Friday, 22nd November 2024

ಹುಲಿ ಸಂರಕ್ಷಣೆ ಮಾಡುವಂತೆ ಚಾಲೆಂಜಿಂಗ್ ಸ್ಟಾರ್‌ ಸಲಹೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ. ಹಾಗಾಗಿಯೇ ಅವರ ಫಾರ್ಮ್ ಹೌಸ್‌ನಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಜತೆಗೆ ಅರಣ್ಯ ಇಲಾಖೆಯ ರಾಯಬಾರಿಯೂ ಆಗಿದ್ದಾರೆ. ವಿಶ್ವ ಹುಲಿ ಸಂರಕ್ಷಣೆಯ ದಿನದ ಪ್ರಯುಕ್ತ ದರ್ಶನ್ ಜನತೆಯಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಅರಣ್ಯಗಳಲ್ಲಿ ಒಂದು ಹುಲಿಗೆ 15 ಅಥವಾ 16 ಚದರ ಕಿ.ಮೀ ಜಾಗ ಬೇಕಾಗಿರುತ್ತದೆ.

ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಂದು ಹುಲಿಗೆ ಕೇವಲ 5 ರಿಂದ 6 ಚದರ ಕಿ.ಮೀಗಳಷ್ಟೆ ಜಾಗ ಲಭ್ಯವಿದೆ. ಇದರಿಂದ ಹುಲಿಗಳು ಪರಸ್ಪರ ಹತ್ತಿರದಲ್ಲಿಯೇ ಜೀವಿಸುತ್ತಿವೆ. ಹಾಗಾಗಿ ಅವು ಪರಸ್ಪರ ಕಾದಾಟದಲ್ಲಿ ತೊಡಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ಯಪಡಿಸಿರುವ ದರ್ಶನ್, ಹುಲಿ ಸಂತತಿ ಬೆಳೆಯಬೇಕೆಂದರೆ ನಾಡಿನ ಜನ ಕಾಡಿಗೆ ಹೋಗುವುದನ್ನು ನಿಲ್ಲಿಸಬೇಕು.

ಕಾಡನ್ನು ಆಕ್ರಮಿಸಿಕೊಳ್ಳುವುದನ್ನು ನಿಲ್ಲಿಸಿದರಷ್ಟೆ ಹುಲಿಗಳು ಹಾಗೂ ಇತರೆ ವನ್ಯ ಜೀವಿಗಳು ಬದುಕಬಲ್ಲವು. ಮನುಷ್ಯ ಕಾಡಿಗೆ ಹೋದರೆ ವನ್ಯ ಜೀವಿಗಳು ನಾಡಿಗೆ ಬಂದು ಬಿಡುತ್ತವೆ ಎಂದಿದ್ದಾರೆ. ಬಿಡುವಿನ ಸಮಯದಲ್ಲಿ ಅರಣ್ಯಗಳಿಗೆ ಸಫಾರಿ ತೆರಳುವ ದರ್ಶನ್, ವನ್ಯ ಜೀವಿಗಳನ್ನು ಕಣ್ತುಂಬಿಕೊಂಡು ಸಂತಸ ಪಡುತ್ತಾರೆ. ಪ್ರಾಣಿಗಳ ಪೋಟೋಗಳನ್ನು ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.