ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ ಇದೆ. ಹಿಂದಿನಿಂದಲೂ ಕೇಳಿಬರುತ್ತಿದೆ. ಹೀಗಾದರೆ ಸಾಮಾನ್ಯರ ಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತದೆ. ಈ ಮಾತಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಆಕ್ಟ್ 1978 ಚಿತ್ರ ತೆರೆಗೆ ಬರುತ್ತಿದೆ. ಶೀರ್ಷಿಕೆ ಕೇಳಿದಾಕ್ಷಣ ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಹೇಳುವ ಚಿತ್ರ ಎನ್ನುವುದು ಖಚಿತವಾಗುತ್ತದೆ. ಹಾಗಾದರೆ 1978ರ ಕಾಯ್ದೆಯಲ್ಲಿ ಅಂತಹ ಮಹತ್ವದ ವಿಚಾರ ಏನಿದೆ, ಆ ಕಾಯ್ದೆ ಏನು ಹೇಳುತ್ತದೆ ಎಂಬ ಕುತೂಹಲವೂ ಮೂಡುತ್ತದೆ. ಇದೆಲ್ಲಕ್ಕೂ ಚಿತ್ರ ನೋಡಿದ ಮೇಲೆಯೇ ಉತ್ತರ ಸಿಗಲಿದೆಯಂತೆ.
ಪ್ರಶಾಂತ್.ಟಿ.ಆರ್
ಸರಕಾರಿ ವಲಯದ ವಾಸ್ತವತೆಯನ್ನು ಯಥಾವತ್ತಾಗಿ ತೋರಿಸಲು ಆಕ್ಟ್ 1978, ತೆರೆಗೆ ಬಂದಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸರಕಾರಿ ವ್ಯವವ್ಥೆ ಸುಧಾರಿಸಿದೆಯೇ, ಜನ ಸಾಮಾನ್ಯರ ಕೆಲಸಗಳು ಸರಾಗವಾಗಿ ಆಗುತ್ತಿದೆಯೇ, ಭ್ರಷ್ಟಾಚಾರ ಎಷ್ಟರಮಟ್ಟಿಗೆ ಬೇರೂರಿದೆ ಎಂಬ ಅಂಶವನ್ನು ಆಕ್ಟ್ 1978 ಹೊತ್ತು ಬಂದಿದೆ. ಹಾಗಾದರೆ ಜನಸಾಮಾನ್ಯರಿಗೆ ಅನುಕೂಲ ವಾಗುವಂತಹ, ತಮ್ಮ ಹಕ್ಕುಗಳನ್ನು ಪಡೆಯಲು ಸಹಾಯಕವಾಗುವಂತಹ ಕಾನೂನುಗಳನ್ನು ಜಾರಿಗೊಳಿಸಿದ್ದು ಸಫಲವಾಗಿ ದೆಯೇ, ಆ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಿವೆಯೇ ಎಂಬೆಲ್ಲ ಪ್ರಶ್ನೆಗಳನ್ನು ಈ ಚಿತ್ರ ಪ್ರೇಕ್ಷಕರ ಮುಂದಿಡುತ್ತದೆ.
ನೈಜತೆಯ ಸ್ಪರ್ಶ
ಈ ಹಿಂದೆ ಹರಿವು, ನಾತಿಚರಾಮಿಯಂತಹ ಚಿತ್ರಗಳನ್ನು ನಿರ್ದೇಶಿಸಿ , ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಿರ್ದೇಶಕ ಮಂಸೋರೆ, ಈಗ ‘ಆಕ್ಟ್ 1978’ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಚಿತ್ರದ ಶೀರ್ಷಿಕೆಯೂ ವಿಭಿನ್ನವಾಗಿದ್ದು, ಕಥೆಯೂ ವಿಶೇಷತೆಯಿಂದ ಕೂಡಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಚಿತ್ರದ ಟ್ರೇಲರ್, ಅದಾಗಲೇ ಪ್ರೇಕ್ಷಕರನ್ನು ಸೆಳೆದಿತ್ತು. ಚಿತ್ರದ ಮೂಲಕ ಪ್ರಮುಖವಾದ, ಎಲ್ಲರಿಗೂ ಅನ್ವಯಿಸುವಂತಹ ಅಂಶವನ್ನೇ ಹೇಳಲು ಹೊರಟ್ಟಿದ್ದಾರೆ ಎಂಬ ಸಣ್ಣ ಸುಳಿವು ಟ್ರೇಲರ್‌ನಲ್ಲಿ ಸಿಕ್ಕಿತ್ತು. ಮನಸೂರೆ ತಾವು ಅನುಭವಿಸಿದ, ಸುತ್ತಮುತ್ತ ಕಂಡಂತಹ ನೈಜ ಅಂಶಗಳನ್ನೇ ಆಯ್ದುಕೊಂಡು ಕಥೆ
ಹೆಣೆದಿದ್ದು, ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತಂದಿದ್ದಾರೆ.
