Thursday, 12th December 2024

ಚಾಂಪಿಯನ್‌ ಪಟ್ಟ ಗಿಟ್ಟಿಸಿದ ಸಚಿನ್‌ ಧನಪಾಲ್‌

ಪ್ರಶಾಂತ್‌ ಟಿ.ಆರ್‌

ಚಂದನವನದಲ್ಲಿ ಕ್ರೀಡಾ ಸ್ಫೂರ್ತಿ ಸಾರುವ ಚಾಂಪಿಯನ್ ಚಿತ್ರ ತೆರೆಗೆ ಬಂದಿದೆ. ಛಲ ಬಿಡದ ಸಾಧಕನ ಸಾಧನೆಯ ಕಥೆಯನ್ನು ಹೊತ್ತು ಬಂದಿದೆ. ಇದು ಸಿನಿಮಾ ಅನ್ನುವುದಕ್ಕಿಂತ ಸೂರ್ತಿಯ ಕಥೆ ಎಂದೆ ಹೇಳಬಹುದಾಗಿದೆ. ಅಂತಹ ಸ್ಪಿರಿಟ್ ಈ ಚಿತ್ರದಲ್ಲಿದೆ. ಈ ಚಿತ್ರದ ಮೂಲಕ ನವ ನಟ ಸಚಿನ್ ಧನಪಾಲ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಿತ ರಾಗುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಸಚಿನ್, ವಿ.ಸಿನಿಮಾಸ್‌ ನೊಂದಿಗೆ ಮನದಾಳ ಹಂಚಿ ಕೊಂಡಿದ್ದಾರೆ.

ವಿ.ಸಿನಿಮಾಸ್: ಚಾಂಪಿಯನ್ ಸಾಧಕನ ಕಥೆಯೆ ?
ಸಚಿನ್: ಚಾಂಪಿಯನ್ ಕ್ರೀಡಾ ಸಾಧಕನ ಕಥೆಯನ್ನು ಒಳಗೊಂಡಿದೆ. ಹಳ್ಳಿಯಿಂದ ಅಪಾರ ಕನಸು ಹೊತ್ತು ಬಂದ ಅಥ್ಲಿಟ್ ಒಬ್ಬ ಅಂದುಕೊಂಡಿದ್ದನ್ನು ಸಾಧಿಸಲು ಹೇಗೆಲ್ಲ ಶ್ರಮ ಪಡುತ್ತಾನೆ ಎಂಬುದೇ ಚಿತ್ರದ ಕಥೆ. ಅದರ ಜತೆಗೆ ತಂದೆ ಮಗನ ಸೆಂಟಿಮೆಂಟ್ ಇಲ್ಲಿ ಮನಸೂರೆಗೊಳ್ಳುತ್ತದೆ. ನವಿರಾದ ಪ್ರೇಮ ಕಥೆಯೂ ಸಿನಿಮಾದಲ್ಲಿದೆ.

ವಿ.ಸಿ : ಇಂತಹ ಕಥೆಯ ಸಿನಿಮಾದ ಮೂಲಕವೇ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಕಾರಣ ?
ಸಚಿನ: ನಾನು ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದವನು. ನಾನು ಕೂಡ ಸೇನೆಗೆ ಸೇರಬೇಕು ಎಂಬ ಅಪಾರ ಹಂಬಲ ಹೊಂದಿದ್ದೆ. ಅದಕ್ಕಾಗಿ ತರಬೇತಿಯನ್ನು ಪಡೆದಿದ್ದೆ. ಆದರೆ ಕಾರಣಾಂತರಗಳಿಂದ ಸೇನೆಗೆ ಸೇರಲು ಸಾಧ್ಯವಾಗಲಿಲ್ಲ. ಅಲ್ಲಿಂದ ನನಗೆ ಸಿನಿಮಾರಂಗದತ್ತ ಮನಸು ಸೆಳೆಯಿತು. ಅದಕ್ಕೆ ತಕ್ಕಂತೆ ಸಿದ್ಧತೆ ಆರಂಭಿಸಿದೆ. ಆದರೆ ಸಿನಿಮಾಂಗಕ್ಕೆ ಬರುವ ದಾರಿ  ತಿಳಿದಿರ ಲಿಲ್ಲ. ಈ ಸಂದರ್ಭದಲ್ಲಿಯೇ ನನ್ನ ಸ್ನೇಹಿತ ಶಿವಾನಂದ ಎಸ್ ನೀಲಣ್ಣನವರ್, ಮುಂದೆ ನನಗೆ ಹಣ ಸಿಕ್ಕಿದರೆ ನಿನ್ನನ್ನೆ ನಾಯಕನನ್ನಾಗಿಸಿ ಸಿನಿಮಾ ಮಾಡುತ್ತೇನೆ ಎಂದಿದ್ದರು. ಅಂದು ಹೇಳಿದಂತೆ ಇಂದು ನಾನು ನಾಯಕನಾಗಿ ಎಂಟ್ರಿ ಕೊಡು ತ್ತಿದ್ದೇನೆ. ಹನ್ನೆರಡು ವರ್ಷಗಳ ಹಿಂದೆ ಹೇಳಿ ಆ ಮಾತು ಇಂದು ನನಸಾಗಿದೆ.

