Thursday, 12th December 2024

ಪ್ರಾಮಾಣಿಕ ನಿರೂಪಣೆಯ ಆತ್ಮನಿವೇದನೆ

ಪುಸ್ತಕ ಪರಿಚಯ
ಶಶಿಧರ ಹಾಲಾಡಿ

ಪ್ರಾಮಾಣಿಕ ಮತ್ತು ನೇರ ನಿರೂಪಣೆಯಿಂದ ಗಮನ ಸೆಳೆಯುವ ಈ ಕೃತಿಯು ಕನ್ನಡದ ಬಹುಮುಖ್ಯ ಆತ್ಮಕಥೆಗಳಲ್ಲಿ
ಒಂದಾಗಿ ಗುರುತಿಸಿಕೊಳ್ಳಬಲ್ಲದು.

ಇತ್ತೀಚೆಗೆ ಕನ್ನಡದಲ್ಲಿ ಪ್ರಕಟಗೊಂಡ ಪ್ರಮುಖ ಆತ್ಮಕಥೆ ಯಾವುದು ಎಂದು ಕೇಳಿದರೆ, ಮೂಡ್ನಾ ಕೂಡು ಚಿನ್ನಸ್ವಾಮಿಯವರ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಎಂದು ಧೈರ್ಯವಾಗಿ ಹೇಳಬಹುದು. ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ದಲಿತ ಸಂವೇದನೆಯ ಕವನಗಳಿಂದ ಪರಿಚಿತರಾಗಿರುವ ಕವಿ ಚಿನ್ನಸ್ವಾಮಿಯವರು,  ಅಕಡಮಿಕ್ ವಲಯದಿಂದ ಬಂದವರಲ್ಲ. ಸಾರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಗೊಂಡ ಚಿನ್ನಸ್ವಾಮಿಯವರು ತಮ್ಮ ಜೀವನದ ಹಿನ್ನೋಟವನ್ನು ನಿರ್ಲಿಪ್ತ ವಾಗಿ, ಆದರೆ ಪ್ರಾಮಾಣಿಕವಾಗಿ ದಾಖಲಿಸಿರುವ ವಿಧಾನ ಮೆಚ್ಚುಗೆ ಗಳಿಸುತ್ತದೆ. ಎಲ್ಲವನ್ನೂ ಇಲ್ಲಿ ಬಿಚ್ಚಿಟ್ಟ ನೇರ ವಿಧಾನ ಕೆಲವೊಮ್ಮೆ ಇಷ್ಟವಾದರೆ, ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತದೆ.

ಕವಿಯಾಗಿ ಚಿನ್ನಸ್ವಾಮಿಯವರು ನಮ್ಮ ನಾಡಿನವರಿಗೆ ಸಾಕಷ್ಟು ಪರಿಚಿತರು. ಅವರ ಕವನ ‘ನಾನೊಂದು ಮರವಾಗಿದ್ದರೆ’ ಪಠ್ಯಪುಸ್ತಕಗಳಲ್ಲಿ ಅಡಕಗೊಂಡಿದ್ದರಿಂದ, ಸಾವಿರಾರು ವಿದ್ಯಾರ್ಥಿಗಳು ಅದನ್ನು ಓದಿ, ವಿಸ್ಮಿತರಾಗಿದ್ದಾರೆ. ಈ ಕವಿಯ ಆತ್ಮಕಥೆಯು ವಿಭಿನ್ನ, ವಿಶಿಷ್ಟ ಎನಿಸಿದ್ದು, ಅಕಡಮಿಕ್ ವಲಯದಿಂದ ಹೊರಗೆ ಬೆಳೆದ ಕವಿಯೊಬ್ಬರ ದೈತ್ಯಶಕ್ತಿಯನ್ನು, ಹೋರಾಟದ ಕಿಚ್ಚನ್ನು ಪರಿಚಯಿಸುತ್ತದೆ.

