Sunday, 24th November 2024

ಮೈದುಂಬಿದೆ ಭೀಮೇಶ್ವರ

ಸಿಂಚನಾ ಎಂ.ಆರ್. ಆಗುಂಬೆ

ಸುತ್ತಲೂ ಹಸುರು ಹೊದಿಕೆಯನ್ನೇ ಹೊದ್ದು, ನಿಶ್ಚಿಂತೆಯಿಂದ ಮೈಚಾಚಿ ಮಲಗಿರುವ ಪಶ್ಚಿಮ ಘಟ್ಟ. ಕಾಡಿನ ಇಳಿಜಾರಿನ
ನಡುವೆ ಬೃಹತ್ ಬಂಡೆಗಳ ವಿನ್ಯಾಸ. ಆ ಕಪ್ಪು ಬಂಡೆಗಳ ಮಧ್ಯೆ ಬಳ್ಳಿಯಂತೆ ಬಳುಕಿ ಬಂದು 50 ಅಡಿ ಎತ್ತರದಿಂದ ರಭಸವಾಗಿ ಧುಮ್ಮಿಕ್ಕಿ ಹಾಲ್ನೊರೆಯಂತೆ ಕೆಳಗೆ ಬೀಳುವ ಜಲಧಾರೆಯ ಸೊಗಸು.

ಪಕ್ಕದಲ್ಲೇ ಪುರಾಣ ಪ್ರಸಿದ್ಧ ಭೀಮೇಶ್ವರ ದೇವಾಲಯ. ಇಂತಹ ಸಹಜ ಸುಂದರ ಪ್ರಕೃತಿ ಸೌಂದರ್ಯದ ಆಸ್ವಾದನೆಯೊಂದಿಗೆ
ದೈವಿಕ ಅನುಭೂತಿ ನಿಮಗೂ ಸಿಗಬೇಕೆ? ಮಳೆಯ ಸಿಂಚನದ ನಡುವೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮೇಶ್ವರಕ್ಕೆ ಭೇಟಿ ನೀಡಿದರೆ, ಇಂತಹ ಒಂದು ಅನನ್ಯ, ಅಪರೂಪದ ಅನುಭವ ಲಭ್ಯ.

ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಭೀಮೇಶ್ವರ ದೇವಸ್ಥಾನ, ಪಕ್ಕದಲ್ಲೇ ಕಾಣಿಸುವ ಭೀಮೇಶ್ವರ ಜಲಪಾತ, ಆ ಜಲಪಾತ ನಿರ್ಮಿಸಿದ ತೊರೆ, ಸುತ್ತಲಿರುವ ಬೆಟ್ಟ, ಗುಡ್ಡಗಳ ಹಸಿರಿನ ಪರಿಸರವು ಮನದ ತುಂಬಾ ನಿಸರ್ಗ ಸಿಂಚನವನ್ನೇ ಮಾಡುತ್ತದೆ.

ನಿಸರ್ಗ ಸ್ವರ್ಗ
ಹಚ್ಚ ಹಸಿರಿನ ಕಾಡು, ಅಲ್ಲಿ ಬೆಳೆದ ವಿವಿಧ ರೀತಿಯ ಗಿಡ, ಮರ, ಬಳ್ಳಿ, ಹಾವಸೆ, ಅಣಬೆ, ಪಾಚಿ, ನೀಲಿ ಆಗಸ, ಮತ್ತು ನಿಮ್ಮ ಉಸಿರಿನ ಸದ್ದನ್ನು ನೀವೇ ಕೇಳುವಷ್ಟು ಮೌನ. ಸ್ವರ್ಗ ಧರೆಗಿಳಿದಂತೆ, ನಿಸರ್ಗವೇ ಸ್ವರ್ಗದಂತೆ ಭಾಸವಾದರೂ ಅಚ್ಚರಿಯಿಲ್ಲ. ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಲು ಬಯಸುವ ಯಾರಿಗಾದರೂ, ಭೀಮೇಶ್ವರ ಭೇಟಿಯು ಖುಷಿಯನ್ನು ಇಮ್ಮಡಿ ಗೊಳಿಸುವುದು ಮಾತ್ರವಲ್ಲದೆ ಮನಸ್ಸು ಆಹ್ಲಾದದೊಂದಿಗೆ ಪ್ರಶಾಂತತೆಯ ಭಾವ ಮೂಡಿಸುತ್ತದೆ. ಇಲ್ಲಿಗೆ ಭೇಟಿ ಎಂದರೆ, ಹಸಿರನ್ನು ನೋಡುವುದರ ಜತೆಯಲ್ಲೇ ಕಾಡಿನ ವ್ಯಾಪಾರಗಳನ್ನು ಗಮನಿಸುವ, ಹಕ್ಕಿಗಳ ಹಾಡನ್ನು ಕೇಳುವ ಅವಕಾಶ.

