Sunday, 15th December 2024

ಲಂಕೆಗೆ ಹಾರಲು ಸಿದ್ಧವಾದ ಯೋಗಿ

ರಾಮ್‌ಪ್ರಸಾದ್ ನಿರ್ದೇಶನದಲ್ಲಿ ಸಿದ್ಧವಾದ ಚಿತ್ರವೇ ‘ಲಂಕೆ’.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಚಿತ್ರ ತೆರೆಗೆ ಬರಬೇಕಿತ್ತು. ಕರೋನಾದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ‘ಲಂಕೆ’ ತೆರೆಗೆ ಬರಲು ಸಜ್ಜಾಗಿದೆ. 2019ರಲ್ಲೇ ಸಿನಿಮಾ ಪ್ರಾರಂಭವಾಗಿದ್ದು, 2020ರ ಜನವರಿಯಲ್ಲಿಯೇ ಚಿತ್ರೀಕರಣ ಮುಗಿಸಿತ್ತು. ಆದರೆ ಚಿತ್ರಕ್ಕೆ ಶೀರ್ಷಿಕೆಯೇ ಅಂತಿಮವಾಗಿರಲಿಲ್ಲ. ಕಥೆಯ ಸಾರವನ್ನು ಗಮನಿಸಿ ಇದಕ್ಕೆೆ ‘ಲಂಕೆ’ ಎಂಬ ಶೀರ್ಷಿಕೆ ಅಂತಿಮಗೊಳಿಸಿದ್ದಾರೆ ನಿರ್ದೇಶಕರು.

ಮಂಡ್ಯದಲ್ಲಿ ನಡೆದ ನೈಜಘಟನೆಯೇ ಚಿತ್ರದ ಕಥೆಯಾಗಿದೆ. ಚಿತ್ರದ ನಾಯಕನಾಗಿ ಲೂಸ್ ಮಾದ ಯೋಗಿ ಅವರನ್ನೇ ಆಯ್ದುಕೊಂಡಿದ್ದಾರೆ ನಿರ್ದೇಶಕರು. ಯೋಗಿ ಈ ಚಿತ್ರದಲ್ಲಿ ರಾಮನಂತೆ ಕಾಣಿಸಿಕೊಂಡಿದ್ದಾರೆ. ಯೋಗಿಗೆ ಜತೆಯಾಗಿ ಕೃಷಿ ತಾಪಂಡ ನಟಿಸಿದ್ದಾರೆ. ನಟಿ ಕಾವ್ಯಾ ಶೆಟ್ಟಿ ಕೂಡ ಚಿತ್ರದ ನಾಯಕಿಯಾಗಿ ಬಣ್ಣಹಚ್ಚಿದ್ದು, ಚಿತ್ರದಲ್ಲಿ ಕಾವ್ಯಾ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯೋಗಿ ಇಲ್ಲಿ ರಾಮನಾದರೆ ಅದಕ್ಕೆ ತದ್ವಿರುದ್ದವಾಗಿ ಕಾವ್ಯಾ, ರಾವಣನಂತೆ ಭಾಸವಾಗುವ ಪಾತ್ರ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಆ್ಯಕ್ಷನ್ ನಲ್ಲೂ ಮಿಂಚಿದ್ದಾರಂತೆ. ನಟ ಸಂಚಾರಿ ವಿಜಯ್ ಕೂಡ ವಿಭಿನ್ನ ಪಾತ್ರದಲ್ಲಿ ಬಣ್ಹಚ್ಚಿದ್ದಾರೆ. ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್‌ಪ್ರಸಾದ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಅಂದುಕೊಂಡಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಕರೋನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲಾಯಿತು.

ಇದೀಗ ಮಾರ್ಚ್ ಅಥವಾ ಏಪಿಲ್‌ಲ್ಲಿ ಚಿತ್ರಮಂದಿರಕ್ಕೆ ತರಲಿದ್ದೇವೆ ಎನ್ನುತ್ತಾರೆ ನಿರ್ಮಾಪಕರು. ರಮೇಶ್ ಬಾಬು ಛಾಯಾ ಗ್ರಹಣ, ಕಾರ್ತಿಕ್ ಶರ್ಮಾ ಸಂಗೀತ, ಸಂಕಲನ ಶಿವರಾಜ್, ಸಾಹಸ ಪಳನಿರಾಜ್ ಅವರದ್ದಾಗಿದೆ. ಧನಂಜಯ್ ಮತ್ತು ಮೋಹನ್ ನೃತ್ಯ ನಿರ್ದೇಶನ, ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶಕ ರಾಮ್ ಪ್ರಸಾದ್ ಮತ್ತು ಗುರುಪ್ರಸಾದ್ ಅವರದ್ದಾಗಿದೆ.

ಇನ್ನು ಗೌಸ್‌ಪೀರ್, ಅನಿರುದ್ದ,  ರಾಮ್‌ಪ್ರಸಾದ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.