Sunday, 15th December 2024

ಗಣಿ ಜನ್ಮದಿನಕ್ಕೆ ಗಾಳಿಪಟದ ಉಡುಗೊರೆ

ಗಣೇಶ್, ಗಾಳಿಪಟ ಚಿತ್ರೀಕರಣ ಮುಗಿಸಿದ್ದು, ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜುಲೈ ೨ ಕ್ಕೆ ಗಣಿಯ ಹುಟ್ಟುಹಬ್ಬ.

ಇದರ ಸವಿನೆನಪಿಗಾಗಿ ಗಾಳಿಪಟ ೨ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ ನಾನಾಡದ ಮಾತೆಲ್ಲವ ಕದ್ದಾಲಿಸು.. ಎಂಬ ಹಾಡು ಇದಾಗಿದ್ದು, ಗಾಯಕ ಸೋನು ನಿಗಮ್ ಕಂಠಸಿರಿಯಲ್ಲಿ ಮಧುರವಾಗಿ ಮೂಡಿ ಬಂದಿದೆ.

ಸುಂದರವಾದ ಹಾಡು. ಅಷ್ಟೇ ಸುಂದರವಾದ ಸ್ಥಳ. ಅದ್ಭುತವಾದ ಸೆಟ್‌ನಲ್ಲಿ ಐದು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ. ಸಂಗೀತ ಪ್ರಿಯರ ಮನದಲ್ಲಿ ಉಳಿಯು ವಂತಹ ಗೀತೆಯನ್ನು ನೀಡಬೇಕು ಎಂಬ ತುಡಿತ ನಮ್ಮ ಮನದಲ್ಲಿತ್ತು. ಅದು ಈ ಚಿತ್ರದಲ್ಲಿ ಸಾಧ್ಯವಾಗಿದೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದಲ್ಲಿ ಮೂಡಿಬಂದ ಈ ಹಾಡು ಚೆನ್ನಾಗಿದೆ. ಈ ಗೀತೆ ನನಗೆ ಬಲು ಇಷ್ಟ. ಅದಕ್ಕಾಗಿಯೇ ಈ ಹಾಡಿಗೆ ಬಳಿಸಿದ ವಸ್ತುಗಳನ್ನು ನೆನಪಿಗಾಗಿ ನಮ್ಮ ಮನೆಯ ಬಳಿ ತರಿಸಿಟ್ಟುಕೊಂಡಿದ್ದೀನಿ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.

ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಅರ್ಜುನ್ ಜನ್ಯ ಮೊದಲ ಬಾರಿಗೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಹಾಡು ಗಳ ಬಗ್ಗೆ ಮುಂಬೈನಲ್ಲಿ ಪ್ಲಾನ್ ಮಾಡುತ್ತಿದ್ದೆವು. ಆಗ ಜಯಂತ್ ಕಾಯ್ಕಿಣಿ ಅವರು ಈ ಮಧುರ ಸಾಲುಗಳನ್ನು ಬರೆದುಕೊಟ್ಟರು. ಎಲ್ಲರಿಗೂ ಈ ಹಾಡು ಮೆಚ್ಚುಗೆ ಯಾಗಿ ಅಲ್ಲಿಯೇ ರೆಕಾರ್ಡಿಂಗ್ ಮುಗಿಸಿದೆವು. ಪ್ರೀತಿಯ ಕುರಿತಾದ ಈ ಹಾಡು ಕೇಳಲು ಇಂಪಾಗಿದೆ ಎಂದು ಯೋಗರಾಜ್ ಭಟ್ ಸಂತಸದಿಂದ ನುಡಿದರು. ಹಿರಿಯ ನಟ ಅನಂತ್‌ ನಾಗ್, ದಿಗಂತ್, ಪವನ್, ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

***

ಈ ಹಾಡನ್ನು ಕೇಳಿದಾಕ್ಷಣ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದಂತೆ ಭಾಸವಾಗುತ್ತಿದೆ. ಅದೇ ಕಾಂಬಿನೇಷನ್‌ನಲ್ಲಿ ಮತ್ತೆ ಇಂಪಾದ ಹಾಡು ಮೂಡಿಬಂದಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ಚಿತ್ರೀಕರಣದ ಸವಿನೆನಪನ್ನು ಮರೆಯಲು ಸಾಧ್ಯವಿಲ್ಲ. ಕುದುರೆಮುಖದಲ್ಲಿ ಸುಮಾರು ಇನ್ನೂರು ಜನರ ತಂಡವೇ ಇತ್ತು. ಈ ಹಾಡಿಗಾಗಿ ಕಲಾ ನಿರ್ದೇಶಕ ಪಂಡಿತ್ ಅದ್ಭುತ ಸೆಟ್ ಹಾಕಿದ್ದರು. ಮಧುರವಾದ ಈ ಗೀತೆಯನ್ನು ಸುಂದರ ಪರಿಸರದಲ್ಲಿ ಸೆರೆಹಿಡಿಯಲಾಗಿದೆ.

-ಗಣೇಶ್