Thursday, 12th December 2024

ಉಪಾಧ್ಯಕ್ಷರಾದ ಚಿಕ್ಕಣ್ಣ

ಹಾಸ್ಯ ನಟ ಚಿಕ್ಕಣ್ಣ ಉಪಾಧ್ಯಕ್ಷರಾಗಿದ್ದಾರೆ. ಹಾಗಂತ ಯಾವುದೋ ಸಂಘ ಸಂಸ್ಥೆಗಲ್ಲ ಬದಲಾಗಿ ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಅಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷ ನಾಗಿ ಪ್ರೇಕ್ಷಕರ ಮನಸೂರೆಗೊಂಡಿದ್ದರು.

ಸಹಜಾಭಿನಯದ ಮೂಲಕವೇ ಪ್ರೇಕ್ಷಕರನ್ನು ನಗಿಸಿದ್ದರು. ಈಗ ಉಪಾಧ್ಯಕ್ಷ ಎಂಬ ಹೆಸರಿನಿಂದಲೇ ಸಿನಿಮಾ ಆರಂಭವಾಗಿದ್ದು, ಚಿಕ್ಕಣ್ಣ ಇದೇ ಮೊದಲ ಬಾರಿಗೆ ನಾಯಕ ರಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ
ನೆರವೇರಿತು. ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಸ್ಮಿತಾ ಉಮಾಪತಿ ಹಾಗೂ ನಾಯಕ ಚಿಕ್ಕಣ್ಣ ಅವರ ತಾಯಿ ಆರಂಭ ಫಲಕ ತೋರಿದರು.

ಸಾಧುಕೋಕಿಲ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಹಲವು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರ ತಂಡಕ್ಕೆ ಶುಭಕೋರಿದರು. ಅನಿಲ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಸಿದ್ಧವಾಗಲಿದ್ದು, ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ
ಶ್ರೀನಿವಾಸ್ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉಪಾಧ್ಯಕ್ಷ, ಅಧ್ಯಕ್ಷ ಚಿತ್ರದ ಮುಂದುವರಿದ ಭಾಗ ಎನ್ನಬಹುದು. ಆ ಚಿತ್ರದಲ್ಲಿ ಎಲ್ಲಿ ಕಥೆ ನಿಂತಿತ್ತೊ, ಅಲ್ಲಿಂದ ಈ ಚಿತ್ರದ ಕಥೆ ಆರಂಭವಾಗುತ್ತದೆ. ಮೊದಲ ಸನ್ನಿವೇಶದಿಂದ ಕ್ಲೈಮ್ಯಾಕ್ಸ್‌ವರೆಗೆ ಸಿನಿಪ್ರಿಯರನ್ನು ನಗಿಸುವ ಸಿನಿಮಾ ಇದು.

ಕೇವಲ ಕಾಮಿಡಿಗೆ ಸೀಮಿತವಾಗದೆ ಭಾವನಾತ್ಮಕ ಸನ್ನಿವೇಶಗಳು ಸಹ ಚಿತ್ರದಲ್ಲಿವೆ. ಚಿಕ್ಕಣ್ಣ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಮಲೈಕಾ ಈ ಚಿತ್ರದ ನಾಯಕಿ ಯಾಗಿ ನಟಿಸುತ್ತಿದ್ದಾರೆ. ಉಪಾಧ್ಯಕ್ಷ ಚಿತ್ರಕ್ಕಾಗಿ ಮೈಸೂರಿನಲ್ಲಿ ಸೆಟ್ ಹಾಕಲಾಗಿದ್ದು, ಅಲ್ಲಿಯೆ ಮೂವತ್ತೆರಡು ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಬಳಿಕ ಬೆಂಗಳೂರು, ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ. ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ.

ಅಧ್ಯಕ್ಷ ಚಿತ್ರದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ಈ ಚಿತ್ರದಲ್ಲಿಯೂ ನಟಿಸ ಲಿದ್ದಾರೆ. ವಿಶೇಷ ಎಂದರೆ ಸಾಧು ಕೋಕಿಲ ಇಲ್ಲಿಯು ಕಾಮಿಡಿ ಕಮಾಲ್ ಮಾಡಲಿದ್ದಾರೆ ಎಂದರು ನಿರ್ದೇಶಕ ಅನಿಲ್ ಕುಮಾರ್. ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನನಗೆ ಇದು ಮೊದಲ ಚಿತ್ರ. ಚೊಚ್ಚಲ ಚಿತ್ರದಲ್ಲಿಯೇ ಒಳ್ಳೆಯ ಕಥೆ ಸಿಕ್ಕಿರುವುದು ಸಂತಸ ತಂದಿದೆ ಎಂದರು ಮಲೈಕಾ. ಧರ್ಮಣ್ಣ ಸೇರಿದಂತೆ ಹಲವು ಹಾಸ್ಯ ಕಲಾವಿದರ ದಂಡು ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿ ದ್ದಾರೆ.

ಬಯಸದೇ ಬಂದ ಭಾಗ್ಯವಿದು
ನನಗೆ ರಾಜಾಹುಲಿ, ಅಧ್ಯಕ್ಷ ಚಿತ್ರಗಳ ನಂತರ ನಾಯಕನಾಗಿ ನಟಿಸಲು ಸಾಕಷ್ಟು ಅವಕಾಶಗಳು ಬಂದವು. ಆದರೆ ನಾನು
ಒಪ್ಪಿರಲಿಲ್ಲ. ಯಾಕೆಂದರೆ ನನಗೆ ಸರಿಹೊಂದುವ ಕಥೆ ಚಿತ್ರದಲ್ಲಿರಲಿಲ್ಲ. ಈ ಚಿತ್ರದ ಕಥೆ ಕೇಳಿ ಸಂತಸದಿಂದಲೇ ನಟಿಸಲು ಒಪ್ಪಿಕೊಂಡೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಬ್ಬ ಹಾಸ್ಯ ಕಲಾವಿದ ನಾಯಕನಾಗಿ ನಟಿಸುತ್ತಾನೆ ಎಂದರೆ, ಆ ಚಿತ್ರವನ್ನು ಚಿಕ್ಕ ಬಜೆಟ್‌ನಲ್ಲಿ ಮುಗಿಸುತ್ತಾರೆ. ಆದರೆ ನಿರ್ಮಾಪಕರು ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಪ್ರೇಕ್ಷಕರು ಖಂಡಿತಾ ನಮ್ಮ ಚಿತ್ರವನ್ನು ಮೆಚುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು ಚಿಕ್ಕಣ್ಣ.