Tuesday, 12th November 2024

ಏಕಾಗ್ರತೆಯ ಫಲ ಈ ಸುಂದರ ಕುಸುರಿ

ಪೂರ್ಣಿಮಾ ಕಮಲಶಿಲೆ

ಸಮಯದ ಸದುಪಯೋಗಕ್ಕೆ ಕುಸುರಿ ಕೆಲಸ ಉತ್ತಮ. ಭತ್ತದ ಕಾಳುಗಳನ್ನು ಸಹ ಸುಂದರ ಕಲಾಕೃತಿಯನ್ನಾಗಿ ಸಬಹುದು ಎಂಬುದಕ್ಕೆ ಕೇರಿಮನೆಯ ಸುವರ್ಣ ಶ್ರೀಪಾದ ಹೆಗಡೆಯವರ ತಾಳ್ಮೆಯ ಕುಸುರಿಯನ್ನು ನೋಡಬೇಕು.

ಕಲೆ ಯಾರನ್ನು ಸೆಳೆಯೋದಿಲ್ಲ ಹೇಳಿ? ಅದೂ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಭತ್ತ, ಬಳ್ಳಿ, ಬೀಜ, ಧಾನ್ಯ ಎಲ್ಲವುದರಲ್ಲೂ ಕುಸುರಿ ಅರಳಿಸುವ ವಿಷಯ ಅಮ್ಮನಿಂದ ತಿಳಿದಿತ್ತು. ನಾವು ಭತ್ತದ ತೆನೆ ಯಿಂದ ಗೂಡು, ತೋರಣ ಎಲ್ಲಾ ಮಾಡುತ್ತೇವೆ. ಆದರೆ ಮೊನ್ನೆ ಮೊನ್ನೆ ಫೇಸ್‌ಬುಕ್‌ನಲ್ಲಿ ಕಂಡ ಭತ್ತದ ಒಂದು ಕುಸುರಿ ನನ್ನನ್ನು ಬಹಳ ಆಕರ್ಷಿಸಿತು.

ಆ ಕುಸುರಿಯ ಹೆಸರು ‘ಭತ್ತದ ಆರತಿ ಕಟ್ಟು’. ಈ ಆರತಿ ಕಟ್ಟನ್ನು ಕಲಾತ್ಮಕವಾಗಿ ಮಾಡಿದವರು ಶಿರಸಿ ತಾಲೂಕಿನ ಭೈರುಂಬೆ ಸಮೀಪದ ಕೇರಿಮನೆ ಎಂಬ ಪುಟ್ಟ ಹಳ್ಳಿಯ ಸುವರ್ಣ ಶ್ರೀಪಾದ ಹೆಗಡೆ. ನಾನು ಸುವರ್ಣ ಅವರ ಫೇಸ್ ಬುಕ್ ಗೋಡೆಯಲ್ಲಿ ಇನ್ನೇೇನು ಕುಸುರಿ ಇದೆ ನೋಡೋಣ ಎಂದುಕೊಂಡರೆ ಅವರು ಪ್ರೊಫೈಲ್ ಲಾಕ್ ಮಾಡಿದ್ದರು. ಕುತೂಹಲ ತಡೆಯಲಾರದೆ ಈ ಭತ್ತದ ಆರತಿ ಕಟ್ಟಿನ ಪೋಸ್ಟ್‌‌‌ಗೆ ಕಮೆಂಟ್ ಬರೆದೆ.

‘ಸುವರ್ಣ ಹೆಗಡೆ ನಿಮ್ಮ ತಾಳ್ಮೆ ಮತ್ತು ಶ್ರಮಕ್ಕೆ ಸಲಾಂ. ಒಂದೇ ಅಳತೆಯ ಮತ್ತು ಹೊನ್ನಿನ ಬಣ್ಣದ ಭತ್ತಗಳನ್ನು ಆರಿಸಿ. ಈ ರೀತಿ ಅಂಟಿಸುವುದು ಸುಲಭದ ಮಾತಲ್ಲ. ನಾನು ಈ ತರಹದ ಕುಸುರಿಯನ್ನು ಬೇರೆ ಧಾನ್ಯಗಳಿಂದ ಮಾಡುವುದನ್ನು ನೋಡಿರುವೆ. ಭತ್ತದಿಂದ ಮಾಡಿರುವುದನ್ನು ನೋಡಿದ್ದು ಇದೇ ಮೊದಲ ಬಾರಿ. ಇದನ್ನು ತಯಾರಿಸಲು ಎಷ್ಟು ದಿನ ಬೇಕಾಯ್ತು? ಎಷ್ಟು ಭತ್ತಳಸಿದಿರಿ’ ಎಂದು ಕೇಳಿದೆ.

