Sunday, 15th December 2024

ಮನಗೆದ್ದ ಚಾಂಪಿಯನ್‌ ಹಾಡುಗಳು

ಶಿವಾನಂದ ಎಸ್ ನೀಲಣ್ಣನವರ ನಿರ್ಮಾಣದ, ಶಾಹುರಾಜ್ ಶಿಂಧೆ ನಿರ್ದೇಶನದಲ್ಲಿ ಸಿದ್ಧವಾಗಿರುವ ಚಾಂಪಿಯನ್ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರ ಸೇನಾನಿಗಳಾದ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಪಿ.ಎಸ್. ಗಣಪತಿ ಚಿತ್ರದ ಹಾಡು ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಸಚಿನ್ ಧನಪಾಲ್ ನಾಯಕನಾಗಿ ನಟಿಸಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಕೇಳಲು ಮಧುರವಾಗಿವೆ.

ಕ್ರೀಡಾ ಉತ್ಸಾಹಿ ಮಲೆನಾಡಿನ ಹುಡುಗನೊಬ್ಬ ಕಷ್ಟಪಟ್ಟು ನ್ಯಾಷನಲ್ ಚಾಂಪಿಯನ್ ಆಗುವುದೇ ಚಿತ್ರದ ಕಥಾಹಂದರ. ಕರೋನಾ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಯಿತು. ಮಾತಿನ ಭಾಗದ ಚಿತ್ರೀಕರಣ ಮುಗಿಯಿತು. ಐದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿತ್ತು. ಆಗ ಕರೋನಾ ಕಾಡಿತು. ಇದೇ ಸಮಯದಲ್ಲಿ ಅನಿರೀಕ್ಷಿತವೆಂಬಂತೆ ನಮ್ಮ ನಿರ್ದೇಶಕರಾದ ಶಾಹುರಾಜ್ ಶಿಂಧೆ ಸಹ ದೈವಾಧೀನ ರಾದರು. ಅವರ ನಿಧನದ ನೋವು ಇನ್ನೂ ಮರೆಯಲಾಗುತ್ತಿಲ್ಲ. ನಂತರ ನೃತ್ಯ ನಿರ್ದೇಶಕರ ಸಹಾಯ ದಿಂದ ಹಾಡುಗಳ ಚಿತ್ರೀಕರಣ ಮುಗಿಸಿದ್ದೆವು. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ ಎಂದರು ನಿರ್ಮಾಪಕ ಶಿವಾನಂದ ಎಸ್ ನೀಲಣ್ಣನವರ.

ನಾನು ಬೆಳಗಾವಿಯವನು. ನನ್ನ ತಂದೆ ಸಹ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗಾಗಿ ಇಂದು ಈ ಸಮಾರಂಭಕ್ಕೆ ಆರ್ಮಿ ಅಧಿಕಾರಿಗಳು ಬಂದಿರುವುದು ನನಗೆ ಹೆಮ್ಮೆ ಎಂದರು ನಟ ಸಚಿನ್ ಧನಪಾಲ್. ದೇವರಾಜ್, ಸುಮನ್, ಪ್ರದೀಪ್ ರಾವತ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಆದಿ ಲೋಕೇಶ್, ಅರುಣಾ ಬಾಲರಾಜ್, ಗಿರಿ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾಜಿ ನೀಲಿ ತಾರೆ ಸನ್ನಿಲಿಯೋನ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸರವಣನ್ ಛಾಯಾಗ್ರಾಹಕ, ರಘು ನಿಡುವಳ್ಳಿ ಸಂಭಾ ಷಣೆ ಚಿತ್ರಕ್ಕಿದೆ.