ಹಾಗಾಗಿ ಇದು ನೈಜಕಥೆ ಎಂಬುದರಲ್ಲಿ ಅನುಮಾನವಿಲ್ಲ. ಚಿತ್ರವನ್ನು ನೋಡುತ್ತಿದ್ದರೆ. ಪ್ರತಿಯೊಬ್ಬರು ಈ ಭ್ರಷ್ಟ ವ್ಯವಸ್ಥೆ ಯಲ್ಲಿ ಅನುಭವಿಸಿದ, ಅನುಭವಿಸುತ್ತಿರುವ ಸಂಕಷ್ಟ, ತೆರೆಯಲ್ಲಿ ಹಾದುಹೋಗುತ್ತದೆ. ಕೈಯಲ್ಲಿ ಹಣ, ಅಧಿಕಾರ ಇರುವವರೆಗೂ ಮಾತ್ರ ನಮಗೆ ಗೌರವ, ಮರ್ಯಾದೆ. ಇಲ್ಲದಿದ್ದರೆ, ನಮ್ಮನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಅದನ್ನೇ ಈ ಚಿತ್ರ ಹೇಳುತ್ತದೆ.
ಯಾರು ಈ ಗೀತಾ?
ಚಿತ್ರದಲ್ಲಿ ಗೀತಾ ಎಂಬ ಗರ್ಭಿಣಿ ಮಹಿಳೆ ತನಗೆ ಸರಕಾರದಿಂದ ಸಲ್ಲಬೇಕಾದ ಯೋಜನೆಗಳನ್ನು ಪಡೆಯಲು ಸರಕಾರಿ ಕಚೇರಿಗೆ ಅಲೆದು ಅಲೆದು ಸಾಕಾಗಿರುತ್ತಾರೆ. ಇಷ್ಟಾದರೂ ಆಕೆಯ ಬಗ್ಗೆ ಕಿಂಚಿತ್ತು ಕರುಣೆ, ಕಾಳಜಿ ಕಚೇರಿಯಲ್ಲಿ ಕಾರ್ಯನಿರ್ವಹಿಸು ವವರಿಗೆ ಇರುವುದೇ ಇಲ್ಲ. ಆ ಬಳಿಕ ಗೀತಾ ತನ್ನ ಹಕ್ಕನ್ನು ಪಡೆಯಲು ಏನು ಮಾಡುತ್ತಾಳೆ. ಈ ನಿಟ್ಟಿನಲ್ಲಿ ಆಕೆ ತಾಳುವ ದಿಟ್ಟ
ನಿಲುವೇನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು. ಅಷ್ಟಕ್ಕೂ ಈ ಗೀತಾ ಯಾರು? ಆಕೆಯ ವೃತ್ತಾಂತವೇನು ಎಂಬು ದನ್ನು ತೆರೆಯಲ್ಲಿ ನೋಡಿದರೆ ಚೆಂದ ಎನ್ನುತ್ತಾರೆ ನಿರ್ದೇಶಕರು. ಈ ಹಿಂದೆ ‘ಉಳಿದವರು ಕಂಡಂತೆ’ ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ಮೆಚ್ಚುವ ಅಭಿನಯ ತೋರಿದ್ದ ಯಜ್ಞಾ ಶೆಟ್ಟಿ, ಈ ಚಿತ್ರದಲ್ಲಿ ನೊಂದ ಮಹಿಳೆಯ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.
ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಕೊನೆಗೆ ಬಾಂಬ್ ಕಟ್ಟಿಕೊಂಡು, ಕೈಯಲ್ಲಿ ಗನ್ ಹಿಡಿದು ದುರುಳರನ್ನು ಹೆದರಿಸುತ್ತಾರೆ. ತೆರೆಯಲ್ಲಿ ನೋಡಿದರೆ ಈ ಪಾತ್ರಕ್ಕೆ ಇವರೇ ತಕ್ಕ ಆಯ್ಕೆ ಎಂದು ಅನ್ನಿಸುತ್ತದೆ. ಮರಳಿ ಬಂದ ಶ್ರುತಿ ಕನ್ನಡ ಚಿತ್ರರಂಗದ ಪ್ರಸಿದ್ಧ
ನಟಿಯರಲ್ಲಿ ಶ್ರುತಿ ಕೂಡ ಒಬ್ಬರು. ಈ ಹಿಂದೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಶ್ರುತಿ, ಈ ನಡುವೆ ಕೊಂಚ ಬ್ರೇಕ್ ಪಡೆದಿದ್ದರು. ‘ಆಕ್ಟ್ 1978’ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲು ಸಿದ್ಧವಾಗಿದ್ದಾರೆ.
ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿಯೇ ಅಭಿನಯಿಸಿದ್ದಾರೆ. ಇಲ್ಲಿ ಶ್ರುತಿ ಮಾನವ ಹಕ್ಕು ಆಯೋಗದ ಅಧ್ಯಕ್ಷೆಯಾಗಿ ಬಣ್ಣ ಹಚ್ಚಿ ದ್ದಾರೆ. ಈ ಪಾತ್ರ ನನಗೆ ಬಹಳ ಸಂತೋಷ ತಂದಿದೆ ಎನ್ನುವ ಶ್ರುತಿ, ಈ ಚಿತ್ರ ಸಾಮಾನ್ಯ ಜನರಿಗೆ ಅದರಲ್ಲೂ ರೈತಾಪಿ ವರ್ಗಕ್ಕೆ ಒಳ್ಳೆಯ ಸಂದೇಶ ನೀಡಲಿದೆ. ಅವರ ಪರವಾಗಿಚಿತ್ರ ನಿಲ್ಲುತ್ತದೆ. ನಾಡಿನ ಸ್ಥಿತಿಗತಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ ಎನ್ನುತ್ತಾರೆ.
ನಟ ಪ್ರಮೋದ್ ಶೆಟ್ಟಿ, ಇಲ್ಲಿ ಖಾಕಿ ತೊಟ್ಟು ಖದರ್ ತೋರಿದ್ದಾರೆ. ಶೋಭರಾಜ್ ಕೂಡ ಪೊಲೀಸ್ ಅಧಿಕಾರಿಯಾಗಿ ಕಾಣಿಸಿ ಕೊಂಡಿದ್ದಾರೆ. ಸಂಚಾರಿ ವಿಜಯ್ ಎನ್ ಎಸ್ ಜಿ ಕಮಾಂಡೋ ಚೀಪ್ ಆಗಿ ಬಣ್ಣಹಚ್ಚಿದ್ದಾರೆ. ಇನ್ನುಳಿದಂತೆ ಹಿರಿಯ ನಟರಾದ ದತ್ತಣ್ಣ , ಅವಿನಾಶ್, ಅಚ್ಯುತ್ ಕುಮಾರ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅನುಭವದ ಕಥೆ
‘ನನ್ನ ತಂದೆ ಕೂಡ ಸರಕಾರಿ ನೌಕರರಾಗಿದ್ದರು. ಆದರೂ ನಿವೃತ್ತಿಯ ಬಳಿಕ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಪಿಂಚಣಿ
ಹಣವನ್ನು ಪಡೆಯಲು ಸಾಕಷ್ಟು ಬಾರಿ ಅಲೆದಿದ್ದಾರೆ. ವೃತ್ತಿಯಲ್ಲಿ ಇದ್ದಾಗ ಸಲಾಂ ಹೊಡೆಯುವ ಸರಕಾರಿ ಸಿಬ್ಬಂದಿಗಳು,
ನಿವೃತ್ತಿಯಾದಾಗ, ಅವರದ್ದೇ ನೌಕರರನ್ನು ಹಣಕ್ಕಾಗಿ ಸತಾಯಿಸುತ್ತಾರೆ. ಇದು ನನ್ನೊಬ್ಬನಿಗೆ ಆದ ಅನುಭವವಲ್ಲ, ನನ್ನ
ಸುತ್ತಮುತ್ತ ನಡೆದ ಇಂತಹ ಹಲವು ಘಟನೆಗಳನ್ನು ಆಯ್ದು ಚಿತ್ರದ ಕಥೆ ಹೆಣೆದಿದ್ದೇನೆ. ಚಿತ್ರದ ಮೂಲಕವಾದರೂ ಸರಕಾರಿ
ಕಚೇರಿಗಳಲ್ಲಿ ವ್ಯವಸ್ಥೆಯನ್ನು ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಮಾಡಿದ್ದೇನೆ. ಜತೆಗೆ ನಾನು ಹಳ್ಳಿಯಲ್ಲಿ ಬೆಳೆದಿದ್ದರಿಂದ
ಅನ್ನದಾತನ ಸಂಕಷ್ಟ ತಿಳಿದಿದೆ. ಹಾಗಾಗಿ ರೈತರ ಸಂಕಷ್ಟದ ಬಗ್ಗೆೆ ಬೆಳಕು ಚೆಲ್ಲುವ ಪ್ರಯತ್ನವೂ ಚಿತ್ರದಲ್ಲಿದೆ.’