ಸುವರ್ಣ ಹೆಗಡೆ ಮೆಸೆಂಜರ್‌ನಲ್ಲಿ ಎಲ್ಲಾ ಮಾಹಿತಿ ನೀಡಿದರು. ಎಂ.ಕಾಂ ಪದವೀಧರೆಯಾದ ಸುವರ್ಣ ಹೆಗಡೆಯವರು ಕೃಷಿ ಕುಟುಂಬದ ಯುವತಿ. ಅವಿಭಕ್ತ ಕುಟುಂಬದಲ್ಲಿ ನೆಲೆಸಿರುವ ಇವರು ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ಅಮ್ಮ ಹೀಗೆ ಎಲ್ಲರಿಂದಲೂ ಈ ಕುಸುರಿ ಕಲೆಯನ್ನು ಕಲಿತರು. ಮದುವೆ, ಉಪನಯನದ ಮನೆಗಳಲ್ಲಿ ಅಲಂಕಾರಕ್ಕಾಗಿ ಇಡಲು, ಮತ್ತು ಸಾಂಪ್ರದಾಯಕ್ಕೆ ಬಳಸಲು ಅಗತ್ಯವಿರುವ ಹಲವು ರೀತಿಯ ಕುಸುರಿ ಅರಳಿಸುವುದು ಮಾಡುವುದು ಇವರ ಹವ್ಯಾಸ.

ಚಿತ್ರದಲ್ಲಿ ಇರುವ ಆರತಿ ಕಟ್ಟನ್ನು ಮದುವೆ ಮನೆಯಲ್ಲಿ, ಗೃಹ ಪ್ರವೇಶ, ಉಪನಯನ, ಪೂಜೆ ಪುನಸ್ಕಾರಗಳಿಗೆ ಆರತಿ ಮಾಡಲು ಬಳಸುತ್ತಾರೆ. ಈ  ಆರತಿ ಕಟ್ಟನ್ನು ಒಂದು ದೊಡ್ಡ ಹರಿವಾಣದೊಳಗಿಳಿಸಿ, ಚಿಟಿಕೆ ಅರಶಿಣ, ಕುಂಕುಮವನ್ನು ಈ ಹರಿವಾಣ ದೊಳಗೆ ಹಾಕಿ, ಪುಟ್ಟ ನೀಲಾಂಜನದಲ್ಲಿ (ಸಣ್ಣ ಬೆಳ್ಳಿಯ ಹಣತೆ) ದೀಪ ಬೆಳಗಿ ಅದನ್ನು ಈ ಆರತಿ ಕಟ್ಟಿಟ್ಟ ಹರಿವಾಣದೊಳಗೆ ಇಟ್ಟು ಆರತಿ ಮಾಡುವ ಸಂಪ್ರದಾಯ ಇಂದಿಗೂ ಇದೆ.

ಹೊನ್ನ ಬಣ್ಣದ ಭತ್ತದ ಕಾಳು

ಈ ಭತ್ತದ ಆರತಿ ಕಟ್ಟು ಮಾಡಲು ಕನಿಷ್ಠ ಒಂದು ವಾರ ಹಿಡಿಯುತ್ತದೆ. ಇನ್ನೂರೈವತ್ತು ಗ್ರಾಾಂಗಳಷ್ಟು ಒಂದೇ ಅಳತೆಯ ಮತ್ತು ಹೊನ್ನ ಬಣ್ಣದ ಗಟ್ಟಿಭತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಆರತಿ ಕಟ್ಟಿನ ತಳಕ್ಕೆ ಒಂದು ಅಳತೆಯ ವೃತ್ತಾಕಾರದ
ಥರ್ಮೋಕೋಲ್ ಅಥವಾ ದಪ್ಪ ರಟ್ಟು ಬೇಕು. ಅದರ ಮೇಲೆ ಸ್ವಲ್ಪವೂ ಥರ್ಮೋಕೋಲ್ ಮತ್ತು ರಟ್ಟು ತೋರದಂತೆ ಫೆವಿ ಕೋಲ್‌ಗೆ ತಾಗಿಸಿದ ಒಂದೊಂದೇ ಭತ್ತವನ್ನು ಒತ್ತೊತ್ತಾಗಿ ಅಂಟಿಸಿ ಒಣಗಲು ಬಿಡಬೇಕು.