ಬತ್ತದ ಜಲಧಾರೆ
ಭೀಮೇಶ್ವರ ಜಲಪಾತದ ವಿಶೇಷತೆಯೆಂದರೆ ಇಲ್ಲಿನ ನೀರು ವರ್ಷವಿಡೀ ಎಂದಿಗೂ ಬತ್ತುವುದಿಲ್ಲ. ಮಳೆಗಾಲದಲ್ಲಿ ಸುಂದರ ಮತ್ತು ಪುಟ್ಟ ಜಲಪಾತವಾಗಿ ಮನಸ್ಸನ್ನು ಸೆಳೆಯುವ ಈ ಜಲಪಾತವು, ಬೇಸಿಗೆಯಲ್ಲಿ ತೆಳ್ಳನೆಯ ಜಲಧಾರೆಯಾಗುವುದ ನಿಜ ಆದರೆ, ಅದನ್ನು ನೋಡುವ ಅನುಭವ ಅಪೂರ್ವ. ಇಲ್ಲಿನ ಪುಟಾಣಿ ಜಲಪಾತವು ರಭಸದಿಂದ ನೆಗೆಯುವುದನ್ನು ನೋಡಲು ಮಳೆಗಾಲವೇ ಪ್ರಶಸ್ತ. ಮಹಾಶಿವರಾತ್ರಿಯಂದು, ಸ್ಥಳೀಯ ಜನರು ಇಲ್ಲಿ ನೆರೆದು, ಜಾತ್ರೆ, ಪೂಜೆ ನಡೆಸುತ್ತಾರೆ.

ಹೋಗುವುದು ಹೇಗೆ?
ಭೀಮೇಶ್ವರ ದೇವಸ್ಥಾನ ಹಾಗೂ ಜಲಪಾತಕ್ಕೆ ಹೋಗಲು ನೇರವಾದ ಮಾರ್ಗಗಳಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಹೊನ್ನಾ ವರ ರಸ್ತೆಯಲ್ಲಿ 29 ಕಿ.ಮೀ. ದೂರದಲ್ಲಿರುವ ಜೋಗ್ ವೃತ್ತವನ್ನು ತಲುಪಿ, ಕಾರ್ಗಲ್, ಮುಪ್ಪಾನೆ ದಾಟಿ, ಕೊಗಾರ್ ಘಾಟ್‌ನಲ್ಲಿ 3 ಕಿ.ಮೀ. ತೆರಳಿ, ಅಲ್ಲಿಂದ ಚಾರಣ ಮಾಡಬಹುದು. ಬೇಸಿಗೆಯಲ್ಲಿ ವಾಹನಗಳು ಹತ್ತಿರದ ತನಕ ಚಲಿಸುತ್ತವೆ. ಆದರೆ ಮಳೆಗಾಲ ದಲ್ಲಿ ವಾಹನಗಳು ದೇವಸ್ಥಾನದವರೆಗೂ ತಲುಪಲು ಸಾಧ್ಯವಿಲ್ಲ. ಬಸ್‌ನಲ್ಲಿ ಹೋಗುವುದಾದರೆ, ಸಾಗರದಿಂದ ಭಟ್ಕಳದ ಬಸ್ ಹತ್ತಿ, ಕೋಗಾರ್ ಘಾಟ್‌ನಲ್ಲಿ ಕೋರಿಕೆಯ ನಿಲುಗಡೆ ಪಡೆಯಬೇಕು. ಅಲ್ಲಿಂದ ಎಂಟು ಕಿಮೀ ನಡೆದರೆ ಭೀಮೇಶ್ವರ ತಲುಪ ಬಹುದು. ಮಳೆಗಾಲದಲ್ಲಿ ಸದಾಕಾಲ ಮಳೆ ಇರುವುದರಿಂದ, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು.