Sunday, 15th December 2024

ಕಂಡವರ ಮದುವೇಲಿ ಉಂಡವನೇ ಜಾಣ

ಕಷ್ಟಪಟ್ಟು ಹಣ ಹೊಂದಿಸಿಕೊಂಡು, ಕಾಲೇಜಿಗೆ ಹೋಗುವ ದಿನಗಳ ಅವು. ಪ್ರತಿ ದಿನ ರೂಮಿನಲ್ಲಿ ಮಾಡಿಕೊಳ್ಳುವ ಅಡುಗೆ ತಿಂದು ನಾಲಗೆ ಜಡ್ಡು ಕಟ್ಟಿತ್ತು. ಆಗ ಗೆಳೆಯರ ಗುಂಪು ಮಾಡಿದ ಉಪಾಯ ಏನು ಗೊತ್ತಾ? ಅಪರಿಚಿತರ ಮದುವೆಗೆ ಹೋಗಿ ರುಚಿಕರ ಊಟ ಮಾಡಿದ್ದು!

ರವಿ ಶಿವರಾಯಗೊಳ ಸಾಂಗ್ಲಿ

ಯಾರದೋ ಮದ್ವೆ! ಜನರ ಗದ್ದಲ. ಹೆಣ್ಣಿನ ಕಡೆಯವರು ಹೆಣ್ಣಿನ ಶೃಂಗಾರ ಕಾರ್ಯದಲ್ಲಿ ತೊಡಗಿದ್ದರೆ; ಗಂಡಿನ ಕಡೆಯವರು ಗಂಡಿನ ಶೃಂಗಾರ ಮಾಡುವಲ್ಲಿ ತೊಡಗಿದ್ದರು. ಆಗಲೇ ಅಡುಗೆ ಸಿದ್ಧವಾಗಿತ್ತು. ಬಹಳಷ್ಟು ಜನರ ಮನಸ್ಸೆಲ್ಲ ಅಡುಗೆಯ ಮೇಲೆ ಯೇ ಇತ್ತಾದರೂ, ಅವರ ದೇಹ ಮಾತ್ರ ಕೆಂಪು ಕುರ್ಚಿಯ ಮೇಲೆ ಕುಳಿತಿತ್ತು. ಮದ್ವೆ ಆಗುವ ವಧುವರರ ಮುಖದಲ್ಲಿ ಮಂದಹಾಸ ತುಂಬಿ ತುಳುಕುವದು ಕಾಣುತಿತ್ತು. ಈ ನಡುವೆ ನಮ್ಮದೊಂದು ಗುಂಪು!

ಯಾರಾದರೂ ಬಂದು ಮದ್ವೆ ಯಾರದ್ದೋ? ಎಂದು ಕೇಳಿದರೆ ನಮ್ಮ ಹುಡುಗರ ಗುಂಪಿನಲ್ಲಿ ಉತ್ತರಿಸಲು ಯಾರ ಬಳಿಯು ಧೈರ್ಯವಿರಲಿಲ್ಲ. ಅಷ್ಟಕ್ಕೂ ಮದ್ವೆ ಯಾರಾದ್ದಾದರೇನು, ಹೊಟ್ಟೆ ತುಂಬಾ ಊಟ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿ ನಮ್ಮದು.
ಹತ್ತಡಿ ರೂಮಿನಲ್ಲಿ ಬಾಗಿಲು ಮುಚ್ಚಿ ಜಮಖಾನೆ ಹಾಸಿಗೆಯ ಮೇಲೆ ಅಂಗಾತ ಬಿದ್ದು ನಿದ್ರೆ ಮಾಡುವ ನಮಗೆಲ್ಲಾ ಎಬ್ಬಿಸಿ
‘ಎಯ್! ನಡೀರೋ ಮದ್ವೆ ನಡದೈತಿ, ಊಟ ಮಾಡಿ ಬರೋಣ’  ಅಂದಿದ್ದು ನಮ್ಮ ಜತೆ ರೂಮಿನಲ್ಲಿದ್ದ ಗೆಳೆಯ.

