Thursday, 12th December 2024

ಸೆಂಟೆನಿಯಲ್ ಪಾರ್ಕ್‌

ಮಂಜುನಾಥ್‌ ಡಿ.ಎಸ್‌

ಈ ಪುಟ್ಟ ಪಾರ್ಕ್‌ನಲ್ಲಿ ಪ್ರವಾಸಿಗರು ಮೀನು ಹಿಡಿಯುವ ಹವ್ಯಾಸಕ್ಕೆ ಇಂಬು ಕೊಡಬಹುದು, ಆ ಮೂಲಕ ತಮ್ಮ ಪ್ರವಾಸಕ್ಕೆ ಒಂದು ಹೊಸ ಆಯಾಮವನ್ನು ನೀಡಲು ಸಾಧ್ಯ!

ಅಮೆರಿಕದ ಪಚ್ಚೆ ನಗರ ಎನಿಸಿರುವ ಸಿಯಾಟೆಲ್‌ನಲ್ಲಿ ಅನೇಕ ಉದ್ಯಾನವನಗಳಿವೆ. ಜಲಮುಖಿಯಾಗಿರುವ ಸೆಂಟೆನಿಯಲ್ ಪಾರ್ಕ್ ಇವುಗಳಲ್ಲಿ ಒಂದು. ಇದನ್ನು ಹಿಂದೆ ಎಲಿಯಟ್ ಬೇ ಪಾರ್ಕ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಸಿಯಾಟೆಲ್ ಬಂದರಿನ ಶತಮಾನೋತ್ಸವದ ನೆನಪಿಗಾಗಿ 2011ರಲ್ಲಿ ಇದಕ್ಕೆ ಸೆಂಟೆನಿಯಲ್ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.

ಹನ್ನೊಂದು ಎಕರೆ ವಿಸ್ತಾರದ ಈ ಉದ್ಯಾನವು ನಾಲ್ಕು ಸಾವಿರದ ಒಂದು ನೂರು ಅಡಿ ಉದ್ದದ ಕಡಲ ಕಿನಾರೆ ಹೊಂದಿದೆ. ಒಂದು ಉದ್ಯಾನವನಕ್ಕೆ ಸಮುದ್ರದ ಕಿನಾರೆಯೂ ಒದಗಿ ಬಂದರೆ, ಆ ಪ್ರದೇಶದ ವೀಕ್ಷಣಾ ಅನುಭವಕ್ಕೆ ಅನನ್ಯತೆ ತುಂಬಿ ಬರುತ್ತದೆ. ಸುಂದರ ನೈಸರ್ಗಿಕ ದೃಶ್ಯ ಇಲ್ಲಿನ ಒಂದು ವಿಶೇಷ. ಜತೆಗೆ ಎಲಿಯಟ್ ಬೇನಲ್ಲಿ ಆಗಾಗ ಕಾಣಿಸಿಕೊಳ್ಳುವ ಸೀಲ್ ಮತ್ತು ಸೀ ಲಯನ್‌ಗಳನ್ನು ನೋಡುವ ಅವಕಾಶ ದೊರಕುವುದು ಈ ಶತಮಾನೋತ್ಸವ ಉದ್ಯಾನವನದ ವಿಶೇಷತೆ.

ಇಲ್ಲಿ ಮೀನು ಹಿಡಿಯಬಹುದು!: ಈ ಉದ್ಯಾನದಲ್ಲಿ ಬೈಕ್ ಹಾಗು ಪಾದ ಚಾರಿ ಮಾರ್ಗಗಳು, ವ್ಯಾಯಾಮ ಸಾಧನಗಳು, ಸಾರ್ವಜನಿಕರು ಮೀನು ಹಿಡಿಯಲು ಅನುವಾಗುವಂತೆ ನಿರ್ಮಿಸಿರುವ ಅಟ್ಟಣಿಗೆ ಗಳು, ಪಿಕ್ನಿಕ್ ಮೇಜುಗಳು-ಬೆಂಚುಗಳು, ಹಾಗು ನಾಗರಿಕ ಸೌಲಭ್ಯಗಳಿವೆ. ಮೋಜಿಗಾಗಿ ಮತ್ತು ಒಂದು ಕ್ರೀಡೆಯ ರೂಪ ದಲ್ಲೂ ಮೀನು ಹಿಡಿಯಲೆಂದೇ ಹಲವು ಪ್ರವಾಸಿಗರು ಮತ್ತು ಸ್ಥಳೀಯರು ಈ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ.

