ವಾ.ಮುರಳೀಧರ ತೀರ್ಥಹಳ್ಳಿ
ಪರಿಸರ ಕಾಳಜಿಯ ಬರಹಗಾರರಲ್ಲಿ ನಾಡಿನಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವವರು ಸಾಗರದ ನಾ.ಡಿಸೋಜಾ. ಇತ್ತೀಚಿಗೆ ಬೆಂಗಳೂ ರಿನ ರಂಗಶಂಕರದಲ್ಲಿ, ಅವರ ‘ಹಕ್ಕಿಗೊಂದು ಗೂಡು ಕೊಡಿ’ ಕೃತಿಯಾ ಧಾರಿತ ‘ಹಕ್ಕಿ ಕಥೆ’ ಪರಿಸರ ಕಾಳಜಿಯ ನಾಟಕ ಪ್ರದರ್ಶನ ಗೊಂಡಿತು.
ಬೆಂಗಳೂರಿನ ಅಕಾಲ ಮಳೆಯಿಂದ ಮುದುಡಿದ್ದ ಮನಕ್ಕೆ ಚೇತೋಹಾರಿ ಯಾದ ನಾಟಕ ಅದಾಗಿತ್ತು. ಜಪಾನಿನ ಪ್ರಸಿದ್ಧ ಬುನಾರುಕು’ ಗೊಂಬೆಯಾಟದ ಶೈಲಿಯಲ್ಲಿ ಹೇಳಿದ ಈ ಹಕ್ಕಿಗಳ ಕಥೆ ಕಣ್ಮನ ಸೆಳೆಯುವಂತಿತ್ತು. ತನ್ನ ದುರಾಸೆಯ ಪರಮಾವಧಿ ಯಿಂದ ಸಮಸ್ತ ಜೀವ ಸಂಕುಲವನ್ನೇ ಆಪೋಶನ ತೆಗೆದುಕೊಡಿರುವ ಮಾನವ ಎಂಬ ಅಲ್ಪ ಪ್ರಾಣಿಯ ಅಟ್ಟಹಾಸಕ್ಕೆ ಪ್ರಕೃತಿ ನೀಡುವ ಕಠೋರ ಸಂದೇಶದ ರೂಪದಲ್ಲಿ ಸುಂದರವಾಗಿ ಹೆಣೆಯಲ್ಪಟ್ಟಿರುವ ಈ ನಾಟಕ ಒಂದು ಗೀತ ರೂಪಕದಂತೆ ಮನ ಸೆಳೆಯಿತು. ರಂಗಕರ್ಮಿ ಎಸ್.ಮಾಲತಿ, ನಾಟಕದ ಈ ರಂಗರೂಪವನ್ನು ಸಿದ್ಧಗೊಳಿಸಿದ್ದರು. ಅದನ್ನು ಯಶಸ್ವಿಯಾಗಿ ತೆರೆಗೆ ತಂದವರು ಶಿವಮೊಗ್ಗ ರಂಗಾಯಣದ ಕಲಾವಿದರು.
ಇದು ಸಹ್ಯಾದ್ರಿಯ ನಿಬಿಡಾರಣ್ಯವನ್ನೇ ತಮ್ಮ ತವರು ಎಂದು ತಿಳಿದು ನೆಮ್ಮದಿಯ ಬದುಕು ನಡೆಸುತ್ತಿದ್ದ ‘ಬಿಳಿ ಕಂದಮ್ಮ’ ಎನ್ನುವ ಹಕ್ಕಿಗಳ ಆತ್ಮ ಕಥೆ. ಇಲ್ಲಿ ತ್ರೀ ಡೈಮೆನ್ಷನ್ ಪರಿಣಾಮದಲ್ಲಿ ಪ್ರೇಕ್ಷಕರೆದುರು ರೋಮಾಂಚಕಾರಿಯಾಗಿ ತೆರೆದು ಕೊಳ್ಳುತ್ತದೆ. ಉಳಿವಿಗಾಗಿ ಪರಸ್ಪರ ಕೊಂದು ತಿನ್ನುವ ‘ಅರಣ್ಯನ್ಯಾಯ’ಕ್ಕೆ ಒಗ್ಗಿದ್ದ ಹಕ್ಕಿಗಳು, ಪರಿಸರದ ಮೇಲೆ ಮಾನವನ ಆಕ್ರಮಣದಿಂದ ಕಂಗೆಟ್ಟು ಕಾಡು ಬಿಟ್ಟು ತೆರಳುತ್ತವೆ. ಆದರೆ ಹಕ್ಕಿಗಳ ಆಕ್ರಂದನ ಮನುಷ್ಯನ ಕಿವಿಗೆ ಬೀಳುವುದೇ ಇಲ್ಲ.
