Friday, 13th December 2024

ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಕಗ್ಗಂಟು

ಆರ್‌ಆರ್‌ಆರ್‌ ವಿರುದ್ದ ಅಭಿಮಾನಿಗಳ ಸಿಟ್ಟು

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಕಳೆದ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ
ತೆರೆಗೆ ಬಂದಿತ್ತು. ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹೊಸ ದಾಖಲೆ ಬರೆದಿತ್ತು.

ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡು ನಾಲ್ಕೇ ದಿನಗಳಲ್ಲಿ ಶತಕೋಟಿ ಗಳಿಸಿ, ನೂರು ಕೋಟಿ ಕ್ಲಬ್ ಸೇರಿತ್ತು. ಆ ಮೂಲಕ ಈ ಹಿಂದಿನ ಎಲ್ಲಾ ದಾಖಲೆ ಗಳನ್ನು ಧೂಳಿಪಟ ಮಾಡಿತ್ತು. ಜೇಮ್ಸ್ ರಿಲೀಸ್‌ಗೂ ಮೂರು ದಿನಗಳ ಮೊದಲೇ ಸಿನಿಮಾದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ಬಿಡುಗಡೆಯಾದ ಮೇಲೂ ಮೂರು ದಿನಗಳವರೆಗೆ ಟಿಕೆಟ್‌ಗಳೂ ಬುಕ್ ಆಗಿದ್ದವು.

ಹೀಗೆ ರಾಜ್ಯದ ಎಲ್ಲೆಡೆ ಜೇಮ್ಸ್ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಮಂಕಾಗಿ, ಮುಚ್ಚುವ ಹಂತ ತಲುಪಿದ್ದ ಚಿತ್ರಮಂದಿರಗಳಿಗೂ ಜೇಮ್ಸ್ ಮರುಜನ್ಮ ನೀಡಿತ್ತು. ಆದರೆ ಈಗ ಜೇಮ್ಸ್ ಪ್ರದರ್ಶನಕ್ಕೆ ಕಗ್ಗಂಟು ಎದುರಾಗಿದೆ.

ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್ ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಜೇಮ್ಸ್ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್ ರಿಲೀಸ್ ಮಾಡುವ ಹನ್ನಾರ ನಡೆದಿದೆ ಎಂದು ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದು, ಆರ್‌ಆರ್‌ಆರ್ ಪೋಸ್ಟರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಕ್ಕೆ ಇದೇ ಕಾರಣ
ಜೇಮ್ಸ್ ಕರುನಾಡಿನಲ್ಲಿ ಮುನ್ನೂರ ಎಂಬತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ರಿಲೀಸ್ ಆದ ಎಲ್ಲಾ ಚಿತ್ರ ಮಂದಿರಗಳಲ್ಲೂ ಉತ್ತಮ ಕಲೆಕ್ಷನ್ ಕೂಡ ಆಗಿತ್ತು. ಆದರೆ ಈಗ ಸುಮಾರು ತೊಂಬತ್ತು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆದು, ಅಲ್ಲಿ ಆರ್ ಆರ್‌ಆರ್ ಸಿನಿಮಾದ ಪ್ರದರ್ಶನ ಮಾಡಲಾಗುತ್ತಿದೆ. ಇದು ಅಪ್ಪು ಅಭಿಮಾನಿಗಳಿಗೆ ಬೇಸರ ತರಿಸಿದೆ. ಜೇಮ್ಸ್, ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ.