‘ಎಯ್ ಮಾರಾಯ್ಯ! ಊರಿಂದ ಬುತ್ತಿ ಬಂದೈತಿ ಏನ್ ನೋಡ್ಕೊಂಡು ಬಾ, ಕಂಡವರ ಮದ್ವೆಗೆ ಹೋಗಿ ಊಟ ಮಾಡಿದ್ರ ಕುಂಡಿ ಬ್ಯಾನಿ ಆಗುವಂಗ ಹೋಡಿತಾರ’ ಅಂತಂದಿದ್ದೆ ನಾನು. ನಮ್ಮ ರೂಮಿಗೆ ಅಂಟಿಕೊಂಡಿರುವ ನಾಲ್ಕೈದು ರೂಮಿನ ಹುಡುಗರ ಗುಂಪಿನಲ್ಲಿ ನನ್ನಂಥ ಒಬ್ಬ ಅಬ್ಬೆಪಾರಿಯ ಮಾತು ಹೇಗೆ ನಡಿಯುತ್ತೇ? ಎಲ್ಲರೂ ಸೇರಿದ್ರೆ ಹತ್ತರಿಂದ ಹನ್ನೆರಡು ಜನ ಹುಡುಗರು … ಎಲ್ಲರೂ ಪರ ಊರಿನಿಂದ ಕಾಲೇಜು ಕಲಿಯಲೆಂದು ಬಂದು ರೂಮ್ ಮಾಡಿಕೊಂಡು ಇದ್ದವರೇ. ತಿಂಗಳ ಊಟಕ್ಕಾಗಿ ಸಾಕಷ್ಟು ಹೋಟೆಲುಗಳು ಬಾಗಿಲು ತೆರೆದುಕೊಂಡಿದ್ದವು, ವಿಜಯಪುರದಲ್ಲಿ ತಿಂಗಳಿಗೆ ಹದಿನೈದು ನೂರು ಕೊಟ್ಟರೆ, ಪ್ರತಿದಿನ ಎರಡು ಹೊತ್ತು ಊಟ ಕೊಡುವ ಹೋಟೆಲ್ ಇದ್ದವು.

ಆದ್ರೆ ಮನೆಯಿಂದ ತಿಂಗಳಿಗೆ ಕಳಿಸುತ್ತಿದದ್ದು ಹದಿನೈದು ನೂರು ಮಾತ್ರ! ಅದರಲ್ಲಿ ರೂಮಿನ ಬಾಡಿಗೆಯೇ ಸಾವಿರ ರೂಪಾಯಿ ಕಟ್ಟಬೇಕಿತ್ತು. ಕರೆಂಟ್ ಬಿಲ್ಲು ನೂರು ಕೊಟ್ಟರೆ ಉಳಿದಿದ್ದು ನಾಲ್ಕುನೂರು ಮಾತ್ರ! ಅದರಲ್ಲಿ ಕಾಲೇಜಿನ ನೋಟ್ಸ್ ಜೆರಾಕ್ಸ್, ಪೆನ್ನು, ನೋಟ್ ಬುಕ್ ಅಂತೇಳಿ ತಿಂಗಳ ಖರ್ಚುಗಳಿಗೆ ಸರಿಯಾಗುತ್ತಿತತ್ತು. ಊಟಕ್ಕೆ ಮನೆಯಿಂದ ಬುತ್ತಿ ಬರುತಿತ್ತು. ಊರಿಂದ ನಮ್ಮ ಕೈಗೆ ತಲುಪುವಷ್ಟರಲ್ಲಿ ಅದರ ಸ್ವಾದ ಕಳೆದು ಹೋಗುತಿತ್ತು, ಕೆಲವು ಬಾರಿ ಪಲ್ಯ ಕೆಟ್ಟು ಹೋಗಿರುತಿತ್ತು. ಊರಿಗೆ ಹೋದಾಗ ‘‘ನಾ ಈ ಸಾರಿ ಖಾನಾವಳಿಗೆ ಊಟಕ್ಕೆ ಹಚ್ತೀನಿ, ಬುತ್ತಿ ಕೆಲವು ಸಾರಿ ಕಳವು ಆಗತೈತಿ. ಮತ್ತ ಕೆಲವು ಸಾರಿ ಪಲ್ಯ ಕೆಟ್ಟು ಹೋಗಿರತೈತಿ.

