Thursday, 12th December 2024

ಅದ್ದೂರಿಯಾಗಿ ಬರಲಿದೆ 83

Biopic_1983

ತೆರೆಯಲ್ಲಿ ಕಪಿಲ್‌ದೇವ್‌ ಬಯೋಪಿಕ್‌

1983ರಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಕೊಂಡಿತು. ಇತಿಹಾಸ ಪುಟದಲ್ಲಿ ಹೊಸ ದಾಖಲೆಯನ್ನು ಬರೆಯಿತು. ಭಾರತ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ದೇವ್ ಅವರ ಪ್ರಯತ್ನ ಮಹತ್ವದ್ದಾಗಿತ್ತು. ಆ ಐತಿಹಾಸಿಕ ಕ್ಷಣಗಳನ್ನು ಹೊತ್ತು ೮೩ ಸಿನಿಮಾ ತೆರೆಗೆ ಬರುತ್ತಿದೆ.

ಈ ಚಿತ್ರ ಕಪಿಲ್ ದೇವ್ ಅವರ ಬಯೋಪಿಕ್ ಎಂದರು ತಪ್ಪಿಲ್ಲ. ರಣವೀರ್ ಸಿಂಗ್, ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ೮೩ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಡಿಸೆಂಬರ್ ೨೪ ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಕರ್ನಾಟಕದಲ್ಲಿ ೮೩ ಸಿನಿಮಾವನ್ನು ನಟ ಸುದೀಪ್ ಅರ್ಪಿಸುತ್ತಿದ್ದಾರೆ. ಪೋಸ್ಟರ್ ಹಾಗೂ ಟ್ರೇಲರ್‌ನಲ್ಲಿಯೇ ಕುತೂಹಲ ಕೆರಳಿಸಿದ್ದ ೮೩, ರಣವೀರ್ ಸಿಂಗ್‌ಗೆ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.

ರಣವೀರ್ ಸಾಕಷ್ಟು ಶ್ರಮವಹಿಸಿ ಈ ಚಿತ್ರದಲ್ಲಿ ನಟಿಸಿದ್ದಾರೆ. ತೆರೆಯಲ್ಲಿ ಥೇಟ್ ಕಪಿಲ್ ದೇವ್ ಅವರಂತೆ ಭಾಸ ವಾಗುತ್ತಾರೆ. ಕಪಿಲ್ ಅವರೊಂದಿಗೆ ಸಾಕಷ್ಟು ವಿಚಾರಗಳನ್ನು ಕಲೆಹಾಕಿ ಅದರಂತೆ ತಯಾರಿ ನಡೆಸಿ, ಮೈದಾನ ದಲ್ಲಿ ಬ್ಯಾಟ್ ಬೀಸಿದ್ದಾರೆ, ಬೌಲ್ ಮಾಡಿದ್ದಾರೆ. ಈಗ ತೆರೆಯಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ. ಈ ಸಿನಿಮಾ ದಲ್ಲಿ ನಟಿಸುವಾಗ ನನಗೆ ಎಲ್ಲಿಲ್ಲದ ಸಂತಸ, ಹೊಸ ಹುರುಪು.

ಕ್ರಿಕೆಟ್ ಲೋಕಕದಲ್ಲಿ ಇತಿಹಾಸ ಬರೆದ ಆಟಗಾರನ ಪಾತ್ರದಲ್ಲಿ ನಟಿಸುತ್ತಿರುವುದು ನನ್ನಲ್ಲಿ ರೋಮಾಂಚನ ಉಂಟುಮಾಡಿತ್ತು. ಅದರಲ್ಲೂ ಲಾರ್ಡ್ಸ್ ಮೈದಾನದಲ್ಲಿ ಸಿನಿಮಾವನ್ನು ಚಿತ್ರೀಕರಿಸಿದ ಆ ಕ್ಷಣಗಳನ್ನು ಎಂದಿಗೂ ಮರೆಯಲಾಗದು. ಚಿತ್ರದಲ್ಲಿ ನಟಿಸಲು ಒಪ್ಪಿದ ಮೇಲೆ, ಕಪಿಲ್ ಸರ್ ಅವರ ಬಳಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ಅವರು ನೀಡಿದ ಮಾಹಿತಿ ನನ್ನನ್ನು ಇನ್ನಷ್ಟು ಹುರಿದುಂಬಿಸಿತು.

ಕಪಿಲ್ ಸರ್ ಕೂಡ ಕೆಲವೊಮ್ಮೆ ಚಿತ್ರೀಕರಣದ ಸ್ಥಳಕ್ಕೆ ಬರುತ್ತಿದ್ದರು. ಸಲಹೆಗಳನ್ನು ನೀಡುತ್ತಿದ್ದರು. ಹಾಗಾಗಿ ತೆರೆಯಲ್ಲಿ ಅವರಂತೆಯೇ ಕಾಣಲು, ನಟಿಸಲು ಸಹಕಾರಿಯಾಯಿತು. ಅಂದುಕೊಂಡಂತೆ ಸಿನಿಮಾ ಮೂಡಿಬಂದಿದೆ. ಸಿನ್ಚಿಮಾವನ್ನು ತೆರೆಯಲ್ಲಿ ಸಂಭ್ರ ಮಿಸಲು ಕಾಯುತ್ತಿದ್ದೇನೆ ಎನ್ನುತ್ತಾರೆ ರಣವೀರ್ ಸಿಂಗ್. ವಿಶೇಷ ಎಂದರೆ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಣವೀರ್ ಸಿಂಗ್, ಕನ್ನಡ ದಲ್ಲಿಯೇ ಸಿನಿಮಾದ ಡೈಲಾಗ್ ಹೊಡೆದು ರಂಜಿಸಿದರು.

