Friday, 13th December 2024

ಬಾಲ್ಯವೆಂದರೆ ಕದಿಯುವುದೇ ಏನೋ!

ಸುಲಲಿತ ಪ್ರಬಂಧ

ಬಿ.ಕೆ.ಮೀನಾಕ್ಷಿ ಮೈಸೂರು

ಬಾಲ್ಯದಲ್ಲಿ ಕದ್ದು ತಿನ್ನುವ ಆಸೆ, ಆ ರುಚಿ ಇಂದು ನಮ್ಮ ಬುತ್ತಿ ಚಿಗುರು. ಆದರೆ, ಈಗಿನ ಮಕ್ಕಳು ಕದ್ದು ತಿನ್ನುವ ಸಂತಸದಿಂದ ವಂಚಿತರಾಗಿದ್ದಾರೆ!

ಲೇಖಕ ಶ್ರೀವತ್ಸ ಜೋಷಿಯವರ ಒಂದು ಲೇಖನದ ಪ್ರಭಾವವು, ಈ ನೆನಪುಗಳ ಸರಮಾಲೆಯನ್ನು ಬಿಚ್ಚಿಟ್ಟಿದೆ. ನಾವು ಚಿಕ್ಕವ ರಿರುವಾಗ ಏನೆಲ್ಲ ಕೊಟ್ಟರೂ, ಅಡುಗೆಮನೆಯಲ್ಲಿ ಕದ್ದು ತಿನ್ನುವ ಪಿಡುಗು ನಮಗೆ ಅಂಟಿಬಿಟ್ಟಿತ್ತು. ನಮ್ಮ ಕಾಲ ಈಗಿನ ಕಾಲ ದಂತಲ್ಲ ಬಿಡಿ. ಈಗಿನ ಚಿಪ್ಸ್‌, ಪಾವ್ಬಾಜಿ, ಪಿಜ್ಜಾ, ಬರ್ಗರುಗಳು, ಪಾನಿಪೂರಿಗಳು ನಮ್ಮ ಕನಸಲ್ಲೂ ಸುಳಿದಿರಲಿಲ್ಲ.

ಏನಿದ್ದರೂ ಹುರಿಗಾಳುಗಳು, ಹಪ್ಪಳ-ಸಂಡಿಗೆಗಳು, ಬೆಲ್ಲ, ಕಡಲೇಕಾಯಿ, ಕೊಬ್ಬರಿ, ಹುರಿಟ್ಟು ಇವುಗಳೇ ನಮ್ಮ ಬಾಯಿಚಪಲದ ಮೂಲಸರಕುಗಳು. ನಾನು ಮತ್ತು ನಮ್ಮಣ್ಣಂದಿರು ಚಿಕ್ಕವರಿರುವಾಗ ಮಣ್ಣಿನ ಕಣಜಗಳು ನಮ್ಮ ಮನೆಯಲ್ಲಿದ್ದವು. ಅದರಲ್ಲಿ ಈ ಎಲ್ಲಾ ಸರಕುಗಳೂ ಸಂಗ್ರಹಿಸಿಡಲ್ಪಟ್ಟಿದ್ದವು. ಮನೆಯಲ್ಲಿ ಪ್ರತಿದಿನವೂ ಉಪ್ಪು ಖಾರ ಹಚ್ಚಿದ ಬಗೆಬಗೆಯ ಕಾಳುಗಳು ಹುರಿಯ ಲ್ಪಟ್ಟು, ನಾವು ಅವನ್ನು ಕಟುಂ ಕಟುಂ ಎಂದು ಕಡಿದು ಕಡಿದು ತಿಂದು ದವಡೆಯನ್ನೆಲ್ಲಾ ನೋಯಿಸಿಕೊಂಡರೂ ತಿನ್ನುವ ಆಸೆ ಮಾತ್ರ ನಮ್ಮನ್ನು ಬಿಟ್ಟು ದೂರ ಹೋಗುತ್ತಿರಲಿಲ್ಲ. ಜೊತೆಗೆ ಬೆಳಗ್ಗೆಗೂ ಆಗುತ್ತದೆ ಎಂದು ಬೇರೆ ಬಚ್ಚಿಡುವ ಕೆಲಸ ಕೂಡ ನಮ್ಮದೇ ಆಗಿತ್ತು. ಕಡಲೆಕಾಯಿ ಹುರಿದರಂತೂ ಸರಿಯೇ ಸರಿ! ಎಲ್ಲರ ಮುಂದಿನ ಸಿಪ್ಪೆೆಯ ರಾಶಿಯನ್ನು ಸಿದಗದೆ, ತಡಕಾಡದೆ ಬಿಡುತ್ತಿರಲಿಲ್ಲ.

