Sunday, 15th December 2024

ಗಂಧದ ಗುಡಿಯಲ್ಲಿ ಅದ್ಭುತ ಜಗತ್ತಿನ ದರ್ಶನ

ಪ್ರಶಾಂತ್‌ .ಟಿ.ಆರ್‌

ಕರುನಾಡಿನ ಕಾನನದ ಸಿರಿಸಂಪತ್ತನ್ನು ಬೆಳ್ಳಿಪರದೆಯಲ್ಲಿ ಕಟ್ಟಿಕೊಡಬೇಕು ಎಂಬುದು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸಾಗಿತ್ತು. ಅಪ್ಪು ಕಂಡ ದೊಡ್ಡ ಕನಸು ಬೆಳ್ಳಿತೆರೆಯಲ್ಲಿ ಸಾಕಾರಗೊಂಡಿದೆ. ಗಂಧದಗುಡಿಯಲ್ಲಿ ಏಳು ಅದ್ಭುತಗಳ ದರ್ಶನವೂ ಆಗಲಿದೆ.

ಹಿಂದೆಂದು ಕಾಣದ ವನ್ಯ ಸಂಪತ್ತಿನ ಸಿರಿ ವೈಭವ, ದೊಡ್ಡ ಪರದೆಯಲ್ಲಿ ಅನಾವರಣವಾಗಿದೆ. ವೈಲ್ಡ್‌ಲೈ- ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ಧಿ ಪಡೆದಿರುವ ಅಮೋಘವರ್ಷ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗಂಧದ ಗುಡಿಯ ಬಗ್ಗೆ ಅಮೋಘವರ್ಷ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ಗಂಧದ ಗುಡಿಯ ಜರ್ನಿ ಆರಂಭವಾಗಿದ್ದು ಹೇಗೆ ?
ಅಮೋಘವರ್ಷ : ಅಪ್ಪು ಸರ್, ನಾನು ಈ ಹಿಂದೆ ನಿರ್ದೇಶಿಸಿದ್ದ ಕೆಲವು ವೈಲ್ಡ್ ಲೈಫ್ ಡಾಕ್ಯುಮೆಂಟರಿಗಳನ್ನು ನೋಡಿದ್ದರು. ಹಾಗಾಗಿ ಒಮ್ಮೆ ಮನೆಗೆ ಬರುವಂತೆ ಹೇಳಿದರು. ವೈಲ್ಡ್ ಲೈಫ್ ಕುರಿತು ಅಪಾರ ಆಸಕ್ತಿ ಹೊಂದಿದ್ದ ಅವರು ಆ ಬಗ್ಗೆ ಚಿತ್ರ ಮಾಡುವ ಬಯಕೆ ವ್ಯಕ್ತಪಡಿಸಿದರು. ನಾನು ಒಮ್ಮೆ ಕಾಡಿಗೆ ಹೋಗಿ ಅಲ್ಲಿನ ಸಿರಿಯನ್ನು ಕಣ್ತುಂಬಿಕೊಳ್ಳೋಣ ಎಂದೆ. ಕಾಡು ನೋಡಿ ಅಲ್ಲಿನ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯೋಣ ಎಂದು ಹೇಳಿದೆ. ಹೀಗೆ ಮಾತಿಗೆ ಪ್ರಾರಂಭವಾಗಿದ್ದು, ಇಷ್ಟು ದೊಡ್ಡಮಟ್ಟದ ಸಿನಿಮಾವಾಗಿ ಮೂಡಿಬರುತ್ತದೆ ಎಂದು ಅಂದಕೊಂಡಿರಲಿಲ್ಲ. ಅಪ್ಪು ಸರ್ ಆಸೆಯಂತೆ ಒಂದು ಅದ್ಭುತವಾದ ಸಿನಿಮಾ ಮೂಡಿಬಂದಿದೆ.

