Thursday, 12th December 2024

ಧರಣಿ ಮಂಡಲ ಮಧ್ಯದೊಳಗೆ – ಹೈಪರ್‌ ಲಿಂಕ್ ಕಥೆ

ಪ್ರಶಾಂತ್‌ ಟಿ.ಆರ್‌.

ಈ ಹಿಂದೆ ಪುಟ್ಟಣ್ಣ ಕಣಗಾಲ್ ಧರಣಿ ಮಂಡಲದೊಳಗೆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಅದೇ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬಂದಿದೆ. ಶೀರ್ಷಿಕೆ ಹಳೆಯ ದಾದರೂ ಕಥೆ ಹೊಸತಾಗಿದೆ.

ಹೈಪರ್ ಲಿಂಕ್ ಕಥೆ ಇಲ್ಲಿ ಅಡಕವಾಗಿದೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ವಾಗಿದೆ. ಧರಣಿ ಮಂಡಲ ಮಧ್ಯ ದೊಳಗೆ ಚಿತ್ರದ ಕುರಿತಂತೆ ನಿರ್ಮಾಪಕ ಓಂಕಾರ್ ವಿ. ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ಧರಣಿ ಮಂಡಲದೊಳಗೆ ಪುಣ್ಯಕೋಟಿ ಕಥೆಯೆ?
ಓಂಕಾರ್ : ಇಲ್ಲಿ ಪುಣ್ಯಕೋಟಿ ಕಥೆ ಅನ್ನುವುದಕ್ಕಿಂತ, ಪ್ರಸ್ತುತ ಕಾಲಘಟ್ಟದ ಕಥೆ ಯನ್ನು ಹೇಳಿದ್ದೇವೆ. ಇದು ಕನ್ನಡದ ಮೊದಲ ಹೈಪರ್ ಲಿಂಕ್ ಸಿನಿಮಾ ಎಂಬ ಖುಷಿ ನನಗಿದೆ. ಕ್ರೈಂ ಡ್ರಾಮಾ ಜಾನರ್‌ನಲ್ಲಿ ಚಿತ್ರ ಮೂಡಿಬಂದಿದೆ. ಪ್ರಸ್ತುತತೆಗೆ ಹೊಂದುವ ಒಳ್ಳೆಯ ಕಂಟೆಂಟ್ ಸಿನಿಮಾದಲ್ಲಿದೆ.

ವಿ.ಸಿ: ಇದು ನೈಜ ಘಟನೆಯಾಧಾರಿತ ಸಿನಿಮಾವೇ ?
ಓಂಕಾರ್ : ಇಲ್ಲಿ ಕಾಲ್ಪನಿಕತೆಗೆ ನೈಜತೆಯೆ ಸ್ಪರ್ಶ ನೀಡಿದ್ದೇವೆ. ಇದೊಂದು ಸೂರ್ತಿದಾಯಕ ಕಥೆ. ಬೆಂಗಳೂರಿನಲ್ಲಿ ಸದ್ಯ ನೋಡುತ್ತಿರುವ, ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ನಾವು ಮಾಡಿದ ಕರ್ಮ ನಮ್ಮನ್ನು ಹೇಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇನ್ನೂ ವಿಶೇಷ ಎಂದರೆ ಒಂದೇ ದಿನದಲ್ಲಿ ನಡೆಯುವ ಘಟನಾವಳಿಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.

ವಿ.ಸಿ : ಇದು ಕ್ರೈಂ, ಥ್ರಿಲ್ಲರ್ ಕಥೆಗೆ ಚಿತ್ರ ಸೀಮಿತವಾಗಿದೆಯೆ ?
ಓಂಕಾರ್ : ಇಲ್ಲಿ ಕ್ರೈಂ, ಥ್ರಿಲ್ಲರ್ ಕಥೆಯ ಜತೆಗೆ ಸೆಂಟಿಮೆಂಟ್ ಕಥೆಯೂ ಅಡಕವಾಗಿದೆ. ಎಲ್ಲರಲ್ಲಿಯೂ ವೈಲೆಂಟ್ ಮನೋ ಭಾವವಿರುತ್ತದೆ. ಜತೆಗೆ ಭಾವನಾತ್ಮಕತೆಯೂ ಬೆರೆತಿರುತ್ತದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಸಹನೆ ಮೀರಿದಾಗ ವ್ಯಕ್ತಿ ಏನೆಲ್ಲಾ ಮಾಡಬುದು. ಅದೇ ಸಹನೆಯನ್ನು ಜೀವನದದಕ್ಕೂ ಉಳಿಸಿಕೊಂಡರೆ ಆಗುವ ಅನಾಹುತವನ್ನು ಹೇಗೆ ತಡೆಯ ಬಹುದು ಎಂಬುದನ್ನು ಇಲ್ಲಿ ಹೇಳಿದ್ದೇವೆ..

ವಿ.ಸಿ : ಇದೇ ರೀತಿಯ ಕಥೆಯನ್ನು ತೆರೆಗೆ ತರಲು ಕಾರಣ ?
ಓಂಕಾರ್ : ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು
ಸೂಕ್ಷ್ಮವಾಗಿ ಗಮನಿಸಿದೆ. ಅದನ್ನು ಯಾಕೆ ಜನರಿಗೆ ತಿಳಿಸಬಾರದು ಎಂಬ ನಿಟ್ಟಿನಲ್ಲಿ ಈ ಕಥೆಯನ್ನು ಹೆಣೆದು ತೆರೆಗೆ ತಂದಿದ್ದೇನೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಕಥೆ. ಚಿತ್ರ ನೋಡುತ್ತಿದ್ದರೆ ನಮ್ಮ ಸುತ್ತಮುತ್ತ ನಡೆದ ಘಟನೆಗಳು ನೆನಪಿಗೆ ಬರುತ್ತವೆ.

ಐಶಾನಿ ಶೆಟ್ಟಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಸಿನಿಮಾಗಳಿಗಿಂತ ವಿಶೇಷವಾದ ಪಾತ್ರ ಇದಾಗಿದೆ. ಐಶಾನಿ ಪ್ರತಿ ಫ್ರೇಮ್ ನಲ್ಲಿಯೂ ಇಷ್ಟವಾಗುತ್ತಾರೆ. ನಟನೆಯಲ್ಲಿಯೇ ಎಲ್ಲರನ್ನೂ ಮನಗೆಲ್ಲುತ್ತಾರೆ.

*

ನವೀನ್ ಶಂಕರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಲ್ಲಿ ಎಷ್ಟೇ ಕೋಪವಿದ್ದರೂ ಅದನ್ನು ತೋರಿಸಿಕೊಳ್ಳದೆ ಹೇಗೆ ಮುಚ್ಚಿಟ್ಟುಕೊಳ್ಳುತ್ತಾನೆ. ಸಹನೆ ಮೀದಿದಾಗ ಆತ ಏನು ಮಾಡುತ್ತಾನೆ ಎಂಬ ಪಾತ್ರ ಇದಾಗಿದೆ.