ವಿಭಿನ್ನ ಪಾತ್ರಗಳ ಮೂಲಕವೇ ಗಮನಸೆಳೆದ ಲೂಸ್ ಮಾದ ಯೋಗಿ ಈಗ ಕಿರಿಕ್ ಶಂಕರನಾಗಿ ಅಬ್ಬರಿಸುತ್ತಿದ್ದಾರೆ. ಲೂಸ್ ಮಾದ ಯೋಗಿಯ ಸಿನಿಮಾಗಳಲ್ಲಿ ಪ್ರೇಕ್ಷಕರು ಏನೆಲ್ಲಾ ಬಯಸುತ್ತಾರೋ ಅದೆಲ್ಲ ಅಂಶಗಳು ಚಿತ್ರದ ಕಥೆಯಲ್ಲಿವೆ. ಮಾಸ್ ಆಗಿ ಬಂದ ಲೂಸ್ ಮಾದ ಆಕ್ಷನ್ ಲುಕ್‌ನಲ್ಲಿ ಗಮನಸೆಳೆದಿದ್ದಾರೆ. ಕಿರಿಕ್ ಶಂಕರ್ ಸಾಹಸ ಪ್ರಧಾನ ಕಥೆಗೆ ಸೀಮಿತವಾಗದೆ ಕೌಟುಂಬಿಕ ಕಥೆಯ ಜತೆಗೆ, ಲವ್ ಸ್ಟೋರಿಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿಯೂ ಲೂಸ್ ಮಾದ ಪಂಚಿಂಗ್ ಡೈಲಾಗ್‌ಗಳ ಮೂಲಕವೇ ಮನಸೂರೆಗೊಳ್ಳಲಿದ್ದಾರೆ.
ಗೆಳೆಯರ ರಂಪಾಟ
ಕಿರಿಕ್ ಶಂಕರ್ ಚಿತ್ರದ ಶೀರ್ಷಿಕೆಯೇ ಹೇಳುವಂತೆ ನಾಯಕ ಕಿರಿಕ್ ಪಾರ್ಟಿ. ಊರಲ್ಲಿ ಪ್ರತಿ ದಿನೇ ಏನಾದರೂ ಒಂದು ಕಿರಿಕ್ ಮಾಡಿಕೊಳ್ಳದಿದ್ದರೆ ಆತನಿಗೆ ಸಮಾಧಾನವೇ ಇರುವುದಿಲ್ಲ. ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಮಾತಿನಂತೆಯೇ ಈತನ ವ್ಯಕ್ತಿತ್ವ ವಿರುತ್ತದೆ. ಹಾಗಾಗಿಯೇ ತನ್ನ ತಂಟೆಗೆ ಬಂದವರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟುತ್ತಾನೆ. ಇವನ ಜತೆಗೆ ಮೂವರು ಸ್ನೇಹಿತರೂ ಕೂಡ ಸಾಥ ಕೊಡುತ್ತಾರೆ. ಊರಿನಲ್ಲಿ ಮಾಡಿದ ಗಲಭೆಗಾಗಿ ನಾಲ್ವರು ಜೈಲು ಸೇರುತ್ತಾರೆ. ಹೀಗೆ ಅಪ್ಪಟ ಪೋಲೀ ಹುಡುಗನಾಗಿ ಎಲ್ಲರೊಂದಿಗೆ ವಿರೋಧ ಕಟ್ಟಿಕೊಂಡಿದ್ದ ಶಂಕರ ಇದ್ದಕ್ಕಿದ್ದಂತೆ ಬದಲಾಗುತ್ತಾನೆ.
ಮುಂದೆ ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಾನೆ. ಅದು ಹೇಗೆ, ಯಾಕೆ, ಶಂಕರನಲ್ಲಿನ ಈ ಪರಿ ಬದಲಾವಣೆಗೆ ಕಾರಣ ಏನು ಎಂಬ ಎಲ್ಲಾ ಪ್ರಶ್ನೆಗೂ ಸಿನಿಮಾ ನೋಡಿದ ಮೇಲೆಯೇ ಉತ್ತರ ಸಿಗಲಿದೆ ಎನ್ನುತ್ತಾರೆ ನಿರ್ದೇಶಕ ಅನಂತರಾಜ್.
ಬೋಲ್ಡ್ ಲುಕ್‌ನಲ್ಲಿ ಅದ್ವಿಕಾ
ಶಂಕರನಿಗೆ ಜತೆಯಾಗಿ ನವ ನಟಿ ಅದ್ವಿಕಾ ಬಣ್ಣಹಚ್ಚಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಅದ್ವಿಕಾ ಬೋಲ್ಡ್ ಲುಕ್‌ನಲ್ಲಿ ಕಂಗೊಳಿಸಿ ದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆಯ ಪಾತ್ರ ಸಿಕ್ಕಿದೆ. ಯೋಗಿ ಅವರ ಜತೆ ನಟಿಸಿದ್ದು ಸಂತಸ ತಂದಿದೆ, ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯೂ ಇದೆ ಎನ್ನುತ್ತಾರೆ ಅದ್ವಿಕಾ. ನಾಯಕನ ಸ್ನೇಹಿತರಾಗಿ ಹಿತೇಶ್, ಪವನ್, ಸಾಯಿ ರಾಮ್ ಕಾಣಿಸಿಕೊಂಡಿದ್ದಾರೆ.
***
ಇಡೀ ಚಿತ್ರತಂಡದ ಪರಿಶ್ರಮದಿಂದ ಕಿರಿಕ್ ಶಂಕರ ಅದ್ಭುತವಾಗಿ ಮೂಡಿಬಂದಿದೆ. ಒಳ್ಳೆಯ ಮನಸ್ಸುಗಳು ಸೇರಿ ಮಾಡುವ ಕೆಲಸ ಯಾವತ್ತಿಗೂ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ನನಗಿದೆ. ನಮ್ಮ ಚಿತ್ರವನ್ನು ಪ್ರೇಕ್ಷಕರು ಖಂಡಿತಾ ಮೆಚ್ಚುತ್ತಾರೆ ಎಂಬ ವಿಶ್ವಾಸವೂ ಇದೆ. ಯೋಗಿ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
-ಅನಂತರಾಜ್ ನಿರ್ದೇಶಕ