ಇಂತಹ ದಾರುಣತೆಯನ್ನು ನೋಡಲಾರದೆ ಹಿರಿಯರು, ಹೀಗೆಲ್ಲಾ ಹುಡುಕಬೇಡಿ ಎಂದು ತಮ್ಮಲ್ಲಿರುವುದನ್ನು ಕೊಟ್ಟರೂ, ನಾವು ಪಟಿಂಗರು! ಅವರ ಕಣ್ಣು ತಪ್ಪಿಸುವುದು ನಮಗೆ ಗೊತ್ತಿಲ್ಲವೇ? ಹೀಗೆ ಚಿಕ್ಕ ವಯಸ್ಸಿನಲ್ಲಿ ಹುರಿದ ಕಾಳುಗಳು ನಮ್ಮನ್ನಾಳು ತ್ತಿದ್ದವು. ಕಡಲೆಕಾಯಿ ಬೇಯಿಸಿದ ಸುವಾಸನೆ ಕೆಲವೊಮ್ಮೆ ಕಡಲೇಕಾಯಿಯನ್ನು ಬೇಯಿಸುತ್ತಿದ್ದರು. ಒಲೆಯ ಉರಿಯಲ್ಲಿ ಕಡಲೆಕಾಯಿಯನ್ನು ಕಲ್ಲುಮರಿಗೆಯಲ್ಲಿ ನೀರು ಉಪ್ಪು ಹಾಕಿ ಕುದಿಯಲಿಟ್ಟರೆ, ನಾನು ಮತ್ತೆ ನನ್ನ ಅಣ್ಣಂದಿರು ಒಲೆಯುರಿ ಯನ್ನು ತಳ್ಳುವ ಕೆಲಸಕ್ಕೆ ನಾಮುಂದು ತಾಮುಂದು ಎಂದು ಒಲೆಯ ಮುಂದೆ ಸುತ್ತಲೂ ಜಾಗ ಆವರಿಸಿಕೊಂಡು ಕುಳಿತುಬಿಡು ತ್ತಿದ್ದೆವು. ಕಡಲೇಕಾಯಿ ಬೆಂದಿರಬಹುದಾ? ಅಂತ ಅಣ್ಣಂದಿರಿಬ್ಬರೂ ಒಂದೊಂದೇ ಕಡಲೆಕಾಯಿಯನ್ನು ತೆಗೆದು ರುಚಿ ನೋಡು ತ್ತಿದ್ದರು.

ಹಿರಿಯರು ಯಾರಾದರೂ ಸುಳಿದರೆ ಒಲೆಯ ಉರಿಯನ್ನು ಸರಿಮಾಡುತ್ತಿದ್ದರು. ನನಗೆ ಕೊಟ್ಟಿಲ್ಲ ರುಚಿ ನೋಡಕ್ಕೆ ಎಂದು ಅಮ್ಮಾ ಅಂತ ಕಿರುಚಲು ಶುರುವಿಡುವ ಮೊದಲೇ ಕಾಯಿ ಸುಲಿದು ಒಂದೇ ಒಂದು ಕಾಳು ಕೊಟ್ಟು, ಸುಮ್ಮನಾಗಿಸುತ್ತಿದ್ದರು. ಅವರು ಹತ್ತಾರು ಕಾಯಿ ತಿಂದು ನನಗೆ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದ ಒಂದೇ ಒಂದು ಕಾಳು ಬಹಳ ಖುಷಿ ಕೊಡುತ್ತಿತ್ತು. ಕಾಳಿಗಿಂತ ಹೆಚ್ಚಾಗಿ ನನಗೆ ಅದರ ಘಮ ಬಹಳ ಹಿತವೆನಿಸುತ್ತಿತ್ತು. ಅದರ ಪರಿಮಳವನ್ನು ಎಷ್ಟು ಹೀರಿದರೂ ಸಾಕೆನಿಸುತ್ತಿರ ಲಿಲ್ಲ. ಅಂತೂ ಕಲ್ಲುಮರಿಗೆ ತುಂಬಿದ್ದ ಕಾಯಿ, ಅದು ಬೇಯುವ ಹೊತ್ತಿಗೆ ಒಂದು ಹಂತಕ್ಕೆ ಇಳಿದುಬಿಡುತ್ತಿತ್ತು!

