Friday, 20th September 2024

ಏರುಗತಿಯಲ್ಲಿ ಎಲ್ಲಾ ಕಾರ್‌ !

ವಿಕ್ರಮ ಜೋಶಿ

ಹಾಹಾಕಾರ್‌

ಕರೋನಾ ವಿಧಿಸಿದ ಲಾಕ್‌ಡೌನ್ ನಂತರ, ಇದೇ ಮೊದಲ ಬಾರಿಗೆ ಈ ವರ್ಷದ ಅಕ್ಟೋಬರ್‌ನಲ್ಲಿ ಕಾರುಗಳ ಮಾರಾಟ
ಹೆಚ್ಚಳಗೊಂಡಿದೆ. ಎಷ್ಟೆಂದರೆ, ಕಳೆದ ವರ್ಷ ಈ ತಿಂಗಳಿನ ಮಾರಾಟಕ್ಕಿಂತ ಹೆಚ್ಚು!

ಒಂದು ದೇಶದ ಆರ್ಥಿಕ ಪರಿಸ್ಥಿತಿ ಆ ದೇಶದ ಕಾರು ಮಾರಾಟದ ಸಂಖ್ಯೆಯಲ್ಲಿ ಪ್ರತಿಧ್ವನಿಸುತ್ತದೆ. ಕಳೆದ ಒಂದು ವರ್ಷದಿಂದ ಕಾರು ಮಾರಾಟ ಅದಕ್ಕೂ ಹಿಂದಿನ ಕಾಲಾವಧಿಗೆ ಹೋಲಿಸಿದರೆ ಕಡಿಮೆಯಾಗುತ್ತಿತ್ತು. ನೋಟು ಅಮಾನ್ಯೀಕರಣ, ಜಿಎಸ್ಟಿ, ಭಾರತ್ ಸ್ಟೇಜ್ -6, ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರು ಹೀಗೆ ಹಲವಾರು ಕಾರಣಗಳಿರಬಹುದು ಇದಕ್ಕೆ.

ಜಗತ್ತಿನ ಎಲ್ಲೆೆಡೆ ಆಟೋಮೊಬೈಲ್ ಕ್ಷೇತ್ರವನ್ನು ಬಲ್ಲವರು ಇದನ್ನು ‘‘ಸೈಕ್ಲಿಕ್ ಇಂಡಸ್ಟ್ರಿ’’ ಎನ್ನುತ್ತಾರೆ. ಕೆಲವು ವರ್ಷ ಸಿಕ್ಕಾಪಟ್ಟೆ ಬೆಳೆಯುತ್ತದೆ, ಇನ್ನು ಕೆಲವು ವರ್ಷ ನಿರುತ್ಸಾಹ. ಕಳೆದ ಎರಡು ವರ್ಷಗಳಿಂದ ಇದು ಕೆಳಮುಖವಾಗಿತ್ತು ಆದರೆ ಕರೋನಾ ದಿಂದಾಗಿ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ. ಇದಕ್ಕೆ ಕಾರಣ ಜಾಗತಿಕ ಅವಲಂಬನೆ. ಇದು ಇಂದು ಗ್ಲೋಬಲ್ ಇಂಡಸ್ಟ್ರಿ ಇಲ್ಲಿ ಅಮದು ಹಾಗೂ ರಫ್ತು ಎರಡೂ ಇದೆ. ಭಾರತದಿಂದ ಕೆಲವು ಬಿಡಿ ಭಾಗಗಳು ಹೊರದೇಶಕ್ಕೆ ಹೋದರೆ, ಹೊರ ದೇಶದಿಂದ ನಮಗೆ ಬಿಡಿ ಭಾಗಗಳು ಬರಬೇಕು ಕೂಡ. ಮಾರಾಟಕ್ಕೂ ಇದು ಅನ್ವಯ. ಕೊವಿಡ್ -19 ಜಗತ್ತಿನ ಸರಬರಾಜು ಸರಪಳಿಯನ್ನೇ ಕಡಿದು ಹಾಕಿತು. ಇದನ್ನು ಅರ್ಥ ಮಾಡಿಕೊಳ್ಳಲು ಆಟೊಮೊಬೈಲ್ ಉದ್ಯಮವನ್ನು ನಾವು ಮೂರು ಭಾಗವಾಗಿ ನೋಡಬೇಕು.

ಲಾಕ್ ಡೌನ್ ಪೂರ್ವ ಭಾಗ
ಜಗತ್ತಿಗೆ ಗೊತ್ತಿಲ್ಲದೇ ಹೋದರೂ ಡಿಸೆಂಬರ್ ತಿಂಗಳಿನಲ್ಲೇ ಚೀನಾದಲ್ಲಿ ಕರೋನಾ ಹರಡುವಿಕೆ ಶುರುವಾಗಿತ್ತು. ವರದಿಗಳ
ಪ್ರಕಾರ ತಕ್ಷಣವೇ ಅವರು ದೇಶದೊಳಗಿನ ಜನ ಸಂಚಾರವನ್ನು ನಿಯಂತ್ರಿಸಿದ್ದರು. ಜನವರಿ ಹೊತ್ತಿನಲ್ಲಿ ಚೀನಾದಲ್ಲಿ ಕಠೋರ ಲಾಕ್ ಡೌನ್ ಶುರುವಾಗಿತ್ತು. ಚೀನಾ ಗ್ಲೊಬಲ್ ಸಪ್ಲೈ ಚೈನಿನ ಬಹುಮುಖ್ಯ ಭಾಗ. ಅಲ್ಲಿ ಏನಾದರೂ ತೊಂದರೆ ಆದರೆ ಇಡೀ ಜಗತ್ತಿಗೆ ಅದರ ಪ್ರಭಾವ ಉಂಟಾಗುತ್ತದೆ. ಭಾರತದಲ್ಲಿ ಮೊದಲೇ ಬೇಡಿಕೆ ಕಡಿಮೆ ಆಗಿತ್ತು, ಚೀನಾದಲ್ಲಿ ಆದ ಅವಾಂತರದಿಂದ ಬಿಡಿ ಭಾಗಗಳು ಬರುವುದು ನಿಂತು ಬೇಡಿಕೆ ಇದ್ದಷ್ಟು ಕಾರುಗಳನ್ನು ಕೂಡ ಇಲ್ಲಿಯ ಕಂಪನಿಗಳು ತಯಾರು ಮಾಡಲಾಗಲಿಲ್ಲ.

ಇದಲ್ಲದೆ ಇನ್ನೊಂದು ತೊಂದರೆ ಅವರನ್ನು ಕಾಡುತ್ತಿತ್ತು, ಅದುವೇ ಭಾರತ್ ಸ್ಟೇಜ್ -6 (ಬಿ ಎಸ್-6). ಎಪ್ರಿಲ್ 2020 ರ ನಂತರ ಭಾರತದಲ್ಲಿ ಬಿಎಸ್ -4 ಗಾಡಿಗಳನ್ನು ಮಾರುವಂತಿಲ್ಲ. ಸರಕಾರದ ಈ ನಿಯವುದಿಂದಾಗಿ ಕಂಪನಿಗಳು ಆಗಲೇ ತಕ್ಕ ನಿರ್ಧಾರ
ತಗೆದುಕೊಂಡಿದ್ದವು. ಒಂದು ಸ್ಟೇಜ್‌ನಿಂದ ಇನ್ನೊಂದು ಸ್ಟೇಜ್ ಗೆ ಬದಲಾಗುವುದು ಅಷ್ಟು ಸುಲಭವಲ್ಲ. ಹಳೆ ಗಾಡಿಗಳನ್ನೆಲ್ಲ
ಮಾರಿ ಬಿಡಬೇಕು, ಹೊಸ ಗಾಡಿಗಳು ರೆಡಿ ಇರಬೇಕು, ಅದಕ್ಕೆ ತಕ್ಕ ಬಿಡಿ ಭಾಗಗಳು. ಇದನ್ನೆಲ್ಲ ನಿರ್ವಹಿಸುವುದು ಕಂಪ್ಯೂಟರ್ ‌ನಿಂದಲೂ ಸಾಧ್ಯವಿಲ್ಲ. ಇದಕ್ಕೆ ಮನುಷ್ಯನ ಚತುರತೆಯೇ ಬೇಕು!

ಇಷ್ಟು ಸಂಕೀರ್ಣ ಪರಿಸ್ಥಿತಿಯಲ್ಲಿ ಎರಗಿದ ಲಾಕ್ ಡೌನ್‌ನಿಂದಾಗಿ, ಕಾರು ಕಂಪನಿಗಳನ್ನು ಯಾವತ್ತೂ ಕಾಣದಂತಹ ಇಕ್ಕಟ್ಟಿಗೆ ಸಿಲುಕಿಸಿದವು. ಚಕ್ರಬಡ್ಡಿ ವ್ಯವಹಾರ ಇದೆಯಲ್ಲ ಹಾಗೆ ಕೆಲವೊಮ್ಮೆ ಸಮಸ್ಯೆಗಳೂ ಚಕ್ರಬಡ್ಡಿ ರೂಪದಲ್ಲಿ ಬರುತ್ತದೆ. ಆಗ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ. ಜನವರಿ, ಫೆಬ್ರವರಿ ಹಾಗೂ ಮಾರ್ಚಿನಲ್ಲಿ ಆಟೋಮೊಬೈಲ್ ಮಾರುಕಟ್ಟೆಯ ಮೇಲೆ ನಿರಾಸೆಯ ಮೋಡ ಕವಿದಿತ್ತು. ಇಷ್ಟೇ ಹೊತ್ತಿಗೆ ಕರೋನಾ ಜಗತ್ತಿನಾದ್ಯಂತ ಹರಡಿ, ಭೂಮಂಡಲವೇ ಮನೆಯೊಳಗೆ ಕೂತಿತ್ತು!

ಲಾಕ್ ಡೌನ್ ನಂತರ
ಸರ್ಕಾರ ಮಾರುಕಟ್ಟೆಯನ್ನು ಅನ್ ಲಾಕ್ ಮಾಡುತ್ತಿದ್ದಂತೆ ಕತ್ತಲೆಯು ಮರೆಯಾಗುತ್ತಾ ಬಂತು. ಆದರೆ ಸೂರ್ಯ ಉದಯಿಸು ವುದು ಯಾವಾಗ ಎನ್ನುವ ಖಾತ್ರಿ ಯಾರಿಗೂ ಇರಲಿಲ್ಲ. ನಮ್ಮ ದೇಶದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ಕೊಡುವ ಜನರಿಗೇನು ಕಡಿಮೆಯಿಲ್ಲ. ಬೇಕಾದರೆ ಗಲ್ಲಿಗೊಬ್ಬ ಅರ್ಥಶಾಸ್ತ್ರಜ್ಞ ಹುಟ್ಟಿ ಬರಬಲ್ಲ. ದೇಶದ ಆರ್ಥಿಕತೆ ಕುಸಿದಿದೆ, ಇನ್ನೇನು ಆಟೋ ಮೊಬೈಲ್ ಇಂಡಸ್ಟ್ರಿ ಮುಳುಗಿ ಹೋಗಲಿದೆ, ಲಕ್ಷಾಂತರ ಜನರು ಕೆಲಸ ಕಳೆದು ಕೊಳ್ಳುತ್ತಾರೆ ಎನ್ನುವ ಭಯ ಹುಟ್ಟಿಸಿದ್ದವರ ಹೆಸರು ಜಗತ್ತಿಗೆ ಗೊತ್ತೇ ಇದೆ.

ಎಕಾನಮಿ ‘‘U’’ ರೀತಿಯಲ್ಲಿ ಪುನಃ ಚೇತರಿಸಿಕೊಳ್ಳಬಹುದು, ‘V’’ರೀತಿಯಲ್ಲಿ ಕೂಡ ಆಗಬಹುದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ‘‘L’’ (ಸರಿ ಹೋಗುವುದೇ ಇಲ್ಲ) ರೀತಿಯಾಗಿ ಅದನ್ನು ಕಂಡರು. ನೋಡಿ, ಕಷ್ಟ ಎನ್ನುವುದು ಬಂದೇ ಬರುತ್ತದೆ. ನಾವು ಹೋಗುವ ರಸ್ತೆಯಲ್ಲಿ ಸುರಂಗ ಬಂದಾಕ್ಷಣ ಅದೇ ಡೆಡ್ ಎಂಡ್ ಅಲ್ಲ.

