Thursday, 12th December 2024

ಭೂಗತ ಲೋಕದಲ್ಲಿ ಬ್ಲಾಕ್‌ ಡೈಮಂಡ್‌

ಕಳೆದ ವರ್ಷ ರಾಜತಂತ್ರ ಹೆಣೆದು ಗೆದ್ದ ನಿರ್ದೇಶಕ ಪಿ.ವಿ.ಆರ್ ಸ್ವಾಮಿ, ಈಗ ಬ್ಲಾಕ್ ಡೈಮಂಡ್ ಹುಡುಕಾಟದಲ್ಲಿ ತೊಡಗಿದ್ದಾರೆ. ಹೌದು, ಸ್ವಾಮಿ ಈಗ ಬ್ಲಾಕ್‌ಡೈಮಂಡ್ ಸಿನಿಮಾವನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದಾರೆ.

ಟೈಟಲ್ ಕೇಳಿದಾಕ್ಷಣ ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಅನ್ನಿಸಬಹುದು. ಅಂದುಕೊಂಡಂತೆ ಅದು ಸತ್ಯವೂ ಹೌದು. ಅದಕ್ಕೂ ಮಿಗಿಲಾಗಿ ಇದೊಂದು ಮಾಸ್ ಸಿನಿಮಾ ಅನ್ನುವುದು ವಿಶೇಷ. ಭೂಗತ ಲೋಕದ ಕಥನ ಚಿತ್ರದಲ್ಲಿ ಅಡಕವಾಗಿದೆ. ಈ ಹಿಂದೆಯೂ ಇಂತಹ ಹಲವು ಕಥೆಗಳು ತೆರೆಗೆ ಬಂದಿವೆ. ಆದರೆ ಆ ಸಿನಿಮಾಗಳಿಗಿಂತ ಭಿನ್ನವಾದ ಕಥೆ ಬ್ಲಾಕ್‌ಡೈಮಂಡ್‌ನಲ್ಲಿ ಇದೆಯಂತೆ. ಹಾಗಾದರೆ ಇದು ಡೈಮಂಡ್‌ವೊಂದರ ಸುತ್ತ ನಡೆಯುವ ಕಥೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ಅದಕ್ಕೆ ಉತ್ತರ ತೆರೆಯಲ್ಲಿಯೇ ಸಿಗಲಿದೆಯಂತೆ.

ಭೂಗತ ಲೋಕದ ಅನಾವರಣ
ಬ್ಲಾಕ್ ಡೈಮಂಡ್, ತೆರೆಯಲ್ಲಿ ಭೂಗತ ಜಗತ್ತಿನ ಕರಾಳತೆಯನ್ನು ಅನಾವರಣ ಮಾಡಲಿದೆ. ಯಾರೂ ಕೂಡ ಬಯಸಿ ಭೂಗತ ಲೋಕಕ್ಕೆ ಎಂಟ್ರಿಕೊಡುವುದಿಲ್ಲ, ಆದರೆ ಸಮಯ, ಸಂದರ್ಭ ಒಬ್ಬ ವ್ಯಕ್ತಿಯನ್ನು ರೌಡಿಯಾಗುವಂತೆ ಪ್ರೇರೇಪಿಸುತ್ತದೆ. ಚಿತ್ರ ದಲ್ಲಿಯೂ ಅಂತಹದ್ದೇ ಕಥೆಯಿದೆ. ಇಲ್ಲಿ ನಾಯಕ ಮಧ್ಯಮ ವರ್ಗದ ಮುಗ್ಧ ಹುಡುಗ, ಅಪ್ಪ ಅಮ್ಮನ ಪ್ರೀತಿಯ ಮಗ. ಹೀಗಿದ್ದ ನಾಯಕ ಯಾಕೆ ಭೂಗತ ಲೋಕದ ನಂಟು ಬೆಳೆಸಿಕೊಳ್ಳುತ್ತಾನೆ. ತಂದೆ ತಾಯಿಯ ಪ್ರೀತಿಯ ಮಗ ರೌಡಿಯಾಗಿ ಯಾಕೆ ಬದಲಾ ಗುತ್ತಾನೆ. ಎಂಬ ಕುತೂಹಲ ಕ್ಷಣ ಕ್ಷಣಕ್ಕೂ ಪ್ರೇಕ್ಷಕರನ್ನು ಕಾಡುತ್ತದೆಯಂತೆ.