ನಮ್ಮ ಮನೆಗೆ ಸುಗ್ಗಿಕಾಲದಲ್ಲಿ, ಎಲ್ಲರೂ ಮೂಟೆಗಟ್ಟಳೆ ತಾವು ಬೆಳೆದದ್ದನ್ನು ತಂದು ಮನೆಬಾಗಿಲಿಗೆ ಕೊಡುತ್ತಿದ್ದರು. ನಮ್ಮ ತಂದೆ ಊರಿನ ಮಹಿಳೆಯರು-ಮಕ್ಕಳಿಗೆಲ್ಲ ಆಭರಣ ತಯಾರಿಸಿ ಕೊಡುತ್ತಿದ್ದುದರಿಂದ, ಅದೊಂದು ಗೌರವದ ಕೊಡುಗೆ. ಈ ಕೊಡುಗೆಯೇ ನಮಗೆ ಸುಗ್ಗಿ. ನಮ್ಮ ಅಮ್ಮ ಎಲ್ಲಾದರೂ ಹೋದರೆ ಸಾಕು ಕಡಲೆಬೀಜ ಹುರಿದು ನಮ್ಮಮ್ಮ ಬರುವಷ್ಟರಲ್ಲಿ ಗುರುತಿಗೂ ಸಿಗದಂತೆ ತಿಂದು ಖಾಲಿ ಮಾಡುತ್ತಿದ್ದೆವು. ನಮ್ಮ ತಂದೆ ನಮ್ಮ ಈ ಎಲ್ಲಾ ದರ್ಬಾರುಗಳನ್ನು ಕನ್ನಡಕದೊಳಗಿಂದ ನೋಡುತ್ತಾ ಹುಸಿನಗು ನಗುತ್ತಿದ್ದರು. ನಮ್ಮಣ್ಣಂದಿರ ಧಾಳಿಗೆ ಸಿಕ್ಕಿದ ಕೊಬ್ಬರಿ ಬೆಲ್ಲ ಮುಂತಾದ ಎಲ್ಲ ಪದಾರ್ಥಗಳು ಅವರ ಹೊಟ್ಟೆಗಳಲ್ಲಿ ನಲುಗಿಹೋಗುತ್ತಿದ್ದವು.

ನಮ್ಮಮ್ಮ ಅವುಗಳನ್ನು ಹುಡುಕುವಾಗ ‘ಎಲ್ರೋೋ ಇಲ್ಲಿಟ್ಟಿದ್ದೇ ಇಲ್ಲದ ಹಾಗೆ ಮಾಡಿದ್ದೀರಲ್ಲಾ?’ ಎಂದು ಕೂಗಿದರೆ, ಅವುಗಳು ಅವರ ಹೊಟ್ಟೆೆಯೊಳಗಿಂದ ನಮ್ಮಮ್ಮನಿಗೆ ಸತ್ಯ ಹೇಳಲು ಶತಾಯ ಗತಾಯ ಪ್ರಯತ್ನಿಸಿ ಸೋಲುತ್ತಿದ್ದವೇನೋ! ತೆಂಗಿನ ತುರಿ ಬೆಲ್ಲ ಬೆಳೆಯುತ್ತಾ ಹೋದಂತೆ ತೆಂಗಿನಕಾಯಿ ತುರಿ- ಸಕ್ಕರೆ, ಕೊಬ್ಬರಿ-ಬೆಲ್ಲ ಎಂದರೆ ಸಾಕು ಬಾಯಲ್ಲಿ ನೀರೂರುವ ಹಾಗಾಗು ತ್ತಿತ್ತು. ನೈವೇದ್ಯಕ್ಕೆ ತುರಿದದ್ದನ್ನು ಕೊಡದೆ, ಇತರೆ ಅಂದರೆ ಸಾರಿಗೆ, ಚಟ್ನಿ, ಪಲ್ಯ ಗೊಜ್ಜುಗಳಿಗೆ ತುರಿದ, ಅದರಲ್ಲೂ ತೆಂಗಿನ ಕಾಯಿ ಒಡೆದ ಕೂಡಲೇ ಮೊದಲು ತುರಿವ ಸಿಹಿ ಯಾದ ರಸಭರಿತ ತುರಿ ನನಗೆ ಸಿಗುತ್ತಿತ್ತು. ಜತೆಗೆ ಬೆಲ್ಲವನ್ನೋ ಸಕ್ಕರೆಯನ್ನೋ ಕೊಡುತ್ತಿದ್ದರು. ಕಾಯಿ ತುರಿಯುತ್ತಾರೆಂದರೆ ಸಾಕು ನಾನು ತುರಿಯುವ ಮಣೆಯ ಮುಂದೆ ಬಿಟ್ಟು ಅಲ್ಲಾಡು ತ್ತಿರಲಿಲ್ಲ. ಇದು ಚಿಕ್ಕ ಹುಡುಗಿಯಾಗಿದ್ದಾಗ ರೂಢಿಯಾಗಿದ್ದು ಬರಬರುತ್ತಾ, ವಯಸ್ಸು ಹೆಚ್ಚಾದಂತೆ ನಿಂತು ಹೋಯಿತು. ಆದರೆ ಆ ರುಚಿ ಸದಾ ನನ್ನನ್ನು ಕಾಡುತ್ತಿತ್ತು.

