ಶ್ರೀರಂಗ ಪುರಾಣಿಕ
ಪುಟ್ಟ ಪುಟ್ಟ ವಿಡಿಯೋಗಳಲ್ಲಿ ಜನಪದ ಗೀತೆಗಳಿಗೆ ಆಕರ್ಷಕ ಅಭಿನಯ ನೀಡುವ ಮೂಲಕ ಇವರು ಗಳಿಸಿದ ಜನಪ್ರಿಯತೆ ಅಪಾರ.
ಅಭಿನಯ ಎಲ್ಲರಿಗೂ ಒಲಿಯುವಂತಹದ್ದಲ್ಲ. ಅದಕ್ಕೆ ತಪಸ್ಸು ಬೇಕು, ಶ್ರಮ ಬೇಕು, ಪ್ರತಿಭೆ ಬೇಕು, ಪಾತ್ರದಲ್ಲಿ ಪರಕಾಯ ಪ್ರವೇಶಿಸಿ ಅಭಿನಯಿಸುವ ಕಲೆ ಗೊತ್ತಿರಬೇಕು. ಇಂತಹ ಅಭಿನಯದ ಕಲೆ ಸಿದ್ಧಿಸಿಕೊಂಡ ಪ್ರತಿಭೆಗಳು ಬಹಳ ಅಪರೂಪವಾಗಿ ಕಾಣ ಸಿಗುತ್ತಾರೆ. ವಿಜಯಪುರದ ಪ್ರತಿಭೆ ಪಲ್ಲವಿ ಕೂಡ ಅವರಲ್ಲಿ ಒಬ್ಬರು. ನೋಡಲು ಚಟುವಟಿಕೆಯವರು, ಅದಕ್ಕೆ ತಕ್ಕ ಎತ್ತರ – ಜನಮನ್ನಣೆ ಪಡೆಯಲು ಬೇಕಾದ ಎಲ್ಲಾ ಅರ್ಹತೆಗಳು ಇಕೆಯಲ್ಲಿವೆ. ಮುಖ್ಯವಾಗಿ ಪಾತ್ರಕ್ಕೆ ತಕ್ಕಂತೆ ಅಭಿನಯ ಮಾಡಬಲ್ಲರು ಪಲ್ಲವಿ.
ಕಿರು ವಿಡಿಯೋ ಪ್ರಭಾವ
ಟಿಕ್ ಟಾಕ್ ಈಗ ಬ್ಯಾನ್ ಆಗಿರಬಹುದು. ಆದರೆ ಅದರಂತಹ ಇತರ ವಿಡಿಯೋಗಳಿಂದ ಅನೇಕ ಗ್ರಾಮೀಣ ಪ್ರತಿಭೆ ಗಳು ಅನಾವರಣಗೊಂಡು ಬೆಳಕಿಗೆ ಬರುವ ಹಾಗೆ ಆಯಿತು. ಬಿಗ್ ಬಾಸ್ ಅಂತಹ ಕರ್ನಾಟಕ ಅತಿದೊಡ್ಡ ರಿಯಾಲಿಟಿ ಶೋ ನಲ್ಲಿ ಟಿಕ್ ಟಾಕ್ ಮೂಲಕವೇ ಹಲವು ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಇದೇ ರೀತಿಯ ಕಿರು ವಿಡಿಯೋ ಗಳು ಪಲ್ಲವಿಯ ಮೇಲೂ ಪ್ರಭಾವ ಬೀರಿತು. ಪ್ರಾರಂಭದಲ್ಲಿ ಅವರಿವರ ವಿಡಿಯೋ ನೋಡುತ್ತಿದ್ದ ಪಲ್ಲವಿ ತದನಂತರ ಅವರನ್ನೇ ಅನುಸರಿಸಿಸುತ್ತ ಕೊನೆಗೆ ತಾನು ಅವರಂತೆ ವಿಡಿಯೋ ಮಾಡಲು ಪ್ರಾರಂಭಿಸಿದರು.
