Friday, 13th December 2024

ಅಧ್ಯಾತ್ಮ ಲೋಕದ ವಿಕ್ಷಿಪ್ತ ಚಿಂತಕ

ಶಶಾಂಕ್ ಮುದೂರಿ

ಪಾಶ್ಚಾತ್ಯ ದೇಶಗಳಲ್ಲಿ ನಮ್ಮ ನಾಡಿನ ಅಧ್ಯಾತ್ಮ ಮತ್ತು ಯೋಗ ಪರಂಪರೆಯನ್ನು ಪರಿಚಯಿಸಿದ ಹಲವು ಪ್ರಸಿದ್ಧರನ್ನು ನಾವು ಇಂದು ಕಾಣಬಹುದು. ಆದರೆ, ಪ್ರಸಿದ್ಧಿಯನ್ನೇ ಬಯಸದ, ತನ್ನ ನಂತರ ಏನೂ ಇಲ್ಲ, ಇರಬಾರದು ಎಂದೇ ಹೇಳಿದ್ದ ಯುಜಿ ಕೃಷ್ಣಮೂರ್ತಿ ಯವರು, ಅಂತಹ ಚಿಂತಕರಲ್ಲಿ ವಿಭಿನ್ನರಾಗಿ ಕಾಣುತ್ತಾರೆ.

ನಮ್ಮ ದೇಶದ ವಿಶಿಷ್ಟ ಚಿಂತಕ ಯುಜಿ ಕೃಷ್ಣಮೂರ್ತಿಯವರಿಗೆ ಬಾಲ್ಯದಿಂದಲೂ ಅಧ್ಯಾತ್ಮದ ಕುರಿತು ಬಹು ಆಸಕ್ತಿ. ನಾನಾ ರೀತಿಯ ಅಧ್ಯಾತ್ಮಿಕ ಮತ್ತು ಇತರ ಚಟುವಟಿಕೆಗಳಿಂದ ಮೋಕ್ಷವನ್ನು ಅರಸಲು ಪ್ರಯತ್ನ ನಡೆಸುತ್ತಲೇ ಇದ್ದ ಇವರು, ತಮ್ಮ 21ನೆಯ ವಯಸ್ಸಿನಲ್ಲಿ ರಮಣ ಮಹರ್ಷಿ ಯವರನ್ನು ಭೇಟಿಯಾದರು. ಆ ಒಂದು ಭೇಟಿ ಅವರ ಜೀವವನ್ನೇ ಬದಲಿಸಿತು. ಅವರ ಮುಖಾ ಮುಖಿಯಲ್ಲಿ ನಡೆದ ಪ್ರಶ್ನೋತ್ತರವೂ ಬಹಳ ವಿಶಿಷ್ಟ ಎನಿಸಿವೆ.

ಯುಜಿ: ಮೋಕ್ಷ ಅಂತ ಒಂದು ಇದೆಯಲ್ಲಾ, ಅದನ್ನು ನೀವು ನನಗೆ ಕೊಡಬಲ್ಲಿರಾ?

ರಮಣ ಮಹರ್ಷಿ: ನಾನು ಕೊಡಬಲ್ಲೆ, ಆದರೆ ನೀನು ಸ್ವೀಕರಿಸಬಲ್ಲೆಯಾ?

ಅರುಣಾಚಲದ ರಮಣರು ನೀಡಿದ ಈ ಒಂದು ಉತ್ತರವು ಯುಜಿ ಕೃಷ್ಣಮೂರ್ತಿಯವರ (1918-2007) ‘ಅಧ್ಯಾತ್ಮ ಪಥ’ದ ಪರಿಕಲ್ಪನೆಯನ್ನೇ ಬದಲಿಸಿತು. ಅದುವರೆಗೆ ಹಲವು ಆಧ್ಯಾತ್ಮಿಕ ವ್ಯಕ್ತಿಗಳ ಬಳಿ ಮೋಕ್ಷದ ಕುರಿತು ಚರ್ಚೆ ನಡೆಸುತ್ತಿದ್ದ ಯುಜಿ, ಆ ನಂತರ ಅಂತಹ ವಿಚಾರ ವಿನಿಮಯಕ್ಕೆ ಹೋಗಲೇಇಲ್ಲ. ರಮಣ ಮಹರ್ಷಿಗಳ ಆ ಸರಳ ಉತ್ತರವು ತನಗೆ ಸೂಕ್ತ ಪಥವನ್ನು ತೋರಿಸಿತು ಎಂದಿದ್ದಾರೆ ಯುಜಿ. ಮೋಕ್ಷವನ್ನು ಅರಸುತ್ತಾ ಹೊರಟ ಯುಜಿಯವರು, ಹೆಚ್ಚು ಪರಿಚಿತವಿರುವ ಮಾರ್ಗಗಳನ್ನು ತ್ಯಜಿಸಿ, ತನ್ನಷ್ಟಕ್ಕೆ ತಾನು ಇರುವ ಒಂದು ಸ್ಥಿತಿಯನ್ನು ಹುಡುಕಿಕೊಂಡಿದ್ದರು. ಅವರ ಮಾತುಗಳು, ಭಾಷಣಗಳು ಕೆಲವು ಬಾರಿ ವಿಕ್ಷಿಪ್ತ, ವಿಚಿತ್ರ ಎನಿಸಿದರೂ, ಅದರಲ್ಲಿ ಅಡಗಿರುವ ಭಾವ ಅನನ್ಯ. ಅವರ ಸಮಕಾಲೀನರೆನಿಸಿದ್ದ, ನಮ್ಮ ದೇಶದ ಇನ್ನೋರ್ವ ಚಿಂತಕ ಜಿಡ್ಡು ಕೃಷ್ಣಮೂರ್ತಿಯವರೊಂದಿಗೆ ಇವರ ಒಡನಾಟ, ಚರ್ಚೆ ನಡೆಯುತ್ತಿತ್ತು.