ಗೊತ್ತಿಲ್ದಿರೋ ಮದ್ವೆ ಊಟ ಎಷ್ಟು ದಿನ ಆಗತೈತಿ ಹೇಳ್ರಿ ನೀವೇ’’ ಅಂತಂದ್ರೆ ಮನೆಯಲ್ಲಿ ಸುತಾರಾಂ ಒಪ್ಪುತ್ತಿರಲಿಲ್ಲ. ‘ತಿಂಗಳಿಗೆ
ಹದಿನೈದು ನೂರು ಕಳಸ್ತೀವಿ. ಇನ್ನೂ ಜಾಸ್ತಿ ಕಳಸಾಕ ಆಗುದಿಲ್ಲ ನಮಗ, ಅಲ್ಲೆ ಬಾಡಿಗೆ ಕಡಿಮೆ ಇದ್ದ ರೂಮ ಹಿಡ್ಕೊಂಡು ಊಟ ವ್ಯವಸ್ಥೆ ಮಾಡ್ಕೊಂಡು ಇರಿ ಅನ್ನುವುದು ಅವರ ಅಂಬೋಣ. ಕುಡಿಯುವ ನೀರು ಖರೀದಿ ಮಾಡಿ ಕುಡಿಯುವ ಇಂತಹ ಕಾಲದಲ್ಲಿ ಕಡಿಮೆ ಬಾಡಿಗೆಯಲ್ಲಿ ರೂಮು ಎಲ್ಲಿ ಸಿಕ್ಕಿತೋ! ಬಹುತೇಕ ರೂಮು ಮಾಡಿ ಕೊಂಡ ಹುಡುಗರ ಸಮಸ್ಯೆ ಇದೇ!

ಮೊದಲನೆಯ ಬಾರಿ ಮದುವೆ ಊಟ

ಅದು ಮೊದಲನೇ ಬಾರಿ. ಅಲ್ಲಿಯವರೆಗೆ ಯಾರ ಮದ್ವೆಗೂ ಹೋಗಿ ಊಟ ಮಾಡಿದವರಲ್ಲ ನಾವು. ತಲೆಯೊಳಗೆ ಹತ್ತಾರು ಗೊಂದಲ. ಯಾರಾದ್ರೂ ನೀವು ಯಾರ ಕಡೆ ಯವರು ಅಂತ ಕೇಳಿದ್ರೆ? ಏನಂತ ಹೇಳುವುದು. ಹೇಳ್ದೇ ಕೇಳ್ದೆ ಮದುವೆ ಮನೆಗೆ ನುಗ್ಗಿ ಊಟ ಮಾಡ್ತಿದ್ದಾರೆ ಎಂದು ಗೊತ್ತಾದರೆ ಏನು ಗತಿ? ಅಲ್ಲಾಗುವ ಅವಮಾನ ಛೇ ಛೇ…ತಪ್ಪು ತಪ್ಪು ಅನಿಸುತಿತ್ತು.