ತುಸು ಹೊತ್ತು ಕತ್ತಲಿದ್ದು ಬೆಳಕು ಮತ್ತೆ ಕಾಣುತ್ತದೆ. ಇವತ್ತು ಹಿಂದಕ್ಕೆೆ ತಿರುಗಿ ನೋಡಿದರೆ ಆರು ತಿಂಗಳ ಹಿಂದೆ ಕಂಡ ಕತ್ತಲ
ಸುರಂಗ ಸ್ವಪ್ನ ಎನಿಸುತ್ತದೆ. ಆನ್ ಲೈನ್ ಕಾರ್ ಮಾರಾಟ, ಹೊಸ ಮಾದರಿಯ ಕಾರುಗಳು, ಸುಲಭದ ಹಣಕಾಸಿನ ಸೌಲಭ್ಯ ಹೀಗೆ ಹತ್ತಾರು ನವೀನ ಆವಿಷ್ಕಾರಗಳು ಹುಟ್ಟಿಕೊಂಡವು.

ಕಷ್ಟಗಳು ಮತ್ತು ಈ ಸುರಂಗ ಬದುಕಿನಲ್ಲಿ ಹಾಗೂ ದಾರಿಯಲ್ಲಿ ಸಿಕ್ಕೇ ಸಿಗುತ್ತಾರೆ. ಕಾರಿನ ಮೇಲೆ ಕೂತು ಸಾವಿರಾರು ಕಿಮೀ ಪ್ರವಾಸ ಮಾಡುವಾಗ ನಮಗೆ ಒಂದೋ ಎರಡೋ ಕಿಮೀ ದೂರವಷ್ಟೇ ಸುರಂಗ ಸಿಗಬಹುದು ಉಳಿದಿದ್ದೆಲ್ಲ ಬೆಳಕು, ನೆರಳು ಚೆಲ್ಲಿರುವ ರಸ್ತೆಗಳೇ. ಕಷ್ಟವೂ ಹೀಗೆ ನೂರು ವರ್ಷದ ಬದುಕಿನಲ್ಲಿ ಕೆಲವು ತಿಂಗಳ ಕಷ್ಟ ಬರುತ್ತದೆ, ಹೋಗುತ್ತದೆ ಅದನ್ನು ಕಲಿಕೆ ಯಾಗಿ ಸ್ವೀಕರಿಸೋಣ, ಕಷ್ಟ ಬಂದಾಕ್ಷಣ ಕೊನೆ ಎನ್ನುವ ಮನಸ್ಥಿತಿ ಬೇಡ. ಕಾಣದ ಕರೋನಾ ಕಲಿಸಿ ಹೋದ ಪಾಠವಿದು!

ಭರವಸೆಯ ಬೆಳಕು
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆಟೋಮೊಬೈಲ್ ಕಂಪನಿಗಳು ಹಿಂದಿನ ವರ್ಷಕ್ಕಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿವೆ. ಮಾರುಕಟ್ಟೆಯಲ್ಲಿ ಭರವಸೆ ಚಿಗುರಿದೆ. ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್, ಟೆಕ್ನಿಷಿಯನ್‌ನಿಂದ ಹಿಡಿದು  ದೇಶದ ಉದ್ದಗಲಕ್ಕೂ ಹಬ್ಬಿರುವ ಡೀಲರ್‌ಗಳು, ಲಕ್ಷಾಂತರ ಕೆಲಸಗಾರರು ಹಬ್ಬವನ್ನು ಆಚರಿಸಲು ಸಿದ್ಧವಾಗಿದ್ದಾರೆ.

ಮಾರುತಿ, ಟಾಟಾ, ಕಿಯಾ, ಹುಂಡೈ, ಮಹೀಂದ್ರಾ, ಟೊಯೋಟಾ ಎಲ್ಲರೂ ತಮ್ಮ ವಾಹನಗಳ ಮಾರಾಟದಲ್ಲಿ ಬ್ಯುಸಿ. ಕತ್ತಲಿ ನಿಂದ ಬೆಳಕಿನಡೆ ಕರೆದುಕೊಂಡು ಹೋಗುವುದೇ ದೀಪಾವಳಿ ಹಬ್ಬ. ಕತ್ತಲು ಬಂದಿತ್ತು, ಈಗ ದೀಪಾವಳಿ ಬರುತ್ತಿದೆ. ಮತ್ತೆ ಎಕ ನಾಮಿ ಬೆಳೆಯಲಿ, ಹೆಚ್ಚು ಕಾರುಗಳು ನಮ್ಮ ರಸ್ತೆೆಗಳು ಮೇಲೆ ಓಡಾಡಲಿ ಎನ್ನುವ ಹಾರೈಕೆ.

