Sunday, 15th December 2024

ಕಾಳುಮೆಣಸಿನ ರಾಣಿ: ಪೋರ್ಚುಗೀಸರನ್ನು ಬಗ್ಗುಬಡಿದ ಚೆನ್ನಭೈರಾದೇವಿ

ಗಜಾನನ ಶರ್ಮ

ನಮ್ಮ ದೇಶದ ಇತಿಹಾಸದಲ್ಲಿ 54 ವರ್ಷಗಳಷ್ಟು ದೀರ್ಘ ಕಾಲ (ಸಾ.ಶ.1552-1606) ಆಳಿದ ಮಹಿಳಾ ವೀರ ರಮಣಿ  ಒಬ್ಬಳಿದ್ದಾಳೆ. ಅವಳೇ ಕರ್ನಾಟಕದ ಚೆನ್ನಭೈರಾದೇವಿ. ಇಂದಿನ ಉತ್ತರ ಕನ್ನಡದ ವ್ಯಾಪ್ತಿಯಲ್ಲಿರುವ ಗೇರುಸೊಪ್ಪೆ ಯನ್ನು ಕೇಂದ್ರ ಮಾಡಿ ಕೊಂಡು, ಐದು ದಶಕಗಳ ಕಾಲ ಸಮರ್ಥ ಆಡಳಿತ ನಡೆಸಿದ ಈಕೆ ಎದುರಿಸಿದ ಸವಾಲುಗಳಲ್ಲಿ ಗೋವಾದ ಪೋರ್ಚುಗೀಸರ ದುರಾಡಳಿತ ಮತ್ತು ಆಕ್ರಮಣವೂ ಸೇರಿದೆ. ಗೋವಾದ ಪೋರ್ಚುಗೀಸರನ್ನು ಆಕೆ ಹದ್ದುಬಸ್ತಿನಲ್ಲಿಟ್ಟ ಪರಿಯೇ ರೋಚಕ. ಚೆನ್ನಭೈರಾದೇವಿಯ ಶೌರ್ಯವನ್ನು ಕಂಡು ಅಚ್ಚರಿಪಟ್ಟ ಪೋರ್ಚುಗೀಸರು, ರಾಜಿಯ ಮೂಲಕ ಆಕೆಯೊಂದಿಗೆ ವ್ಯವಹರಿಸುತ್ತಾ, ಆಕೆಯ ರಾಜ್ಯದಿಂದ ಮೆಣಸಿನಕಾಳು ಮೊದಲಾದ ಸಂಬಾರ ಪದಾರ್ಥಗಳನ್ನು ಖರೀದಿಸಿ, ತಮ್ಮ ದೇಶಕ್ಕೆ ರಫ್ತುು ಮಾಡುತ್ತಿದ್ದರು. ಆಕೆಯನ್ನು ಕಾಳುಮೆಣಸಿನ ರಾಣಿ (ರೈನಾ ದ ಪಿಮೆಂಟಾ) ಎಂದು ಕರೆದರು. ಅದೇಕೋ ಚೆನ್ನಭೈರಾದೇವಿಯ ಕಥೆಯು ನಮ್ಮ ಮುಖ್ಯವಾಹಿನಿ ಇತಿಹಾಸದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಲಿಲ್ಲ; ಕರ್ನಾಟಕದವರಿಗೂ ಸಹ ಈ ಮಹಿಳಾ ಆಡಳಿತಗಾರ್ತಿಯ ಜೀವನ ವಿವರಗಳು, ಸಾಹಸಗಳು ಹೆಚ್ಚು ಪರಿಚಿತವಲ್ಲ. ಆಕೆಯ ಜೀವನದ ವಿವರಗಳನ್ನು ಸಂಶೋಧಿಸಿ, ಅದಕ್ಕೊಂದು ಕಥಾ ರೂಪ ನೀಡಿ, ‘‘ಚೆನ್ನಭೈರಾದೇವಿ’’ ಎಂಬ ಐತಿಹಾಸಿಕ ಕಾದಂಬರಿಯೊಂದನ್ನು ಹಿರಿಯ ಲೇಖಕ ಗಜಾನನ ಶರ್ಮ ರಚಿಸಿದ್ದಾರೆ. ಈ ಕಾದಂಬರಿಯನ್ನು ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಟಿಸಲಿದೆ. 25.4.2021ರಂದು ಬಿಡುಗಡೆಯಾಗ ಲಿರುವ ಈ ಕಾದಂಬರಿಯ ಆಯ್ದ ಭಾಗಗಳು ವಿಶ್ವವಾಣಿಯ ಓದುಗರಿಗಾಗಿ.

ಜಿನದತ್ತನ ಪರಿಸ್ಥಿತಿ ಕೇಳಿ ಒಂದು ಕ್ಷಣ ಚೆನ್ನಭೈರಾ ದೇವಿಯ ಮನಸ್ಸು ಹೃದಯಗಳು ಮುದುಡಿಹೋದವು. ದುಃಖ ಒತ್ತರಿಸಿ ಕೊಂಡು ಬಂತು. ಬಹುಹೊತ್ತು ಕುಳಿತಲ್ಲೇ ತಲೆಬಗ್ಗಿಸಿ ಮೌನವಾಗಿ ಕುಳಿತು ಬಿಕ್ಕಳಿಸಿದಳು. ಆಕೆ ಮುಖವೆತ್ತಿ ನೋಡುವವರೆಗೂ ಆಂಜನಪ್ಪನೂ ಮೌನವಾಗಿದ್ದ. ತುಸು ಸುಧಾರಿಸಿಕೊಂಡು ಆಕೆ ತಲೆಯೆತ್ತುತ್ತಿದ್ದಂತೆ ಆತ ಮಾತು ಮುಂದುವರಿಸಿದ್ದ. ಆ
ಪಾಪಿಗಳ ಅಮಾನುಷ ಕ್ರೌರ್ಯದ ವಿವರ ಒಂದೊಂದಾಗಿ ಕಿವಿಗೆ ಬೀಳುತ್ತ ಹೋದಂತೆ ಅವಳ ಮುಷ್ಟಿ ಬಿಗಿದು ಉಸಿರಾಟದ ವೇಗ ಹೆಚ್ಚುತ್ತಿತ್ತು.

‘‘ಬದುಕಲು ಜಿನದತ್ತನ ಜೀವ ನಡೆಸುತ್ತಿದ್ದ ಒದ್ದಾಟವನ್ನು ಕಂಡು ಆ ಧೂರ್ತರು ಗಹಗಹಿಸಿ ನಕ್ಕು ಕುಣಿದು ಕುಪ್ಪಳಿಸಿದರಂತೆ’’ಈ ವಾಕ್ಯವನ್ನು ಹೇಳಿ ಆತ ಬಾಯಿ ಮುಚ್ಚುವಷ್ಟರಲ್ಲಿ ಆಕೆ ಕುಳಿತಿದ್ದ ಪೀಠವನ್ನು ಹಿಂದಕ್ಕೆ ತಳ್ಳಿ ಎದ್ದು ನಿಂತು ಒರೆಯಿಂದ ಕತ್ತಿಯನ್ನು ಎಳೆದ ರಭಸಕ್ಕೆ ಸ್ವತಃ ಆಂಜನಪ್ಪನೇ ನಡುಗಿಹೋದ. ಅವಳ ಕಣ್ಣುಗಳು ಆಕ್ರೋಶದಲ್ಲಿ ಆಸ್ಪೋಟಿಸಿ ಬಿಡುವು ದೇನೋ ಎಂಬಂತೆ ಬೆಂಕಿ ಯುಂಡೆಗಳನ್ನು ಉಗುಳುತ್ತಿದ್ದವು. ಸ್ನಾಯುಗಳು ಬಿಗಿದು ಮುಖ ಕೆಂಪೇರಿತು.

ಬಿಸಿಯುಸಿರು ಹೊಗೆಯನ್ನು ಹೊರಸೂಸುತ್ತಿತ್ತು. ‘‘ನಿರಪರಾಧಿಯೊಬ್ಬನ ಮೇಲೆ ಈ ಮಟ್ಟದ ಬರ್ಬರ ಕ್ರೌರ್ಯವೇ? ಅವರೇನು ಮನುಷ್ಯರೋ, ಪಿಶಾಚಿಗಳೋ? ಹೋಗಲಿ, ಆ ನಿರ್ಲಜ್ಜರು ಕೊನೆಗಾದರೂ ಜಿನದತ್ತನನ್ನು ಉಳಿಸಿದರೋ ಅಥವಾ ಕೊಂದೇ ಬಿಟ್ಟರೋ?’’ ಉಕ್ಕಿ ಬರುತ್ತಿದ್ದ ಆಕ್ರೋಶವನ್ನು ಹತ್ತಿಕ್ಕಿ ಆಕೆ ಕೇಳಿದ್ದಳು.