ನಾನು ಆ ಆಸೆ ತೀರಿಸಿಕೊಳ್ಳಲು ಮನೆಯವರು, ಅಲ್ಲಿ ಇಲ್ಲಿ ಹೋದಾಗ, ಹೋಂವರ್ಕ್ ಮಾಡುವ ನೆವ ಹೇಳಿ ಮನೆಯಲ್ಲೇ ಉಳಿದುಕೊಂಡು, ಸಾವಧಾನವಾಗಿ ಎಷ್ಟು ಬೇಕೋ ಅಷ್ಟು ತೆಂಗಿನಕಾಯಿ ತುರಿ ತುರಿದುಕೊಂಡು, ಅದಕ್ಕೆೆ ಸಕ್ಕರೆ ಬೆರೆಸಿ, ಒಂದು ಬಟ್ಟಲಲ್ಲಿ ಹಾಕಿಕೊಂಡು ತಿನ್ನುತ್ತಾ, ಪರಮಾನಂದದಲ್ಲಿ ಮುಳುಗಿಹೋಗುತ್ತಿದ್ದೆ. ಅಥವಾ ಕೊಬ್ಬರಿ ಬೆಲ್ಲ ತಿನ್ನುತ್ತಾ ಕೂರು ತ್ತಿದ್ದೆ. ಅದೂ ತಪ್ಪಿದರೆ ಸಕ್ಕರೆ ತುಪ್ಪ ತಿನ್ನುವುದು ನನ್ನ ರೂಢಿಯಾಗಿಹೋಗಿತ್ತು. ಹೀಗೇ ಒಂದು ದಿನ ನಮ್ಮಕ್ಕ ಭಾವ ಆಚೆ ಹೋದರು. ನಾನು ನೋಟ್ಸ್‌ ಬರೆಯುತ್ತಿದ್ದವಳು ತಕ್ಷಣ ಎದ್ದು ಒಳಗೆ ಓಡಿಹೋಗಿ ಕೊಬ್ಬರಿ ಸಕ್ಕರೆಯನ್ನು ಬಾಯಿತುಂಬಾ ತುಂಬಿಕೊಂಡು ಮೆಲ್ಲುತ್ತಾ ಅದರ ಸುಖ ಅನುಭವಿಸತೊಡಗಿದೆ.

