Friday, 13th December 2024

ಗುಹಾಲಯ

ಡಾ.ಕಾರ್ತಿಕ್‌ ಜೆ.ಎಸ್‌

ವಾಹನ ದಟ್ಟಣೆ ಮತ್ತು ಗಿಜಿ ಗುಡುವ ಜನಸಂದಣಿ ಮಧ್ಯೆ ಇದ್ದು ಬೇಸರವಾಗುತ್ತಿದೆಯೇ? ಹಾಗಿದ್ದರೆ, ಪ್ರಶಾಂತ ವಾತಾವರಣ
ದಲ್ಲಿರುವ, ಮನಸ್ಸಿಗೆ ಉಲ್ಲಾಸ ನೀಡುವ ಸ್ಥಳವಾದ ‘ಕೈಲಾಸಗಿರಿ’ಗೆ ಭೇಟಿ ನೀಡಿ.

ಕೈಲಾಸಗಿರಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣವಾಗಿದ್ದು ಪ್ರಕೃತಿ ಪ್ರಿಯರಿಗೆ (ವಿಶೇಷವಾಗಿ ಬೆಂಗಳೂರಿಗರಿಗೆ) ವಾರಾಂತ್ಯ ದಲ್ಲಿ ಭೇಟಿ ನೀಡಲು ಇರುವ ಉತ್ತಮ ಆಯ್ಕೆ. ಕೈಲಾಸಗಿರಿಯು, ಅಂಬಾಜಿ ದುರ್ಗ ಪರ್ವತ ಶ್ರೇಣಿಯ ಒಂದು ಬೆಟ್ಟವನ್ನು ಕೊರೆದು ನಿರ್ಮಿಸಿದ ಗುಹಾಂತರ ದೇವಾಲಯಗಳಿರುವ ತಾಣವಾಗಿದೆ.

ನಮ್ಮ ಪಯಣ ಮುಂಜಾನೆ ಬೆಂಗಳೂರಿನಿಂದ ಆರಂಭವಾಯಿತು. ಹೊಸಕೋಟೆ ಮಾರ್ಗವಾಗಿ 65 ಕಿ.ಮೀ ಸಾಗಿದರೆ ಐತಿಹಾಸಿಕ ಕೈವಾರ ಪಟ್ಟಣ ತಲುಪಬಹುದು. ಅಲ್ಲಿಂದ, ಹಚ್ಚ-ಹಸಿರಿನ ಮಾರ್ಗದಲ್ಲಿ 7 ಕಿ.ಮೀ ಸಂಚರಿಸಿದಾಗ ‘ಕೈಲಾಸಗಿರಿ’ ಸಿಗುತ್ತದೆ.
ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿ, ಕಲ್ಲು ಚಪ್ಪಡಿಗಳಿಂದ ಮಾಡಿದ ಕಾಲುದಾರಿಯಲ್ಲಿ ಹತ್ತು ನಿಮಿಷ ನಡೆದಾಗ ಬೃಹದಾ ಕಾರವಾದ ಏಕಶಿಲಾ ಪರ್ವತ ಕಾಣಸಿಗುತ್ತದೆ. ಅಲ್ಲಿ ಬಂಡೆಯನ್ನು ಕೊರೆದು ನಿರ್ಮಿಸಿದ, ಪ್ರವೇಶದ್ವಾರ ಹೊಂದಿರುವ
ನಾಲ್ಕು ಗುಹೆಗಳನ್ನು ಕಾಣಬಹುದು.