ನವಿರಾದ ಪ್ರೇಮಕಥನ
ಭೂಗತ ಲೋಕದ ಕಥೆ ಚಿತ್ರದಲ್ಲಿದ್ದರೂ ಆ ನಡುವೆಯೇ ನವಿರಾದ ಪ್ರೀತಿಯ ಕಥೆ ತೆರೆಯಲ್ಲಿ ಹಾದು ಹೋಗುತ್ತದೆ. ಹಾಗಾದರೆ
ಪ್ರೀತಿಯೇ ನಾಯಕನಿಗೆ ಮುಳುವಾಗುತ್ತದೆಯೇ. ಪ್ರೀತಿಯಿಂದ ವಂಚಿತನಾದ ನಾಯಕ, ರೌಡಿಯಾಗಿ ಬದಲಾದನೆ ಎಂಬ
ಕುತೂಹಲವು ಕಾಡುತ್ತದೆ. ಅದೆಲ್ಲಕ್ಕೂ ತೆರೆಯಲ್ಲಿಯೇ ಉತ್ತರ ಸಿಗಲಿದೆಯಂತೆ. ಪ್ರೀತಿಯ ಜತೆಗೆ ತಾಯಿ ಮಗನ ಸೆಂಟಿಮೆಂಟ್
ಪ್ರೇಕ್ಷಕರ ಮನಸೂರೆಗೊಳ್ಳಲಿದೆಯಂತೆ. ಇನ್ನು ಪ್ರೇಮ ಕಥೆಯನ್ನು ಪ್ರೇಕಕ್ಷಕರ ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸ್ವಾಮಿ.

ಗಾಂಧಿನಗರದಲ್ಲಿ ಗೂಂಡಾಗಿರಿ
ಬೆಂಗಳೂರು ಸುತ್ತಮುತ್ತ ಬ್ಲಾಕ್ ಡೈಮಂಡ್ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಅಂಡರ್ ವರ್ಲ್ಡ್ ಕಥೆ ಇರುವುದರಿಂದ ಕಥೆಗೆ ಪೂರಕವಾಗಿ ಗಾಂಧಿ ನಗರದಲ್ಲಿಯೇ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ. ಹಾಗಾಗಿ ಗಾಂಧಿ ನಗರದಲ್ಲಿ ಲಾಂಗ್ ಮಚ್ಚುಗಳ ಅಬ್ಬರ ಶುರುವಾಗಲಿದ್ದು, ಗಾಂಧಿನಗರದ ಗೂಂಡಾಗಿರಿಯನ್ನು ತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಒಟ್ಟು ೫೦ ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ನವ ಪ್ರತಿಭೆಗಳಿಗೆ ವೇದಿಕೆ

ನಿರ್ದೇಶಕ ಸ್ವಾಮಿ ಬ್ಲಾಕ್ ಡೈಮಂಡ್ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನವ ನಟ ವಿಷ್ಣು ಈ ಚಿತ್ರದ ಮೂಲಕ ನಾಯಕನಾಗಿ ಪರಿಚಿತವಾಗುತ್ತಿದ್ದಾರೆ. ವಿಷ್ಣು ಡಬಲ್ ಶೇಡ್‌ನಲ್ಲಿ ಮಿಂಚಲಿದ್ದಾರೆ. ಈಗಾಗಲೇ ಕಥೆಗೆ ಪೂರಕವಾಗಿ ತಯಾರಿಯನ್ನು ನಡೆಸಿದ್ದಾರೆ. ಪರಭಾಷ ನಟಿಯೊಬ್ಬರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ನಟಿ ಯಾರು ಎಂಬು ದನ್ನು ಚಿತ್ರತಂಡ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ವಿಶೇಷ ಎಂದರೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಈ ಚಿತ್ರ ದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.