ಕೇವಲ ಕೆಲವೇ ನಿಮಿಷಗಳಲ್ಲಿ ನಮ್ಮ ಭಾವ ವಾಪಸ್ಸು ಬಂದರು. ಅದೇನನ್ನೋ ಮರೆತಿದ್ದರಂತೆ, ನಾನು ಬಾಗಿಲು ತೆಗೆದವಳೇ ಕತ್ತುಬಗ್ಗಿಸಿ ನಿಂತೆ. ಅವರು ಅದೇನೋ ತೆಗೆದುಕೊಂಡ ವರು, ಮತ್ತೆ ವಾಪಸ್ಸು ಹೋಗುತ್ತಾ, ಊದಿರುವ ನನ್ನ ಕೆನ್ನೆಗಳನ್ನು ನೋಡಿ ಅದೇನು ಬಾಯಲ್ಲಿ ತುಂಬಿಕೊಂಡಿರುವುದು? ಎಂದವರಿಗೆ ಉತ್ತರ ಕೊಡುವ ಸ್ಥಿತಿಯಲ್ಲಿ ನನ್ನ ಬಾಯಿಯಿದ್ದರೆ ತಾನೇ? ಸುಮ್ಮನೆ ನಿಂತು ಬಿಟ್ಟೆ. ಒಂದೆರಡು ಗಂಟೆಗಳ ನಂತರ ಇಬ್ಬರೂ ವಾಪಸ್ಸಾದಾಗ, ‘ನನಗ್ಗೊತ್ತಿತ್ತು. ಇದ್ದ ಜಾಗದಲ್ಲೇ ತೆಂಗಿನ ಕಾಯಿ ಖಾಲಿ. ಸಕ್ಕರೆ ಎಷ್ಟು ತಂದರೂ ಡಬ್ಬ ಖಾಲಿ!

ತುಪ್ಪ ಇರಲ್ಲ…… ಅದಕ್ಕೆ ನೀನು ಆಚೆ ಎಲ್ಲೂ ನಂಜೊತೆ ಬರಲ್ಲ ಅಲ್ವಾ?’ ಎನ್ನುತ್ತಾ ಹುಸಿಕೋಪ ತೋರುತ್ತಾ ಬೈಯ್ಯತೊಡಗಿ ದರು ನಮ್ಮಕ್ಕ. ನಾನು ಹೆದರಿ ಕಂಗಾಲಾಗಿ, ‘ಇನ್ನೊಂದು ಸಾರಿ ತಿನ್ನಲ್ಲ’ ಎಂದು ತಪ್ಪೊಪ್ಪಿಕೊಂಡು ತಲೆ ಕೆಳಹಾಕಿ ನಿಲ್ಲುತ್ತಿದ್ದೆ. ಏನೇ ಬೈಯ್ಯಿಸಿಕೊಂಡರೂ ನನ್ನ ಈ ಆಸೆ ಮಾತ್ರ ಯಾವತ್ತೂ ಹಿಂಗಲಿಲ್ಲ. ಕದಿಯುವುದಂತೂ ತಪ್ಪಿಸುತ್ತಲೇ ಇರಲಿಲ್ಲ. ಆಮೇಲಾಮೇಲೆ ಗೊತ್ತಾಯಿತು ನಮ್ಮಕ್ಕ ಸುಮ್ಮನೆ ಬೈಯ್ಯುತ್ತಿದ್ದುದು, ಅದು ಸಿಕ್ಕಾಪಟ್ಟೆ ಕೋಪದ ನಿಜವಾದ ಬೈಯ್ಗುಳವಲ್ಲ ಎಂದು. ದ್ರಾಕ್ಷಿ ಗೋಡಂಬಿಗಳಂತೂ ಮಂಗಮಾಯವಾಗುತ್ತಿದ್ದವು.

ಅದನ್ನು ಕಣ್ಮರೆ ಮಾಡುತ್ತಿದ್ದದ್ದು ನಮ್ಮ ಅಣ್ಣಂದಿರು. ಈಗ ಅಂದರೆ ಈಗ….. ನನಗೆ ನನ್ನ ಮಕ್ಕಳನ್ನು ಕಂಡರೆ ಕೋಪ ಉಕ್ಕಿ ಹರಿಯುತ್ತದೆ. ಏಕೆ ಗೊತ್ತೆ? ಮುಂಡೇವಕ್ಕೆೆ ಕದ್ದು ತಿನ್ನುವ ಸುಖವೇ ಗೊತ್ತಿಲ್ಲ. ಒಂದು ದಿನವಾದರೂ ಏನನ್ನೂ ಕಣ್ತಪ್ಪಿಸಿ ತಿನ್ನಲಿಲ್ಲ. ‘ತಿನ್ರೋ….. ಹಾಳಾದೋವಾ’ ಎಂದು ಮುಂದೆ ತಂದಿಟ್ಟು ಹೊಡೆದರೂ, ಬಲವಂತಕ್ಕಾಾಗಿ ಕಷ್ಟಪಟ್ಟು ತಿನ್ನುತ್ತಿದ್ದವು. ಅದೂ ಹೆದರಿಕೆಗೆ! ಇನ್ನು ಕದಿಯುವುದಂತೂ ದೂರದ ಮಾತೇ! ಅದೇನಪ್ಪಾ ವಂಶಪಾರಂಪರ್ಯವಾದ ಕದ್ದುತಿನ್ನುವ ಬುದ್ಧಿ ಇವುಗಳಿಗೇಕೆ ಬರಲಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ಪಾಪಾಸು ಕಳ್ಳಿ ಹಣ್ಣು ತಿಂದದ್ದು!