ಮೀನಿ ಹಿಡಿಯಲು ಅಗತ್ಯವಾದ ಸಲಕರಣೆಗಳನ್ನು ವಿಕ್ರಯಿಸುವ ಮಳಿಗೆಯೂ ಇಲ್ಲಿದೆ. ಕುತೂಹಲದಿಂದ ಬರುವ ಪ್ರವಾಸಿಗ ರಲ್ಲಿ ಉತ್ಸಾಹ ಮೂಡಿಸಿ, ಮೀನು ಹಿಡಿಯುವ ಪರಿಕರಗಳನ್ನು ಖರೀದಿಸಲು ಪ್ರಚೋದಿಸುವ ಮೂಲಕ, ವ್ಯಾಪಾರಕ್ಕೂ ಒತ್ತು ನೀಡಿರುವುದು ಈ ಉದ್ಯಾನವನದ ವೈಶಿಷ್ಟ್ಯ.

ಸುತ್ತಲಿನ ದೃಶ್ಯವನ್ನು ನೋಡಲೆಂದೇ ಎತ್ತರವಾದ ಅಟ್ಟಣಿಗೆಯೊಂದನ್ನು ಇಲ್ಲಿ ನಿರ್ಮಿಸಿದ್ದಾರೆ. ಈ ಅಟ್ಟಣಿಗೆಯಿಂದ  ಎಲಿಯಟ್ ಬೇ, ಮೌಂಟ್ ರೇನಿಯರ್, ಸ್ಪೇಸ್ ನೀಡ್ಲ್, ಮುಂತಾದ ಹೆಗ್ಗುರುತುಗಳನ್ನು ವೀಕ್ಷಿಸಿ ಬಂದರು ನಗರದ ಸೌಂದರ್ಯ ಸವಿಯಬಹುದು. ದೂರ ಸಮುದ್ರದ ಸೌಂದರ್ಯ ಮತ್ತು ನೀರಿನಲ್ಲಿ ನಿಧಾನವಾಗಿ ಸಾಗುವ ನಾವೆಗಳನ್ನು ನೋಡುತ್ತಾ
ಹೊತ್ತು ಕಳೆಯಬಹುದು. ಬಂದರುಕಟ್ಟೆ ಸಂಖ್ಯೆ 86ರಲ್ಲಿ ಧಾನ್ಯ ಸಂಗ್ರಹಿಸಲು ನಿರ್ಮಿಸಿರುವ ಬೃಹತ್ ಗಾತ್ರದ ಸೈಲೋಗಳನ್ನು (ಕಣಜಗಳನ್ನು) ಹಾಗು ಇವುಗಳಿಂದ ಧಾನ್ಯಗಳನ್ನು ಹಡಗುಗಳಿಗೆ ತುಂಬುವ ಪ್ರಕ್ರಿಯೆಯನ್ನೂ ಇಲ್ಲಿಂದ ವೀಕ್ಷಿಸಬಹುದು.

ಗುಲಾಬಿ ವನ
ಚಿಕ್ಕದಾದರೂ ನಾನಾ ವಿಧದ ಗುಲಾಬಿ ಗಿಡಗಳಿಂದ ಕೂಡಿದ ಸುಂದರ ತೋಟ ಇಲ್ಲಿನ ಮತ್ತೊಂದು ಆಕರ್ಷಣೆ. ಸಂಜೆಯಾಗು ತ್ತಿದ್ದಂತೆ ಒಲಂಪಿಕ್ ಪರ್ವತದ ಹಿಂದೆ ಕ್ಷಿತಿಜದಲ್ಲಿ ಮರೆಯಾಗುವ ದಿನಮಣಿಯ ರಂಗುರಂಗಿನ ದೃಶ್ಯವನ್ನು ಕಣ್ತುಂಬಿಸಿ ಕೊಳ್ಳಲೆಂದೇ ಅನೇಕರು ಇಲ್ಲಿಗೆ ಆಗಮಿಸುತ್ತಾರೆ. ಎಡ್ವರ್ಡ್ ಪಾರ್ಕ್‌ನ ಉತ್ತರ ದಿಕ್ಕಿನಲ್ಲಿರುವ ಶತಮಾನೋತ್ಸವ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಸಿಯಾಟೆಲ್ ಬಂದರು ಹೊತ್ತಿದೆ.