‘ಬಡಾನ್ ಬರ್ಯೊ ಮಾರಯ್ಯ ಎಷ್ಟರೆ ಅಂಜತೀರಿ?‘ ಅಂತಂದ ಗುಂಪಿನಲ್ಲೊಬ್ಬ. ‘ಎಯ್ ಬ್ಯಾಡ್‌ರ್‌ ಲೇ! ಹೇಳುದು ಕೇಳ್ರೀ. ಸಿಕ್ರೆ ಒಂದು ಕುರಿ ಮರಿ ಬದಲಿಗೆ ನಮಗೆ ಕಡಿತಾರ’ ಅಂತಂದ ಮತ್ತೊಬ್ಬ. ಅಷ್ಟೊತ್ತಿಗೆ ಮದ್ವೆ ನಡೆಯೋ ಸ್ಥಳ ಹತ್ರ ಬಂತು. ‘ನೋಡ್ರಿ ಯಾರಾದ್ರೂ ಹೆಣ್ಣಿನ ಕಡೆಯವ್ರು ನೀವು ಯಾರ ಅಂತ ಕೇಳಿದ್ರ ಗಂಡಿನಕಡೆಯವ್ರ ಅಂತೇಳ್ರಿ ಒಂದು ವೇಳೆ ಗಂಡಿನ ಕಡೆಯವ್ರ ನೀವ್ಯಾರು ಅಂತ ಕೇಳಿದ್ರ ಹೆಣ್ಣಿನ ಕಡೆಯವ್ರ ಅಂತೇಳ್ರಿ. ಮತ್ತ ಯಾರರೇ ಬ್ಯಾಬ್ಯಾ ಮಾಡ್ಕೊಂಡು ಸಿಕ್ಕಾಕೊಂಡ್ರಿ ಅಂದ್ರ ನಿಮ್ದ ಜವಾಬ್ದಾರಿ’ ಎಂದು ಅನುಭವ ಇದ್ದ ಹುಡುಗರು ಹೇಳಿದರು.

ಅಡುಗೆ ಮನೆಯ ವಾಸನೆ

ಮದುವೆ ಮಂಟಪದ ಒಳಗೆ ಎಲ್ರೂ ಹೋದ್ವಿ. ವಧು ಮತ್ತು ವರ ಉಡುಗೊರೆ ಪಡೆಯುತ್ತಿದ್ದಾರೆ. ಸಾಲಾಗಿ ಜನರೆಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಾ ಕೈ ಕುಲುಕಿ ಮುನ್ನಡೆಯುತಿದ್ದಾರೆ. ಅಲ್ಲೆಲ್ಲೋ ಸಿದ್ಧವಾಗಿದ್ದ ಅಡುಗೆಯ ಘಮ ಘಮ ವಾಸನೆ ಮೂಗಿಗೆ ತಟ್ಟುತ್ತಾ, ಬಾಯಲ್ಲಿ ನೀರು ಬರುವಂತೆ ಮಾಡಿದೆ. ಗುಂಡಾದ ಟೇಬಲ್ಲಿನ ಸುತ್ತಲೂ ನಾಲ್ಕು ಕುರ್ಚಿ ಇಟ್ಟಿದ್ದಾರೆ. ಅವುಗಳಿಗೆಲ್ಲ
ಬಿಳಿಯ ಶುಭ್ರವಾದ ಬಟ್ಟೆಯನ್ನು ಹಾಕಿದ್ದಾರೆ. ಚಿಕ್ಕ ಚಿಕ್ಕ ಹುಡಗಿಯರು ತಮ್ಮ ಉದ್ದನೆಯ ಲಂಗ ನೆಲಕ್ಕೆ ತಾಗದಂತೆ ಕೈಯಲ್ಲಿ
ಹಿಡಿದು ಓಡಾಡುತಿದ್ದಾರೆ. ಅಲ್ಯಾವುದೋ ಸಣ್ಣ ಮಗುವೊಂದು ಚಡ್ಡಿಯಲ್ಲಿಯೇ ಕಕ್ಕ ಮಾಡಿದೆ…‘ಹೊತ್ತು ಗೊತ್ತು ಗೊತ್ತಿಲ್ಲ
ಇದ್ಕೆೆ’ವಟವಟ ಅಂತ ಅದರವ್ವ ಮಗುವಿನ ಅಂಡ ತೊಳೆಯಲು ಶುರುವಿಟ್ಟಿದ್ದಾಳೆ.

