Friday, 19th April 2024

ನೀವೂ ರಕ್ಷಿಸಬಹುದು ನಮ್ಮ ಪರಿಸರವನ್ನು !

ಸುಭಾಸ ಯಾದವಾಡ

ಪರಿಸರ ಸಂರಕ್ಷಣೆ ಇಂದಿನ ಆದ್ಯತೆ. ಆದರೆ ಅದು ಸರಕಾರದ ಮತ್ತು ಸಂಘಸಂಸ್ಥೆಗಳ ಕೆಲಸ ಎಂಬ ಭಾವನೆ ಕೆಲವರಲ್ಲಿದೆ. ನಮ್ಮ ಜೀವನ ಶೈಲಿಯಲ್ಲಿ ಸಹ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ನಮ್ಮ ಪರಿಸರವನ್ನು ಸಂರಕ್ಷಿಸಲು ಸಾಧ್ಯ.

ನೀರು, ಅನ್ನ, ಬಟ್ಟೆ, ವಸತಿ ಇವು ಮನುಷ್ಯನ ಮೂಲಭೂತ ಅಗತ್ಯಗಳು. ಇವು ಇಲ್ಲದೆಯೂ ಕೆಲ ಸಮಯ ಜೀವಿಸಬಹುದು. ಆದರೆ ಶುದ್ಧವಾದ ಹವೆ ಇಲ್ಲವಾದರೆ ಕೆಲವೇ ಕ್ಷಣಗಳಲ್ಲಿ ಜೀವ ಶವವಾಗುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ನಾವು ಸೇವಿಸುವ ಗಾಳಿ ಅಥವಾ ಹವೆಯನ್ನು ದೂಷಿತಗೊಳಿಸುವದೆಂದರೆ ನಮ್ಮನ್ನು ನಾವೇ ಕೊಂದುಕೊಂಡಂತೆ.

ದುರಂತವೆಂದರೆ ನಾವು ಹವೆಯನ್ನು ಹಾಳು ಮಾಡುವುದರಲ್ಲಿ, ನಾ ಮುಂದೆ ನೀ ಮುಂದೆ ಎಂದು ಸ್ಪರ್ಧಾತ್ಮಕವಾಗಿ ಮುನ್ನಡೆಯುತ್ತಿದ್ದೇವೆ. ಅದೇನೋ, ಈಗಿನ ಕಾಲಮಾನದ ಅನಿವಾರ್ಯತೆಯಾಗಿದೆ : ನಮ್ಮ ನಾಗರಿಕ ಸೌಲಭ್ಯಗಳು ಹೆಚ್ಚಳಗೊಂಡಂತೆಲ್ಲಾ, ವಾತಾವರಣ ಹಾಳಾಗುತ್ತಿರುವ ಸಂದರ್ಭ ಎದುರಾಗಿದೆ. ಪಕ್ಕದ ಮನೆಯವರು ಕಾರು ತೆಗೆದುಕೊಂಡರೆಂದು ನಾವೂ ಖರೀದಿಸುವುದು, ಪಕ್ಕದ ಮನೆಯವರು ದೊಡ್ಡ ಕಾರು ಖರೀದಿಸಿದರೆಂದು ನಾವೂ ದೊಡ್ಡ ಕಾರು ಖರೀದಿಸುವುದು, ಅದರಿಂದ ಇನ್ನಷ್ಟು ಹೊಗೆಯನ್ನು ತಯಾರಿಸಿ ವಾತಾವರಣಕ್ಕೆ ಬಿಡುವುದು – ಈ ಚಟುವಟಿಕೆಗಳಿಗೆ ನಮ್ಮನಮ್ಮಲ್ಲೇ ಸ್ಪರ್ಧೆ ಏರ್ಪಟ್ಟಿದೆ. ಆ ಸ್ಪರ್ಧೆಯಿಂದ ಹಿಂದೆ ಸರಿಯುವ ಕಾಲ ಈಗ ಸನ್ನಿಹಿತವಾಗಿದೆ.

ಅದಕ್ಕಾಗಿ ನಾವು ಮಾಡಬೇಕಾದುದು ಇಷ್ಟೇ:
? ಸಣ್ಣ ದೂರವನ್ನು ಕ್ರಮಿಸಲು ಕಾಲ್ನಡಿಗೆ ಇಲ್ಲವೇ ಪರಿಸರ ಸ್ನೇಹಿ ಸೈಕಲ್ಲಗಳನ್ನು ಬಳೆಸೋಣ. ಇದರಿಂದ ವಾತಾವರಣಕ್ಕೆ ಹೊಗೆ ಸೇರುವುದು ಕಡಿಮೆ ಆಗು ತ್ತದೆ. ಜತೆಯಲ್ಲೇ, ನಡೆಯುವಾಗ ಅಥವಾ ಸೈಕಲ್ ತುಳಿಯುವಾಗ ಹದವಾದ ವ್ಯಾಯಮ ದೊರೆತು ಆರೋಗ್ಯವೂ ಉತ್ತಮಗೊಳ್ಳುತ್ತದೆ.
? ದೂರದ ಪ್ರಯಾಣಕ್ಕೆ ಕಾರುಗಳ ಬದಲು, ಅವಕಾಶ ದೊರೆತಾಗಲೆಲ್ಲಾ ಬಸ್ಸು, ರೈಲು ಮುಂತಾದ ಸಾರ್ವಜನಿಕ ವಾಹನಗಳನ್ನು ಬಳೆಸೋಣ.
? ಅನವಶ್ಯಕವಾಗಿ ವಿದ್ಯುತ್, ಗ್ಯಾಸ್, ನೀರು, ಇಂಧನಗಳನ್ನು ಬಳೆಸದಿರೋಣ. ಸಾಧ್ಯವಾದರೆ ಸೂರ್ಯ ಶಕ್ತಿಯನ್ನು ಬಳಸಿ ಬಿಸಿನೀರು ಸಿದ್ಧಪಡಿಸೋಣ.
ಮಳೆನೀರು ಕೊಯ್ಲು ಸಹ ಇಂತಹದ್ದೇ ಒಂದು ಕಾರ್ಯ.