ಅಲ್ಲಿಂದ ಪಲ್ಲವಿಯ ಯಶಸ್ಸು ಸ್ಟಾರ್ಟ್ ಆಗಿದ್ದು. ವೃತ್ತಿಯಲ್ಲಿ ರೋಗಿಗಳ ಸೇವೆಮಾಡುವ ನರ್ಸ್ ಆಗಿರುವ ಪಲ್ಲವಿಯವರ ಅಭಿನಯ ಹಲವರ ಮೆಚ್ಚುಗೆ ಗಳಿಸಿತು. ರಾತ್ರೋರಾತ್ರಿ ಪಲ್ಲವಿಯವರು ಕಿರು ವಿಡಿಓಗಳ ಸ್ಟಾರ್ ಆದರು. ಎಲ್ಲೆಡೆ ಸ್ಮಾರ್ಟ್ ಫೋನ್ ಇರುವುದರಿಂದಾಗಿ, ಇವರ ಅಭಿನಯದ ವಿಡಿಯೋಗಳು ಪ್ರಸರಗೊಂಡವು. ‘ಗಾಳಿಗೋಪುರ’ ಎನ್ನುವ ಕಿರುಚಿತ್ರ, ಹಾಗೆ ಅನೇಕ ಅಲ್ಬಮ್ ಸಾಂಗ್ ನಲ್ಲಿ ನಟಿಸಿ ಸೈ ಎನಿಸಿಕೊಂಡರು.
ಜಾನಪದ ಹಾಡುಗಳಿಗೆ ಅಭಿನಯ
ಹೇಳಬೇಕಾದ ವಿಷಯವೇ ಇದು. ಚಲನಚಿತ್ರ ಹಾಡುಗಳಿಗೆ ಯಾರಾದರೂ ಲಿಪ್ ಸಿಂಕ್ ಮಾಡಿ ಹಾಡಿದಹಾಗೆ ಅಭಿನಯ ಮಾಡುತ್ತಾರೆ. ಆದರೆ ನಮ್ಮ ವಿಜಯ ಪುರದ ಕಲಾವಿದರ ವೈಶಿಷ್ಟ್ಯವೆಂದರೆ ಜಾನಪದ ಹಾಡುಗಳಿಗೆ ವಿಡಿಯೊ ಮಾಡುವುದು. ಪಲ್ಲವಿಯವರು ‘ಎಳಿ ಸೊಂಟ’, ’ಮರತಿಯೇನು ಗೆಳೆಯ’ ಹೀಗೆ ನೂರಾರು ಜನಪದ ಹಾಡುಗಳಿಗೆ ಅಭಿನಯ ನೀಡಿ, ಅವುಗಳ ವಿಡಿಯೋಗಳ ಮೂಲಕ ಜನಪ್ರಿಯ ಆದರು. ಸಿನೆಮಾ ಹಾಡುಗಳ ಅಬ್ಬರಕ್ಕೆ ಮಂಕು ಕವಿದಿದ್ದ ಜನಪದ ಹಾಡುಗಳಿಗೆ ಪಲ್ಲವಿಯಂತಹವರ ಅಭಿನಯ ಮರುಹುಟ್ಟು ಕೊಟ್ಟಿದೆ.
ಅನೇಕರಿಗೆ ಇದು ಪ್ರೋತ್ಸಾಹವಾಗಿ ಹೆಚ್ಚು ಹೆಚ್ಚು ಜನಪದ ಗೀತೆಗಳು ವಿಡಿಯೋ ರೂಪ ಪಡೆಯಲು ಸಹಕಾರಿ ಆಯಿತು. ತಮ್ಮ ಅಭಿನಯ ಹೊಂದಿದ ಕಿರು ವಿಡಿಯೋಗಳ ಮೂಲಕ ವಿಜಯಪುರದ ಸುತ್ತಮುತ್ತ ಜನಪ್ರಿಯತೆ ಗಳಿಸಿರುವ ಪಲ್ಲವಿಯವರು, ಈ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಪಡೆಯುವ ಅರ್ಹತೆ ಹೊಂದಿದ್ದಾರೆ.