ಸಿಟ್ಟಿನ ಭರದಲ್ಲಿ ಅವಳ ಧ್ವನಿ ಕಂಪಿಸುತ್ತಿತ್ತು. ಅವಳೆದೆ ಏರಿಳಿಯುತ್ತಿದ್ದ ವೇಗವನ್ನು ನೋಡಿದರೆ ಭಯವಾಗುತ್ತಿತ್ತು. ‘‘ಇಲ್ಲ ಮಹಾರಾಣಿ. ತೀವ್ರ ರಕ್ತಸ್ರಾವದಿಂದ ನಿತ್ರಾಣ ಗೊಂಡು ಮೂರ್ಛೆತಪ್ಪಿ ಬಿದ್ದಿದ್ದ ಶರೀರವನ್ನು ಹಗ್ಗದಲ್ಲಿ ಕಟ್ಟಿ ದೋಣಿಯಲ್ಲಿ ಬಿಸುಡಿ, ಅದನ್ನು ಒಂಟಿಯಾಗಿ ಸಮುದ್ರ ಮಧ್ಯದಲ್ಲಿ ತೇಲಿ ಬಿಟ್ಟರು’’.

ಭೀಭತ್ಸ ಕ್ರೌರ್ಯದ ಪರಾಕಾಷ್ಟೆಯನ್ನು ಕೇಳಿ ಅವಳ ರಕ್ತ ಕೊತಕೊತ ಕುದಿಯಿತು. ಎದೆ ಬಡಿತ ಅಂಕೆ ಮೀರಿತು. ನರನಾಡಿಗಳು ಸಿಡಿದು ಹೋಗುವ ಮಟ್ಟಿಗೆ ನೆತ್ತರಿನೊತ್ತಡ ಹೆಚ್ಚಿತು. ರೋಷ, ಕನಿಕರ, ಅವಮಾನ, ಸಿಟ್ಟು, ಆಕ್ರೋಶಗಳು ಒಗ್ಗೂಡಿ ಬುದ್ಧಿ ನಿಯಂತ್ರಣ ತಪ್ಪಿತು. ಆ ಪಾಪಿಗಳು ತೋರಿದ ನಿರ್ದಯ ಕ್ರೌರ್ಯ ಅವಳ ಸಹನೆಯನ್ನು ನುಂಗಿ ಮನಸ್ಸು ಪ್ರಕ್ಷುಬ್ಧಗೊಂಡು ಆಕೆ ಉನ್ಮತ್ತಳಾದಳು.

ತನಗೇನಾಗುತ್ತಿದೆಯೆಂಬುದೇ ತಿಳಿಯದಷ್ಟು ಉದ್ರಿಕ್ತಳಾದಳು. ‘‘ಆಂಜನಪ್ಪ, ವರದಿ ಗೌಪ್ಯವಾಗಿರಲಿ. ಮುಂದಿನ ಕ್ರಮದ ಕುರಿತು ನಂತರ ತಿಳಿಸುತ್ತೇನೆ’’ ಎಂದು ಹೇಳಿ ಬಿರುಗಾಳಿಯಂತೆ ಹೊರಟು, ಕುದುರೆಯನ್ನು ಹತ್ತಿ ಸೀದ ನಗಿರೆಯ ಅರಮನೆಗೆ ಬಂದಳು. ದ್ವಾರಪಾಲಕ ಎದ್ದು ನಮಸ್ಕರಿಸುವ ಮೊದಲೇ ‘‘ಮಹಾರಾಣಿ ಬಂದಿದ್ದಾಳೆಂದು ನಿನ್ನ ರಾಜಪ್ರಮುಖನಿಗೆ ತಿಳಿಸು’’ ಎನ್ನುತ್ತ ಕುದುರೆಯಿಳಿದಳು. ಶಿಷ್ಟಾಚಾರಕ್ಕೆ ಕಾಯದೆ, ಸೀದ ಅರಮನೆಯೊಳಗೆ ಪ್ರವೇಶಿಸಿ, ಎದುರಿನ ಜಗುಲಿಯಲ್ಲಿ ನಿಂತು, ‘‘ಮಾವಾ’’ ಎಂದು ಅಬ್ಬರಿಸಿದಳು.

ಮಾವನ ಎದುರು ಸೊಸೆ
ಹೆಂಡತಿಯರಿಬ್ಬರೂ ಬಸದಿಗೆ ಹೋಗಿದ್ದರಾಗಿ ಒಳಗೆ ಕುಳಿತು ಸೋಮನಾಯಕ ನೊಡನೆ ಹರಟುತ್ತಿದ್ದ ಕೃಷ್ಣದೇವರಸ ಆಕೆಯ ಅಬ್ಬರದ ಕೂಗು ಕೇಳಿ, ಏನೋ ವಿಪತ್ತು ಕಾದಿದೆಯೆಂದು ಊಹಿಸಿ ಓಡೋಡಿ ಬಂದ. ಅರಮನೆಯ ಜಗುಲಿ ಯಲ್ಲಿ ನಿಂತು ಭುಸು ಗುಡುತ್ತಿದ್ದ ಭೈರಾದೇವಿಯನ್ನು ಕಂಡು ದಿಗ್ಭ್ರಮೆ ಗೊಂಡು, ‘‘ಇದ್ದಕ್ಕಿದ್ದಂತೆ ಇದೇನು, ಮಹಾರಾಣಿಯವರು ಅರಮನೆ ಯಲ್ಲಿ! ಅದೂ ಯಾವುದೇ ಶಿಷ್ಟಾಚಾರವಿಲ್ಲದೆ!? ತೊಂದರೆಯಿಲ್ಲ, ಸೋದರಮಾವನ ಮನೆಗೆ ಬರುವುದಕ್ಕೆ ಸೊಸೆಗೆ ಶಿಷ್ಟಾಚಾರ ವೇಕೆ? ಬನ್ನಿ ಕುಳಿತುಕೊಳ್ಳಿ’’ ಎಂದು ಕೃತಕ ವಿನಯದಲ್ಲಿ ಬಗ್ಗಿ ಹತ್ತಿರ ಬಂದು ಆಸನದತ್ತ ಕೈತೋರಿದ. ಆಕೆ ಅವನನ್ನೇೇ ದುರುಗುಟ್ಟಿ ನೋಡಿ, ‘‘ಮಾವ, ನಾನು ಕುಳಿತುಕೊಳ್ಳಲು ಬಂದಿಲ್ಲ. ನನಗೆ ನೇರ ಉತ್ತರ ಬೇಕು? ಜಿನದತ್ತನನ್ನು ಏನು ಮಾಡಿದೆ?’’ ರಾಣಿಯ ಸ್ವರ ಗಡುಸಾಗಿತ್ತು. ಗುಂಡು ಹೊಡೆದಂತಿತ್ತು.

ನೇರ ನಿಷ್ಠುರವಾಗಿತ್ತು ಆಕೆಯ ಪ್ರಶ್ನೆ. ‘‘ಯಾರು, ಜಿನದತ್ತ? ಕುಲಪತಿ ವರ್ಧಮಾನ ಸಿದ್ಧಾಂತಿಯವರ ಸುಪುತ್ರ. ಅವನನ್ನು ಪೋರ್ಚುಗೀಸರು ಹೊತ್ತೊಯ್ದು ಹತ್ತು ವರ್ಷಗಳೇ ಕಳೆದಿವೆ. ಅವನಾಗಲೇ ಕಿರಿಸ್ತಾನನಾಗಿ ಮತಾಂತರಗೊಂಡು, ಯಾವುದೋ ಇಗರ್ಜಿಯ ಪಾದ್ರಿಯಾಗಿರಬಹುದು’’ ಎಂದ, ಕುಹಕ ನಗೆ ನಗುತ್ತ. ‘‘ಸುಳ್ಳು. ನೀನು ಸುಳ್ಳು ಬೊಗಳುತ್ತಿರುವೆ, ಸತ್ಯ ಹೇಳು.
ಪೋರ್ಚುಗೀಸರ ಹೆಸರಿನಲ್ಲಿ ಅವನನ್ನು ಅಪಹರಿಸಿದ್ದು ನೀನೇ ತಾನೆ?’’ ಧ್ವನಿ ಎತ್ತರಿಸಿ ಆರ್ಭಟಿಸಿದಳು. ಅವಳ ಧ್ವನಿಯ
ಕಠೋರತೆಗೆ ಕೃಷ್ಣದೇವರಸ ಬೆರಗಾದ.