ಮುಖ್ಯ ದ್ವಾರದ ಬಳಿಯಲ್ಲೊಬ್ಬ ಬಿಕ್ಷುಕ ಒಳಗೆ ಬರಲು ಕಾಯುತಿದ್ದಾನೆ. ಆದ್ರೆ ದ್ವಾರಪಾಲಕ ಅವನನ್ನೂ ಬಿಡುತಿಲ್ಲ.
ಮದುವೆ ಸಂಭ್ರಮವಂತು ಸಡಗರದಿಂದ ಸಾಗಿದೆ. ನಮ್ಮ ಗುಂಪಿನಲ್ಲಿರುವವರಿಗೆ ಅಕ್ಷತೆ ಕಾಳು ಯಾವಾಗ ಬೀಳ್ತಾವ, ಯಾವಾಗ ಊಟ ಮಾಡ್ತೀವಿ ಅನ್ನೋದೊಂದೆ ಚಿಂತೆ. ಕೊನೆಗೆ ಎಲ್ಲಾ ಕಾರ್ಯಕ್ರಮ ಮುಗಿದ ಮೇಲೆ ಊಟಕ್ಕೆ ಸಿದ್ಧವಾಯ್ತು. ತಟ್ಟೆ, ಗ್ಲಾಸ್, ತಂಬಿಗೆ ಎಲ್ಲದರ ಸದ್ದು ಶುರುವಾಯ್ತು. ನಮ್ಮವರೆಲ್ಲರೂ ಸಿಕ್ಕ ಸಿಕ್ಕಲ್ಲಿ ಕುರ್ಚಿ ಹಿಡಿದು ಕುಳಿತರು.

ಟೇಬಲ್ಲಿನ ಮೇಲೆ ಬಿಸಿ ಬಿಸಿಯಾದ ಅಡುಗೆ ಬಂತು. ಅದು ತಟ್ಟೆಯಲ್ಲಿ ಬಂದು ನಮ್ಮ ಹೊಟ್ಟೆಗೂ ಸೇರಿತು. ಆದ್ರೆ ಅಲ್ಲಿ ಯಾರಿಗೂ ಯಾರೂ ನೀವ್ಯಾರು? ಕೇಳಲೇ ಇಲ್ಲ. ಹೊಟ್ಟೆ ತುಂಬಿದ ಖುಷಿಯಲ್ಲ ಮದುವೆ ಮನೆಯವರಿಗೆ ಕೃತಜ್ಞತೆ ಸಲ್ಲಿಸಿ ಕೈ ಕುಲುಕಿ ನಮ್ಮ ರೂಮು ಸೇರಿಕೊಂಡೆವು. ಇದಾದ ನಂತರವೂ ಎಷ್ಟೋ ಬಾರಿ ಈ ಅಪರಿಚಿತ ಮದುವೆಗಳೇ ನಮ್ಮ ಹೊಟ್ಟೆ ತುಂಬಿಸಿದವು. ನೀವು ಏನೇ ಹೇಳಿ, ಈ ರೀತಿ ಕುತೂಹಲದಿಂದ ಪರಿಚಯವಿಲ್ಲದವರ ಮದುವೆಗೆ ಹೋಗಿ ಊಟ ಮಾಡುವುದರಲ್ಲಿ ಏನೋ ಒಂದು ಮಜಾ ಇದೆ!

ಹಸಿವು ತಣಿಸುವ ಮದುವೆ ಮನೆ

ಹಸಿವು ಯಾರಪ್ಪನ ಮನೇದು? ವಿಜಯಪುರದಲ್ಲಿ ಎಲ್ಲಾ ಸಮುದಾಯದಲ್ಲಿ ಒಂದಿಲ್ಲೊಂದು ಮದುವೆ ನಡೆಯುತ್ತಲೇ ಇರುತ್ತವೆ.
ಅಷ್ಟಕ್ಕೂ ಹಸಿವಿಗೆ ಜಾತಿ ಧರ್ಮದ ಹಂಗೇಕೆ? ಮದ್ವೆ ಯಾವ ಧರ್ಮದ್ದಾದರೇನು ಹೊಟ್ಟೆ ತುಂಬುವುದು ಮಾತ್ರ ಅನ್ನದಿಂದಲೇ
ಅಲ್ವಾ! ಹಸಿವು ತಾನಾಗಿಯೇ ಅಂತಹ ತರ್ಕದ ಮಾತುಗಳನ್ನು ಹೇಳಿಕೊಟ್ಟಿತ್ತು.