Sunday, 15th December 2024

ಟೀಸರ್‌ನಲ್ಲಿ ಸದ್ದು ಮಾಡುತ್ತಿದೆ ಡೊಳ್ಳು

ಕನ್ನಡದಲ್ಲಿ ಹಲವು ಕಮರ್ಷಿಯಲ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿ ರುವ ನಿರ್ದೇಶಕ ಪವನ್ ಒಡೆಯರ್, ಈಗ ಡೊಳ್ಳು ಎಂಬ ಕಲಾತ್ಮಕ ಚಿತ್ರವನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜಾನಪದ ಕಲೆಯಾದ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಡೊಳ್ಳು ಚಿತ್ರದಲ್ಲಿದೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸಿನಿ ಪ್ರಿಯರ ಮನಗೆದ್ದಿದೆ. ಜನಜೀವನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ತೆರೆದು ಕೊಳ್ಳುವ ಟೀಸರ್‌ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ.

ಕೈಲಾಸದಲ್ಲಿ ಕುಳಿತಿರುವ ಪರಶಿವನನ್ನು ಒಲಿಸಿಕೊಳ್ಳುವ ಭಕ್ತಿ ಮಾರ್ಗ ಕೂಡ ಡೊಳ್ಳು ಎಂದು ನಂಬಿರುವ ಹಳ್ಳಿ ಮಂದಿಯ ಸುತ್ತಾ, ಚಿತ್ರದ ಕಥೆ ಸಾಗುತ್ತದೆ.ಡೊಳ್ಳು ಕುಣಿತ ಕಂಟೆಂಟ್ ಹೊಂದಿರುವ ಈ ಚಿತ್ರ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವ ದಲ್ಲಿ ಪ್ರದರ್ಶನಗೊಂಡಿದ್ದು, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಗೋವಿಂದಾಯ ನಮಃ, ಗೂಗ್ಲಿ, ರಣ ವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್ ಮತ್ತು ನಟ ಸಾರ್ವಭೌಮ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವಿಸ್ ನಿರ್ಮಾಣ ಸಂಸ್ಥೆಯ ಮೂಲಕ ಡೊಳ್ಳು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಡೊಳ್ಳು ಸಿನಿಮಾದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್ ನಾಯಕ ನಾಗಿ ನಟಿಸಿದ್ದಾರೆ. ನಿಧಿ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಎಸ್.ಶ್ರೀನಿಧಿ ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನವಿರುವ ಡೊಳ್ಳು ಸಿನಿಮಾ ಜುಲೈನಲ್ಲಿ
ತೆರೆಗೆ ಬರಲಿದೆ.