‘‘ಯಾರು ಹೇಳಿದ್ದು ಹಾಗೆಂದು? ನೀನೇನು ಮಾತನಾಡುತ್ತಿರುವೆ ಎಂಬುದರ ಪರಿವೆಯಿದೆಯೇನು? ಮಾತಿನಲ್ಲಿ ಹಿಡಿತವಿರಲಿ ಮಹಾರಾಣಿ. ರಾಜ್ಯದ ದೊರೆಯಾಗಿದ್ದವನ ಜೊತೆಗೆ ವರ್ತಿಸಬೇಕಾದ ಶಿಷ್ಟಾಚಾರದ ನೆನಪಿರಲಿ’’ ಕೃಷ್ಣದೇವರಸನ ಧ್ವನಿಯೂ ಗಡಸಾಗಿತ್ತು. ಆಕೆ ‘‘ಬೊಗುಳುತ್ತಿರುವೆ’’ ಎಂದದ್ದು ಆತನನ್ನು ಕೆಣಕಿತ್ತು. ಅಷ್ಟರಲ್ಲಾಗಲೇ ಅಲ್ಲಿಗೆ ಬಂದು ನಿಂತಿದ್ದ ಸೋಮ ನಾಯಕ ರಾಣಿಗೆ ಕನಿಷ್ಠ ಗೌರವವನ್ನೂ ತೋರದೆ, ‘‘ರಾಜಪ್ರಮುಖರೇ, ಈ ರಾಜ್ಯದಲ್ಲಿ ಶಿಷ್ಟಾಚಾರವೆಂಬುದು ಇನ್ನೂ ಉಳಿದಿದೆ ಯೆಂಬ ಭ್ರಮೆಯಲ್ಲಿದ್ದೀರೇನು? ಅವೆಲ್ಲ ನಿಮ್ಮ ಕಾಲಕ್ಕೇ ಮುಗಿಯಿತು.

ಈಗೇನಿದ್ದರೂ ಸ್ವೇಚ್ಛಾಚಾರ. ಸಾಳುವ ವಂಶದ ಶ್ರೇಷ್ಠಗುಣಗಳಿಗೆಲ್ಲ ತಿಲಾಂಜಲಿ ಕೊಟ್ಟಾಗಿದೆ. ನಗಿರೆಯ ಪರಂಪರೆ ನಗೆ ಪಾಟಲಿಗೀಡಾಗಿದೆ’’ ಎಂದು ಕುಲುಕುಲು ನಕ್ಕ. ಚೆನ್ನಭೈರಾದೇವಿ ಸೊಂಟದಲ್ಲಿದ್ದ ಕತ್ತಿಯನ್ನು ಹಿರಿದು ಅವನತ್ತ ತಿರುಗಿ ಕೆಕ್ಕರಿಸಿ ನೋಡಿದಳು. ಕೆಂಡ ಕಾರುತ್ತಿದ್ದ  ಅವಳ ನೋಟ ನಾಯಕನಲ್ಲಿ ನಡುಕ ಹುಟ್ಟಿಸಿತು. ಹೇಗೂ ಕೃಷ್ಣದೇವರಸನಿದ್ದಾನೆ ಎಂಬ ಹುಂಬು ಧೈರ್ಯದಲ್ಲಿ ಮಾತನಾಡಿದ್ದ. ಈಗ ಅವಳ ಕಣ್ಣುಗಳ ಬಿರುಸನ್ನು ಕಂಡು ಭೂಮಿಗಿಳಿದು ಹೋದ. ಆಕೆ ಎರಡು ಹೆಜ್ಜೆ ಮುಂದಿಟ್ಟು ಹಿರಿದ ಕತ್ತಿಯನ್ನು ಅವನೆದೆಗಿಟ್ಟು, ‘‘ಏ ಸೋಮನಾಯಕ, ದೋಂಡ್ಯನನ್ನು ಕರೆತಂದು ಸಜ್ಜನ ಜಿನದತ್ತನನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲ್ಲಿಸಿದ ನಿನಗೆ ವಂಶಶ್ರೇಷ್ಠತೆಯ ಮಾತನಾಡಲು ನಾಚಿಕೆಯಿಲ್ಲವೇ? ಕಂಡವರ ಹೆಣ್ಣು ಮಕ್ಕಳನ್ನು ತರಿಸಿ ಒಪ್ಪಿಸುತ್ತಿದ್ದೆಯಲ್ಲವೇ ಈ ನಿನ್ನ ಮುದಿಮಿತ್ರನಿಗೆ? ಈಗ ಕರೆಸುತ್ತೇನೆ ನಿನ್ನ ಮಗಳನ್ನು. ಒಪ್ಪಿಸುವೆಯೇನು? ಯಾರದಾದರೇನು, ಈತನಿಗೆ ಬೇಕಿರುವುದು ಹೆಂಗಸಿನ ತೊಗಲು ಮಾಂಸಗಳು ತಾನೆ? ನಿರಪರಾಧಿಯ ನಾಲಿಗೆ ಕತ್ತರಿಸಿ ಬರ್ಬರತೆ ಮೆರೆದ ನಿನಗೆ ಪರಂಪರೆಯ ಕುರಿತು ಮಾತನಾಡಲು ನಾಚಿಕೆಯಾಗಬೇಕು. ಛೀ! ಹೆಂಬೇಡಿ’’ ಎಂದು ಹೇಳಿ ಅವನನ್ನು ಎಡಗೈಯ್ಯಿಂದ ಹೊರಬಾಗಿಲತ್ತ ತಳ್ಳಿ ಚೆನ್ನಗೊಂಡನಿಗೆ, ‘‘ಇವನನ್ನು ಬಂಧಿಸಿ ಸೆರೆಮನೆಗೆ ಕಳಿಸು’’ ಎಂದು ಆದೇಶಿಸಿದಳು.

ಅವಳ ಆವೇಶ ನೋಡಿ ಕೃಷ್ಣದೇವರಸ ಭಯದಲ್ಲಿ ನಡುಗಿ ಹೋದ. ಆದರೂ ತಾನು ರಾಜನಾಗಿದ್ದವ. ರಾಜಪ್ರಮುಖ. ಸುತ್ತ, ಸೇವಕರು, ಪರಿಚಾರಕರು, ದಾಸಿಯರೆಲ್ಲ ಇದ್ದಾರೆ. ಅವರೆದುರು ತನ್ನ ದೌರ್ಬಲ್ಯ ತೋರಿಸಿಕೊಳ್ಳಬಾರದೆಂದು ಧೈರ್ಯವನ್ನು ನಟಿಸುತ್ತಿದ್ದ. ಚೆನ್ನಭೈರಾದೇವಿ ಅವನತ್ತ ತಿರುಗಿ, ‘‘ಏ ನಿರ್ಲಜ್ಜ ಮುದುಕ, ಜಿನದತ್ತನನ್ನು ಅಪಹರಿಸಿದ್ದು ಪೋರ್ಚುಗೀಸರಲ್ಲ, ಮರ್ಯಾದೆಗೆಟ್ಟ ನೀನು. ಅದೂ ನನ್ನ ಜೊತೆಗೆ ನಿಕಟವಾಗಿದ್ದಾನೆಂಬ ಒಂದೇ ಕಾರಣಕ್ಕೆ. ನಿನಗೆ ಈ ನಪುಂಸಕ ನಾಯಿಯ ನೆರವು ಬೇರೆ. ನಾಚಿಕೆಯಾಗಬೇಕು ನಿಮ್ಮ ಹೊಲಸು ಜನ್ಮಕ್ಕೆ. ಏ ಮುದಿಯ, ನಿನ್ನನ್ನು ನಾನು ಮದುವೆಯಾಗ ಬೇಕೇ? ನನ್ನಮ್ಮನ ಬಳಿ ಏನು ಹೇಳಿದ್ದೆ? ಚೆನ್ನಭೈರಾದೇವಿ ರಾಜಬೀಜದ ಗರ್ಭ ಧರಿಸಬೇಕು, ಆಕೆ ಸಾಳುವ ವಂಶದ ಗಟ್ಟಿಪಿಂಡವನ್ನು ಹೊರಬೇಕು.