ನಾವು ಚಿಕ್ಕಂದಿನಲ್ಲಿ ಹೆಸರುಕಾಳು, ಜೋಳದ ತೆನೆ, ರಾಗಿತೆನೆ, ಹಸೀ ಭತ್ತದ ಸೋಂಕಿನ ವಾಸನೆ, ನೆಲಗಡಲೆ ಗಿಡ, ಹಲಸಂದೆ, ಕಬ್ಬು…. ಇನ್ನೂ ಹೀಗೆ ಏನೇನೋ! ಎಲ್ಲರ ತೋಟಗಳೂ ನಮಗೆ ವಿಹಾರತಾಣಗಳಾಗಿದ್ದವು. ಎಲ್ಲ ಗಿಡಗಳೂ ನಮ್ಮ ಕಾಳುಗಳನ್ನು ತಿನ್ನಬನ್ನಿ ಎಂದು ಕರೆವಂತೆ ಭಾಸವಾಗುತ್ತಿತ್ತು. ಹಾಗಾಗಿ ನಮ್ಮ ಅಣ್ಣಂದಿರು ಕೀಳುವ, ಬಿಡಿಸುವ ಕೈಂಕರ್ಯ ಕೈಗೊಂಡರೆ, ನನಗೆ ಮೆಲ್ಲುವ ಕಾರ್ಯವಿರುತ್ತಿತ್ತು. ಅತ್ತಿ ಹಣ್ಣು, ಹತ್ತಿಹಣ್ಣು, ಆಲದ ಹಣ್ಣು, ಪಾಪಾಸುಕಳ್ಳಿ ಹಣ್ಣು, ಕಕ್ಕೆ ಹಣ್ಣುಗಳಂತೂ ನನಗೆ ಪ್ರಿಯವಾದದ್ದು. ಹಾಗೇ ಕಾರೇ ಹಣ್ಣು, ರೋಜಾ ಹೂವಿನ ರುಚಿಯಾದ ಹಣ್ಣು, ಬೇಲಿಸಾಲಿನ ಕಳ್ಳಿಯ ಕೆಂಪು ಹೂವು…. ನಿಜ ಹೇಳುವೆ, ನಾನು ತಿನ್ನದಿರುವ ಯಾವ ಸಸ್ಯದ ಹಣ್ಣೂ ಬಾಕಿ ಉಳಿದಿಲ್ಲವೇನೋ!

ಪಾಪಾಸುಕಳ್ಳಿಯ ಹಣ್ಣು ತಿಂದು, ಬಾಯಿಯ ತುಂಬ ಮುಳ್ಳು ಹೊಕ್ಕಿಸಿಕೊಂಡು.. ಇನ್ನೊಮ್ಮೆ ಈ ಹಣ್ಣು ತಿನ್ನಬಾರದೆಂದು ಪ್ರತಿಜ್ಞೆ ಮಾಡಿಕೊಂಡು.. ಮತ್ತೆ ಮಾರನೇದಿನ ಯಥಾಪ್ರಕಾರ….ನಾಯಿ ಬಾಲವೇ ಆಗಿದ್ದೆೆವು! ಮನೆಯವರ ಸುಳ್ಳುಸುಳ್ಳೇ ಗದರುವಿಕೆಗಳು, ನಾವು ಹೆದರಿ ಮರಿಗುಬ್ಬಿಗಳಂತೆ ಮುದುರಿ ಕೂರುತ್ತಿದ್ದುದು, ಇಲ್ಲದಿದ್ದರೆ ಅವರ ಮೇಲೆ ಇವರು, ಇವರ ಮೇಲೆ ಅವರು ಚಾಡಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದುದು, ‘ಏ ಆ ಹುಡುಗ್ರನ್ನ ಹಿಡ್ಕೊಳ್ರೋ.. ಏನ್ ದಿನಾ ಧಾಳಿ ಇಡ್ತಾವೆ!