ವಾಸ್ತವವೆಂದರೆ, ಮೂಡ್ನಾಕೂಡು ಚಿನ್ನಸ್ವಾಮಿಯವರು ತಮ್ಮ ಆತ್ಮಕಥೆಯ ಮೂಲಕ ಅನಾವರಣಗೊಳಿಸಿದ ಕರ್ನಾಟಕದ ದಲಿತ ಜಗತ್ತಿನ ವಿವರಗಳನ್ನು ಓದಿ, ನಾನು ಅಲ್ಲಲ್ಲಿ ದಿಗ್ಮೂಢನಾಗಿದ್ದೂ ಉಂಟು. ಕಳೆದ ಕೆಲವು ದಶಕಗಳಿಂದ, ಕನ್ನಡದ ದಲಿತ ಸಾಹಿತ್ಯದ ಮೂಲಕ, ಕಥೆಗಳ ಮೂಲಕ ದಮನಿತರ ತಲ್ಲಣಗಳು ನಮ್ಮ ನಾಡಿನ ಓದುಗರಿಗೆ ಸಾಕಷ್ಟು ಪರಿಚಯಗೊಂಡಿವೆ. ಆದರೂ, ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಪುಟಗಳಲ್ಲಿ ಮೂಡಿಬಂದ ದಲಿತ ಕುಟುಂಬದ ಚಿತ್ರಣಗಳು, ನಮ್ಮ ನಾಡಿನ ಬಹುಪಾಲು ಜನರಿಗೆ ಇಂದಿಗೂ ಅಪರಿಚಿತ ಎನಿಸುವ ಹಲವು ವಿವರಗಳು ಓದುಗರನ್ನು ಅಚ್ಚರಿಯ ಲೋಕಕ್ಕೆ ತಳ್ಳಲೂ ಸಾಧ್ಯ.

1950 ಮತ್ತು 1960ರ ದಶಕದ ಚಿನ್ನಸ್ವಾಮಿಯವರ ಬಾಲ್ಯದ ಕೆಲವು ವಿವರಗಳು ಕಣ್ಣಿಗೆ ಕಟ್ಟುವಂತೆ ಮೂಡಿಬಂದು, ವಿಸ್ಮಯ ಹುಟ್ಟಿಸುವಷ್ಟು ಅನನ್ಯ ಎನಿಸಿವೆ. ಶಾಲೆಗಳಲ್ಲಿ ಡಿಸಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕರೆದು, ಸ್ಕಾಲರ್‌ಶಿಪ್ ಫಾರಂ ನೀಡುವಾಗ
ಆಗುವ ಅವಮಾನ, ಹಳ್ಳಿಯ ಹೋಟೆಲಿನವನು ಯಾವ ಜಾತಿ ಎಂದು ವಿಚಾರಿಸಿ, ತೊಳೆಯಲು ನೀರು ಕೊಡದೇ, ಹಳ್ಳದ ಬಳಿಗೆ ಕಳಿಸಿದಾಗ, ಆ ತೊಳೆಯುವ ನೀರಿಗೂ ಅಂಟಿದ ಜಾತಿಯ ವಿಚಾರ, ಮೂಡ್ನಾಕೂಡಿನ ಜನರು ಪ್ರತಿದಿನ ಬೆಳಿಗ್ಗೆೆ ಒಕ್ಕಲುಗೇರಿಗೆ ಹೋಗಿ ತಂಗಳು ಸಂಗ್ರಹಿಸಿ ತರುವ ವಿವರ, ವಿಶೇಷದ ಊಟಕ್ಕೆ ಒಕ್ಕಲುಕೇರಿಗೆ ಹೋಗುವ ಇವರ ಕೇರಿಯ ಜನರಿಗೆ ಬಹುದೂರ ದಲ್ಲಿ, ತಾವೇ ತಂದ ತಟ್ಟೆೆಗೆ ಅನ್ನ ಬಡಿಸುವ ರೀತಿ, ಇಂತಹ ಹಲವು ವಿದ್ಯಮಾನಗಳು ಲೇಖಕರ ಲೇಖನಿಯಲ್ಲಿ ಪ್ರತ್ಯೇಕ ಪುಟ್ಟ ಕಥೆಗಳಾಗಿ ರೂಪುಗೊಂಡಿವೆ.