ಚಿತ್ರ ತೆರೆಗೆ ಬಂದು ಒಂದು ವಾರ ಮಾತ್ರ ಕಳೆದಿದೆ. ಇನ್ನೂ ಸಾಕಷ್ಟು ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ. ಹೀಗಿರುವಾಗಲೇ ಚಿತ್ರ ಮಂದಿರದಿಂದ ಜೇಮ್ಸ್ ಚಿತ್ರವನ್ನು ತೆಗೆದರೆ ನಾವು ಸಿನಿಮಾ ನೋಡುವುದು ಹೇಗೆ ಎಂಬ ನೋವು ಅಭಿಮಾನಿಗಳಲ್ಲಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಕಾಶ್ಮೀರಿ ಫೈಲ್ಸ್‌ಗಾಗಿ ಒತ್ತಡ
ಈ ಹಿಂದೆ ತೆರೆಗೆ ಬಂದ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ಘೋಷಿಸಿ, ಚಿತ್ರವನ್ನು ಪ್ರೋತ್ಸಾಹಿಸಿತ್ತು. ಕೆಲವೆಡೆ ಉಚಿತ ಟಿಕೆಟ್ ಹಂಚಲಾಗಿತ್ತು. ಜೇಮ್ಸ್ ಚಿತ್ರ ಪ್ರದರ್ಶನ ಆರಂಭಿಸಿದ ಕೆಲವು ಕಡೆ ಕಾಶ್ಮೀರಿ ಫೈಲ್ಸ್ ಚಿತ್ರದ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಪ್ರಭಾವಿಗಳು ಒತ್ತಡ ಹೇರಿದ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದರು. ಇದು ಹಲವು ವಿವಾದಗಳಿಗೆ ತಳುಕು ಹಾಕಿಕೊಂಡಿತು. ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಒತ್ತಡ ಬಂದ ಹಿನ್ನೆಲೆ ಯಲ್ಲಿ ನಿರ್ಮಾಪಕರು ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆರ್‌ಆರ್‌ಆರ್‌ಗೆ ಲಗಾಮ್
ಎಲ್ಲೆಡೆ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ವಿಚಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿತು. ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಫಿಲ್ಮ್ ಚೇಂಬರ್‌ನ ಪ್ರಮುಖರು ವಿವಾದ ಬಗೆಹರಿಸಿ ದರು. ಯಾವುದೇ ಕಾರಣಕ್ಕೂ ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಿಂದ ತೆಗೆಯಲು ಅವಕಾಶ ಮಾಡಿಕೊಡುವುದಿಲ್ಲ. ಮುಂದೆ ಯಾವುದೇ ಸಮಸ್ಯೆ ಎದುರಾದರೂ ಶಿವಣ್ಣ ಅವರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಚೇಂಬರ್ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ. ಆರ್‌ಆರ್‌ಆರ್ ಚಿತ್ರಕ್ಕೆ ಮನಸು ಬಂದಂತೆ ಟಿಕೆಟ್ ದರ ನಿಗಽ ಮಾಡಲಾಗಿದೆ ಇದು ತಪ್ಪು ಎಂದು ಫಿಲ್ಮ್
ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅಸಮಾಧಾನ ವ್ಯಕ್ತಪಡಿಸಿದರು.

ಒಳ್ಳೆಯ ಸಿನಿಮಾಗಳು
ಪ್ರದರ್ಶನ ನಡೆಯುವಾಗ ಅದನ್ನು ಅಲ್ಲಿಂದ ತೆಗೆಸಲು ಹೋಗಬಾರದು. ಜೇಮ್ಸ್ ಅಭಿಮಾನಿಗಳ ಮನದಲ್ಲಿ ಭಾವನಾತ್ಮಕವಾಗಿ ಬೆಸೆದಿದೆ. ನಮಗೆ ರಕ್ತ ಸಂಬಂಧ ಬೆಸೆದಿದೆ. ನಾನು ಒಬ್ಬ ನಟನಾಗಿ ಹೇಳುತ್ತಿದ್ದೇನೆ, ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗ ಬಾರದು. ಕನ್ನಡ ಚಿತ್ರಗಳ ಪರವಾಗಿ ಹಿಂದೆಯೂ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಟ ಮಾಡುತ್ತೀನಿ. ಚಿತ್ರಮಂದಿರದ ಮಾಲೀಕರೂ ಕೂಡ ಹೆಚ್ಚಿನ ಹಣದಾಸೆಗೆ ಬಲಿಯಾಗಿ ಒಳ್ಳೆಯ ಚಿತ್ರಗಳನ್ನು ತೆಗೆಯಬಾರದು.

-ಶಿವರಾಜ್ ಕುಮಾರ್

ಜೇಮ್ಸ್ ಪ್ರದರ್ಶನಕ್ಕಿದ್ದ ಕಗ್ಗಂಟು ಬಗೆ ಹರಿಸಿದೆ. ನಾವು ಮೊದಲ ವಾರದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಕೆಲವು ಚಿತ್ರ ಮಂದಿರಗಳಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದೆವು. ಅವುಗಳನ್ನು ಹೊರತುಪಡಿಸಿ ಉಳಿದ ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನ ಮುಂದುವರಿಯಲಿದೆ. ರಾಜ್ಯದ ಇನ್ನೂರ ಎಂಬತ್ತು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರದ ಪ್ರದರ್ಶನ
ಇರಲಿದೆ.
-ಕಿಶೋರ್ ಪತ್ತಿಕೊಂಡ ನಿರ್ಮಾಪಕ