ಇಬ್ಬರೂ ಥಿಯಾಸಾಫಿಕಲ್ ಸೊಸೈಟಿಯ ಸಂಪರ್ಕದಲ್ಲಿದ್ದವರು. ಆದರೆ, ಇವರ ನಡುವೆ ಅಧ್ಯಾತ್ಮದ ಚರ್ಚೆಗಳ ದಾರಿಯೇ  ಬೇರೆ, ಕೆಲವು ಬಾರಿ  ಅದು ಅವರಿಬ್ಬರ ನಡುವೆ ಮೌನವನ್ನೂ ತಂದುಹಾಕುತ್ತಿತ್ತು.

ಜಿಡ್ಡು ಜತೆ ಚರ್ಚೆ: 1950ರ ದಶಕದಲ್ಲಿ ಅವರಿಬ್ಬರ ನಡುವಿನ ಒಂದು ಚರ್ಚೆ ಯನ್ನು ಯುಜಿ ಹೀಗೆ ವಿವರಿಸಿದ್ದಾರೆ. ‘ನಂತರ, ಕೊನೆಯಲ್ಲಿ, ನಾನು ಹೇಳಿದೆ ‘ನೀವು ನನ್ನ ಮೇಲೆ ಹೇರುತ್ತಿರುವ ವಿಚಾರಗಳ ಹಿಂದೆ ಏನಾದರೂ ಗಹನವಾದದ್ದು ಇದೆಯೆ?’. ಇದಕ್ಕೆ ಜಿಡ್ಡು ಅವರು ‘ನೀವಾಗಿಯೇ ಅದನ್ನು ತಿಳಿದುಕೊಳ್ಳಲು ನಿಮಗೆ ಅಸಾಧ್ಯ’ ಎಂದರು. ಮುಗಿಯಿತು, ಈ ಒಂದು ಮಾತು ನಮ್ಮ ಒಡನಾಟವನ್ನು ಮುಕ್ತಾಯಗೊಳಿಸಿತು. ‘ನಾನಾ ಗಿಯೇ ಅದನ್ನು ತಿಳಿದುಕೊಳ್ಳಲು ಅಸಾಧ್ಯ ಎಂದಾರೆ, ನಿಮಗೆ ಅದನ್ನು ನನಗೆ ತಿಳಿಹೇಳಲು ಆಗಿಲ್ಲ ಎಂದೇ ಅರ್ಥ. ಇಲ್ಲಿ ನೀವೇನು ಮಾಡುತ್ತಾ ಇದೀರಿ? ನಾನು ನನ್ನ ಏಳು ವರ್ಷಗಳನ್ನು ದಂಡ ಮಾಡಿದೆ. ನಮಸ್ಕಾರ, ನಿಮ್ಮನ್ನು ಇನ್ನೊಮ್ಮೆ ನೋಡಲು ಇಷ್ಟ ಪಡುವುದಿಲ್ಲ’ ಎಂದು, ನಾನು ಹೊರಬಂದೆ’ ಎಂದಿದ್ದಾರೆ ಯುಜಿ.