ಜೀವನದಲ್ಲಿ ಕಂಡ ನೋವಿನ ಅನುಭವಗಳನ್ನು ಶಕ್ತಿಯುತ ಮಾರ್ಮಿಕ ಕಥೆಯೊಂದರ ರೂಪದಲ್ಲಿ ಕಟ್ಟಿಕೊಡುವ ಚಿನ್ನಸ್ವಾಮಿ ಯವರ ಕಥನ ಕಲೆಯು ಈ ಆತ್ಮಕಥೆಗೆ ಹೊಸ ಶಕ್ತಿಯನ್ನು ತುಂಬಿದೆ.

ಜ್ಯೋತಿಷಿ ಮಾತು ಕೇಳಿ ತಂಗಿ ದಾನ
‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಪುಸ್ತಕದ ಉದ್ದಕ್ಕೂ ಬಹುವಾಗಿ ಕಾಡುವ ಹಲವು ಘಟನೆಗಳು ತೆರೆದುಕೊಂಡಿದ್ದು, ಅವು ಗಳಲ್ಲಿ ಕೆಲವು ಸಣ್ಣಕಥೆಯಷ್ಟು ಶಕ್ತಿಶಾಲಿಯಾಗಿವೆ.

ಹೃದ್ಯವಾಗಿ ಕೆಲವೇ ಪದಗಳಲ್ಲಿ ಮೂಡಿಬಂದ ಕೆಲವು ವಿದ್ಯಮಾನಗಳು ಓದುಗರ ಮನಸ್ಸಿನ ಮೇಲೆ ಮಾಡುವ ಪರಿಣಾಮ ತೀವ್ರಸ್ವರೂಪದ್ದು. ಅಂತಹವುಗಳಲ್ಲಿ ಒಂದು ಎಂದರೆ ಲೇಖಕರ ತಂಗಿಯನ್ನು ದಾನ ಮಾಡಿದ ಘಟನೆ. ಲೇಖಕರ ತಾಯಿಗೆ ಅನಾರೋಗ್ಯವಾದಾಗ, ಪಕ್ಕದ ಊರಿನ ಜ್ಯೋತಿಷಿಯ ಬಳಿ ಶಾಸ್ತ್ರ ಕೇಳಲಾಯಿತು. ಮಗು ಪದ್ಮ ಜನಿಸಿದ ನಂತರ ಈ ರೀತಿ ಅನಾರೋಗ್ಯ ಕಾಡಿದ ವಿವರ ತಿಳಿದ ಆ ಜ್ಯೋತಿಷಿ, ಮಗುವನ್ನು ದಾನ ಮಾಡುವುದೊಂದೇ ಇದಕ್ಕೆ ಪರಿಹಾರ ಎಂದ. ಪೊಲೀಸ್ ಉದ್ಯೋಗದಲ್ಲಿದ್ದ ತಂದೆ ಇದನ್ನು ನಂಬಿದ್ದು ಮಾತ್ರವಲ್ಲ, ತಂದೆ ತಾಯಿಯರಿಬ್ಬರೂ ಐದು ವರ್ಷದ ಪದ್ಮಳನ್ನು, ಕ್ರಿಶ್ಚಿಯನ್ ಕಾನ್ವೆಂಟ್ ಒಂದಕ್ಕೆ ದಾನ ಮಾಡಿದರು.

