Sunday, 24th November 2024

ಆ 21 ಗಂಟೆ ಚಾಲೆಂಜ್ ಆಗಿತ್ತು

ಡಾಲಿ ಧನಂಜಯ ಮತ್ತೆ ಎಲ್ಲರನ್ನೂ ರಂಜಿಸಲು ಬಂದಿದ್ದಾರೆ. ರಗಡ್ ಲುಕ್‌ನಲ್ಲಿ ಮಿಂಚಿ, ಸೆಂಟಿಮೆಂಟ್ ಮೂಲಕವೂ ಗಮನಸೆಳೆದಿದ್ದ ಡಾಲಿ, ಲವ್ವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದರು. ಈಗ ಡಾಲಿ ಮತ್ತೊಂದು ವಿಭಿನ್ನ ಲುಕ್‌ನಲ್ಲಿ ತೆರೆಗೆ ಬರುತ್ತಿದ್ದಾರೆ.

ಅದು ಇಪ್ಪತ್ತೊಂದು ಗಂಟೆಯಲ್ಲಿ ನಡೆಯುವ ರೋಚಕ ಕಥೆಯನ್ನು ಹೇಳಲು ಬಂದಿದ್ದಾರೆ. ಹೌದು, ಧನಂಜಯ ೨೧ ಅವರ್ಸ್ ಚಿತ್ರದ ಮೂಲಕ ಮತ್ತೆ ತೆರೆಯಲ್ಲಿ ಮಿಂಚುತ್ತಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಡಾಲಿ ವಿಭಿನ್ನ ಗೆಟಪ್‌ನಲ್ಲಿ ಮನಸೆಳೆದಿದ್ದಾರೆ. ತಮ್ಮ ಪಾತ್ರದ ಕುರಿತಂತೆ ಡಾಲಿ ಧನಂಜಯ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿ : ಏನದು ಆ ಇಪ್ಪತ್ತೊಂದು ಗಂಟೆ ?
ಡಾಲಿ ಧನಂಜಯ : ಇದೊಂದು ರೋಚಕ ಕಥನ. ಕೇರಳದಿಂದ ಬರುವ ಮಲಯಾಳಿ ಹುಡುಗಿಯೊಬ್ಬಳು ಇದ್ದಕ್ಕಿಂದಂತೆ ಕಾಣೆಯಾಗುತ್ತಾಳೆ. ಆಕೆ ಯಾರು, ಆಕೆಯನ್ನು ಕಿಡ್ನಾಪ್ ಮಾಡಿದ್ದು ಯಾತಕ್ಕಾಗಿ, ಎಂಬ ಕುತೂಹಲ ಚಿತ್ರದುದಕ್ಕೂ ಸಾಗುತ್ತದೆ. ಆ ಅಪಹರಣ ಪ್ರಕರಣದ ತನಿಖೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜೈಶಂಕರ್.

ವಿ.ಸಿ : ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ ?
ಡಾಲಿ : ಈ ಚಿತ್ರದಲ್ಲಿ ನಾನು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಕಥೆಯಲ್ಲಿ ನೈಜತೆಯ ಸ್ಪರ್ಶವಿದೆ. ಹಾಗಾಗಿ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಚಿತ್ರದಲ್ಲಿ ನಾನು ನಿರ್ವಹಿಸಿರುವ ಪಾತ್ರ ಚಾಲೆಂಜಿಂಗ್ ಆಗಿದೆ. ಪ್ರತಿಯೊಬ್ಬ ಕಲಾವಿದನಿಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು. ಚಾಲೆಂಜಿಂಗ್ ಪಾತ್ರವನ್ನು ನಿರ್ವಹಿಸಬೇಕು ಎಂಬ ಆಸೆಯಿರುತ್ತದೆ. ಅಂತಹ ಪಾತ್ರ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ.