ಥೂ! ನಿನ್ನದು ರಾಜಬೀಜವೇ? ನಿನ್ನನ್ನು ಕಂಡರೇ ಜೀವ ಹೇಸುತ್ತದೆ. ಮೈಮನಸ್ಸೆಲ್ಲ ಕಾಮದ ಕೊಳಕಿನಿಂದ ತುಂಬಿದ ನಿನ್ನನ್ನು ನೆನಸಿಕೊಂಡರೆ ಮೈತುಂಬ ಮುಳ್ಳುಗಳೇಳುತ್ತವೆ. ಸಾಳುವ ವಂಶವೇ ನಿರ್ನಾಮವಾಗಿ ಹೋಗಲಿ ಎಂಬಷ್ಟು ಸಿಟ್ಟು ಉಕ್ಕುತ್ತದೆ. ಗಂಡಸು ಕುಲದ ಮೇಲೇ ಜಿಗುಪ್ಸೆ ಹುಟ್ಟುತ್ತದೆ. ಹೆಣ್ಣುಬಾಕ ನೀನು’’ ಎಂದು ಅಬ್ಬರಿಸಿದಳು.

ಕಾಮುಕ ಕುನ್ನಿ

ಕೃಷ್ಣದೇವರಸ ಕಟಕಟನೆ ಹಲ್ಲುಕಡಿಯುತ್ತ, ‘‘ಭೈರಾ, ಮಹಾರಾಣಿಯೆಂದು ಸುಮ್ಮನಿದ್ದರೆ ಬಾಯಿಗೆ ಬಂದಂತೆ ಬೊಗಳುತ್ತಿರುವೆ. ಎಚ್ಚರಿಕೆ, ಹದ್ದುಮೀರಿದರೆ ಹಲ್ಲುದುರಿಸಿಬಿಡುತ್ತೇನೆ’’ ಎಂದು ಕಿರಿಚಿದ. ಅವನಿಗೀಗ ಭಯವನ್ನು ಮೀರಿ ಸಿಟ್ಟು ಬಂದಿತ್ತು. ಕೋಪದಲ್ಲಿ ಆತನ ಕೈ ಕಾಲುಗಳು ಕಂಪಿಸುತ್ತಿದ್ದವು.

‘‘ಹಲ್ಲು ಉದುರಿಸುವೆಯೇನು? ಹಲ್ಲುದುರುವ ವಯಸ್ಸಿನಲ್ಲೂ ಜೊಲ್ಲು ಸುರಿಸುತ್ತ ಹೊಲಸು ಮೇಯುವ ನಿನಗೇ ಇಷ್ಟು ಪೊಗರಿರುವಾಗ ಏರುಜವ್ವನದ ನಿನ್ನ ಸೊಸೆಗೆ ಎಷ್ಟು ಸೊಕ್ಕಿರಬೇಡ. ಅರಮನೆಯ ದಾಸಿಯರನ್ನೂ ಬಿಡದೆ ಭೋಗಿಸಿದ ನಿನಗೆ ಅರಸು ವಂಶದ ಪ್ರತಿಷ್ಠೆ ಬೇರೆ. ಕಾಮುಕ ಕುನ್ನಿ’’ ಅವನ ಹತ್ತಿರ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ಅಬ್ಬರಿಸಿದಳು.

ತರ್ಕದಲ್ಲಿ ತಾನು ಸೋಲಬಾರದೆಂಬ ಹಠದಲ್ಲಿ ಕೃಷ್ಣ ದೇವರಸು, ‘‘ಹೌದು, ನಾನು ದಾಸಿಯರನ್ನೂ ಕೂಡುತ್ತೇನೆ. ವೇಶ್ಯೆೆಯರ ಸಂಗವನ್ನೂ ಮಾಡುತ್ತೇನೆ. ನಾನು ಗಂಡಸು. ನಿನ್ನಂತಹ ಹಲವರನ್ನು ಆಳಬಲ್ಲೆ. ಏನು ಕಿತ್ತುಕೊಳ್ಳಬಲ್ಲೆ ನೀನು?’’ ಅವನ ಮಾತಿಗೆ ಅವಳ ಸೈರಣೆಯ ಕಟ್ಟೆೆಯೊಡೆದು ಬುದ್ಧಿ ಸ್ಥಿಮಿತ ತಪ್ಪಿತು. ಅವಳೊಳಗಿನ ಹಠಮಾರಿ ಸಿಡಿದೆದ್ದು ನಿಂತಳು. ಅವಳಿಗೆ ತಾನೆಲ್ಲಿ ದ್ದೇನೆ ಏನು ಮಾಡುತ್ತಿದ್ದೇನೆ ಎಂಬುದೇ ಮರೆತು ಹೋಯಿತು. ಉನ್ಮತ್ತಳಾಗಿ ಕಿರುಚಿದಳು,

‘‘ಏ ಮುದಿಹದ್ದೇ, ಬೇಕಾದದ್ದು ಮಾಡುವುದು ಗಂಡಸರಿಗೊಂದೇ ಗುತ್ತಿಗೆಯಲ್ಲ. ನಾನೂ ನಿನ್ನ ಕಣ್ಣೆದುರೇ ಬೇಕಾದ್ದನ್ನು ಮಾಡಬಲ್ಲೆ. ಏನು, ಪ್ರಮುಖರನ್ನೆಲ್ಲ ಸೇರಿಸಿ ನನಗೂ ಚೆನ್ನಗೊಂಡನಿಗೂ ಸಂಬಂಧವಿದೆಯೆಂದು ಕತೆಕಟ್ಟುವೆಯೇನು? ಹೌದು, ಸಂಬಂಧವಿದೆ. ಮನಸ್ಸು ಮಾಡಿದರೆ ನಿನ್ನೆದುರೇ ಈಗಲೇ ಇಲ್ಲೇ ಅವನನ್ನು ಮದುವೆಯಾಗುತ್ತೇನೆ.

ಹೋಗು, ಊರು ತುಂಬ ಡಂಗುರ ಹೊಡೆಸು’’ ಎಂದು ಅಬ್ಬರಿಸಿ, ಅವನನ್ನು ದೂರ ತಳ್ಳಿದಳು. ಅವಳು ತಳ್ಳಿದ ರಭಸಕ್ಕೆ ಕೃಷ್ಣ ದೇವರಸ ಮಾರುದೂರ ಹೋಗಿಬಿದ್ದ. ಅವಳ ಸಿಟ್ಟು ನಿಯಂತ್ರಣ ತಪ್ಪಿತ್ತು. ಕತ್ತಿ ಹಿರಿದು ಕೆಳಗೆ ಬಿದ್ದ ಅವನೆದೆಗಿಟ್ಟು, ‘‘ಲಜ್ಜೆ ಗೇಡಿ, ನನ್ನಂತಹ ಹಲವರನ್ನು ಒಟ್ಟಿಗೇ ಆಳಬಲ್ಲೆಯಾ? ನೀನೊಬ್ಬ ಮಹಾ ಗಂಡಸೇನು? ಸಾಳುವ ವಂಶದ ಸೀಳುನಾಯಿ ನೀನು. ಹೆಣ್ಣೆಂದರೆ ಹದ್ದಿನೆದುರು ಹರವಿಟ್ಟ ಹಸಿಮಾಂಸದ ಮುದ್ದೆ ಎಂದುಕೊಂಡಿರುವ ನಿನ್ನಂತವರು ಅರಮನೆ ಯಲ್ಲಿರಕೂಡದು. ಈ ಕ್ಷಣದಿಂದಲೇ ನಿನ್ನನ್ನು ರಾಜಪ್ರಮುಖ ಹುದ್ದೆಯಿಂದ ಕಿತ್ತೆಸೆದಿದ್ದೇನೆ.

ನಾಳೆಯೊಳಗೆ ಅರಮನೆಯನ್ನು ತೆರವುಗೊಳಿಸಿ ತೊಲಗು’’ ಎಂದು ಆರ್ಭಟಿಸಿ ಕತ್ತಿಯನ್ನು ಒರೆಗಿಟ್ಟು ಹೊರಗೆ ಬಂದು
ಕುದುರೆ ಯೇರಿ ಹೊರಟೇಬಿಟ್ಟಳು.
***
ಸೋತುಹೋದ ಪೋರ್ಚುಗೀಸ್ ಸೈನ್ಯ
…..ಒಂಬತ್ತು ಯುದ್ದ ನೌಕೆಗಳಲ್ಲಿ ಸುಮಾರು 1500 ಮಂದಿ ಶಸ್ತ್ರಸಜ್ಜಿತ ಯೋಧರೊಡನೆ ಸ್ವತಃ ಗವರ್ನರ್ ಫ್ರಾನ್ಸಿಸ್
ಬೆರೆಟ್ಟೋ ಹೊನ್ನಾವರದ ಕಡಲ ತೀರಕ್ಕೆ ಬಂದು ತಲುಪಿದ್ದ. ಮೊದಲ ಯುದ್ಧನೌಕೆ ಅಂದು ಮಧ್ಯಾಹ್ನವೇ ರೇವು ಕಟ್ಟೆಯನ್ನು ತಲುಪಿತ್ತು. ಅದು ತಮ್ಮದೆಂದು ತಿಳಿಯದಿರಲೆಂದು ಪರಂಗಿಗಳು ಅದಕ್ಕೆ ಪರ್ಶಿಯನ್ ಧ್ವಜ ಕಟ್ಟಿ ಅದರ ಹೊರ ಮೈಯ್ಯನ್ನು ಪರ್ಶಿಯನ್ ನಿರ್ಮಿತ ಹಡಗಿನಂತೆ ಮಾರ್ಪಡಿಸಿದ್ದ.

ಅದನ್ನು ಪರ್ಶಿಯನ್ ಹಡಗೆಂದು ಭಾವಿಸಿದ ಹಡಗುಕಟ್ಟೆ ಅಧಿಕಾರಿ ಅದಕ್ಕೆೆ ಲಂಗರಿಕ್ಕಲು ಅನುಮತಿ ನೀಡುವ ಹವಣಿಕೆ ಯಲ್ಲಿದ್ದ. ಮೀನುಗಾರರ ಸೋಗಿನಲ್ಲಿ ಅದನ್ನು ಹಿಂಬಾಲಿಸಿ ಬಂದಿದ್ದ ನಗಿರೆಯ ಬೇಹುಗಾರರು ಅವನನ್ನು ಎಚ್ಚರಿಸಿರದಿದ್ದರೆ ನಾವೆಗೆ ರೇವಿನೊಳಗೆ ನಿರಾಯಾಸ ಪ್ರವೇಶ ದೊರಕಿಬಿಡುತ್ತಿತ್ತು. ಎಚ್ಚೆತ್ತ ಆತ ನೌಕೆ ಬಲವಂತದಿಂದ ಲಂಗರು ಹಾಕುವುದನ್ನು ತಪ್ಪಿಸಲು ತಕ್ಷಣವೇ ಹಲವು ಮಚ್ವೆಗಳನ್ನು ಉದ್ದಕ್ಕೂ ಅಡ್ಡ ನಿಲ್ಲಿಸಿ ಅದು ಒಳಗೆ ಪ್ರವೇಶಿಸದಂತೆ ತಡೆದ. ಹಡಗಿನಲ್ಲಿದ್ದವರು
ಫಿರಂಗಿ ಉಡಾಯಿಸಬಹುದೆಂಬ ಶಂಕೆಯಿಂದ ಬಂದರುಕಟ್ಟೆಯ ಪ್ರದೇಶವನ್ನು ನಿರ್ಜನಗೊಳಿಸಿದ.

ರಾಣಿಯ ಸೈನ್ಯ ಬಸವರಾಜಪುರ ದ್ವೀಪದಲ್ಲಿದೆಯೆಂಬ ಗುಪ್ತಚರ ವರದಿಗನುಗುಣವಾಗಿ ಬೆರೆಟ್ಟೋ ತನ್ನ ಉಳಿದ ಹಡಗುಗಳನ್ನು
ಬಸವರಾಜ ದುರ್ಗ ದ್ವೀಪದ ಕಡೆಗೆ ಒಯ್ದಿದ್ದ. ದ್ವೀಪವನ್ನು ಸೂರೆಗೊಂಡ ನಂತರ ಹೊನ್ನಾವರ ಪಟ್ಟಣವನ್ನು ಧ್ವಂಸ  ಗೊಳಿಸುವುದು ಅವನ ಹವಣಿಕೆಯಾಗಿತ್ತು. ಆತನ ಹವಣಿಕೆಯನ್ನು ಊಹಿಸಿದ್ದ ರಾಣಿ ದ್ವೀಪದಲ್ಲಿರದೆ ಪಾವಿನಕುರ್ವೆಯ ಜಲದುರ್ಗಾಪರಮೇಶ್ವರಿ ದೇಗುಲದ ಎದುರಿನಲ್ಲಿ ಯುದ್ಧಸಿದ್ಧಳಾಗಿ ನಿಂತಿದ್ದಳು.

ದಂಡನಾಯಕ ಭೈರವನಾಯಕ ಅಲ್ಪ ಸೈನ್ಯದೊಡನೆ ಬಸವರಾಜಪುರ ದ್ವೀಪದಲ್ಲಿ ಬೀಡುಬಿಟ್ಟಿದ್ದ. ಜಟ್ಟನಾಯಕ ಜಾಮೋರಿನ್ ಹಡಗಿನಲ್ಲಿದ್ದ. ಇನ್ನು ಕೆಲವು ದಂಡನಾಯಕರು ನೇರ ಆಕ್ರಮಣ ನಿರೀಕ್ಷಿಸಿ, ಬಂದರು ಕಟ್ಟೆಯಲ್ಲಿ ಕಾದಿದ್ದರು. ಕೆಲವರು ನಾವೆಗಳಲ್ಲಿ ಮತ್ತು ಮೀನುಗಾರರ ದೋಣಿಗಳಲ್ಲಿದ್ದರು. ಕಂಟಪ್ಪನಾಯಕ ಹೊನ್ನಾವರ ಕೋಟೆಯ ರಕ್ಷಣೆಯಲ್ಲಿ ನಿರತನಾಗಿದ್ದ.

ಅದು ಬೆಳದಿಂಗಳಿಲ್ಲದ ರಾತ್ರಿಯಾಗಿತ್ತು. ಸಮುದ್ರದ ನೀರು ಕದಡಿಟ್ಟ ಕಾಡಿಗೆಯಂತೆ ಹೊಯ್ದಾಡುತ್ತಿತ್ತು. ಪೂರ್ವಮುಂಗಾರಿನ ಮೋಡ ಮುಸುಕಿ ನಕ್ಷತ್ರಗಳ ಬೆಳಕೂ ತೋರುತ್ತಿರಲಿಲ್ಲ. ಕಡಲು ಘನಘೋರ ರಕ್ಕಸನಂತೆ ಗರ್ಜಿಸುತ್ತಿತ್ತು. ಇದ್ದಕ್ಕಿದ್ದಂತೆ ಕರಾಳ ರಾತ್ರಿಯ ಕಡುಮೌನವನ್ನು ಭೇದಿಸಿ ಪೋರ್ಚುಗೀಸರ ಹಡಗಿನಿಂದ ದ್ವೀಪದ ದಿಕ್ಕಿಗೆ ಒಟ್ಟಿಗೇ ನಾಲ್ಕು ಪಿರಂಗಿಗಳು ಸಿಡಿದಿದ್ದವು. ಅವು ಉಗುಳಿದ ಬೆಂಕಿಯ ಜ್ವಾಲೆಗೆ ಮತ್ತು ಸ್ಪೋಟದ ಸದ್ದಿಗೆ ದ್ವೀಪದ ತೀರದಲ್ಲಿ ತಂಗಿದ್ದ ಕಡಲ ಹಕ್ಕಿಗಳು ಪಟಪಟನೆ ರೆಕ್ಕೆ ಬಡಿದು ಆಗಸದಲ್ಲಿ ದಿಕ್ಕೆಟ್ಟು ಹಾರಿದವು.

ಹಠಾತ್ ಆಕ್ರಮಣ ದ್ವೀಪದಲ್ಲಿ ಆತಂಕವನ್ನು ಸೃಷ್ಟಿಸಿತು. ಕೆಲವರು ಭಯದಲ್ಲಿ ಕಿರಿಚಿದರು. ಮೌನದ ಮುಸುಕಿನಲ್ಲಿ ನಿಶ್ಚಲ ವಾಗಿದ್ದ ದ್ವೀಪದಲ್ಲಿ ಚಲನವಲನ ಆರಂಭಗೊಂಡಿತು. ನಗಿರೆಯ ಬಹಳಷ್ಟು ಯೋಧರ ತಲೆಗಳು ಉರುಳಿಬಿದ್ದವೆಂಬ ಲೆಕ್ಕಾ ಚಾರದಲ್ಲಿ ಪರಂಗಿ ಕಪ್ತಾನ ‘‘ಸ್ಯಾಂಟಿಯಾಗೋ’’ ಎನ್ನುತ್ತ ವಿಜಯೋನ್ಮಾದಗೈದ.

ಮೊದಲ ನಾಲ್ಕು ಫಿರಂಗಿಗಳು ಸಿಡಿದ ಸದ್ದು ಅಡಗುವ ಮೊದಲೇ ಮತ್ತೆ ನಾಲ್ಕೈದು ಪಿರಂಗಿಗಳು ಭೋರ್ಗರೆದವು. ಒಮ್ಮೆಗೇ ಆಗಸ ಬೆಳಕಾಗಿ ಮತ್ತೆ ಕತ್ತಲು ಕವಿಯಿತು. ಪೋರ್ಚುಗೀಸರ ಲೆಕ್ಕಾಚಾರದಂತೆ ದ್ವೀಪದಲ್ಲಿ ಅಸಂಖ್ಯ ಸಾವು ನೋವು ಸಂಭವಿ ಸಿತ್ತು. ವಾಸ್ತವದಲ್ಲಿ ಪರಂಗಿಗಳ ಫಿರಂಗಿ ಆಕ್ರಮಣವನ್ನು ಊಹಿಸಿದ್ದ ಭೈರವನಾಯಕ ತನ್ನ ಯೋಧರನ್ನು ದೂರದ ಬಂಡೆಗಳ ಮರೆಯಲ್ಲಿ ನಿಲ್ಲಿಸಿ ಬಚಾವು ಮಾಡಿಕೊಂಡಿದ್ದ. ಇತ್ತ ಪಾವಿನಕುರ್ವೆಯ ತೀರದಲ್ಲಿದ್ದ ರಾಣಿ ವೀರಘೋಷಗೈದಳು.

‘‘ಸಾವಾಗಲಿ, ನೋವಾಗಲಿ ಆದಷ್ಟೂ ನಿಶ್ಶಬ್ದವಾಗಿರಬೇಕು. ಯಾವುದೇ ಕಾರಣಕ್ಕೂ ಅವರಿಗೆ, ತಮ್ಮ ನೌಕೆಯ ಹಿಂಬದಿಯಿಂದ ನಮ್ಮ ನಾವೆಗಳು ಬರುತ್ತಿರುವ ಸುಳಿವು ಸಿಗಕೂಡದು. ಇದು ಯುದ್ಧವಲ್ಲ. ನಾಡದೇವಿಯ ಆರಾಧನೆ. ನಡೆಯಿರಿ. ನಮ್ಮ ಜೊತೆ ದುರ್ಗಾಪರಮೇಶ್ವರಿಯಿದ್ದಾಳೆ. ನಮ್ಮದು ನಗಿರೆಗಾಗಿ ಜಲದುರ್ಗೆಯ ವಿಜಯಯಾತ್ರೆ’’ ಎಂದು ಸೈನಿಕರನ್ನು ಹುರಿದುಂಬಿಸಿ, ಗೊಂಡರ ತಂಡಕ್ಕೆ, ‘‘ಅವರ ಹಡಗಿನ ಹತ್ತಿರ ಹೋಗುವ ತನಕ ಬೆಂಕಿ ಹೊತ್ತಿಸಕೂಡದು. ಅವರ ಹಡಗು ಸಮೀಪವಾದ ತಕ್ಷಣ ಬೆಂಕಿ ಹೊತ್ತಿಸಿ ದೊಂದಿ ಮತ್ತು ಅಗ್ನಿಬಾಣ ಒಂದೊಂದಾಗಿ ಪ್ರಯೋಗವಾಗಲಿ.

ಕರ್ಪೂರ, ರಾಳ, ಧೂಪ, ಎಣ್ಣೆ, ವಸ್ತ್ರ ಮತ್ತು ತೆಂಗಿನ ನಾರು ಸಿದ್ಧವಾಗಿರಲಿ. ದೊಂದಿಯ ಕಟ್ಟನ್ನು ಪೇರಿಸಿಟ್ಟುಕೊಳ್ಳಿ. ನಗಿರೆಯ ಪುಣ್ಯಭೂಮಿಯನ್ನು ನಮಿಸಿ ಹೊರಡಿರಿ, ಜಯ ನಮ್ಮದೇ’’ ಎಂದಳು.

ಅತ್ತ ಫಿರಂಗಿಗಳ ಮೇಲೆ ಫಿರಂಗಿಗಳನ್ನು ಉಡಾಯಿಸಿ ಪೋರ್ಚುಗೀಸರು, ಸ್ಯಾಂಟಿಯಾಗೋ ಎಂಬ ಯುದ್ಧಘೋಷಣೆ ಮೊಳಗಿ ಸುತ್ತ ಡೋಲು ಬಡಿದು ತುತ್ತೂರಿಯೂದಿ ಉನ್ಮಾದದಿಂದ ಮೊರೆಯುತ್ತಿದ್ದರು. ದೂರದಿಂದ ಬಂದರು ಕಟ್ಟೆಯತ್ತಲೂ ಪಿರಂಗಿಗಳ ದಾಳಿ ನಡೆದಿತ್ತು. ಒಂದೊಂದು ಫಿರಂಗಿ ಸಿಡಿದಾಗಲೂ ಹಡಗುಗಳಿಂದ ರಣಕೇಕೆ ಕೇಳಿಸುತ್ತಿತ್ತು. ಇತ್ತ ದ್ವೀಪದಲ್ಲಿ
ಯೋಧರನ್ನು ಫಿರಂಗಿಯ ವ್ಯಾಪ್ತಿಗೆ ಸಿಗದಂತೆ ದೂರದಲ್ಲಿ ಬಂಡೆಗಳ ಮರೆಯಲ್ಲಿ ನಿಲ್ಲಿಸಿದ್ದರೂ ಒಂದಷ್ಟು ಸಾವು ನೋವು
ಸಂಭವಿಸಿತ್ತು.

ಪರಂಗಿಗಳ ರಣಕೇಕೆ ಮತ್ತು ಸಮುದ್ರದ ರಕ್ಕಸಗರ್ಜನೆಯ ನಡುವೆ ರಾಣಿಯ ದಂಡು ಹಿಂದಿನಿಂದ ಹಡಗುಗಳನ್ನು ಸಮೀಪಿಸು ತ್ತಿರುವುದು ಪೋರ್ಚುಗೀಸರಿಗೆ ತಿಳಿಯಲಿಲ್ಲ. ತಮ್ಮ ಫಿರಂಗಿಗಳ ದಾಳಿಗೆ ಸಿಕ್ಕಿ ದ್ವೀಪದಲ್ಲಿದ್ದ ನಗಿರೆಯ ಬಹುತೇಕ ಸೈನ್ಯ ಧ್ವಂಸಗೊಂಡಿತೆಂದು ಭಾವಿಸಿ ಉಳಿದವರನ್ನು ಮಣಿಸಿ ದ್ವೀಪವನ್ನು ಆಕ್ರಮಿಸಿಕೊಳ್ಳಲು ಪರಂಗಿಯೋಧರು ಹಡಗಿನಿಂದ ಇಳಿದು ದ್ವೀಪದತ್ತ ದೋಣಿಗಳಲ್ಲಿ ಹೊರಟರು. ಅವರು ಅತ್ತ ಹೊರಡುತ್ತಿದ್ದಂತೆ ಇತ್ತ ಇದ್ದಕ್ಕಿದ್ದಂತೆ ಒಂದೊಂದೇ ಹಾಯಿಗಳ ಮೇಲೆ ದೊಂದಿಗಳು ಬಂದು ಬೀಳತೊಡಗಿದ್ದವು. ತುದಿಯಲ್ಲಿ ಬೆಂಕಿಯ ಬತ್ತಿಗಳನ್ನು ಹೊತ್ತ ಬಾಣಗಳು ಒಂದರಮೇಲೊಂದು ಹಡಗುಗಳತ್ತ ಹಾರುತ್ತಿದ್ದವು.