ವಿ.ಸಿ : ಗಂಧದಗುಡಿ ಡಾಕ್ಯುಮೆಂಟರಿಯೊ ಅಥವಾ ಸಿನಿಮಾ ರೂಪದಲ್ಲಿದೆಯೊ ?
ಅಮೋಘವರ್ಷ : ಗಂಧದಗುಡಿ ಹೊಸತನವನ್ನು ಹೊತ್ತು ಬಂದಿದೆ. ಸಿನಿಮಾದಲ್ಲಿ ಇರುವಂತೆ ಇಲ್ಲಿಯೂ ಒಳ್ಳೆಯ ಕಥೆಯಿದೆ. ಆರಂಭವೂ ಇದೆ. ಅಂತ್ಯವೂ ಇದೆ. ಕಾನನದ ಸಿರಿ ಸೊಬಗು ಚಿತ್ರದುದಕ್ಕೂ ತೋರಿಸಲಾಗಿದೆ. ಇಲ್ಲಿ ಇತಿಹಾಸ, ಭವ್ಯ ಪರಂಪರೆ, ಎಲ್ಲವೂ ಅಡಕವಾಗಿದೆ. ಅದೆಲ್ಲವನ್ನೂ ಹೊಸ ಜಾನರ್‌ನಲ್ಲಿ ಕಟ್ಟಿಕೊಡಲಾಗಿದೆ.

ವಿ.ಸಿ : ಎಲ್ಲೆಲ್ಲಿ ಚಿತ್ರೀಕರಣ ನಡೆಸಿದಿರಿ ?
ಅಮೋಘವರ್ಷ: ಗಂಧದಗುಡಿಯನ್ನು ಕರುನಾಡಿನ ಉದ್ದಗಲಕ್ಕೂ ಚಿತ್ರೀಕರಿಸಿದ್ದೇವೆ. ಕರಾವಳಿಯಿಂದ ಹಿಡಿದು ಉತ್ತರ ಕರ್ನಾಟಕದ ಕಾನನದವರೆಗೂ ಸಾಗಿದ್ದೇವೆ. ದಟ್ಟ ಕಾನನ ಹೊಕ್ಕು ಒಂದು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಶ್ರಮಿಸಿದ್ದೇವೆ. ಅದರಲ್ಲೂ ನೀರಿನಾಳದಲ್ಲಿ ಚಿತ್ರೀಕರಿಸಿದ್ದು ವಿಶೇಷವಾಗಿತ್ತು.

ವಿ.ಸಿ : ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟ ಹೇಗಿತ್ತು ?
ಅಮೋಘವರ್ಷ : ಚಿತ್ರೀಕರಣದ ಸಂದರ್ಭದಲ್ಲಿ ಅಪ್ಪು ಸರ್ ಯಾವತ್ತೂ ಕೂಡ ತಾನೊಬ್ಬ ಸ್ಟಾರ್ ನಟ ಎಂದು ಅಂದು ಕೊಂಡೇ ಇರಲಿಲ್ಲ. ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳುವ ಕುತೂಹಲ ಅವರಲ್ಲಿತ್ತು. ತಾಂತ್ರಿಕತೆಯಲ್ಲಿಯೂ ಅವರಿಗೆ ಬಹಳ ಆಸಕ್ತಿ. ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮೆರಾ ಬಗ್ಗೆಯೂ ಕೇಳಿ ತಿಳಿದುಕೊಳ್ಳುತ್ತಿದ್ದರು.

ವಿ.ಸಿ : ಚಿತ್ರದುದ್ದಕ್ಕೂ ಪುನೀತ್ ರಾಜ್‌ಕುಮಾರ್ ಅವರ ದನಿಯನ್ನು ಕೇಳಬಹುದೇ ?
ಅಮೋಘವರ್ಷ : ಗಂಧದಗುಡಿ ನೈಜವಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಚಿತ್ರೀಕರಣ ಆರಂಭವಾದಾಗಿನಿಂದ ಸಿಂಕ್ ಸೌಡ್ ಬಳಸಿದೆವು. ಹಾಗಾಗಿ ಅಪ್ಪು ಸರ್ ದನಿಯಲ್ಲೇ ಇಡೀ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇಲ್ಲಿ ಅಪ್ಪು ಸರ್, ಅಪ್ಪು ಸರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪರ್ಸನಲ್ ಜರ್ನಿ ಕೂಡ ಇಲ್ಲಿದೆ.