ವಿ.ಸಿ : ಕಥೆ ಸಿದ್ಧವಾಗಿದ್ದು ಯಾವಾಗ ?
ಡಾಲಿ : ಲಾಕ್ ಡೌನ್‌ನಲ್ಲಿ ಸಿದ್ಧವಾದ ಕಥೆಯಿದು. ನಿರ್ದೇಶಕರು ಬಂದು ಕಥೆ ಹೇಳಿದರು. ಕಥೆ ಕೇಳಿ ನನಗೆ ತುಂಬಾ ಇಷ್ಟವಾಯಿತು. ಇದೊಂದು ಎಕ್ಸ್
ಪೆರಿಮೆಂಟಲ್ ಸಿನಿಮಾ, ಹಾಗಾಗಿಯೇ ಈ ಚಿತ್ರದಲ್ಲಿ ನಟಿಸಬೇಕು ಎನಿಸಿತು. ಥ್ರಿಲ್ಲರ್ ಸಿನಿಮಾ ಎಂದಾಕ್ಷಣ, ಘಟನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.
ಆದರೆ ಇಲ್ಲಿ ಪ-ರ್‌ಮೆನ್ಸ್‌ಗೂ ಹೆಚ್ಚು ಆದ್ಯತೆ ಇದೆ. ಇಡೀ ಚಿತ್ರ ಇನ್ ವೆಸ್ಟಿಂಗೇಷನ್ ಹಾಗೂ ಥ್ರಿಲ್ಲರ್‌ನಲ್ಲಿ ಸಾಗುತ್ತದೆ.

ವಿ.ಸಿ : ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ?
ಡಾಲಿ : ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಇಂಪ್ಯಾಕ್ಟ್ ಮಾಡುವ ಪಾತ್ರಗಳು ಬಂದರೆ ನಟಿಸುತ್ತೇನೆ. ಪರಭಾಷೆಯಲ್ಲಿಯೂ ಅವಕಾಶಗಳು ಬರುತ್ತಿವೆ. ಆದರೆ ಕಥೆ ಮತ್ತು ಪಾತ್ರಗಳು ಮೆಚ್ಚುಗೆಯಾದರೆ ನಟಿಸುತ್ತೇನೆ. ಸದ್ಯ ಹೆಡ್‌ಬುಷ್ ಚಿತ್ರೀಕರಣ ಮುಗಿಸಿದ್ದೇನೆ. ಮುಂದೆ ಪುಷ್ಪ ೨ ಚಿತ್ರತಂಡ ಸೇರಲಿದ್ದೇನೆ.

ವಿ.ಸಿ : ನಟನೆಯ ಜತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದೀರ, ಮುಂದೆ ನಿರ್ದೇಶನದ ಬಯಕೆ ಇದೆಯೇ?

ಡಾಲಿ : ಒಳ್ಳೆಯ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎಂಬ ಆಸೆ ಖಂಡಿತಾ ಇದೆ. ಆದರೆ ಸದ್ಯಕ್ಕೆ ನಿರ್ದೇಶನ ಮಡು ಪ್ಲಾನ್ ಇಲ್ಲ. ನಿರ್ದೇಶನದ ಬಗ್ಗೆ ಇನ್ನೂ ಸಾಕಷ್ಟು ಕಲಿಯಬೇಕು. ಮುಂದಿನ ದಿನಗಳಲ್ಲಿ ನಿರ್ದೇಶನದ ಕನಸು ನನಸಾಗಬಹುದು.

***

ಕನ್ನಡದಲ್ಲಿಯೂ ಒಳ್ಳೆಯ ಸಿನಿಮಾಗಳು ಬರುತ್ತವೆ. ಇದು ನನಗೆ ಖುಷಿ ತಂದಿದೆ. ಪ್ರಾಮಾಣಿಕತೆಗೆ ಇಲ್ಲಿ ಖಂಡಿತ ಬೆಲೆ ಇದೆ. ಒಬ್ಬ ಕಲಾವಿದನಿಗೆ ನಟನೆಯ ಬಗ್ಗೆ ಹಸಿವಿರುತ್ತದೆ. ಅಂತೆಯೇ ನನಗೆ ಬೇರೆ ಬೇರೆ ಜಾನರ್‌ನಲ್ಲಿ ಮತ್ತು ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆಯಿದೆ. ಅಂತಹ ಪಾತ್ರಗಳಲ್ಲಿ ಅಭಿನಯಿಸಲು ಅವಕಾಶಗಳು ಸಿಗುತ್ತಿವೆ.