ಆಚಾರಪ್ರೋರ್ಗೆೆ ಹೇಳ್ಬೇಕು. ಇರಿ ನಿಮ್ಮನೆಗ್ ಬರ್ತಿನಿ ಇವತ್ತು’ ಎಂದು ತೋಟದವರು ಹೆದರಿಸಿ, ನಾವು ಮೂವರೂ ಇಡೀ ದಿನ ಅಟ್ಟ ಬಿಟ್ಟಿಳಿಯದೆ, ಉಸಿರಾಡಲೂ ಹೆದರಿ, ಇಡೀ ರಾತ್ರಿಯಾದರೂ ಯಾರೂ ಮನೆಯ ಬಳಿ ಬರದಿದ್ದಾಗ, ನಾಳೆ ಬಂದು ಬಿಡು ತ್ತಾರೆ ಎಂದು ಮತ್ತೆ ಅಟ್ಟದ ರಹಸ್ಯವಾಸ! ಕಾಯಿಸಿ ಬರೆ ಎಳೆವ ಕಲ್ಪನೆ! ಅಬ್ಬಬ್ಬಾ!

ದೇವರೇ ಇದೊಂದು ಸಾರಿ ಪಾರು ಮಾಡು. ನಾಳೆಯಿಂದ ಯಾರ ತೋಟಕ್ಕೂ ಹೋಗಲ್ಲ. ಬೇಕಾದ್ರೆ ಆಣೆ ಹಾಕ್ತೀನಿ ಎಂದು ಒಳಗೊಳಗೇ ಆಣೆ ಪ್ರಮಾಣಗಳು! ಆದರೆ ಒಂದು ದಿನವೂ ಯಾರೂ ಬರಲಿಲ್ಲ, ಬಂದು ಚಾಡಿ ಹೇಳಿ ಹೊಡೆಸಲಿಲ್ಲ! ನಮ್ಮ ಬಾಲ್ಯ ಮುಗ್ಧವಾಗಿ ಕಳೆದಿತ್ತು. ಪ್ರಕೃತಿಯ ಸವಿ ನಮ್ಮ ನಾಲಿಗೆಯನ್ನು ತಣಿಸಿತ್ತು. ಏನೆಂದರೂ. ವಯಸ್ಸು ಬೆಳೆದು, ತಿಳಿವಳಿಕೆ ಬರುತ್ತಿದ್ದಂತೆ ಇವನ್ನೆಲ್ಲ ನೆನೆದರೆ ನಾಚಿಕೆ. ಇವೆಲ್ಲಾ ತಪ್ಪು ನನ್ನಿಂದ ಜರುಗಿವೆ ಎಂಬ ಪಾಪಪ್ರಜ್ಞೆ ಕಾಡಿದರೂ, ಅಯ್ಯೋ! ಇದೆಲ್ಲ ವಯೋಸಹಜವಾದ ಆಸೆಗಳು, ಬಾಲ್ಯದ ತುಂಟಾಟಗಳು ಎಂದುಕೊಳ್ಳುತ್ತಲೇ.. ಈ ನೆನಪುಗಳೆಲ್ಲ ಅದೆಷ್ಟು ಸವಿಯಾಗಿವೆ. ಇಡೀ ಜೀವನ ಹೀಗೇ ಬಾಲ್ಯದ ಸುಖ ಸವಿಯುತ್ತಾ ಕಳೆಯುವಂತಿದ್ದರೆ ಎಷ್ಟು ಸುಖವಾಗಿರುತ್ತಿತ್ತು ಎನಿಸದಿರದು.

ಆದರೆ ನಮ್ಮ ದುರಾದೃಷ್ಟ ನೋಡಿ, ಕೆಲವೇ ವರ್ಷಗಳಲ್ಲಿ ನಮಗೆ ಬುದ್ಧಿಿ ಬಂದು ಬಿಡುತ್ತದೆ. ಅದೇ ತಲೆನೋವು! ಅದೇ ಪೀಕಲಾಟ!