ಶತಮಾನೋತ್ಸವ ಉದ್ಯಾನವನ್ನು ಪ್ರವೇಶಿಸಲು ತುಸು ಸುತ್ತು ಬಳಸಿ ಸಾಗಬೇಕು, ಸ್ವಲ್ಪ ಶ್ರಮ ಪಡಬೇಕು. ಲೋಯರ್ ಕ್ವೀನ್ ಆನ್ ಬಳಿಯಿರುವ ಅಥವಾ ಎಲಿಯೆಟ್ ಅವೆನ್ಯೂ ಸನಿಹದ ಪಾದಚಾರಿ ಸೇತುವೆಗಳಲ್ಲಿ ಒಂದನ್ನು ಬಳಸಬೇಕು. ಲೋಯರ್ ಕ್ವೀನ್ ಆನ್ ಪಾದಚಾರಿ ಸೇತುವೆ ತನ್ನ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ.

ಸಿಯಾಟೆಲ್‌ನ ಸೆಂಟೆನಿಯಲ್ ಪಾರ್ಕನ್ನು ಬೆಂಗಳೂರಿನ ಪ್ರಸಿದ್ಧ ಪಾರ್ಕ್‌ಗಳಿಗೆ ಅಥವ ಭಾರತದ ಇತರ ನಗರಗಳ ಪ್ರಖ್ಯಾತ
ಸಸ್ಯೋದ್ಯಾನಗಳೊಡನೆ ಹೋಲಿಸುವುದು ಸಲ್ಲ. ಅಂತಹ ನಿರೀಕ್ಷೆಯಿಂದ ಈ ಉದ್ಯಾನಕ್ಕೆ ಭೇಟಿ ನೀಡಿದರೆ ನಿರಾಸೆಯಾಗುವು ದರಲ್ಲಿ ಸಂಶಯವಿಲ್ಲ. ನಡಿಗೆಗೆ, ವಾಯುವಿಹಾರಕ್ಕೆ, ಸೈಕಲ್ ಸವಾರಿಗೆ, ನಿರಾಳವಾಗಿ ಕಾಲ ಕಳೆಯುವುದಕ್ಕೆ ಸೆಂಟೆನಿಯಲ್ ಪಾರ್ಕ್ ಸೂಕ್ತ ಎನ್ನಲು ಅಡ್ಡಿಯಿಲ್ಲ. ಮುಖ್ಯವಾಗಿ ಬಿಡುವಿನ ವೇಳೆಯನ್ನು ಆರೋಗ್ಯಕರವಾಗಿ ಕಳೆಯಲು, ಮೀನು
ಹಿಡಿಯು ವಂತಹ ಕ್ರೀಡೆಯನ್ನು ಕೈಗೊಳ್ಳಲು ರೂಪಿಸಿರುವ ಉದ್ಯಾನ ಎಂದು ಹೇಳಬಹುದು.

ಮೂಲವಾಸಿಗಳ ದೈವಸ್ತಂಭ
ಈ ಪಾರ್ಕ್‌ನಲ್ಲಿ ಒಂದು ದೈವಸ್ತಂಭ ಇದೆ ಎಂದರೆ ಅಚ್ಚರಿಯೆ? ಅಮೆರಿಕದ ಅಲಾಸ್ಕನ್ ಇಂಡಿಯನ್ ಬುಡಕಟ್ಟಿನ ಕಲಾವಿದರು
1975ರಲ್ಲಿ ನಿರ್ಮಿಸಿದ ಈ ‘ಟೋಟೆಮ್ ಪೋಲ್’ (ದೈವಸ್ತಂಭ) ಸುಮಾರು 32 ಅಡಿ ಎತ್ತರವಿದೆ. ಉದ್ದನೆಯ ಮರದ ಮೇಲೆ
ಮೂಲ ನಿವಾಸಿಗಳ ದೇವತೆಗಳ ಚಿತ್ರಗಳನ್ನು ಇದರ ಮೇಲೆ ಕೆತ್ತಲಾಗಿದ್ದು, 2009ರಲ್ಲಿ ಇದನ್ನು ಸೆಂಟಿನಿಯಲ್ ಪಾರ್ಕ್‌ಗೆ
ಸ್ಥಳಾಂತರಿಸಲಾಯಿತು. ಈ ಮರದ ಮೇಲೆ ಗಿಡುಗ, ಕರಡಿ, ತಿಮಿಂಗಿಲ ಮೊದಲಾದ ಚಿತ್ರಳನ್ನು ಕೆತ್ತಲಾಗಿದೆ.