ವಿ.ಸಿ: ಚಿತ್ರೀಕರಣದ ಅನುಭವ ಹೇಗಿತ್ತು
ಅಮೋಘವರ್ಷ : ಒಂದು ವರ್ಷಗಳ ಕಾಲ ಚಿತ್ರೀಕರಣ ನಡೆಸಿದ ಅನುಭವವ ಮನದಲ್ಲಿ ಸ್ಥಿರವಾಗಿದೆ. ಅಪ್ಪು ಸರ್ ಜತೆ ಕಳೆದ ಆ ದಿನಗಳು ನನ್ನ ನೆನಪಿನ ಪುಟದಲ್ಲಿ ಅಚ್ಚಳಿಯದೇ ಉಳಿದಿವೆ. ಅವರೊಂದಿಗೆ ಕಾಲ ಕಳೆದ ನಾನೇ ಧನ್ಯ. ಅಪ್ಪು ಸರ್‌ಗೆ ಊಟದ ಬಗ್ಗೆ ಬಹಳ ಪ್ರೀತಿ. ಶೂಟಿಂಗ್ ಅವಽಯಲ್ಲಿ ಇಲ್ಲಿ ಒಳ್ಳೆಯ ರೊಟ್ಟಿ ಸಿಗುತ್ತದೆ ಎಂದರೆ ಸಂತಸದಿಂದ ಹೊರಟು ಬರುತ್ತಿದ್ದರು. ನೆಲೆದಲ್ಲಿಯೇ ಕುಳಿತು ಊಟ ಸವಿಯುತ್ತಿದ್ದರು. ಒಂದು ಕಡೆ ರೊಟ್ಟಿ ತಟ್ಟುತ್ತಿದ್ದರೆ, ಬಿಸಿ ಇದ್ದ ರೊಟ್ಟಿಯನ್ನು ಹಾಗೆ ಕೇಳಿ ಕೊಂಡು ತಿನ್ನುತ್ತಿದ್ದರು. ಅಪ್ಪು ಸರ್ ಫೇವರಿಟ್ ಫುಡ್ ಕುರಿತು ಡಾಕ್ಯುಮೆಂಟರಿ ಮಾಡುವ ಪ್ಲಾನ್ ಇತ್ತು.

***

ಪುನೀತ್ ರಾಜ್‌ಕುಮಾರ್ ಪತ್ನಿ ಇದೇ ಮೊದಲ ಬಾರಿಗೆ ಪಿಆರ್‌ಕೆ ಯೂಟ್ಯೂನ್ ಚಾನಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಚಿತ್ರ ಮೂಡಿಬಂದ ಬಗ್ಗೆ ನನಗೆ ಖುಷಿ ಇದೆ. ಈ ಹೊತ್ತಿನಲ್ಲಿ ಅಪ್ಪು ಇಲ್ಲವಲ್ಲ ಎಂಬ ದುಃಖವೂ ಕಾಡುತ್ತಿದೆ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್. ಅಪ್ಪು ಹಾಗೂ ನಾನು ಸಮಯವಿದ್ದಾಗ ಟ್ರಾವೆಲ್ ಮಾಡುತ್ತಿದ್ದೆವು. ಈ ವೇಳೆ ನಮ್ಮ ಕರುನಾಡಿನ ಕಾನನದ ಸೊಗಬು ಸುಂದರವಾಗಿದೆ, ಅದರ ಕುರಿತು ಯಾಕೆ ಸಿನಿಮಾ ಮಾಡಬಾರದು ಎಂದುಕೊಂಡೆವು.

*

ನಾನು ಚಿತ್ರೀಕರಣದ ವೇಳೆ ಕಾಳಿ ರಿವರ್ ಸ್ಥಳಕ್ಕೆ ಹೋಗಿದ್ದೆ. ಒಂದು ದಿನ ಅಪ್ಪು ಕರೆ ಮಾಡಿ, ನಾವು ಕಾಳಿ ರಿವರ್ ಹತ್ತಿರ
ಬಂದಿದ್ದೇವೆ. ಬೆಟ್ಟ ಹತ್ತಿ ಕಾಲ್ ಮಾಡುತ್ತಿದ್ದೇನೆ ಎಂದರು, ನಾಳೆ ಬೆಳಗ್ಗೆ ಅಲ್ಲಿಗೆ ಬರುವಂತೆ ಹೇಳಿದರು. ಅದರಂತೆ ನಾನು ಎರಡು ದಿನಗಳ ಬಳಿಕ ಅಲ್ಲಿಗೆ ಹೋದೆ. ಅಲ್ಲಿಯೇ ಶೂಟಿಂಗ್ ನಡೆಯುತ್ತಿತ್ತು. ಎಲ್ಲರೂ ಟ್ರಕ್ಕಿಂಗ್ ಗೆ ಹೋದೆವು. ಅಲ್ಲಿಂದ ಮರಳಿ ಬಂದು ಅಲ್ಲೇ ಇದ್ದ ಚಿಕ್ಕ ಹಳ್ಳಿಯಲ್ಲಿ ಊಟ ಮಾಡಿದೆವು. ಗಂಧದ ಗುಡಿಯ ಜರ್ನಿ ಖುಷಿ ಕೊಟ್ಟಿದೆ.

*

ಗಾಜನೂರು ಮನೆಗೆ ಹೋಗಿದ್ದು ನನ್ನ ಅದೃಷ್ಟ. ಅಣ್ಣಾವ್ರ ಮನೆಯನ್ನು ಅವರ ಮಗ ಅಪ್ಪು ತೋರಿಸುತ್ತಾರೆ ಎಂದರೆ ಅದು
ನನ್ನ ಪೂರ್ವ ಜನ್ಮದ ಪುಣ್ಯ. ಅದಕ್ಕೆ ನಾನು ಚಿರಋಣಿ. ಗಾಜನೂರಿನಲ್ಲಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಿಸಿದರು. ಎಮ್ಮೆ ಮೇಲೆ ಸವಾರಿ ಮಾಡಿಸಿದ ಗೆಳೆಯರನ್ನು ತೋರಿಸಿದರು. ಅಪ್ಪು ಸರ್ ಗಂಧದಗುಡಿ ಸಿನಿಮಾ ನೋಡಿ ತುಂಬಾ ಖುಷಿಪಟ್ಟಿದ್ದರು. ಇದನ್ನು ಕುರುನಾಡಿನ ಜನತೆಯ ಮುಂದಿಡಬೇಕು ಎಂಬ ಆಸೆ ಹೊಂದಿದ್ದರು. ಆದರೆ ಅಷ್ಟರಲ್ಲಿ ಬಾರದ ಲೋಕಕ್ಕೆ ಪಯಣಿಸಿದರು. ಇಂದು ಅವರ ಆಸೆಯಂತೆಯೇ ಸಿನಿಮಾ ತೆರೆಗೆ ಬಂದಿದೆ. ಗಂಧದಗುಡಿ ಚಿತ್ರದ ಶೂಟಿಂಗ್‌ಗಾಗಿ ಹದಿನೈದು ರೀತಿಯ ಕ್ಯಾಮೆರಾ ಬಳಸಿದ್ದೇವೆ. ಅಂಡರ್ ವಾಟರ್ ಶೂಟಿಂಗ್‌ಗಾಗಿ ವಿಶೇಷ ಕ್ಯಾಮೆರಾ ಉಪಯೋಗಿಸಿದೆವು.

– ಅಮೋಘವರ್ಷ