ಮೂರು ದಶಕದ ಬಳಿಕ ನನಸಾದ ಕನಸು
ಕಿಚ್ಚ ಸುದೀಪ್ ನಟ ಮಾತ್ರವಲ್ಲ, ಕ್ರಿಕೆಟ್ ಆಟಗಾರ, ಅಭಿಮಾನಿಯೂ ಹೌದು. ಹಾಗಾಗಿ ಕಪಿಲ್ ದೇವ್ ಅವರೊಂದಿಗೆ ಪೊಟೋ ತೆಗಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದದು ಆದರೆ ಅದು ಸಾಧ್ಯವಾಗಿರಲೇ ಇಲ್ಲ. ಆ ಕನಸು ಮೂರು ದಶಕಗಳ ಬಳಿಕ ನನಸಾಗಿದೆ. 1987ರ ವರ್ಷವದು, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯವಾಡಲು ಬೆಂಗಳೂರಿಗೆ ಬಂದಿತ್ತು. ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಬೆಂಗಳೂರಿಗೆ ಬಂದು ಹೋಟೆಲ್‌ ನಲ್ಲಿ ಉಳಿದುಕೊಂಡಿದ್ದರು. ನಾನು ಕಪಿಲ್ ಅವರನ್ನು ನೋಡುವ ಆಸೆಯಿಂದ ಹೋಟೆಲ್‌ಗೆ ಹೋಗಿದ್ದೆ. ಕಪಿಲ್ ದೇವ್ ಹಾಗೂ ತಂಡ ಹೋಟೆಲ್ ಒಳಗೆ ಹೋಗಬೇಕಾದರೆ ನಾನು ಅವರ ಹಿಂದೆ ಓಡಿದೆ.

ಕಪಿಲ್ ದೇವ್ ಅವರ ಶರ್ಟ್ ಎಳೆದೆ, ಅವರು ನಿಂತು ನನ್ನನ್ನು ಏನೆಂದು ಕೇಳಿದರು. ನಿಮ್ಮ ಜತೆಗೆ ಒಂದು ಫೋಟೊ ಬೇಕೆಂದು ಹೇಳಿದೆ. ತೆಗೆಯುವವರು ಯಾರು ಎಂದು ಕಪಿಲ್ ಸರ್ ಕೇಳಿದರು. ನನ್ನ ಅಕ್ಕ ತೆಗೆಯುತ್ತಾರೆ ಎಂದೆ. ಆಕೆಯೂ ನನ್ನ ಹಿಂದೆ ಓಡೋಡಿ ಬಂದಿದ್ದಳು. ನನ್ನ ಬಳಿ ಆಗ ಫಿಜಿ ಕ್ಯಾಮೆರಾ ಇತ್ತು. ಅಕ್ಕ ಅದರಲ್ಲಿ ನಮ್ಮ ಫೋಟೊ ತೆಗೆಯಲು ಪ್ರಯತ್ನಿಸಿದರು, ಆದರೆ ಕ್ಯಾಮೆರಾ ಕೆಲಸ ಮಾಡಲಿಲ್ಲ. ಪೋಟೋ ತೆಗೆಯಲು ಸಾಧ್ಯ ವಾಗಲೇ ಇಲ್ಲ. ನನಗೆ ಅಳು ಬಂದಿತು. ಕಪಿಲ್ ದೇವ್ ಅವರು ನನ್ನನ್ನು ಎತ್ತಿಕೊಂಡು ಸಮಾಧಾನ ಮಾಡಿದರು. ಅಂದು ಕಪಿಲ್ ಅವರು ನನ್ನ ಕ್ಯಾಮೆರಾ ಸರಿ ಇಲ್ಲವೆಂದಾಗ ಹೊರಟು ಹೋಗಬಹುದಿತ್ತು. ಆದರೆ ನನ್ನನ್ನು ಅವರು ಸಂತೈಸಿದರು.

ಕ್ರೀಡಾಂಗಣದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಅವರು ಹೀರೋ ಎಂಬುದನ್ನು ತೋರಿಸಿಕೊಟ್ಟರು ಎಂದರು ಸುದೀಪ್ ಆ ದಿನಗಳನ್ನು ನೆನಸಿಕೊಂಡರು. ಇಷ್ಟು ವರ್ಷ ಆದಮೇಲೆ ಇಂದು ಅವರೊಟ್ಟಿಗೆ ಪೋಟೋ ತೆಗೆಸಿಕೊಳ್ಳುವ ಅದೃಷ್ಟ ನನಗೆ ದೊರೆಯಿತು ಎಂದು ಸುದೀಪ್ ಸಂತಸ ಗೊಂಡರು. ಹಾಗಾಗಿಯೇ ೮೩ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರೆಸೆಂಟ್ ಮಾಡಲು ಒಪ್ಪಿಕೊಂಡೆ ಎಂಬುದನ್ನು ಸುದೀಪ್ ವಿವರಿಸಿದರು.