ಕಾನ್ವೆಂಟ್ ಸಿಬ್ಬಂದಿ ಕೇರಿಗೆ ಬಂದು ಮಗುವನ್ನು ಕರೆದೊಯ್ಯುವಾಗ ‘ಕೇರಿಯ ಜನ ಮೆರವಣಿಗೆಯನ್ನು ನೋಡುವಂತೆ ನೋಡು ತ್ತಿದ್ದರು. ಕೆಲವರು ಅವರನ್ನು ಹಿಂಬಾಲಿಸುತ್ತಿದ್ದರು’. ಇದಾಗಿ ಕೆಲವು ವರ್ಷಗಳ ನಂತರ, ಒಂದು ದಿನ ತಂದೆ ಅಳುತ್ತಾ ಮನೆಗೆ ಬಂದರು. ಏಕೆಂದರೆ, ಆ ದಿನ ಅಕಸ್ಮಾತ್ ಆಗಿ ಮೈಸೂರಿನಲ್ಲಿ ಆ ಮಗಳನ್ನು ನೋಡಿದ್ದರು. ತಮ್ಮ ತಂಗಿಯ ದಾನದ ಈ ಘಟನೆ ಯನ್ನು ಇಷ್ಟು ಮಾತ್ರ ಹೇಳುವ ಮೂಲಕ, ಲೇಖಕರು ಓದುಗರ ಮೇಲೆ ಮಾಡುವ ಪರಿಣಾಮ ಗಾಢ, ವಿಶಿಷ್ಟ.

ನೇರ ನಿರೂಪಣೆ
ಮೂಡ್ನಾಕೂಡು ಚಿನ್ನಸ್ವಾಮಿಯವರ ಆತ್ಮಕಥನದ ಒಂದು ಪ್ರಧಾನ ಆಶಯವೆಂದರೆ ದಲಿತ ಬದುಕಿನ ವಿಶ್ಲೇಷಣೆ. ಯಾವುದೇ ಮುಚ್ಚುಮರೆಯಿಲ್ಲದೆ, ತಾವು ಕಂಡದ್ದನ್ನು, ಅನುಭವಿಸಿದ್ದನ್ನು ನೇರವಾಗಿ, ಸರಳವಾಗಿ ಇಲ್ಲಿ ಬರೆಯಲಾಗಿದೆ. ನಮ್ಮ ದೇಶದ ದಲಿತರ ಇಂದಿನ ಪರಿಸ್ಥಿತಿಗೆ ಕಾರಣಗಳನ್ನು ಆತ್ಮಕಥೆಯ ಹಲವು ಭಾಗಗಳಲ್ಲಿ ಚರ್ಚಿಸಲಾಗಿದೆ. ಡಾ ಅಂಬೇಡ್ಕರ್ ಅವರು ಭಾರತದ ದಲಿತರ ಜೀವನದ ಮೇಲೆ ಮತ್ತು ತಮ್ಮ ಮೇಲೆ ಅದೆಷ್ಟು ಗಮನಾರ್ಹ ಪ್ರಭಾವ ಬೀರಿದ್ದಾರೆಂದು ಲೇಖಕರು ಗುರುತಿಸಿದ್ದಾರೆ.