ಅಭಿವೃದ್ಧಿಯ ಹೆಸರಲ್ಲಿ ಪಶ್ಚಿಮಘಟ್ಟದ ಅರಣ್ಯ ನಾಶವಾಗಿ ಹಕ್ಕಿಗಳು ಪಟ್ಟಣದ ದೂರ ವಾಣಿ ಗೋಪುರಗಳಲ್ಲಿ ಗೂಡು ಕಟ್ಟಿ ಬದುಕಲು ಹವಣಿಸುತ್ತವೆ, ಆದರೆ ಆ ಗೂಡು ಗಳನ್ನೂ ಮಾನವ ಕಿತ್ತೆಸೆವ ಮೂಲಕ ತನ್ನ ಕ್ರೌರ್ಯ ಮೆರೆಯುತ್ತಾನೆ. ಮಾನವನ ಹೃದಯ ಹೀನತೆ ನೋಡುಗರ ಕರುಳು ಹಿಂಡುತ್ತದೆ. ಅಂತಿಮವಾಗಿ ಮುನಿದ ಪ್ರಕೃತಿಯು ಸುನಾಮಿಯಾಗಿ, ಮೃತ್ಯುವಾಗಿ ತಿರುಗಿ ನಿಲ್ಲುತ್ತದೆ. ಮಾನವ ಸೋಲು ಒಪ್ಪಿಕೊಳ್ಳುತ್ತಾನೆ. ಪ್ರಕೃತಿಯ ಪ್ರತಿನಿಧಿಯಾಗಿ ಬರುವ ಚಿರತೆಯ ಎದುರು ಬೆತ್ತಲಾಗಿ ಜೀವ ಭಿಕ್ಷೆ ಬೇಡಿ ಕೊಳ್ಳುತ್ತಾನೆ. ಈ ಸನ್ನಿವೇಶ ನಾಟಕದ ಕೇಂದ್ರ ಬಿಂದುವೆನಿಸುತ್ತದೆ. ಪ್ರಕೃತಿಯ ಎದುರು ಮಾನವ ತೃಣ ಸಮಾನ ಎನಿಸು ವಲ್ಲಿ ನಾಟಕ ಯಶಸ್ವಿಯಾಗುತ್ತದೆ. ಕೊನೆಗೆ ಪ್ರಕೃತಿಗೆ ಮಾನವನು ತಾನು ಕಾಡನ್ನು ಮರಳಿ ಕೊಡುವ ಭರವಸೆ ಇತ್ತಾಗ ಮೃಗವೂ ಮಾನವೀ ಯತೆ ಮೆರೆಯುತ್ತದೆ.
ಸುಂದರ ಹಾಡು – ನೃತ್ಯಗಳ ಸಮ್ಮಿಲನ, ಮನ ಮುಟ್ಟುವ ಸಂಭಾಷಣೆ , ಕಣ್ಣು ರೆಪ್ಪೆ ಬಡಿಯದಂತೆ ಮನಸೂರೆಗೂಳ್ಳುವ ಗೊಂಬೆ ಹಕ್ಕಿಗಳ ಹಾರಾಟ, ಗೊಂಬೆಗಳ ಹಿಂದಿ ರುವ ಮಾನವರನ್ನು ಮರೆಮಾಚಿ ಪ್ರಾಣಿ ಪಕ್ಷಿಗಳನ್ನು ಮಾತ್ರ ಕಾಣಿಸುವಂತಹ ಅತ್ಯುತ್ತಮ ಬೆಳಕಿನ ಸಂಯೋಜನೆ, ಸರಳ ರಂಗಸಜ್ಜಿಕೆಗಳಿಂದ ನಾಟಕ ಅಂತ್ಯದವರೆಗೂ ಕುತೂಹಲ ಉಳಿಸಿಕೊಳ್ಳುತ್ತದೆ. ಸಂಭಾಷಣೆ ಒಪ್ಪಿಸುವಾಗ ಮನುಷ್ಯ ರೂಪ ತಾಳುವ ಹಕ್ಕಿಗಳು ಕಥೆಯನ್ನು ದೃಶ್ಯವಾಗಿಸುವಾಗ ಗೊಂಬೆಗಳಾಗುತ್ತವೆ.