ವಿ.ಸಿ : ಈ ಸಿನಿಮಾಗಾಗಿ ನಿಮ್ಮ ತಯಾರಿ ಹೇಗಿತ್ತು ?
ಸಚಿನ್: ಗೆಳೆಯ ಶಿವನಂದ ಎಸ್ ನೀಲಣ್ಣನವರ್ ಅಂದು ಹೇಳಿದ ಮೇಲೆ ನನ್ನಲ್ಲಿ ಹೊಸ ಆಸೆ ಚಿಗುರಿತು.ಅದೇ ಸಮಯಕ್ಕೆ ನಿರ್ದೇಶಕ ಶಾಹುರಾಜ್ ಶಿಂಧೆ ಒಳ್ಳೆಯ ಕಥೆ ಹೆಣೆದರು. ಕ್ರೀಡಾ ಕಥೆಯನ್ನು ಕೇಳಿ ನನಗೂ ಸಂತಸವಾಯಿತು. ನನ್ನ ಸ್ನೇಹಿತ ನಿರ್ಮಾಣಕ್ಕೆ ಮುಂದಾದ, ಚಿತ್ರಕ್ಕೆ ಅಗತ್ಯ ಸಿದ್ಧತೆ ಆರಂಭಿಸಿದೆ. ಸ್ವಲ್ಪ ದಪ್ಪಗಿದ್ದೆ. ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳಲು ನಿರ್ಧರಿ ಸಿದೆ. ತೊಂಬತ್ತು ಕೆಜಿ ಇದ್ದವನು ನಲವ ತ್ತೈದು ದಿನಗಳಲ್ಲಿ ಇಪ್ಪತ್ತೆರಡು ಕೆಜಿ ತೂಕ ಇಳಿಸಿಕೊಂಡೆ. ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿದಿನ ರನ್ನಿಂಗ್ ರೇಸ್ ಅಭ್ಯಾಸ ಮಾಡಿದೆ. ಅಂತು ಚಿತ್ರದ ಕಥೆಗೆ ತಕ್ಕಂತೆ ಸಿದ್ಧವಾದೆ.

ವಿ.ಸಿ : ಸನ್ನಿ ಲಿಯೋನ್ ಅವರೊಂದಿಗೆ ಹೆಜ್ಜೆ ಹಾಕಿ ಅನುಭವ ಹೇಗಿತ್ತು ?
ಸಚಿನ್: ನನಗೆ ನೃತ್ಯ ಅಷ್ಟಾಗಿ ತಿಳಿದಿಲ್ಲ. ನಾನು ಇದೇ ಮೊದಲ ಬಾರಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು. ಸನ್ನಿಲಿಯೋನ್ ಜತೆಗೆ ಡ್ಯಾನ್ಸ್ ಮಾಡಬೇಕು ಎಂದಾಗ ಒಮ್ಮೆಲೆ ಆಶ್ಚರ್ಯವಾಯಿತು. ಆದರೂ ಚಿತ್ರದ ಪಾತ್ರಕ್ಕೆ ಜೀವ ತುಂಬಲೇಬೇಕು. ಅದಕ್ಕಾಗಿ ಡ್ಯಾನ್ಸ್ ಅಭ್ಯಾಸ ಮಾಡಿದೆ. ಮುಂಬೈಗೆ ತೆರಳಿ, ಅಲ್ಲಿಯೇ ಸ್ಟುಡಿಯೊದಲ್ಲಿ ಮೂರು ದಿನಗಳ ಕಾಲ ಸನ್ನಿಲಿಯೋನ್ ಜತೆಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದೆ. ನನಗೆ ನನ್ನ ಮೇಲೆ ನಂಬಿಕೆ ಬಂತು. ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ನಿರ್ಮಿಸಿ ಹಾಡಿನ ಚಿತ್ರೀಕರಣ ನಡೆಸಿದೆವು.

ವಿ.ಸಿ: ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ ?
ಸಚಿನ್: ಹಿರಿಯ ನಟ ದೇವರಾಜ್ ನನ್ನೊಂದಿಗೆ ನಟಿಸಿದ್ದಾರೆ. ಅಂತಹ ದೊಡ್ಡ ನಟರ ಜತೆಗೆ ನಟಿಸಿದ್ದು, ನಿಜಕ್ಕೂ ನನ್ನ ಅದೃಷ್ಟ. ನನಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿ ದ್ದಾರೆ. ಪ್ರದೀಪ್ ರಾವತ್, ಸುಮನ್ ಹೀಗೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.

*

ಒಳ್ಳೆಯ ಕಥೆಯನ್ನು ಕಟ್ಟಿಕೊಟ್ಟ ನಮ್ಮ ಚಿತ್ರದ ನಿರ್ದೇಶಕ ಶಾಹು ರಾಜ್ ಶಿಂದೆ ಈ ಹೊತ್ತಿನಲ್ಲಿ ನಮ್ಮೊಂದಿಗಿಲ್ಲ. ಅದು
ನಮಗೆಲ್ಲ ದುಃಖ ತರಿಸಿದೆ.

*

ನನ್ನ ಗೆಳೆಯ ಹನ್ನೆರಡು ವರ್ಷಗಳ ಹಿಂದೆ ಹೇಳಿದ್ದ ಮಾತು ಇಂದು ನನಸಾಗಿದೆ. ನಾನು ನಾಯಕನಾಗಿ ಚಂದನವಕ್ಕೆ ಪರಿಚಿತ ನಾಗುತ್ತಿದ್ದೇನೆ. ನನ್ನ ಚೊಚ್ಚಲ ಚಿತ್ರವನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ.