿಯನ್ನೂ ನೀಡಲು ತಾನು ತಯಾರಿರುವ ಬಗ್ಗೆ ಹೇಳಿಕೊಂಡಿದೆ.

2021ರ ಉತ್ತರಾರ್ಧದಲ್ಲಿ ಜಿಯೋ 5ಜಿ
ಈಗಾಗಲೇ ಹೇಳಿರುವಂತೆ ಜಿಯೋ ತನ್ನಲ್ಲಿ ಲಭ್ಯವಿರುವ ಹಾಗೂ ಇನ್ನು ಮುಂದೆ ಸಿಗಲಿರುವ ಸ್ಪೆೆಕ್ಟ್ರಮ್ ಅನ್ನು ಬಳಸಿಕೊಳ್ಳು ವುದು ಒಂದೆಡೆಯಾದರೆ, ಈಗಾಗಲೇ ಕ್ವಾಲ್ಕಾಮ್ ಜೊತೆಗೂಡಿ ಭಾರತದಲ್ಲೇ ರು. 730 ಕೋಟಿ ಹೂಡಿಕೆ ಮಾಡುವ ಮೂಲಕ ತನ್ನದೇ ಆದ 5ಜಿ ರೇಡಿಯೋ ಆಕ್ಸೆಸ್ ನೆಟ್‌ವರ್ಕ್ ತಯಾರಿಸಿದ್ದು, ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ತನ್ನ ಪಾಲನ್ನೂ ನೀಡುತ್ತಿದೆ ಅನ್ನುತ್ತಿದೆ  ಜಿಯೋ.

ಆತ್ಮನಿರ್ಭರ 5ಜಿ
ಜಿಯೋ ಒಂದೆಡೆ ತನ್ನ 5ಜಿ ತಂತ್ರಜ್ಞಾನದ ಆತ್ಮನಿರ್ಭರತೆಯನ್ನು ತೋರಿಸಿಕೊಳ್ಳುವುದನ್ನು ಮಾಡುತ್ತಿದ್ದರೆ ಭಾರತದ
ಮಾಹಿತಿ ತಂತ್ರಜ್ಞಾನ ಸಚಿವರ ನುಡಿಗಳೂ ಅದಕ್ಕೆ ತಕ್ಕುದಾಗೇ ಇದೆ. ಏರ್‌ಟೆಲ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ, ಜೊತೆಗೆ ವೋಡಪೋನ್-ಐಡಿಯಾ (ವಿ ಮೊಬೈಲ್)ನದೂ ಅದೇ ಪ್ಲಾನು.

ಏರ್‌ಟೆಲ್ ತನ್ನೆಲ್ಲಾ ವೆಂಡರ್‌ಗಳಿಗೆ ಯಾವುದೇ 5ಜಿ ತಂತ್ರಜ್ಞಾನದ ಸಲಕರಣೆಯಾಗಲೀ ಅದನ್ನು ಭಾರತದಲ್ಲೇ ತಯಾರಿಸು ವಂತೆ ತಾಕೀತು ಮಾಡಿದೆ. ಈ ಹಿಂದೆ ಲಾಕ್ ಡೌನ್ ವೇಳೆ ಕಂಡ ತಲೆನೋವುಗಳೂ ಒಂದು ಕಾರಣವಾಗಿದ್ದರೆ ಆತ್ಮನಿರ್ಭರ ಭಾರತಕ್ಕೆ ಕೊಟ್ಟಿರುವ ಕರೆಯೂ ಇನ್ನೊಂದು ಕಾರಣ ಅನ್ನಬಹುದು. ಸಿಯೆನಾ, ಸಿಸ್ಕೋ, ನೋಕಿಯಾ ಅಲ್ಲದೇ ಹಲವು ಸಂಸ್ಥೆ ಗಳು ಅದಕ್ಕೆ ಸಲಕರಣೆ ಹಾಗೂ ತಂತ್ರಜ್ಞಾನವನ್ನು ನೀಡುತ್ತಿವೆ.

ಇನ್ನು ರವಿಶಂಕರ್ ಪ್ರಸಾದ್ ಅವರ ಪ್ರಕಾರ 5ಜಿ ಟೆಸ್ಟಿಂಗ್ ಶೀಘ್ರ ದೊಡ್ಡ ಮಟ್ಟಿನಲ್ಲಿ ನಡೆಯುವುದಕ್ಕೆ ತಕ್ಕುದಾದ ವೇದಿಕೆ ಯನ್ನು ಸರಕಾರ ಒದಗಿಸಿ ಕೊಡಲಿದೆ. ನಮ್ಮ ಮಾಹಿತಿ ಹಾಗೂ ಗೌಪ್ಯತೆ ಹಾಗೂ ಇನ್ನಿತರ ಕಾರಣಗಳ ದೃಷ್ಟಿಯಿಂದ 5ಜಿ ನೆಟ್‌ವರ್ಕ್ ಕೋರ್ ಅನ್ನು ಭಾರತದಲ್ಲೇ ಅಭಿವೃದ್ಧಿಗೊಳಿಸಬೇಕು ಅಂದಿದ್ದಾರೆ. ಅಲ್ಲದೇ ಚೀನೀ ಸಂಸ್ಥೆಗಳಾದ ಝೆಟ್‌ಟಿಇ ಮತ್ತು ಹುವಾವೇ ಉಳಿದ ಸಲಕರಣೆಗಳನ್ನು ಕೊಡಲು ಅವಕಾಶ ಪಡೆದರೂ ಈ ಕೋರ್ ಸಲಕರಣೆಗಳನ್ನು ನೀಡುವುದಕ್ಕೆ ಸಾಧ್ಯವಾಗದು, ಕಾರಣ ಅವುಗಳೇ ಸುರಕ್ಷತೆ ಹಾಗೂ ಗೌಪ್ಯತೆಗೆ ಮೂಲಬಿಂದುಗಳು ಅಂದಿದೆ ಸರಕಾರ.