ಅಹೀಶ್ ಭಾರದ್ವಾಜ ನ್ಯೂಜೆರ್ಸಿ
ಭಾರತದಲ್ಲಿ ಕರೋನಾ ವೈರಸ್ಸಿನ ಎರಡನೇ ಅಲೆ ಸೃಷ್ಟಿಸಿದ ಸಂಕಷ್ಟಗಳು ಹಲವಾರು. ಇದರ ಪರಿಣಾಮವಾಗಿ ವೈದ್ಯಕೀಯ
ವ್ಯವಸ್ಥೆ, ಆಮ್ಲಜನಕದ ಕೊರತೆ, ವೆಂಟಿಲೇಟರ್ ಕೊರತೆ ಕಂಡುಬಂದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡಲು
ವೈದ್ಯಕೀಯ ಸಮೂಹ ದೊಡ್ಡ ಸವಾಲನ್ನು ಎದುರಿಸುವಂತಾಗಿದೆ.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನುರಿತ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ದೊರೆಯುವುದೂ ಕೂಡ ಸವಾಲಾಗಿದೆ.
ಈ ಪರಿಸ್ಥಿತಿಯನ್ನು ಮನಗಂಡು ಬಾಸ್ಟನ್, ಅಮೆರಿಕದಲ್ಲಿ ನೆಲೆಸಿ ಹೃದಯ ತಜ್ಞರಾಗಿ ಕೆಲಸ ಮಾಡುತ್ತಿರುವ ಬೆಂಗಳೂರು
ಮೆಡಿಕಲ್ ಕಾಲೇಜಿನ ಪದವೀಧರೆ ಡಾ.ವೀಣಾ ಶಂಕರ್ ತಮ್ಮ ಸಹಪಾಠಿಗಳಾದ ಬೆಂಗಳೂರಿನ ವೈದ್ಯರಾದ ಡಾ.ಪದ್ಮ ಎಸ್.
ಹಾಗು ಡಾ.ಸ್ನೇಹ ವಿಕ್ರಮ್ ಜೊತೆ ಕೈಜೋಡಿಸಿ ವೈದ್ಯಕೀಯ ನೆರವನ್ನು ಒದಗಿಸಲು ತಮ್ಮದೇ ಆದ ಕರ್ನಾಟಕ-ಅಮೆರಿಕ
ಸ್ವಯಂಸೇವೆಯ ತಂಡವನ್ನು ರಚಿಸಿ, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಡಾ.ವೀಣಾ ಶಂಕರ್ ರವರ ನೇತೃತ್ವದಲ್ಲಿ ಅವರ ಸಹೋದರಿ ಡಾ.ಚೇತನಾ ಅಗ್ರಹಾರ ಮತ್ತು ಅವರ ಸಹಪಾಠಿಗಳಾದ ಡಾ.
ಸವಿತಾ ಗೌಡ, ಡಾ.ಅನುರಾಧಾ ಅಮರನಾಥ, ಡಾ.ಪಲ್ಲವಿ ನಂದೀಶ್ವರ, ಡಾ. ಇಂದ್ರೇಶ್ ಅರ್ಯ್ಯ, ಡಾ. ಸುನೀಲಾ ಹರ್ಸೂರು, ಮತ್ತು ಡಾ. ಶೇಖರ ಕೃಪಾದ್ ಇವರುಗಳು ಸೇರಿಕೊಂಡು ಕನ್ನಡ ಮಾತನಾಡುವ 60 ವೈದ್ಯರನ್ನು ತ್ವರಿತವಾಗಿ ಒಟ್ಟುಗೂಡಿಸಿ, ಹಾಗೆಯೇ ಈ ಕಾರ್ಯವನ್ನು ನಿರ್ವಹಿಸಲು ಬೇಕಾಗುವ ತಾಂತ್ರಿಕ ಸಹಾಯಕ್ಕೆ ಅಮೆರಿಕಾದಲ್ಲಿ ಹಿರಿಯ ತಂತ್ರಜ್ಞಾನಿ ಯಾಗಿ ಕೆಲಸ ನಿರ್ವಹಿಸುತ್ತಿರುವ ಕಿರಣ್ ಅಗ್ರಹಾರ ಹಾಗು ರೋಹನ್ ಶಂಕರ್ ಜೊತೆಗೂಡಿ ಈ ಸ್ವಯಂಸೇವೆಯ ತಂಡವನ್ನು ರಚಿಸಿದ್ದಾರೆ.