? ನಮ್ಮ ಆಹಾರ ಬೇಯಿಸುವಾಗಲೂ ಹವೆ ಮಲಿನಗೊಳ್ಳುತ್ತದೆ. ಸಾಧ್ಯವಾದಷ್ಟು ಗ್ಯಾಸ್ ಖರ್ಚನ್ನು ಕಡಿಮೆ ಮಾಡೋಣ. ಕೆಲವು ತರಕಾರಿ, ಮೊಳಕೆ ಕಾಳು ಗಳನ್ನು ಬೇಯಿಸದೇ ಸೇವಿಸುವ ಅವಕಾಶವಿದೆ. ಇವುಗಳನ್ನು ಮತ್ತು ಹಣ್ಣುಗಳನ್ನು ಸಹ ಹೆಚ್ಚಾಗಿ ಸೇವಿಸೋಣ.

? ಧೂಮ್ರಪಾನ ಕೇವಲ ನಮ್ಮ ಆರೋಗ್ಯವನ್ನು ಮಾತ್ರ ಕೆಡಿಸುವುದಿಲ್ಲ. ನಮ್ಮ ನೆರೆಹೊರೆಯವರ ಹಾಗೂ ಹವೆಯ ಆರೋಗ್ಯವನ್ನೂ ಹಾಳುಮಾಡುವದು.
ಆದ್ದರಿಂದ ಸಿಗರೇಟ್ ಮೊದಲಾದ ಅಪಾಯಕಾರಿ ಚಟಗಳಿಂದ ದೂರವಿರೋಣ.

? ಸ್ವಚ್ಛ ಹವೆಯನ್ನು ಕೊಡುವ ಗಿಡ-ಮರಗಳನ್ನು ನೆಟ್ಟು ಬೆಳೆಸೋಣ. ಬೇಕಾಬಿಟ್ಟಿ ಮರ ಕಡಿಯುವವರಿಗೆ ಪ್ರತಿರೋಧ ಒಡ್ಡೋಣ. ಹಸಿರು ಹರಡೋಣ.
? ನಮ್ಮ ಮನೆಯ ಕಸ ಎಲ್ಲೂ ದುರ್ವಾಸನೆ ಬೀರದಂತೆ ವಿಲೇವಾರಿ ಮಾಡೋಣ. ಅವಕಾಶವಿದ್ದರೆ, ಮನೆಯ ಕಸದಿಂದ ಗೊಬ್ಬರ ತಯಾರಿಸಿ, ಮೌಲ್ಯವರ್ಧನೆ
ಮಾಡೋಣ.

ಇಂಥ ಸಣ್ಣಪುಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಮ್ಮ ಸುತ್ತಲಿನ ವಾಯುವಿನ ಗುಣಮಟ್ಟವನ್ನು ಕಾಯ್ದುಕೊಳ್ಳೋಣ. ಶುದ್ಧ ಗಾಳಿಯನ್ನು ಸೇವಿಸುವವರ ಆರೋಗ್ಯ ಉತ್ತಮಗೊಳ್ಳುತ್ತದೆ, ಜೀವಿತಾವಽಯೂ ಹೆಚ್ಚಳಗೊಳ್ಳುತ್ತದೆ. ವಾತಾವರಣವನ್ನು ಶುದ್ಧವಾಗಿಡುವುದು, ಪರಿಸರವನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎನಿಸಬೇಕು. ನಮ್ಮ ಹಾಗು ನಮ್ಮಂತಹ ಇತರೇ ಜೀವಜಂತುಗಳ ಸಾವಿಗೆ ಕಾರಣವಾಗದಿರೋಣ. ವಾಯುವಿನ ಆರೋಗ್ಯ ಎಂದರೆ ಎಲ್ಲ ಜೀವಿಗಳ ಆರೋಗ್ಯ ಎಂಬುದನ್ನು ಅರಿಯೋಣ.

ನಮ್ಮ ವೈಭವ, ಮೆರೆದಾಟ, ಶ್ರೀಮಂತಿಕೆಯ ಪ್ರದರ್ಶನವು ನಮ್ಮಲ್ಲೇ ಇರಲಿ, ಅದರಿಂದ ನೆಮ್ಮದಿ ಸಿಗಲಿ, ಆದರೆ ಆ ಒಂದು ಒಣ ಹಮ್ಮಿನಿಂದಾಗಿ, ನಮ್ಮ ಹವೆಗೂ, ವಾತಾವರಣಕ್ಕೂ, ನಮ್ಮ ಜೀವಕ್ಕೂ ಕುತ್ತಾಗಬಾರದಲ್ಲವೇ!

Leave a Reply

Your email address will not be published. Required fields are marked *

error: Content is protected !!