ನಿರ್ದೇಶಕರ ಈ ಕಲ್ಪನೆ ನಾಟಕಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಜತೆಯಲ್ಲಿಯೇ ನಾವೂ ನೀವೂ ಒಂದೇ ದೋಣಿಯ ಪಯಣಿಗರು ಎಂಬ ಅರ್ಥವನ್ನೂ ಧ್ವನಿಸುತ್ತದೆ. ಇಲ್ಲಿ ಬರುವ ಹಕ್ಕಿಯ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ದೃಶ್ಯ , ಹದ್ದು ಹಕ್ಕಿಯ ಮೊಟ್ಟೆ ಕದ್ದು ತಿನ್ನುವ ಸಂದರ್ಭ, ಚಿರತೆಯು ಹಕ್ಕಿಗಳ ಮೇಲೆ ಆಕ್ರಮಣ ಮಾಡುವ ರೀತಿ ಹಾಗೂ ಉಕ್ಕೇರಿ
ಹರಿಯುವ ಪ್ರವಾಹದ ಸನ್ನಿವೇಶಗಳು ತುಂಬಾ ಜೀವಂತವಾಗಿ ಮೂಡಿಬಂದಿವೆ.
ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿಯವರು ಈ ಕಥೆಯು ಹಕ್ಕಿಗಳ ಜಾಗದಲ್ಲಿ ಯಾರೇ ಇದ್ದರೂ ಇದು ಅವರ ಆತ್ಮ ಕಥೆ ಎನ್ನಿಸುವಷ್ಟು ಆಪ್ತವಾಗಿದೆ. ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿ ಅರವತ್ತು ಪ್ರದರ್ಶನ ಕಂಡಿರುವ ಈ ನಾಟಕ ಶತಕ ಬಾರಿಸಲು ಹೆಚ್ಚು ಕಾಲ ಬೇಕೆನಿಸುವುದಿಲ್ಲ. ಗಣೇಶ್ ಮಂದಾರ್ತಿ ಹಾಗೂ ಶ್ರವಣ್ ಹೆಗ್ಗೋಡು ಅವರ ಜಂಟಿ ನಿರ್ದೇಶನದ ಈ
ನಾಟಕಕ್ಕೆ ಗೊಂಬೆಗಳನ್ನು ಶ್ರವಣ್ ಹೆಗ್ಗೋಡು ಒದಗಿಸಿದರೆ, ಗೊಂಬೆ ನಿರ್ಮಾಣದಲ್ಲಿ ಗಗನ್ ಕುಮಾರ್ ನೆರವಾಗಿದ್ದಾರೆ.
ಹಲವು ಸಂದರ್ಭಗಳಲ್ಲಿ ಖಾತ್ಯ ನಟ ರಜನೀಕಾಂತರ ೨.೦ ಚಿತ್ರವನ್ನು ಈ ನಾಟಕ ನೆನಪಿಸುತ್ತದೆ. ನೋಡುಗರಲ್ಲಿ ಪರಿಸರ ಪ್ರೇಮವನ್ನು ಉದ್ದೀಪಿಸುವಲ್ಲಿ ಯಶಸ್ವಿಯಾಗುತ್ತದೆ. ಶಿವಮೊಗ್ಗ ರಂಗಾಯಣದ ಈ ಪರಿಸರ ಕಾಳಜಿ ಅಭಿನಂದನಾರ್ಹವಾಗಿದೆ.