ದೂರವಾಣಿ ಮೂಲಕ ಸಲಹೆ
ಅಮೆರಿಕಾದಲ್ಲಿ ತಮ್ಮ ದಿನನಿತ್ಯದ ಕೆಲಸದ ಒತ್ತಡವಿದ್ದರೂ ಅದನ್ನು ನಿರ್ವಹಿಸಿಕೊಂಡು, ತಮಗಿರುವ ಕಾಲಮಾನದಲ್ಲಿನ
ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಹಗಲಿರುಳು ದೂರವಾಣಿ ಮುಖಾಂತರ ಉಚಿತ ಆರೋಗ್ಯ ಸಲಹೆಯನ್ನು ನೀಡು ತ್ತಿದ್ದಾರೆ.
ಜತೆಗೆ ವೈದ್ಯಕೀಯ ವಸ್ತುಗಳನ್ನು ಕೊಡುಗೆ/ದಾನಗಳ ಮೂಲಕ ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ವಿವಿಧ ಆಸ್ಪತ್ರೆ ಗಳಲ್ಲಿ ಹಾಸಿಗೆಗಳುಲಭ್ಯವಿರುವ ಮಾಹಿತಿ ನೀಡುವುದರೊಂದಿಗೆ, ಆಮ್ಲಜನಕ, ಔಷಧಗಳನ್ನು ಸೋಂಕಿತರಿಗೆ ಒದಗಿಸಲು ನೆರವಾಗುತ್ತಿದ್ದಾರೆ. ವಿವಿಧ ವೈದ್ಯಕೀಯ ವಿಷಯಗಳಲ್ಲಿ ವಿಶೇಷತೆಯನ್ನು ಪಡೆದಿರುವ ಈ ವೈದ್ಯರ ತಂಡ, ಕರೋನಪೀಡಿತ ರೋಗಿಗಳನ್ನು ಸಂಪರ್ಕಿಸಿ ಮನೆಯ ಈ ಖಾಯಿಲೆಯಿಂದ ಗುಣಮುಖರಾಗುವ ಬಗ್ಗೆ ತಿಳುವಳಿಕೆ ನೀಡಿ, ಅವರ ಚಿಕಿತ್ಸೆಗೆ ನೆರ ವಾಗುತ್ತಿದ್ದಾರೆ. ಈ ಸಮಾಲೋಚನೆಯಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತಾಗಿ, ಆಸ್ಪತ್ರೆಗಳಲ್ಲಿ ಜನಸಂದಣಿ ಕಡಿಮೆ ಯಾಗಿ, ಎಲ್ಲರಿಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುವಂತಾಗಬೇಕೆಂಬುದು ಈ ತಂಡದ ಮುಖ್ಯ ಉದ್ದೇಶ.
ತಾಂತ್ರಿಕ ತಂಡದ ಕಿರಣ್ ಅಗ್ರಹಾರ ಹಾಗು ರೋಹನ್ ಶಂಕರ್ ರವರು, ದೂರವಾಣಿ ಕರೆಗಳನ್ನು ಸಂಯೋಜಿಸಿ, ಇಲ್ಲಿನವೈದ್ಯರ ನಡುವೆ ಸಂಪರ್ಕ ಕಲ್ಪಿಸಿ ವೈದ್ಯಕೀಯ ಸಮಾಲೋಚನೆಗೆ ಸಹಾಯ ಮಾಡುತ್ತಿದ್ದಾರೆ. ಸಾವಿರಾರು ಮೈಲಿ ದೂರದಲ್ಲಿರುವ
ಕರ್ನಾಟಕ-ಅಮೆರಿಕ ಸ್ವಯಂಸೇವಕರ ಗುಂಪು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯವರೆಗೂ ಬೆಂಗಳೂರಿನ
ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಸೀಮಿತ ಚಿಕಿತ್ಸೆ ನೀಡುವುದರ ಮೂಲಕ ತಮ್ಮ ಸೇವೆಯನ್ನು
ನಿರ್ವಹಿಸಿದ್ದಾರೆ.
ಅಮೆರಿಕ 60ಕ್ಕೂ ಹೆಚ್ಚು ವೈದ್ಯರ ಈ ತಂಡದ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಇನ್ನೂ ಹಲವಾರು ಅನಿವಾಸಿ ವೈದ್ಯರು ತಮ್ಮ ಸಹಾಯಹಸ್ತವನ್ನು ನೀಡಲು ಮುಂದಾಗಿದ್ದಾರೆ ಎಂಬುದು ವಿಶೇಷ.