ಯುಜಿ ಅವರ ವಿಕ್ಷಿಪ್ತ ನಡೆ ನುಡಿಗಳಿಗೆ ಇಂತಹ ಹಲವು ಉದಾಹರಣೆಗಳು ದೊರೆಯುತ್ತವೆ. 1953ರಲ್ಲಿ ಜಿಡ್ಡುಕೃಷ್ಣಮೂರ್ತಿಯವರ ಒಡನಾಟಕ್ಕೆ ತಿಲಾಂಜಲಿ ಇಟ್ಟ ನಂತರ, ಹಲವು ಕಡೆ ಅಧ್ಯಾತ್ಮ ವಿಚಾರಗಳ ಭಾಷಣ ಮಾಡುತ್ತಿದ್ದ ಯುಜಿ, 1955ರಲ್ಲಿ ಅಮೆರಿಕಕ್ಕೆ ಹೊರಟರು. ಮಗನ ಪೊಲಿಯೋ ಚಿಕಿತ್ಸೆಗಾಗಿ ಕುಟುಂಬ ಸಮೇತ ಅಮೆರಿಕಕ್ಕೆ ಹೋದ ಯುಜಿ, ಅಲ್ಲಿನ ವಿವಿಧ ಪಟ್ಟಣಗಳಲ್ಲಿ ಧರ್ಮ ಮತ್ತು ಅಧ್ಯಾತ್ಮದ ಕುರಿತು ಭಾಷಣ ಮಾಡುತ್ತಾ, ಆ ಆದಾಯದಲ್ಲೇ ಐದು ವರ್ಷ  ಅಲ್ಲಿ ನೆಲಸಿದರು. ಈ ನಡುವೆ ಕೌಟುಂಬಿಕ ಸಮಸ್ಯೆಗಳಲ್ಲೂ ಸಿಲುಕಿಕೊಂಡು, ಲಂಡನ್‌ಗೆ
ಏಕಾಂಗಿಯಾಗಿ ತೆರಳಿದರು. ಅಲ್ಲಿ ಕೆಲ ಕಾಲ ವಾಸಿಸಿ, ತನ್ನಲ್ಲಿದ್ದ ಎಲ್ಲಾ ಹಣವನ್ನು ಖರ್ಚುಮಾಡಿದ ನಂತರ ರಾಮಕೃಷ್ಣ ಆಶ್ರಮದಲ್ಲಿ ವಾಸಿಸಿದ್ದುಂಟು.

ನಂತರ ಸ್ವಿಜರ್ಲೆಂಡ್‌ಗೆ ತೆರಳಿ, ಜಿನೆವಾದಲ್ಲಿ ವ್ಯಾಲೆಂಟೈನ್ ಡ ಕೆರ್ವೆನ್ ಎಂಬಾಕೆಯ ಆಶ್ರಯ ಪಡೆದರು. ಆ ನಡುವೆ ಒಮ್ಮೆ, ಏಳು ದಿನಗಳ ಅನಾರೋಗ್ಯ ಕಾಡಿ, ಆ ಸ್ಥಿತಿಯಲ್ಲಿ ತಾನು ‘ಕ್ಲಿನಿಕಲ್ ಡೆತ್’ ಅನುಭವಿಸಿದ್ದಾಗೆ ಯುಜಿ ಹೇಳಿಕೊಂಡಿದ್ದಾರೆ. ಆಗ ಅವರಿಗೆ 49 ವರ್ಷ. ಯುಜಿ ಕೃಷ್ಣ ಮೂರ್ತಿಯವರ ಜೀವನವು ಬೇರೆಲ್ಲರಿಗಿಂತಲೂ ಭಿನ್ನ ಎಂಬುದರಲ್ಲಿ ಎರಡು ಮಾತಿಲ್ಲ. ತನ್ನ ಎಲ್ಲಾ ಪುಸ್ತಕಗಳಿಗೆ ಕಾಪಿ ರೈಟ್ ಇಲ್ಲ ಮತ್ತು ಯಾರು ಬೇಕಾದರೂ ಅದನ್ನು ಮರುಮುದ್ರಣ ಮಾಡಬಹುದು,

ಬದಲಿಸಿಯೂ ಪ್ರಕಟಿಸಬಹುದು ಎಂದು ಹೇಳಿದ ಇವರು, ಊಟ ತಿಂಡಿಯಲ್ಲೂ ವಿಚಿತ್ರ ಪದ್ಧತಿ ಅನುಸರಿಸುತ್ತಿದ್ದರು. ಒಂದು ಜಾಗದಲ್ಲಿ ಆರು ತಿಂಗಳಿಗಿಂತ ಹೆಚ್ಚು ವಾಸಿಸದೇ ಇದ್ದ ಇವರ ಬಳಿ, ಅಡುಗೆಗಾಗಿಯೇ ಒಂದು ಸೂಟ್ ಕೇಸ್ ಇರುತ್ತಿತ್ತು!

ಹೆಚ್ಚು ಉಪ್ಪು, ಕೆನೆ ಭರಿತ ವಸ್ತುಗಳೇ ಅವರ ಮುಖ್ಯ ಆಹಾರ. ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸುವ ಆಹಾರವನ್ನು ಮಾತ್ರ ತಿನ್ನುತ್ತಿದ್ದ ಅವರು, ಜೀವಮಾನದಲ್ಲಿ ಒಮ್ಮೆಯೂ ವೈದ್ಯರ ಬಳಿ ಹೋಗಲಿಲ್ಲ, ಚಿಕಿತ್ಸೆ ಪಡೆಯಲಿಲ್ಲ. ನಮ್ಮ ದೇಹಗಳು ಸ್ವಯಂ ಗುಣಪಡಿಸಿಕೊಳ್ಳುವ ಶಕ್ತಿ ಹೊಂದಿವೆ ಎಂದು ಹೇಳುತ್ತಿದ್ದ ಇವರು 89 ವರ್ಷ ಜೀವಿಸಿದ್ದರು.

ಇಳಿ ವಯಸ್ಸಿನಲ್ಲೂ ಅವರು ಆಕರ್ಷಕವಾಗಿ ಕಾಣುತ್ತಿದ್ದರು. ಯಾರೋ ಇದಕ್ಕೆ ಕಾರಣ ಕೇಳಿದಾಗ, ತಾನು ಸೇವಿಸುವ ಹಸಿ ಆಹಾರವೇ ಕಾರಣ ವಿರಬಹುದು ಎಂದಿದ್ದರು. ತಾನು ಸತ್ತ ನಂತರ ಸರಳವಾಗಿ ಅಂತ್ಯಕ್ರಿಯೆ ಮಾಡಿ ಎಂದು ಮುಂಚಿತವಾಗಿಯೇ ಹೇಳಿದ್ದ ಯುಜಿ, ತಾನು ಸತ್ತ ನಂತರ, ಯಾರೂ ತನ್ನನ್ನು ನೆನಪಿಸಿಕೊಳ್ಳಬೇಕಾಗಿಲ್ಲ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದರು.

ಮೋಕ್ಷ ಪಥವನ್ನು ಹುಡುಕುತ್ತಾ, ಭಿನ್ನ  ಹಾದಿಯನ್ನು ತುಳಿದ ಯುಜಿ, ಪ್ರಸಿದ್ಧಿಯನ್ನ ಬಯಸದ, ತನ್ನ ನಂತರ ಏನೂ ಇಲ್ಲ ಎಂಬರ್ಥದ ಚಿಂತನೆ ಗಳಿಂದಲೇ ಪ್ರಸಿದ್ಧರು.ಹಲವು ದೇಶಗಳಲ್ಲಿ ಶಿಷ್ಯ ವರ್ಗವನ್ನು ಹೊಂದಿದ್ದರೂ, ಯಾವುದೇ ಗುರುತಿಸಿಕೊಳ್ಳುವಿಕೆ, ಪ್ರಸಿದ್ಧಿ ಬಯಸದ
ಅವರನ್ನು ಅಧ್ಯಾತ್ಮ ಲೋಕದ ವಿಕ್ಷಿಪ್ತ ಚಿಂತಕ ಎಂದೇ ಹೇಳಬಹುದು.

ಕೋಟ್‌

ನನ್ನ ಬೋಧನೆಗಳು ಯಾವುದೂ ಇಲ್ಲ. ರಕ್ಷಿಸಿ ಇಡುವುದಕ್ಕೆ ಈ ಜಗತ್ತಿನಲ್ಲಿ ಏನೂ ಇಲ್ಲ. ಏನಾದರೂ ಬದಲಾವಣೆ ಬೇಕಾದಾಗ ಶಿಕ್ಷಣದ
ಉಪಯೋಗವಾಗಬಹುದು. ಕ್ಷಮಿಸಿ, ಇಲ್ಲಿ ಯಾವುದೇ ಶಿಕ್ಷಣ ಇಲ್ಲ, ಕೇವಲ ಸಂಬಂಧ ರಹಿತ ವಾಕ್ಯಗಳು ಮಾತ್ರ ಇವೆ. ಇವಕ್ಕೆ ನಿಮ್ಮ ವ್ಯಾಖ್ಯಾನ ಮಾತ್ರ ಇರಬಹುದೇ ಹೊರತು ಮತ್ತೇನೂ ಇಲ್ಲ. ಈ ಕಾರಣದಿಂದಾಗಿಯೇ, ನಾನು ಏನೇ ಹೇಳಿದರೂ ಅದಕ್ಕೆ ನನ್ನ ಮಾಲಕತ್ವ ಅಥವಾ ಕಾಪಿರೈಟ್ ಇಲ್ಲ.
– ಯು.ಜಿ.ಕೃಷ್ಣಮೂರ್ತಿ