ಮೊದಲನೆಯ ಗುಹೆಯಲ್ಲಿರುವ ವಿಶಾಲವಾದ ಪ್ರಾಂಗಣ ನೋಡಿ ಅಚ್ಚರಿಯಾಯಿತು. ಚಪ್ಪಾಳೆ ತಟ್ಟಿದಾಗ ಕೇಳುವ ಪ್ರತಿಧ್ವನಿ ಮನ ಸೆಳೆಯಿತು. ಪ್ರಾಂಗಣದ ಬಲಭಾಗದಲ್ಲಿ ಕೊರೆದ ಸುರಂಗದ ಮುಖಾಂತರ ಸಾಗಿದಾಗ, ಎರಡನೇ ಗುಹೆಯಲ್ಲಿರುವ ಗಣೇಶನ
ಗುಡಿಯನ್ನು ನೋಡಿದೆವು. ಅಲ್ಲಿಂದ 20 ಅಡಿ ಅಂತರದಲ್ಲಿರುವ ಮೂರನೇ ಗುಹೆಯಲ್ಲಿರುವ ಕೈಲಾಸ ಗಿರೀಶ (ಚತುರ್ಮುಖ ಶಿವ) ಮತ್ತು ಅಂಬಾಜಿ ದುರ್ಗೆ (ಪಾರ್ವತಿ ದೇವಿ)ಯ ಮೂರ್ತಿಗಳಿಗೆ ನಮಿಸಿದೆವು. ನಂತರ, ಮುಂದೆ ಬಂದಾಗ ಕಾಣುವ ನಾಲ್ಕನೇ ಗುಹೆಯ ಪ್ರವೇಶ ದ್ವಾರದ ಮುಖಾಂತರ ಹೊರಗಡೆ ಬಂದೆವು.

ಸುಂದರ ನಿಸರ್ಗ
ಬೆಟ್ಟದ ಸುತ್ತಮುತ್ತ ಕಾಣುವ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಬಂಡೆಯ ಮೇಲೆ ಓಡಾಡುವ ವಾನರ ಸೈನ್ಯವು
ಮನಸ್ಸಿಿಗೆ ಮುದ ನೀಡುತ್ತವೆ. ಬೆಟ್ಟದ ಬದಿಯಲ್ಲಿ ಕುರುಚಲು ಸಸ್ಯಗಳು ಮತ್ತು ಬಂಡೆ ವಿನ್ಯಾಸಗಳನ್ನು ಕಂಡು, ಅವುಗಳ
ಫೋಟೋ ಕ್ಲಿಕ್ಕಿಸುವಾಗ ಎಚ್ಚರವಹಿಸಬೇಕು. ಪ್ರಶಾಂತ ವಾತಾವರಣದಿಂದ ಕಂಗೊಳಿಸುತ್ತಿರುವ ಬೆಟ್ಟದ ಬುಡದಲ್ಲಿ ನಿಂತಾಗ, ಸ್ಪರ್ಶಿಸಿದ ತಂಗಾಳಿಯಿಂದ ಮೈಮನ ತಂಪಾಯಿತು. ದೂರದಲ್ಲಿ ಕಾಣುವ ಚಿಂತಾಮಣಿಯ ‘ಕನ್ನಂಪಲ್ಲಿ’ ಕೆರೆ ಮತ್ತು ಅಂಬಾಜಿ ದುರ್ಗ ಪರ್ವತ ಶ್ರೇಣಿಗಳನ್ನು ನೋಡಿದಾಗ, ನಿಸರ್ಗ ದೇವತೆಯ ಸೌಂದರ್ಯಕ್ಕೆ ಬೆರಗಾಗುವಂತಾಯಿತು, ಅನಿರ್ವಚನೀಯ
ಆನಂದ ಉಂಟಾಯಿತು.

ಕೈಲಾಸಗಿರಿಯಲ್ಲಿ ನೀರಿನ ಸೌಲಭ್ಯ ಇಲ್ಲದಿರುವುದರಿಂದ, ನೀರಿನ ಬಾಟಲ್ ತೆಗೆದುಕೊಂಡು ಹೋಗುವುದು ಒಳಿತು. ಇಲ್ಲಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೌಲಭ್ಯ ಇಲ್ಲದಿರುವುದರಿಂದ, ಸ್ವಂತ ಅಥವಾ ಬಾಡಿಗೆ ವಾಹನದಲ್ಲಿ ಸಂಚರಿಸುವುದು ಸೂಕ್ತ.