Thursday, 12th December 2024

ಮಂಗಳನತ್ತ ಚೀನಾ ನೌಕೆ

ಅಜಯ್ ಅಂಚೆಪಾಳ್ಯ

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂದಿರುವ ಚೀನಾ ದೇಶವು ಬಾಹ್ಯಕಾಶ ಸಾಹಸಗಳಲ್ಲೂ ತನ್ನ ಅಭಿಯಾನವನ್ನು
ಕೈಗೊಂಡಿದೆ.

ಮಂಗಳ ಗ್ರಹದತ್ತ ಟೈನ್‌ವೆನ್-1 ಎಂಬ ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಟ್ಟಿರುವ ಚೀನಾವು, ಮಂಗಳನ ಮೊದಲ ಛಾಯಾ ಚಿತ್ರಗಳನ್ನು ಸಂಗ್ರಹಿಸಿದೆ. ಈಗಾಗಲೇ ನಾಸಾದ ರೋವರ್ ಮಂಗಳನ ಮೇಲ್ಮೈನ ಚಿತ್ರಗಳನ್ನು ಕಳಿಸಿದೆ. ನಮ್ಮ ದೇಶದ ಉಪಗ್ರಹವು ಮಂಗಳನ ಮೇಲ್ಮೈಯನ್ನು ಪ್ರವೇಶಿಸುವ ಮೂಲಕ, ಮಂಗಳ ತಲುಪಿದ ಏಷ್ಯಾದ ಮೊದಲ ದೇಶ ಎನಿಸಿದೆ.

ರಷ್ಯಾ ಮತ್ತು ಯುರೋಪಿನ ಬಾಹ್ಯಾಕಾಶ ನೌಕೆಗಳು ಸಹ ಈ ಮುಂಚೆ ಮಂಗಳ ಗ್ರಹವನ್ನು ತಲುಪಿವೆ. ಈಗ ಮಂಗಳನತ್ತ ಸಾಗಿರುವ ಚೀನಾದ ಗಗನ ನೌಕೆಯು ಅಲ್ಲಿನ ಛಾಯಾಚಿತ್ರಗಳನ್ನು ಕಳುಹಿಸಿರುವುದು ಚೀನಾ ಈ ಕ್ಷೇತ್ರದಲ್ಲಿ ಇಟ್ಟಿರುವ ಹೆಜ್ಜೆ ಗಳನ್ನು ದಾಖಲಿಸಿದೆ. ಈ ಬಾಹ್ಯಾಕಾಶ ನೌಕೆಯು ಫೆಬ್ರವರಿ 10ರಂದು ಮಂಗಳನ ಕಕ್ಷೆ ಸೇರುವ ನಿರೀಕ್ಷೆ ಇದೆ. ಇಷ್ಟೇ ಅಲ್ಲ, ಮೇ ತಿಂಗಳಿನಲ್ಲಿ ಚೀನಾದ ರೋವರ್ ಮಂಗಳನ ಮೇಲೆ ಕಾಲೂರಿ, ಅಲ್ಲಿ ಸಾಕಷ್ಟು ಓಡಾಡಿ ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ. ಹಲವು ದೇಶಗಳಿಗೆ ಮಂಗಳನ ಆಕರ್ಷಣೆ ಸದಾ ಇದ್ದದ್ದೇ.

ಭಾರತವೂ ಸೇರಿದಂತೆ ಇದುವರೆಗೆ ಕೇವಲ ನಾಲ್ಕು ದೇಶಗಳು ಮಂಗಳನತ್ತ ಬಾಹ್ಯಾಕಾಶ ನೌಕೆ ಕಳಿಸಿದ್ದು, ಬಾಹ್ಯಾಕಾಶ
ನೌಕೆಯ ಮೂಲಕ ಮಂಗಳನನ್ನು ಪರಿಶೀಲಿಸುತ್ತಿರುವ ಐದನೆಯ ದೇಶವಾಗಿ ಚೀನಾ ಹೊರಹೊಮ್ಮಿದೆ. ಮಂಗಳನತ್ತ ತನ್ನ ಗಗನ ನೌಕೆಯನ್ನು ಕಳಿಸಲು ಚೀನಾವು 2011ರಿಂದಲೇ ಪ್ರಯತ್ನಿಸುತ್ತಿತ್ತು. ಆಗ ರಷ್ಯಾದ ಸಹಾಯ ಪಡೆದಿದ್ದರೂ, ಅದರ ಪ್ರಯತ್ನ ವಿಫಲವಾಗಿತ್ತು.

ಮಂಗಳನಲ್ಲಿ ಈ ಬಾರಿ ಚೀನಾದ ರೋವರ್ ಚಲಿಸುವಲ್ಲಿ ಯಶಸ್ವಿಯಾದರೆ ಇದು ಚೀನಾದ ಒಂದು ಹೊಸ ಸಾಧನೆಯಾಗುವು ದರ ಜತೆಯಲ್ಲೇ ಇನ್ನಷ್ಟು ಬಾಹ್ಯಾಕಾಶ ಸಾಹಸಗಳಿಗೆ ಮುನ್ನುಡಿ ಬರೆಯಲಿದೆ. 2022ರ ಸಮಯದಲ್ಲಿ ಹೊಸ ಬಾಹ್ಯಾಕಾಶ ನಿಲ್ದಾಣವನ್ನು ಚೀನಾ ಸ್ಥಾಪಿಸುವ ನಿರೀಕ್ಷೆಯಲ್ಲಿದ್ದು, ಭೂಮಂಡಲದಾಚೆಗಿನ ಹೊಸ ಸಂಶೋಧನೆಗೆ ಇಂಬು ನೀಡಲಿದೆ.