Sunday, 24th November 2024

ಕೌತುಕದ ಕಣಜ ಚೇಸ್‌

ಕರಾವಳಿ ಭಾಗದ ಕಲಾವಿದರೇ ಸೇರಿ ನಿರ್ಮಿಸಿ ನಿರ್ದೆಶಿಸಿರುವ ಚೇಸ್ ತೆರೆಗೆ ಬಂದಿದೆ. ರಿಲೀಸ್ ಗೂ ಮೊದಲೇ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕ್ರೈಂ ಥ್ರಿಲ್ಲರ್ ಕಥನದ ಚೇಸ್ ಟ್ರೇಲರ್ ನಲ್ಲಿಯೇ ಗಮನ ಸೆಳೆದಿದೆ.

ಚೇಸ್ ಶೀರ್ಷಿಕೆ ಕೇಳಿದಾಕ್ಷಣ ಯಾರು, ಯಾರನ್ನು ಹಿಂಬಾಲಿಸಬಹುದು ಎಂಬ ಪ್ರಶ್ನೆ ಕಾಡುತ್ತದೆ. ಅದೇ ಚಿತ್ರದ ಸಸ್ಪೆನ್ಸ್ . ಅದಕ್ಕೆ ಮತ್ತಷ್ಟು ಥ್ರಿಲ್ಲರ್ ಅಂಶಗಳನ್ನು ಬೆರೆಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ವಿಲೋಕ್ ಶೆಟ್ಟಿ.

ಕೊಲೆಯ ಜಾಡು: ಚೇಸ್ ಮರ್ಡರ್ ಮಿಸ್ಟರಿಯ ಕಥೆಯನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಕೊಲೆ ನಡೆದಿರುತ್ತದೆ. ಆ ಕೊಲೆಯ ಜಾಡು ಹಿಡಿದಾಗ ಹಲವು ಇಂಟರೆಸ್ಟಿಂಗ್ ವಿಚಾರಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ಈ ಕೊಲೆ ಮಾಡಿದ್ದು ಯಾರು, ಯಾಕಾಗಿ. ಕೊಲೆಗೆ ಕಾರಣ ಯಾರು ಎಂಬ ಅಂಶಗಳು ಚಿತ್ರದುದ್ದಕ್ಕೂ ಕಾಡುತ್ತವೆ. ಇದರ ಜತೆಗೆ ಕೊಲೆಯ ನಡೆಸುವ ತನಿಖಾಧಿಕಾರಿಯನ್ನು
ಹಿಂಬಾಲಿಸುತ್ತಿರುತ್ತಾನೆ. ಆತ ಯಾರು. ಆತನಿಗೂ ನಡೆದ ಕೊಲೆಗೂ ಏನು ಸಂಬಂಧ ಎಂಬ ಕುತೂಹಲ ಚಿತ್ರದುದಕ್ಕೂ ಸಾಗು ತ್ತದೆ. ಇದೆಲ್ಲದಕ್ಕೂ ಚಿತ್ರ ನೋಡಿದ ಮೇಲೆಯೇ ಉತ್ತರ ಸಿಗಲಿದೆ.

ಡಿಟೆಕ್ಟಿವ್ ರಾಧಿಕಾ: ರಾಧಿಕಾ ಚೇತನ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಗಮನಿಸಿದರೆ, ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿದ್ದಾರಾ ಎಂದು ಅನ್ನಿಸುತ್ತದೆ. ಆದರೆ ರಾಧಿಕಾ ಪಾತ್ರವನ್ನು ಚಿತ್ರತಂಡ ಎಲ್ಲಿಯೂ ಬಿಟ್ಟು ಕೊಡದೆ ಕುತೂಹಲ ಕಾಯ್ದುಕೊಂಡಿದೆ. ಅವರ ಯಾವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿಯಲು ಚಿತ್ರ ನೋಡಲೇಬೇಕು ಎನ್ನುತ್ತಾರೆ ನಿರ್ದೇಶಕ ವಿಲೋಕ್ ಶೆಟ್ಟಿ. ಇನ್ನು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ರಾಧಿಕಾ ಈ ಚಿತ್ರದಲ್ಲಿ ನನಗೆ ಚಾಲೆಂಜಿಂಗ್ ಪಾತ್ರವೇ ಸಿಕ್ಕಿದೆ.

ನಾನು ಬಯಸಿದ ಪಾತ್ರದಲ್ಲಿ ನಟಿಸಿದ್ದೇನೆ ಎನ್ನುತ್ತಾರೆ. ಅರ್ಜುನ್ ನರಸಿಂಹ ರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ. ಹಿಮಾಚಲ ಪ್ರದೇಶ, ಉಡುಪಿ, ಮಂಗಳೂರು ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

***

ರಿಲೀಸ್ ಗೂ ಮೊದಲೇ ನಮ್ಮ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದು ನಮ್ಮ ಚಿತ್ರತಂಡಕ್ಕೆ ಹೊಸ ಹುರುಪು ತಂದಿದೆ.
ಚಿತ್ರದಲ್ಲಿ ಮನರಂಜನೆಯೇ ಮುಖ್ಯ. ಒಂದು ಕಮರರ್ಷಿಯಲ್ ಚಿತ್ರ ಎಂದರೆ ಯಾವೆಲ್ಲಾ ಅಂಶಗಳು ಇರಬೇಕೋ ಅದೆಲ್ಲವೂ ನಮ್ಮ ಚಿತ್ರದಲ್ಲಿವೆ. ಇಲ್ಲಿ ಕಥೆಯೇ ಪ್ರಮುಖವಾಗಿದ್ದು , ಪ್ರತಿ ಪಾತ್ರವೂ ಕೂಡ ಮುಖ್ಯವಾಗಿವೆ. ಒಂದೊಂದು ಪಾತ್ರವೂ ಹೊಸ
ತಿರುವು ನೀಡುತ್ತವೆ. ಮರ್ಡರ್ ಮಿಸ್ಟರಿಯ ಜತೆಗೆ ಕೌಟುಂಬಿಕ ಕಥೆಯೂ ಸಿನಿಮಾದಲ್ಲಿದ್ದು ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡು ಚಿತ್ರ ಇದಾಗಿದೆ.
– ವಿಲೋಕ್ ಶೆಟ್ಟಿ,ನಿರ್ದೇಶಕ