ಕಟ್ಟಿಂಗ್ ಶಾಪ್ ಹೀಗೊಂದು ವಿಭಿನ್ನ ಶಿರ್ಷಿಕೆಯ ಸಿನಿಮಾ ಈ ವಾರ ತೆರೆಗೆ ಬಂದಿದೆ. ಟೈಟಲ್ ಕೇಳಿದಾಕ್ಷಣ ಇದು ಸಲೂನ್‌ನಲ್ಲಿ ನಡೆಯುವ ಕಥೆ ಎಂದುಕೊಳ್ಳಬೇಡಿ.
ಇದು ಸಂಕಲನಕಾರನ ಸಂಕಥನವಾಗಿದೆ. ಎಲ್ಲ ರಿಗೂ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಅಂತೆಯೇ ಹವಲವರು ತಾವು ಬಯಸಿದ ಕ್ಷೇತ್ರದತ್ತ ಮುಖ ಮಾಡುತ್ತಾರೆ. ಚಿತ್ರರಂಗದಲ್ಲಿ ನಾನಾ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಕಾರ್ಯನಿರ್ವಹಿಸುವ ಲೈಟ್ ಬಾಯ್ ಇಂದ ಹಿಡಿದು, ಕ್ಯಾಮೆರಾಮೆನ್, ನಟ- ನಟಿಯರವರೆಗೂ ಎಲ್ಲರೂ ಪರಿಚಿತರೆ ಆಗಿರುತ್ತಾರೆ. ಆದರೆ ಸಂಕಲನಕಾರ ಮಾತ್ರ ಯಾರಿಗೂ ಕಾಣಿಸದೆ ತನ್ನ ಪಾಡಿಗೆ ತಾನು ಯಾರಿಗೂ ತಿಳಿಯದಂತೆ ಕಾರ್ಯನಿರ್ವಹಿಸುತ್ತಾನೆ.
ಆತನಿಗೂ ಆಸೆಗಳಿರುತ್ತವೆ. ಅದಕ್ಕೂ ಮಿಗಿಲಾಗಿ ಕ್ರಿಯಾಶೀಲತೆಯೂ ಇರುತ್ತದೆ. ಹೀಗೆ ಸಂಕಲನಕಾರನ ಯಶೋಗಾಥೆಯನ್ನು ಈ ಚಿತ್ರದಲ್ಲಿ ಹೇಳಲು ಹೊರಟ್ಟಿದ್ದಾರೆ ನಿರ್ದೇಶಕ ಪವನ್ ಭಟ್.
ಯೂನಿವರ್ಸಲ್ ಕಥೆ
ಇದು ಸಂಕಲನಕಾರನ ಕಥೆ ಎಂದಾಕ್ಷಣ ಕೇವಲ ಅವನಿಗೆ ಸಂಬಂಧಿಸಿದ ಸ್ಟೋರಿ ಚಿತ್ರದಲ್ಲಿಲ್ಲ. ಬದಲಾಗಿ ಇಲ್ಲಿ ಎಲ್ಲರಿಗೂ ಅನ್ವಯವಾಗುವ, ಎಲ್ಲರಿಗೂ ಹೊಂದಾಣಿಕೆಯಾಗುವ ಯೂನವರ್ಸಲ್ ಕಥೆ ಚಿತ್ರದಲ್ಲಿ ಅಡಕ ವಾಗಿದೆ. ಕಟ್ಟಿಂಗ್ ಶಾಪ್ ಹೀರೋಯಿಸಂ, ಅನಗತ್ಯ ಬಿಲ್ಡಪ್ ಇತ್ಯಾದಿಗಳಿಲ್ಲದ ಒಂದು ಸುಂದರ ಮನರಂಜನಾತ್ಮಕ ಸಿನಿಮಾವಾಗಿದೆ. ಸಂಕಲನಕಾರನ ಸಂಕಷ್ಟ ಮತ್ತು ತೊಳಲಾಟವನ್ನು ಕಾಮಿಡಿ ಮೂಲಕ ಕಟ್ಟಿಕೊಟ್ಟಿದ್ದಾರೆ ಪವನ್ ಭಟ್. ಯಂಗ್ ಥಿಂಕರ್ಸ್ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರವನ್ನು ಕೆ.ಉಮೇಶ್ ಹಾಗೂ ಗಣೇಶ್. ಕೆ.ಐತಾಳ್ ಜಂಟಿಯಾಗಿ ನಿರ್ಮಿಸಿದ್ದಾರೆ.
ನಟರಾದ ನಿರ್ದೇಶಕರು
ಕಟ್ಟಿಂಗ್ ಶಾಪ್ ಚಿತ್ರದಲ್ಲಿ ಬಹಳ ವಿಶೇಷವೂ ಇದೆ. ಅದು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ನಿರ್ದೇಶಕರು ಈ ಸಿನಿಮಾದಲ್ಲಿ ನಟಿಸಿರುವುದು, ಹಿರಿಯ ನಿರ್ದೇಶಕ ಭಗವಾನ್, ಇವರೊಂದಿಗೆ ನವೀನ್ ಕೃಷ್ಣ, ಓಂ ಪ್ರಕಾಶ್ ರಾವ್, ತರುಣ್ ಸುಧೀರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಡಿದ್ದಾರೆ. ಪವನ್ ಭಟ್ ಸಹೋದರ ಕೆ.ಬಿ.ಪ್ರವೀಣ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ಬಣ್ಣಹಚ್ಚಿದ್ದಾರೆ. ಕಾರ್ತಿಕ್ ಕೊರ್ಡೇಲ, ವತ್ಸಲಾ ಮೋಹನ್, ದೀಪಕ್ ಭಟ್ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಪವನ್ ನಿರ್ದೇಶನದ ಜತೆಗೆ ಸಾಹಿತ್ಯ ಹಾಗೂ ಸಂಭಾಷಣೆ
ರಚಿಸಿದ್ದು, ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
***
ನಮ್ಮ ಸುತ್ತಮುತ್ತ ಕಂಡ, ಕಾಣುತ್ತಿರುವ ಅಂಗಳನ್ನೇ ಆಧರಿಸಿ ಕಥೆ ಹೆಣೆದು, ಅದಕ್ಕೆ ಮನರಂಜನೆಯ ಅಂಶಗಳನ್ನು ಬೆರೆಸಿ ತೆರೆಗೆ ತಂದಿದ್ದೇನೆ. ಇಲ್ಲಿ ಸಂದೇಶಕ್ಕಿಂತ ಮನರಂಜನೆಯೇ ಮುಖ್ಯವಾಗಿದೆ. ನಾವು ಜೀವನದಲ್ಲಿ ಯಶಸ್ಸು ಪಡೆಯಲು ನಾನಾ ಕಸರತ್ತು ಮಾಡುತ್ತೇವೆ. ಜೀವನದಲ್ಲಿ ಸದಾ ಸಂತೋಷವಾಗಿರುವುದೇ ನಿಜವಾದ ಸಕ್ಸಸ್ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.
-ಪವನ್ ಭಟ್ ನಿರ್ದೇಶಕ