Sunday, 24th November 2024

ಜೋರಾಗಿದೆ ಡೊಳ್ಳಿನ ಸದ್ದು

ಕರುನಾಡಿನ ಪ್ರಸಿದ್ಧ ಜಾನಪದ ಕಲೆ ಡೊಳ್ಳು ಕುಣಿತದ ಕುರಿತಂತೆ ತಯಾರಾಗಿರುವ ಡೊಳ್ಳು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಡೊಳ್ಳು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ಅಲ್ಲದೆ, ರಾಷ್ಟ್ರೀ ಪ್ರಶಸ್ತಿಗೂ ಭಾಜವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಸಿನಿಮಾವನ್ನು ಕಣ್ತುಂಬಿ ಕೊಂಡಿದ್ದು, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಪವನ್ ಒಡೆಯರ್ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾದ ಶಾಶ್ವತ ಯಾವುದು… ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ರಿಲೀಸ್ ಮಾಡಿ ದ್ದಾರೆ. ಬದುಕಿನ ಅರ್ಥ ತಿಳಿಸುವ ಈ ಹಾಡಿಗೆ ಪವನ್ ಒಡೆಯರು ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಈ ಹಾಡಿಗೆ ಸಂಗೀತ ಪ್ರಿಯರು ತಲೆದೂಗಿದ್ದಾರೆ.

ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ಗ್ರಾಮೀಣ ಕಲೆಯ ಅನಾವರಣವಾಗಿದೆ. ಹಳ್ಳಿಗಾಡಿನ ಕಥಾನಕ ಮನಸೆಳೆಯುತ್ತದೆ. ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟರಾದ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯಾ ಸುರೇಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ಪವನ್ ಒಡೆಯರ್, ಪತ್ನಿ ಅಪೇಕ್ಷಾ ಒಟ್ಟಾಗಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿ ದ್ದಾರೆ. ಶ್ರೀನಿಧಿ ಚಿತ್ರಕಥೆ, ಸಂಭಾಷಣೆ ಬರೆದಿ ದ್ದಾರೆ. ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದು, ಅಭಿಲಾಷ್ ಕಲಾಥಿ ಛಾಯಾ ಗ್ರಹಣ ನಿರ್ವಹಿಸಿದ್ದಾರೆ.

***

ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ. ಇದರಿಂದ ಜನಪದ ಕಲಾವಿದರನ್ನೂ ಪ್ರೋತ್ಸಾಹಿಸಿದಂತಾಗುತ್ತದೆ. ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಆ ಭಾಗದಲ್ಲಿ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರ ನೋಡಿದವರು ಸಿನಿಮಾವನ್ನು ಮೆಚ್ಚಿದ್ದಾರೆ. ಇದು ನಮಗೆ ಸಂತಸ ತಂದಿದೆ.
-ಪವನ್ ಒಡೆಯರ್, ನಿರ್ಮಾಪಕ