ಕೆ.ಶ್ರೀನಿವಾಸ ರಾವ್ ಹರಪನಹಳ್ಳಿ
ಹಿಂದೂ ವಿವಾಹಗಳಲ್ಲಿ ಅಂತರಪಟ ಧಾರಣೆಯ ಶಾಸ್ತ್ರ ವಿಶೇಷಗಳಲ್ಲಿ ವಿಶೇಷ. ಜ್ಯೋತಿಷಿಗಳು ಅಳೆದು ತೂಗಿ ನಿಶ್ಚಯಿಸಿದ ಶುಭ ಮೂಹೂರ್ತದಲ್ಲಿ ವಧುವರರನ್ನು ಆಚೆ-ಈಚೆ ನಿಲ್ಲಿಸಿ ನಡುವೆ ಅಂತರ ಪಟ ಹಿಡಿದು ಮಂತ್ರ ಪಠನದ ನಂತರ ಪರದೆ ಸರಿಸಿದಾಗ ವಧುವರರು ಪರಸ್ಪರ ತಲೆಯ ಮೇಲೆ ಬೆಲ್ಲ-ಜೀರಿಗೆ ಸುರಿದು ಕೊಳ್ಳುವ ಚೇತೋಹಾರಿ ಕ್ರಿಯೆಯಿದು.
ನಮ್ಮ ಪಾಪಣ್ಣನಿಗೂ ಅಂತಃಪಟ ಸರಿಸುವ ಅದೃಷ್ಟ ಬಂದಿತ್ತು. ‘ಜೋಡಿ ಬೇಡೋ ಕಾಲವಮ್ಮ’ ಎಂದು ಹಾಡಿ ಹಾಡಿ ಬೇಸತ್ತಿದ್ದವನಿಗೆ ಟೈಪಿಸ್ಟ್ ರಮಣಿ ಕಣ್ಣಿನಲ್ಲಿಯೇ ಅಂಗೀಕಾರ ಸೂಚಿಸಿ ಪಟಪಟನೆ ರೆಪ್ಪೆ ಬಡಿದಾಗ ‘ಗಗನವು ಎಲ್ಲೋ, ಭೂಮಿಯು ಎಲ್ಲೋ’ ಎನಿಸಿತ್ತು.
ಮದುವೆಯ ದಿನ ಪಾಪಣ್ಣ ಮಿರಿ ಮಿರಿ ಮಿಂಚುತ್ತಿದ್ದ. ಇಬ್ಬರು ಭಾವಂದಿರು ಆಚೆ ಈಚೆ ಅಂತರ ಪಟ ಹಿಡಿದು ನಿಂತಿದ್ದರು. ಒಂದು ಬದಿ ಅಕ್ಕಿಯ ರಾಶಿ ಹರಡಿ ಅದರ ಮೇಲೆ ಪಾಪಣ್ಣ ಕೈಯಲ್ಲಿ ಜೀರಿಗೆ ಬೆಲ್ಲ ಹಿಡಿದು ನಿಂತಿದ್ದ. ವಧುವನ್ನು ಅವಳ ಸೋದರ ಮಾವ ಮಂಗಳವಾದ್ಯದೊಂದಿಗೆ ಸಂಭ್ರಮದಿಂದ ಕುರೆತಂದು ಅಂತರಪಟದ ಇನ್ನೊಂದು ಬದಿಗೆ ನಿಲ್ಲಿಸಿದ. ಪುರೋಹಿತರು ಅವಳ ಕೈಗೂ ಜೀರಿಗೆ ಬೆಲ್ಲ ಕೊಟ್ಟರು. ಇಬ್ಬರಲ್ಲೂ ಕಾತುರ. ಪಾಪಣ್ಣನಿಗೆ ಅವನ ಗೆಳೆಯರು ಹೇಳಿದ್ದರು.