ಪಟ್ಟಣ ಮತ್ತು ನಗರಗಳಲ್ಲಿ ಸಮಕಾಲೀನ ದಿನಚರಿಯಲ್ಲಿ, ತೋರಿಕೆಯ ಸಮಾನತೆ ಅಲ್ಲಲ್ಲಿ ಕಂಡು ಬಂದರೂ, ಇಡೀ ಸಮಾಜದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಎಷ್ಟು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಮತ್ತು ಆ ಶ್ರೇಣಿಯ ತಳಬಾಗ ದಲ್ಲಿರುವ ದಲಿತರು ಅದೆಷ್ಟು ಅಪಮಾನವನ್ನು ಎದುರಿಸುತ್ತಲೇ ಜೀವನ ಸಾಗಿಸಬೇಕಾಗಿದೆ ಎಂಬುದನ್ನು ಸಾಕಷ್ಟು ವಿವರವಾಗಿ ವಿಶ್ಲೇಷಿಸುವ ಈ ಕೃತಿ, ಆ ಮೂಲಕ ಸಶಕ್ತ. ಲೇಖಕರು ವೃತ್ತಿ ನಿರ್ವಹಿಸುತ್ತಿದ್ದ ಸಾರಿಗೆ ಇಲಾಖೆಯಲ್ಲೂ ಬಡ್ತಿಯ ಸಮಯದಲ್ಲಿ ನಡೆಯುವ ಅಪಸವ್ಯಗಳು, ಮೀಸಲಾತಿಯ ಜಗತ್ತು, ಗೆಳೆಯರ ನಡುವ ಕಾಣುವ ಜಾತಿ ಸೂಕ್ಷ್ಮಗಳು ಮುಂತಾದ ಹಲವು ವಿವರ ಗಳನ್ನು ಪ್ರಸ್ತುತಪಡಿಸುವಾಗ ಮೂಡ್ನಾಕೂಡು ಚಿನ್ನಸ್ವಾಮಿಯವರು ತೋರುವ ಪ್ರಾಮಾಣಿಕತೆ ಅಪರೂಪದ್ದು.

ಸಾಹಿತ್ಯಕ ಲೋಕದಲ್ಲಿ
ತಮ್ಮ ಸಾಹಿತ್ಯಕ ಅಭಿಯಾನದಲ್ಲಿ ವಿವಿಧ ಕವಿ, ಸಾಹಿತಿಗಳೊಂದಿಗೆ ನಡೆಸಿದ ಒಡನಾಟವನ್ನು ಸಾಕಷ್ಟು ವಿವರವಾಗಿ ಇಲ್ಲಿ ದಾಖಲಿಸಲಾಗಿದೆ. ಇವರ ಕೃತಿಶಕ್ತಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ ಲಂಕೇಶ್ ಅವರೊಂದಿಗಿನ ಒಡನಾಟವು, ಲಂಕೇಶ್ ವ್ಯಕ್ತಿತ್ವದ ವಿಭಿನ್ನ ನೆಲೆಯೊಂದರ ಪರಿಚಯ ಮಾಡಿಕೊಡುತ್ತದೆ. ಕವಿಯಾಗಿಯೇ ಗುರುತಿಸಿಕೊಂಡ ಚಿನ್ನಸ್ವಾಮಿಯವರ ಕವನಗಳು ಸ್ಪಾನಿಷ್ ಭಾಷೆಗೆ ಅನುವಾದಗೊಂಡದ್ದು, ಲೇಖಕರ ವಿದೇಶ ಯಾತ್ರೆ, ವೆನಜುವೆಲಾ ಅನುಭವಗಳು, ಮೊದಲ ಕವನ ಪ್ರಕಟಿಸಿದ ಪಾಟೀಲ ಪುಟ್ಟಪ್ಪನವರ ಮಾತು, ಸಾಹಿತ್ಯಾಭಿಯಾನಕ್ಕೆ ವಿವಿಧ ಲೇಖಕರು ಸಹಕರಿಸಿದ ವಿವರ ಎಲ್ಲವೂ ಈ ಆತ್ಮಕಥೆಯ ಬಹುಮುಖ್ಯ ಅಂಶಗಳು.

ಮೂಡ್ನಾಕೂಡು ಚಿನ್ನಸ್ವಾಮಿಯವ ಆತ್ಮಕಥೆಯ ಹಲವು ಭಾಗಗಳಲ್ಲಿ ಕಾಣಿಸುವ ಅನ್ಯಮತಗಳ ವಿಚಾರ, ಮತಾಂತರದ ವಿವರಗಳು, ಓದುಗರ ಗಮನ ಸೆಳೆಯುವುದು ಮಾತ್ರವಲ್ಲ, ಚಿಂತನೆಗೆ ಹಚ್ಚುತ್ತವೆ. ಲೇಖಕರ ಹಲವು ಬಂಧುಗಳು ಬಹು ಮುಂಚೆಯೇ ಕ್ರಿಶ್ಚಿಯನ್ ಮತವನ್ನು ಸ್ವೀಕರಿಸಿದ ವಿವರ ನೀಡಿದ ಜತೆಯಲ್ಲೇ, ಅದರಿಂದಾಗಿ ಅಂತಹ ಹಲವರು ಇಂದಿನ ಸಮಾಜದಲ್ಲಿ ಅಪಮಾನರಹಿತ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಗುರುತಿಸುತ್ತಾರೆ.