ಪರಂಗಿ ಯೋಧರು ಹಡಗಿನಿಂದಿಳಿದು ನಾವೆಗಳಲ್ಲಿ ದ್ವೀಪದ ಕಡೆ ಹೊರಟಿದ್ದರೆ ನಗಿರೆಯ ಯೋಧರು ನಾವೆಗಳಿಂದ ಇಳಿದು ಹಡಗುಗಳನ್ನು ಹತ್ತತೊಡಗಿದ್ದರು. ಹಡಗಿನಲ್ಲಿ ಕಾಯುತ್ತಿದ್ದವರು ಕೂಗಿ ಹೇಳಿದರೂ ಯುದ್ಧದ ಸದ್ದಿನಲ್ಲಿ ಪರಂಗಿಗಳಿಗೆ ಕೇಳಿಸಲಿಲ್ಲ. ನಗಿರೆಯ ಯೋಧರು ಒಟ್ಟು ಆರು ಪರಂಗಿ ಹಡಗನ್ನು ನಿಮಿಷ ಮಾತ್ರದಲ್ಲಿ ವಶಪಡಿಸಿಕೊಂಡಿದ್ದರು. ದ್ವೀಪಕ್ಕೆ
ಹೊರಟ ಪೋರ್ಚುಗೀಸ್ ನಾವಿಕರು ತಮ್ಮ ಹಡಗಿನ ಹಾಯಿಗಳು ಹೊತ್ತುರಿಯುತ್ತಿರುವುದನ್ನು ಕಂಡು ಹೌಹಾರಿದರು.

ಅವರಿಗೆ ನಡೆದದ್ದೇನೆಂಬುದು ಅರಿವಿಗೆ ಬರುವ ಮೊದಲೇ ಪರಿಸ್ಥಿತಿ ಕೈಮೀರಿತ್ತು. ಅವರು ಹಿಂದೆ ಬರುವಂತಿರಲಿಲ್ಲ. ನಾವೆಗಳಲ್ಲಿ ನಗಿರೆಯ ಯೋದರು ಅವರಿಗೇ ಗುರಿಹಿಡಿದು ಕಾಯುತ್ತಿದ್ದರು. ರಾಣಿಯ ಸೈನಿಕರು ಹಡಗುಗಳನ್ನು ವಶಪಡಿಸಿಕೊಂಡು ರಣೋ ತ್ಸಾಹದಲ್ಲಿ ಕೇಕೆ ಹಾಕುತ್ತ ಹಿಂತಿರುಗಿ ನೋಡಿದರೆ ಹಿಂದಿನಿಂದ ಹತ್ತಕ್ಕೂ ಹೆಚ್ಚು ಪೋರ್ಚುಗೀಸ್ ಯುದ್ದ ನೌಕೆಗಳು ದೂರದಲ್ಲಿ ಸದ್ದಿಲ್ಲದೆ ಇವರ ಬೆನ್ನುಹತ್ತಿ ಬರುತ್ತಿದ್ದುದು ಕಾಣಿಸಿತು.

ರಾಣಿಯ ಉಪಾಯಕ್ಕೆ ಅವರು ಪ್ರತ್ಯುಪಾಯ ಹೂಡಿದ್ದರು. ಈ ಕತ್ತಲಲ್ಲಿ ಅವರಿಗೆ ಸಿಕ್ಕರೆ ಫಿರಂಗಿಗಳನ್ನು ಹಾರಿಸಿ ನಾವೆಗಳನ್ನು ಉಡಾಯಿಸಿ ಬಿಡುವರೆಂದು ಊಹಿಸಿದ ರಾಣಿ, ಮಿಂಚಿನ ವೇಗದಲ್ಲಿ ದ್ವೀಪವನ್ನು ಬಳಸಿ ಶರಾವತಿ ದಂಡೆಯ ಕಾಸರಕೋಡಿನತ್ತ
ಬರಲು ತಮ್ಮವರಿಗೆ ಸೂಚಿಸಿ ಸ್ವತಃ ಮುಂದಾಗಿ ಹೊರಟಳು. ದ್ವೀಪದಲ್ಲಿರುವವರಿಗೂ ನಾವೆಯನ್ನು ಹಿಂಬಾಲಿಸುವಂತೆ
ಮತ್ತು ದ್ವೀಪವನ್ನು ತಕ್ಷಣ ನಿರ್ಜನಗೊಳಿಸುವಂತೆ ಸಂದೇಶ ಕಳಿಸಿದಳು. ಹೀಗೆ ಹಿಮ್ಮೆಟ್ಟಲು ಭೈರವನಾಯಕನಿಗೆ ಮನಸ್ಸಿರ ಲಿಲ್ಲ. ಆದರೆ ದ್ವೀಪದಲ್ಲಿದ್ದ ಯೋಧರನ್ನು ವೃಥಾ ಬಲಿಗೊಡಲು ಬಯಸದ ರಾಣಿ ಪೋರ್ಚುಗೀಸರು ಮೊದಲ ಗೆಲುವು ತಮ್ಮ ದೆಂದು ಬೀಗಿದರೂ ಸರಿ, ಪಲಾಯನಗೈಯ್ಯುವುದೇ ಸೂಕ್ತವೆಂದು ನಿರ್ಧರಿಸಿದ್ದಳು.

ಆರಂಭಿಕ ಗೆಲುವಿನಿಂದ ಪೋರ್ಚುಗೀಸರು ಬೀಗಿದರು. ಅಂದು ರಾತ್ರಿ ಬಸವರಾಜಪುರ ದ್ವೀಪದಲ್ಲಿ ವಿಶ್ರಾಂತಿ ಪಡೆದು
ಮರುದಿನ ಹೊನ್ನಾವರವನ್ನು ಸೂರೆಗೈಯ್ಯಲು ನಿರ್ಧರಿಸಿದರು. ಬೆರಟ್ಟೋ ತಮ್ಮ ದಂಡನಾಯಕರೊಡನೆ ‘‘ನಮಗೆ ವಿಶ್ರಾಂತಿಗೆ ಹಾಸಿಗೆ ಹೊದಿಕೆ ಕೊಟ್ಟು ಸಾಕಷ್ಟು ಆಹಾರವನ್ನೂ ಇಟ್ಟಿದ್ದಾಳೆ ಮೂರ್ಖ ಹೆಂಗಸು. ನಾಳೆ ನೋಡೋಣ, ಆ ಪಾಗನ್ ಹೆಂಗಸು ಅದು ಹೇಗೆ ಕಪ್ಪವನ್ನು ಕೊಡುವುದಿಲ್ಲವೆಂದು’’ ಎಂದು ರಾಣಿಯನ್ನು ಅವಹೇಳನಗೈಯ್ಯುತ್ತ ಮತ್ತಿನಲ್ಲಿ ತೇಲುತ್ತಿದ್ದ.
ಕಾಸರಕೋಡು ತೀರದಲ್ಲಿ ಯೋಧರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ರಾಣಿ, ‘‘ನಾಳೆ ಅವರು ಹೊನ್ನಾವರದ ಮೇಲೆ ದಾಳಿ
ಮಾಡಬಹುದು.

ಕೆಚ್ಚೆದೆಯ ಕಾದಾಟ ನಡೆಸಿ ಹೊನ್ನಾವರವನ್ನು ರಕ್ಷಿಸಿಕೊಳ್ಳಬೇಕೆಂದು’’ ಹುರಿದುಂಬಿಸಿ ವಿಶ್ರಾಂತಿ ನೀಡಿದಳು. ಬೆಳಗಿನ ಜಾವ ಆಯ್ದ ಆರುನೂರು ಯೋಧರ ಜೊತೆ ರಾಣಿ ಮತ್ತು ಕೆಲವು ದಂಡನಾಯಕರು ಶರಾವತಿಯನ್ನು ನಾವೆಗಳಲ್ಲಿ ದಾಟಿ, ನೆಲಮಾರ್ಗದಲ್ಲಿ ಬಡಗಣಿ ಹೊಳೆಯತ್ತ ಸಾಗಿ ಮತ್ತೆ ಅದೇ ದಿಕ್ಕಿನಿಂದ ಪೋರ್ಚುಗೀಸರ ಹಡಗಿನತ್ತ ಧಾವಿಸಿದರು. ಪರಂಗಿ
ಯೋಧರು ದ್ವೀಪದಲ್ಲಿ ತಿಂದು ಕುಡಿದು ಬೆಳಗಿನ ಜಾವದ ಸವಿನಿದ್ದೆಯಲ್ಲಿ ಮುಳುಗಿದ್ದರು. ರಾಣಿ ಮತ್ತು ಅವಳ ಸೈನ್ಯ
ಕಾಸರಕೋಡಿನ ಕಡೆಗೆ ಓಡಿದ್ದನ್ನು ಕಂಡಿದ್ದ ಪೋರ್ಚುಗೀಸ್ ಪಹರೆಯವರ ಗಮನವೆಲ್ಲ ಕಾಸರಕೋಡಿನ ದಿಕ್ಕಿಗೇ
ಮುಡಿಪಾಗಿತ್ತು.