‘ಪರದೆ ಸರಿದಾಗ ಯಾರು ಮೊದಲು ಮತ್ತೊಬ್ಬರ ತಲೆಗೆ ಜೀರಿಗೆ ಬೆಲ್ಲ ಸುರಿಯುವರೋ ಅವರು ಹೇಳಿದಂತೆ ಇನ್ನೊಬ್ಬರು ಜೀವನದುದ್ದಕ್ಕೂ ಪಾಲಿಸಬೇಕಾಗುತ್ತದೆ’ ಎಂದಿದ್ದ ಗೆಳೆಯರ ಮಾತೇ ಪಾಪಣ್ಣನ ಮನಸ್ಸಿನಲ್ಲಿ! ಅಂತೆಯೇ ಹೇಗಾದರೂ
ತಾನೇ ಮೊದಲು ರಮಣಿಯ ತಲೆ ಮೇಲೆ ಜೀರಿಗೆಬೆಲ್ಲ ಹಾಕಬೇಕೆಂದು, ಉತ್ಸುಕತೆಯಿಂದ ಇಲಿಗಾಗಿ ಹೊಂಚು ಹಾಕಿ ಕುಳಿತ ಬೆಕ್ಕಿನಂತೆ ನಿಂತಿದ್ದ. ವರನ ಹಿಂದೆ ಅವನ ಸಂಬಂಧಿಕರು, ವಧುವಿನ ಹಿಂದೆ ಅವಳ ತಂದೆ, ತಾಯಿ, ಸಂಬಂಧಿಕರು ಸಾಕ್ಷಿಯಾಗಿ ನಿಂತಿದ್ದರು.
ಸುವಾಸಿನಿಯರು ಲಕ್ಷ್ಮೀ ಶೋಬಾನ ಹಾಡುತ್ತಿದ್ದರು. ಪುರೋಹಿತರು ಕಂಚಿನ ಕಂಠದಲ್ಲಿ ಲಕ್ಷ್ಮೀನಾರಾಯಣ, ಬ್ರಹ್ಮ, ರುದ್ರಾದಿ ಸಕಲ ದೇವತೆಗಳು ಸನ್ನಿಹಿತರಾಗಿರುವ ಈ ಶುಭ ಮುಹೂರ್ತದಲ್ಲಿ ವಧುವರರಾದಿಯಾಗಿ ಎಲ್ಲರೂ ದೈವಧ್ಯಾನ ಮಾಡಿರೆಂದು ಸೂಚಿಸಿ ‘ಓಂ ಪ್ರತಿಷ್ಠಾ’ ಎಂದರು. ತಕ್ಷಣ ಅಂತರಪಟ ಸರಿಯಿತು. ಸಣ್ಣಗೆ ಏನೋ ಶಬ್ದವಾಯಿತು. ಒಮ್ಮೆಲೇ ಮದುವೆ
ಮನೆಯಲ್ಲಿ ಗೊಳ್ ಎಂಬ ನಗೆಗಡಲು! ಪಾಪ ರಮಣಿಗೆ ಅಂದು ಶೀತವಾಗಿತ್ತು, ಅಂತರ ಪಟ ಸರಿಯುವ ಸಮಯಕ್ಕೆ ಸರಿಯಾಗಿ ತಡೆಯಲಾಗದೇ ‘ಆಕ್ಷಿ…’ ಎಂದು ಬಗ್ಗಿಬಿಟ್ಟಿದ್ದಳು.
ಪಾಪಣ್ಣ ಹೋಮದ ಹೊಗೆಯಲ್ಲಿ ಕಾಣದೇ ವಧುವಿನ ಹಿಂದೆ ನಿಂತಿದ್ದ ಅವಳ ತಾಯಿ ಅಂದರೆ, ತನ್ನ ಅತ್ತೆಯ ತಲೆಯ ಮೇಲೆ ಬೆಲ್ಲ ಜೀರಿಗೆ ಸುರಿದಿದ್ದ! ಇದನ್ನು ಕಂಡು ಪಾಪಣ್ಣನನ್ನು ಎಲ್ಲರೂ ರೇಗಿಸುವವರೇ! ವಿವಾಹ ಕಾರ್ಯಕ್ರಮಗಳೆಲ್ಲ ಮುಗಿದು ಪತ್ನಿಯನ್ನು ಕರೆದುಕೊಂಡು ಕಾರನ್ನೇರುವವರೆಗೂ ಪಾಪಣ್ಣ ತಲೆಯೆತ್ತಿ ಅತ್ತೆಯನ್ನು ನೋಡಲಿಲ್ಲ! ಪಾಪದ ಪಾಪಣ್ಣ.