ಹೂವು, ಪದ್ಮಾಕೃತಿಯನ್ನು ಅಂತರಂತರವಾಗಿ ಮಾಡಿ ಅದರ ಶಿಖರಕ್ಕೆ ಟಿಕ್ಲಿ, ಅಥವಾ ಮಣಿ ಅಂಟಿಸಿ, ಅದು ಪೂರ್ತಿ ಒಣಗಿದ
ನಂತರ ಈ ವೃತ್ತಾಕಾರದ ಥರ್ಮೋಕೋಲಿನಲ್ಲಿ  ತಯಾರಾದ ಭತ್ತದ ಕಟ್ಟಿನ ಮೇಲೆ ಕೂರಿಸಿ ಅಂಟಿಸಬೇಕು. ಈ ಆರತಿ ಕಟ್ಟನ್ನು ಭತ್ತ, ಮುತ್ತು, ಮಣಿ, ಇತರ ಧಾನ್ಯಗಳಿಂದಲೂ ಮಾಡಬಹುದು. ಆದರೆ ಭತ್ತ ಶುಭದ ಸಂಕೇತ. ಈ ಭತ್ತದ ಆರತಿ ಕಟ್ಟು ದೀರ್ಘ
ಬಾಳಿಕೆ ಬರಲು ವುಡ್ ಪಾಲಿಶ್, ಗೋಲ್ಡನ್ ಕಲರ್ ಪೈಂಟ್ ಕೂಡ ಬಳಸಬಹುದು.

ಭತ್ತದ ಆರತಿ ಕಟ್ಟು ಮಾತ್ರವಲ್ಲದೆ ವರಗಾಯಿಗೆ ಮುತ್ತಿನ ಬಲೆಯ ಅಲಂಕಾರ, ವಧು ಗೃಹಪ್ರವೇಶಕ್ಕೆ ಹೊಸ್ತಿಲ ಮೇಲಿಡುವ ಸಿದ್ದೆೆಗೆ ಮುತ್ತಿನ ಬಲೆ ನೆಯ್ಗೆ, ಭತ್ತದಿಂದ ತಯಾರಿಸಿದ ಕಲಶ ಇವೆಲ್ಲವನ್ನೂ ಸುವರ್ಣ ಹೆಗಡೆ ಮಾಡುತ್ತಾರೆ. ಜೊತೆಗೆ ಜೂಲೆ ವಯರ್‌ನಿಂದ ಕನ್ನಡಿ ಫ್ರೇಮ್, ವಾಲ್ ಹ್ಯಾಂಗಿ್ಗ್ಸ್‌‌, ಬಾಗಿಲ ತೋರಣ, ಇತ್ಯಾದಿಗಳನ್ನು ಕಲಾತ್ಮಕವಾಗಿ ಮಾಡುವ ಸದಭಿರುಚಿ ಇವರದ್ದು.

ತಮ್ಮೂರ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಇವರ ಈ ಕುಸುರಿಗಳೆಲ್ಲ ಕಲಾರಸಿಕರ  ಕಣ್ಮನ ತಣಿಸುತ್ತವೆ. ‘ಆ ಕಾರಣಕ್ಕಾಗಿ ಹೊಸ ಹೊಸ ಆಯಾಮದಲ್ಲಿ ಈ ಕಲೆ ಯನ್ನು ಕಲಿತೆ. ಹೀಗೊಂದು ಧಾನ್ಯದ ಕಲಾಕೃತಿ
ಮಾಡಿ ಕೊಡುವಿರಾ ಎಂದು ಕೇಳಿದವರಿಗೆ ಮಾಡಿಕೊಡಿಡುವುದೇ ನನಗೆ ಸಂತಸ’ ಎನ್ನುತ್ತಾರೆ ಸುವರ್ಣ ಹೆಗಡೆ.

ಸಮಯದ ಸದುಪಯೋಗ ಮತ್ತು ಸಾಂಪ್ರದಾಯಿಕ ಕಲೆಗೊಂದು ಆಧುನಿಕ ಸ್ಪರ್ಶ ನೀಡಿ ಅದನ್ನು ತಲೆಮಾರಿನಾಚೆ ದಾಟಿಸುವ ಪ್ರಯತ್ನವಿದು ಎಂದು ಹೆಮ್ಮೆಯಿಂದ ಹೇಳುವ ಸುವರ್ಣರ ಈ ಹವ್ಯಾಸ ಇತರರಿಗೆ ಮಾದರಿ.