Thursday, 12th December 2024

ಕೃಷ್ಣ ಟಾಕೀಸ್‌ನಲ್ಲಿ ಸಿಂಧೂ ಪ್ರತ್ಯಕ್ಷ

ಲವ್ವರ್ ಬಾಯ್ ಇಮೇಜಿನಿಂದ ಹೊರಬಂದು ಇದೇ ಮೊದಲ ಬಾರಿಗೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯ್‌ರಾವ್ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಕೃಷ್ಣ, ಈಗ ‘ಕೃಷ್ಣ ಟಾಕೀಸ್’ನಲ್ಲಿ ಹೊಸ ಗೆಟಪ್ ತಾಳಿದ್ದಾರೆ.

ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಜಯಾನಂದ್ ಆಕ್ಷನ್‌ಕಟ್ ಹೇಳಿದ್ದಾರೆ. ಗೋಕುಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಗೋವಿಂದ್‌ರಾಜು ಆಲೂರ್ ಬಂಡವಾಳ ಹೂಡಿದ್ದು, ‘ಕೃಷ್ಣ ಟಾಕೀಸ್’ ನಿರ್ಮಿಸಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಎರಡು ಹಾಡುಗಳು ಬಿಡುಗಡೆಯಾಗಿದ್ದು, ‘ಕೃಷ್ಣ ಟಾಕೀಸ್’ನಲ್ಲಿ ವಿಭಿನ್ನ ಕಥೆ ಇರುವ ಸುಳಿವು ಸಿಕ್ಕಿದೆ. ‘ಕೃಷ್ಣ ಟಾಕೀಸ್’ ನಮ್ಮ ಕನಸಿನ ಸಿನಿಮಾ, ೩ ವರ್ಷಗಳ ಶ್ರಮದಿಂದ ಚಿತ್ರ ನಿರ್ಮಾಣವಾಗಿದೆ.

ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಕರೋನಾ ಭಯ ಕಳೆದು ಜನ ಈಗ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ, ಹಾಗಾಗಿ ಏಪ್ರಿಲ್ 19ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನಲ್ಲೇ ಇದೊಂದು ಹೊಸ ಪ್ರಯತ್ನ. ಚಿತ್ರದಲ್ಲಿ ಹಾರರ್ ಟಚ್ ಇದೆ, ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಎಮೋಷನ್ ಇದೆ. ಅಲ್ಲದೆ ಅಜಯ್‌ರಾವ್ ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಮೊದಲಬಾರಿಗೆ ಈ ರೀತಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು ನಿರ್ದೇಶಕ ಜಯಾನಂದ್.

ಚಿತ್ರದಲ್ಲಿ ನಾನೊಬ್ಬ ಜರ್ನಲಿಸ್ಟ್, ಈ ರೀತಿಯ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಇದು ನನ್ನ 26ನೇ ಚಿತ್ರ ಎಂದು ಅಜಯ್
ರಾವ್ ಸಂತಸ ಹಂಚಿಕೊಂಡರು. ನಾನು, ಅಜಯ್ ತುಂಬಾ ದಿನಗಳಿಂದ ಸ್ನೇತರಾದರೂ ಒಟ್ಟಿಗೆ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ, ನನ್ನದು ಇಂಟರೆಸ್ಟಿಂಗ್ ಪಾತ್ರ ಎಂದ ಚಿಕ್ಕಣ್ಣ, ಒಂದು ಹಾಡಿಗೆ ಸ್ಟೆಪ್ ಕೂಡ ಹಾಕಿದರು. ಅಪೂರ್ವಾ ಹಾಗೂ ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ವಿಕ್ರಂ ಸಾಹಸ ನಿರ್ದೇಶನ, ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಜಯಾನಂದ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರ ನೀಡಿದೆ.