ನಮ್ಮ ದೇಶವು ಹಿಂದುಳಿಯಲು ಜಾತಿ ಪದ್ಧತಿಯೇ ಮುಖ್ಯ ಕಾರಣ ಎಂದು ಪ್ರತಿಪಾದಿಸುವ ಲೇಖಕರ ನಿಲುವು ಮತ್ತು ಮತಾಂತರವು ದಮನಿತ ಕುಟುಂಬಗಳ ಬದುಕನ್ನು ಹೇಗೆ ಬದಲಿಸಬಲ್ಲದೆಂಬ ಚರ್ಚೆಯು ಓದುಗರನ್ನು ಚಿಂತನೆಗೆ ಗುರಿ ಮಾಡುವುದಂತೂ ನಿಜ.

ಬೌದ್ಧ ಧರ್ಮಕ್ಕೆ
2003ರಲ್ಲಿ, ಲೇಖಕರ ಕುಟುಂಬವು ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂದರ್ಭವನ್ನು ವಿವರವಾಗಿ ಈ ಆತ್ಮಕಥೆಯಲ್ಲಿ ದಾಖಲಿಸ ಲಾಗಿದೆ. ಕುಟುಂಬದ ಸದಸ್ಯರೆಲ್ಲರೂ ಮನಃಪೂರ್ವಕವಾಗಿ ಬೌದ್ಧರಾದಾಗ ದೊರೆತ ಮಾನಸಿಕ ನಿರಾಳೆಯನ್ನು ಹಂಚಿಕೊಳ್ಳ ಲಾಗಿದೆ. ಬೌದ್ಧ ಧರ್ಮವನ್ನು ಸೇರಿದ ಅಂಬೇಡ್ಕರ್ ಅವರನ್ನು ಪುಸ್ತಕದಲ್ಲಿ ಬಹುವಾಗಿ ಸ್ಮರಿಸಲಾಗಿದೆ. ಮತಾಂತರದ ವಿಚಾರ ಬಂದಾಗ, ದಲಿತರ ವಿವಿಧ ಪಂಗಡದವರು, ಬೌದ್ಧ ಮತ್ತು ಕ್ರೈಸ್ತ ಎಂಬ ಎರಡು ಧರ್ಮಗಳನ್ನು ಯಾವ ಕಾರಣಗಳಿಗಾಗಿ ಆಯ್ದು ಕೊಳ್ಳುವ ಸಾಧ್ಯತೆಯನ್ನು ಈ ಆತ್ಮಕಥೆಯಲ್ಲಿ ಸಾಂದರ್ಭಿಕವಾಗಿ ಚರ್ಚಿಸಿದ ಪರಿ ಅನನ್ಯ.

ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಹೊರಬಂದಿರುವ ಅಪರೂಪದ ಆತ್ಮಕಥೆ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಕೃತಿಯ
ಕಥನವು ಓದುಗನ ಮನದಲ್ಲಿ ಹಲವು ಆಯಾಮದ ಚಿಂತನೆಗಳನ್ನು ಹುಟ್ಟುಹಾಕಿಸಬಲ್ಲದು. ಅದಕ್ಕಾಗಿ ಮತ್ತು ತಮ್ಮ ಬದುಕಿನ
ವಿವರಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದಕ್ಕಾಗಿ ಮೂಡ್ನಾ ಕೂಡು ಚಿನ್ನಸ್ವಾಮಿಯವರನ್ನು ಅಭಿನಂದಿಸಲೇಬೇಕು.