ರಾಣಿ ಪ್ರತಿಯೊಬ್ಬ ದಂಡನಾಯಕನಿಗೂ ತನ್ನ ತುಕಡಿಯೊಡನೆ ತಲಾ ಒಂದೊಂದು ಹಡಗನ್ನೇರಿ, ಅದರ ಹಾಯಿಗಳನ್ನು ಹರಿದು ಹಗ್ಗಗಳನ್ನು ತುಂಡರಿಸಿ, ಕೂವೆಗಳನ್ನು ಕತ್ತರಿಸಿ ಹಾಕಲು ಮತ್ತು ಹಡಗಿನಲ್ಲಿದ್ದ ಮದ್ದುಗುಂಡು ಹಾಗೂ ಆಹಾರದ ಸಂಗ್ರಹಗಳನ್ನು ತಮ್ಮ ನಾವೆಗೆ ದಾಟಿಸಲು, ಸಾಧ್ಯವಾಗದಿದ್ದ ಸಂದರ್ಭದಲ್ಲಿ ಸಮುದ್ರಕ್ಕೆಸೆಯಲು ಸೂಚಿಸಿದ್ದಳು.

ನಗಿರೆಯ ಯೋಧರು ಪಿರಂಗಿಗಳ ನಳಿಗೆಗಳಿಗೆ ಮರಳು ಮತ್ತು ಹಸಿಮಣ್ಣಿನ ಮಿಶ್ರಣ ತುರುಕಿದರು. ಸಿಹಿನೀರಿನ ಪಿಪಾಯಿಗಳನ್ನು ಒಡೆದುಹಾಕಿದರು. ಕೂವೆಗಳಿಗೆ ಬಿಗಿದ ಹಾಯಿಹಗ್ಗಗಳನ್ನು ತುಂಡು ಮಾಡಿ ನಾವೆಗಳಿಗೆ ದಾಟಿಸಿದರು. ಬಡಗಿಗಳು ಹಡಗಿನ ತಳಭಾಗದಲ್ಲಿ ತೂತು ಕೊರೆದು ನೀರು ನುಗ್ಗುವಂತೆ ಮಾಡಿದರು. ಈ ನಡುವೆಗೊಂಡರ ತಂಡದಲ್ಲಿದ್ದ ಚೆನ್ನಗೊಂಡನೆಂಬ ತರುಣ ತುಸು ತಡಕಾಡಿ ಒಂದು ಹಡಗಿನ ಫಿರಂಗಿಗೆ ಅಲ್ಲೇ ಪೆಟ್ಟಿಗೆಯಲ್ಲಿ ತುಂಬಿಸಿದ್ದ ಸಿಡಿಮದ್ದು ತುಂಬಿ ಹಿಂಬದಿಯಿಂದ ಬೆಂಕಿಯಿಟ್ಟು ಉಡಾಯಿಸಿ ಬಿಟ್ಟಿದ್ದ.

ಅದು ಬೆಂಕಿಯುಗುಳುತ್ತ ಸಿಡಿದ ರಭಸಕ್ಕೆ ದ್ವೀಪದಲ್ಲಿ ಬೆಚ್ಚಗೆ ಮಲಗಿದ್ದ ಪೋರ್ಚುಗೀಸರು ದಡಬಡಿಸಿ ಮೇಲೆದ್ದರು. ನೋಡಿದರೆ ತಮ್ಮ ಹಡಗುಗಳಲ್ಲಿ ದೊಂದಿಗಳು ಚಲಿಸುತ್ತಿದ್ದವು! ಅದರ ಸುತ್ತ ನೂರಾರು ನಾವೆಗಳಲ್ಲಿ ನೆರಳು ಬೆಳಕಿನ ಚಲನೆ ಸಾಗಿತ್ತು. ಅವರು ಏನಾಯಿತೆಂಬ ಅಚ್ಚರಿಯಲ್ಲಿ ಮುಳುಗಿದ್ದಾಗಲೇ ಚೆನ್ನಗೊಂಡ ಇನ್ನೊಮ್ಮೆ ಫಿರಂಗಿ ಉಡಾಯಿಸಿದ್ದ. ಈಗ ಪೋರ್ಚು ಗೀಸರಿಗೆ ನೈಜ ಪರಿಸ್ಥಿತಿ ಅರ್ಥವಾಗಿತ್ತು.

‘‘ಓಹ್! ರಾಣಿ ನಮಗೆ ತಿರುಮಂತ್ರ ಹಾಕಿದಳು! ಮಾಡುವುದೇನು? ಹಡುಗುಗಳೆಲ್ಲ ಜಿಂಟೂಗಳ ವಶವಾಗಿ ನಾವೀಗ ದ್ವೀಪದಲ್ಲಿ ಬಂಧನಕ್ಕೊಳಪಟ್ಟಿದ್ದೇವೆ!. ಹಡಗಿನತ್ತ ನುಗ್ಗೋಣವೆಂದರೆ ಪಾಗನ್ನುಗಳಿಗೆ ಫಿರಂಗಿ ಉಡಾಯಿಸುವುದೂ ಗೊತ್ತಿದೆ! ನಮ್ಮ ಪಿರಂಗಿಗಳೀಗ ಅವರ ವಶದಲ್ಲಿವೆ!

ಅವರದನ್ನು ನಮ್ಮ ಮೇಲೇ ಪ್ರಯೋಗಿಸುತ್ತಿದ್ದಾರೆ’’ ಎಂದೆಲ್ಲ ಯೋಚಿಸಿದ ಪರಂಗಿಗಳಿಗೆ ಬೆಳಗಾಗುವುದನ್ನು ಕಾಯುವಷ್ಟೂ
ತಾಳ್ಮೆ ಉಳಿಯಲಿಲ್ಲ. ಯಾಕೆಂದರೆ ರಾಣಿಯ ಸೈನ್ಯ ದ್ವೀಪದೊಳಕ್ಕೆ ಬಂದರೆ ಅವರ ಸರ್ವನಾಶ ಖಚಿತವಾಗಿತ್ತು. ಅವರ ಹೆಚ್ಚಿನ ಆಯುಧಗಳೆಲ್ಲ ಹಡಗಿನಲ್ಲಿದ್ದವು. ಈಗ ಅವೆಲ್ಲ ನಗಿರೆಯ ನಾವೆಯನ್ನೇರಿ ಕೂತಿದ್ದವು.

ಮುನ್ನೆಚ್ಚರಿಕೆಗಾಗಿ ಇಟ್ಟುಕೊಂಡ ಆಯುಧಗಳು ಆಕೆಯ ಅಪಾರ ಸೈನ್ಯದೆದಿರು ಯಾವ ಲೆಕ್ಕಕ್ಕೂ ಸಾಟಿಯಿರಲಿಲ್ಲ. ಮುಂಜಾನೆಯ ಮಂಜಿನಲ್ಲಿ ಗೂಡು ಬಿಟ್ಟು ಆಗಸಕ್ಕೆ ಹಾರುವ ಕಡಲು ಹಕ್ಕಿಗಳ ಜೊತೆ ಪೋರ್ಚುಗೀಸರ ಬಿಳಿ ಬಾವುಟವೂ ಆಗಸಕ್ಕೇರಿತು. ಮುಂಬೆಳಗಿನೊಡನೆ ಮಹಾರಾಣಿಯ ಮೊಗದಲ್ಲಿ ಗೆಲುವಿನ ಮಂದಹಾಸ ಮಿನುಗಿದರೆ, ನಗಿರೆಯ ಯೋಧರ ಜಯಕಾರ ಸಮುದ್ರದ ಘನಘೋರ ಗರ್ಜನೆಯನ್ನೂ ಮೀರಿ ಮೊಳಗಿತ್ತು.