ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ಬನಾರಸ್ ಬಿಡುಗಡೆಗೆ ಸಿದ್ಧವಾಗಿದೆ. ನವೆಂಬರ್ ೪ ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಮಾಯಗಂಗೆ.. ಮಧುರಗಾನ ಸಿನಿಪ್ರಿಯರನ್ನು ಸೆಳೆದಿದೆ.
ಸಾಮಾನ್ಯವಾಗಿ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ಚಿತ್ರ ಸಹ ದೊಡ್ಡ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ಬನಾರಸ್ ವಿಚಾರದಲ್ಲಿ ಅದು ನಿಜವಾಗುವ ಲಕ್ಷಣಗಳು ದಟ್ಟವಾಗಿವೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿ ರುವ ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.
ಅದ್ಧೂರಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಇದರೊಳಗಿನ ಕಥೆ ಎಷ್ಟು ಕಾಡಲಿದೆಯೋ, ಚಿತ್ರ ತನ್ನ ಅದ್ಧೂರಿತನದಿಂದ ಸಹ ಗಮನಸೆಳೆಯಲಿದೆ.
ಒಟ್ಟಾರೆಯಾಗಿ ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ. ದೊಡ್ಡ ತಾರಾಗಣ, ನುರಿತ ತಾಂತ್ರಿಕ ವರ್ಗದವರಿಂದ ತುಂಬಿರುವ ಬನಾರಸ್, ಆರಂಭದಿಂದ ಇಲ್ಲಿಯವರೆಗೂ ಕುತೂಹಲ ಕಾಯ್ದಿಟ್ಟುಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ, ಬನಾರಸ್ ಮೂಲಕ ಝೈದ್ ಖಾನ್ ಎಂಬ ಅಪ್ಪಟ ಕನ್ನಡಿಗನ ಆಗಮನವಾಗುತ್ತಿದೆ. ಝೈದ್ ಈ ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ.
ಚಂದನವನದಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಮಾಯಗಂಗೆ ಹಾಡಿನ ಮೂಲಕ ಅದು ಮತ್ತಷ್ಟು ಗಟ್ಟಿಗೊಂಡಿದೆ. ಒಟ್ಟಾರೆ , ಬನಾರಸ್ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದ್ದು, ವರ್ಷದ ಬಹುದೊಡ್ಡ ಹಿಟ್ ಚಿತ್ರವಾಗಿ ದಾಖಲಾಗುವ ನಿರೀಕ್ಷೆ ಮೂಡಿಸಿದೆ.