Monday, 25th November 2024

ಅಗ್ನಿವರ್ಷದಲ್ಲಿ ಮಲೆನಾಡಿನ ಬದುಕು ಬವಣೆ

ಈ ಹಿಂದೆ ಸಿದ್ದಗಂಗಾ, ವಾವ್ ಮುರುಗೇಶ್, ಅನುತ್ತರ ಸೇರಿದಂತೆ ಹಲವು ವಿಭಿನ್ನ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ ನಿಡಸಾಲೆ ಪುಟ್ಟ ಸ್ವಾಮಯ್ಯ ಅಗ್ನಿವರ್ಷ ಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.

ಮಲೆನಾಡಿನಲ್ಲಿ ವಾಸಿಸುವ ವೃದ್ದರ ಬದುಕು, ಭಾವನೆಗಳ ಸಂಘರ್ಷ, ಮಾನವೀಯ ಸಂಬಂಧಗಳು ಹಾಗೂ ಒಂಟಿ ಮಹಿಳೆಯರ ಬದುಕು, ಬವಣೆಯ ಕುರಿತ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ವಿಜಯ್ ನಿಡಸಾಲೆ ನಿರ್ದೇಶನ ದಲ್ಲಿ ಚಿತ್ರ ಮೂಡಿಬಂದಿದೆ. ಗಾರ್ಗಿ ಕಾರೇಹೈಕ್ಲು ವಿರಚಿತ ಕಾದಂಬರಿ ಆಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಅವರೇ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.

ಚಿತ್ರದ ಮುಖ್ಯ ಪಾತ್ರದಲ್ಲಿ ಹಿರಿಯ ನಟ ಶಿವರಾಮ್ ಅವರು ನಟಿಸಬೇಕಿತ್ತು. ಚಿತ್ರದಲ್ಲಿ ಅಭಿನಯಿಸಲು ಅವರು ಒಪ್ಪಿದ್ದರು. ಆದರೆ ಅಷ್ಟೊತ್ತಿಗೆ ಶಿವರಾಮಣ್ಣ ಎಲ್ಲರನ್ನೂ ಅಗಲಿ ಬಾರದ ಲೋಕಕ್ಕೆ ಪಯಣಿಸಿದರು. ಹಾಗಾಗಿ ಅವರ ಮಾಡಬೇಕಿದ್ದ ಪಾತ್ರವನ್ನು ರಮೇಶ್ ಭಟ್ ನಿಭಾಯಿಸಿದರು.

ಶಿವಮೊಗ್ಗದ ಹೆಗ್ಗೋಡಿನ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ಮಾಪಕ ಪುಟ್ಟಸ್ವಾಮ ಯ್ಯ ಹೇಳಿದರು. ಅಗ್ನಿವರ್ಷ ಭಾವನೆಗಳ ಸಂಘರ್ಷ ಎನ್ನಬಹುದು. ನಮ್ಮ ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಹಿಡಿಸುತ್ತದೆ ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದರು. ಪ್ರವೀಣ್ ಗೋಡ್ಕಿಂಡಿ ಸಂಗೀತ, ಶಿವಕುಮಾರ್ ಅಂಬ್ಲಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

***ಅ

ಅಗ್ನಿವರ್ಷ ಮಲೆನಾಡಿನ ಬದುಕು ಬವಣೆಯನ್ನು ತೆರೆಯಲ್ಲಿ ಬಿಂಬಿಸುತ್ತದೆ. ಮಲೆನಾಡಿನ ಪ್ರಕೃತಿ ಸೊಬಗಿನಲ್ಲಿ ಬದುಕು ಕಟ್ಟಿಕೊಂಡಿರುವ ಜನತೆ
ಮಳೆಗಾಲದಲ್ಲಿ ಪಡುವ ಸಂಕಷ್ಟದ ಬಗ್ಗೆ ಚಿತ್ರದಲ್ಲಿ ಮನಮುಟ್ಟುವಂತೆ ಹೇಳಲಾಗಿದೆ. ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವೆ ಸಿಕ್ಕಿದೆ.

-ರಮೇಶ್ ಭಟ್ ಹಿರಿಯ ನಟ