ಲಾಕ್ ಡೌನ್ ಸಮಯ
ಭಾರತದ ಇತಿಹಾಸದಲ್ಲಿ ಮೊದಲಬಾರಿಗೆ ಎಪ್ರಿಲ್ ತಿಂಗಳಲ್ಲಿ ಒಂದೇ ಒಂದು ವಾಹನ ಮಾರಾಟವಾಗಿಲ್ಲ. ಜೀರೊ ಮಾರಾಟದ ತಿಂಗಳು ಅದು. 10-15 ಲಕ್ಷ ಜನರ ಉದ್ಯೋಗದ ಪ್ರಶ್ನೆ. ನೋಡು ನೋಡುತ್ತಿದ್ದಂತೆ ಆಟೋಮೊಬೈಲ್ ಕಂಪನಿಗಳು ಬೆಳಕೇ ಕಾಣದ ಸುರಂಗದೊಳಗೆ ಹೊಕ್ಕಿದ್ದವು. ಸುರಂಗ ಎಷ್ಟುದ್ದವಿರಬಹುದು? ಬೆಳಕು ಯಾವಾಗ ಕಾಣಬಹುದು? ಒಂದಲ್ಲ ಎರಡಲ್ಲ ಸಾವಿರಾರು ಕೋಟಿ ರೂಪಾಯಿಗಳ ನಷ್ಟ. ಕಂಪನಿಗಳ ಮಾಲೀಕರು, ಡೀಲರ್ ಶಿಪ್ ಮಾಲೀಕರು, ಅಸಂಖ್ಯಾತ ಕೆಲಸಗಾರರು ಅನಿಶ್ಚಿತ ನಾಳೆಯ ಅಧೀನರಾದರು.

ಮೂರು ವಾರಗಳ ಲಾಕ್ ಡೌನ್ ಮುಗಿಯಿತೇ? ನಂತರ ಪರಿಸ್ಥಿತಿ ಮೊಲಿನ ರೀತಿ ಆಗಲಿಲ್ಲ. ಕಾರನ್ನು ಕೊಳ್ಳುವುದು ಅಂದರೆ ಸಾಬೂನು ಕೊಂಡಂತಲ್ಲ ಅಥವಾ ಮೊಬೈಲ್ ಖರೀದಿಯಲ್ಲ, ಅಲ್ಲಿ ಲಕ್ಷಾಂತರ ರೂಪಾಯಿ ಹಣವಿದೆ. ನಾಳೆ ಏನು ಆಗ ಬಹುದು ಎನ್ನುವ ಸ್ಥಿರತೆ ಇಲ್ಲದೇ ಹೋದ ಮೇಲೆ ಯಾರೂ ಅಷ್ಟೊಂದು ಹಣ ಹೂಡಿಕೆ ಮಾಡುವುದಿಲ್ಲ. ಲಾಕ್ ಡೌನ್ ಮುಗಿ ಯುತ್ತಿದ್ದಂತೆಯೇ ವಲಸೆ ಕಾರ್ಮಿಕರು ಶಹರ ಬಿಟ್ಟು ತಮ್ಮ ತಮ್ಮ ಊರಿಗೆ ತೆರಳಿದರು. ಆಟೋಮೊಬೈಲ್ ಕಂಪನಿಗಳು ಬಾಗಿಲು ತೆಗೆದರೂ ಅಲ್ಲಿ ಕೆಲಸ ಮಾಡಲು ಜನ ಸಿಗುತ್ತಿರಲಿಲ್ಲ. ಸಿಕ್ಕರೂ ಅವರ ನಿರ್ವಹಣೆ ದೊಡ್ಡ ಹೊಣೆ. ಒಂದೊಂದು ಕೊರೋನಾ ಕೇಸ್ ಕೂಡ ಆಕಾಶವೇ ಕಳಚಿ ಬಿದ್ದ ಭಾವನೆ ತರುತ್ತಿತ್ತು.

ಎಲ್ಲವೂ ವರ್ಕ್ ಫ್ರಾಮ್ ಹೋಂ ಸಾಧ್ಯವೇ? ಶೋ ರೂಂಗೆ ಬರುವವರು ಯಾರು? ಒಬ್ಬರನ್ನೊಬ್ಬರು ಹತ್ತಿರ ನೋಡುವುದಕ್ಕೂ ಹೆದರುತ್ತಿದ್ದ ಸಮಯ!