Thursday, 12th December 2024

ಹೊಸ ಆಯಾಮದ ಲವ್‌ 360

ನಿರ್ದೇಶಕ ಶಶಾಂಕ್ ಈ ಬಾರಿ ಮತ್ತೊಂದು ಹೊಸ ಪ್ರೇಮ ಕಾವ್ಯವನ್ನು ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ನವಿರಾದ ಪ್ರೀತಿಯ ಆಯಾಮವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಲವ್ 360 ಅದಾಗಲೇ ಹಾಡಿನ ಮೂಲಕವೇ ಸದ್ಧು ಮಾಡುತ್ತಿದೆ. ಶಶಾಂಕ್ ಸಿನಿಮಾ ಎಂದಮೇಲೆ ಅಲ್ಲಿ ವಿಶೇಷ ಇರಲೇಬೇಕು, ಅಂತೆಯೇ ಇಲ್ಲಿ ಭರಪೂರ ವಿಶೇಷ ವಿದೆ. ಆ ಬಗ್ಗೆ ಶಶಾಂಕ್ ವಿ.ಸಿನಿಮಾಸ್‌ನೊಂದಿಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

ವಿ.ಸಿನಿಮಾಸ್ : ಲವ್ ೩೬೦ಶೀರ್ಷಿಕೆಯೇವಿಭಿನ್ನವಾಗಿದೆಯಲ್ಲ?
ಶಶಾಂಕ್ : ಶಿರ್ಷಿಕೆಯಂತೆಯೇ ಚಿತ್ರವೂ ಕೂಡ ವಿಭಿನ್ನವಾಗಿದೆ. ಇದು ಪ್ರೇಮ ಕಥೆಗೆ ಸೀಮಿತವಾಗಿಲ್ಲ. ಮಿಕ್ಸ್‌ಡಪ್ ಜಾನರ್ ಈಗಿನ ಟ್ರೆಂಡ್. ಅದಕ್ಕೆ ತಕ್ಕಂತೆ ಕಥೆ ಹೆಣೆದು ತೆರೆಗೆ ತರಲಾಗಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ. ನಾನು ನಿರ್ದೇಶಿಸಿದ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ವಿಭಿನ್ನವಾಗಿ ಮೂಡಿಬಂದಿದೆ. ಎಮೋಷನ್ ಜತೆಗೆ ಮನಸೆಳೆಯುವ ಮ್ಯೂಸಿಕ್ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ಎಂದಿನಂತೆ ನನ್ನ ಸಿಗ್ನೇಚರ್ ಸ್ಟೈಲ್‌ನ ನೈಜ ನಿರೂಪಣೆ ಇಲ್ಲಿಯೂ ಇದೆ. ಜಗವೇ ನೀ ಜೀವ ಗೆಳತಿಯೇ… ಹಾಡು ಪ್ರೇಕ್ಷಕರಿಗೆ ಆಹ್ವಾನ ಪತ್ರಿಕೆಯಾಗಿದೆ. ಈ ಹಾಡಿನಲ್ಲಿ ಬರುವ ಅಂಶಗಳು ಇಡೀ ಚಿತ್ರದುದ್ದಕ್ಕೂ ಕ್ಯಾರಿಯಾಗುತ್ತವೆ.

ವಿ.ಸಿ : ಈ ಚಿತ್ರದ ಶೀರ್ಷಿಕೆಗೆ ಸೂರ್ತಿ ಏನು ?
ಶಶಾಂಕ್ : ಕ್ರಿಕೆಟರ್ ಎ.ಬಿ. ಡಿವಿಲಿಯರ‍್ಸ್ ಅವರನ್ನು ಮಿಸ್ಟರ್ ೩೬೦ ಎಂದು ಕರೆಯು ತ್ತಾರೆ. ಅವರೇ ಈ ಚಿತ್ರದ ಶೀರ್ಷಿಕೆಗೆ ಸೂರ್ತಿ. ಒಬ್ಬ ನಾಯಕ ತನ್ನ ಗೆಳತಿಯನ್ನು ಎಲ್ಲಾ ಆಯಾಮದಿಂದಲೂ ಹೇಗೆ ಪವಿತ್ರವಾಗಿ ಪ್ರೀತಿಸುತ್ತಾನೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇದು ಕಾಲ್ಪನಿಕ ಕಥೆಯಾದರೂ , ನೈಜತೆಗೆ ಹತ್ತಿರವಾಗಿದೆ.

ವಿ.ಸಿ : ಈ ರೀತಿಯ ಕಥೆಯನ್ನು ತೆರೆಗೆ ತರಲು ಕಾರಣ ?
ಶಶಾಂಕ್ : ಈ ಹಿಂದಿನ ಚಿತ್ರಗಳಲ್ಲಿ ನನ್ನ ಮನಕ್ಕೊಪ್ಪುವಂತೆ, ಕಥೆ ಹೆಣೆಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಒಬ್ಬ ನಾಯಕನಿಗಾಗಿ ಕಥೆ ಹೆಣೆದಿದ್ದೇನೆ. ಅದಕ್ಕೆ ಕಾರಣವೂ ಇದೆ. ನಾಯಕ ಪ್ರವೀಣ್ ಮೊದಲ ಬಾರಿಗೆ ನನ್ನ ಮುಂದೆ ಬಂದು ನಿಂತಾಗ, ಅವರಲ್ಲಿನ ಮುಗ್ಧತೆ ಇಷ್ಟವಾಯಿತು. ಅಲ್ಲದೆ, ವೃತ್ತಿಯಲ್ಲಿ ಆತ ವೈದ್ಯ. ಅದಕ್ಕೂ ಮಿಗಿಲಾಗಿ ಅವರದ್ದು ವೈದ್ಯ ಕುಟುಂಬ. ಪ್ರವೀಣ್ ತಂದೆ ಹಳ್ಳಿಯ ಬಡಜನರಿಗೆ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಅವರು ನಿಧನರಾದಾಗ ಆ ಗ್ರಾಮದ ಜನ ಭಾವುಕರಾಗಿ ಕಂಬನಿ ಮಿಡಿದರು. ಅದೆಲ್ಲ ವನ್ನೂ ಕೇಳಿದ ಮೇಲೆ ಪ್ರವೀಣ್ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಲೇಬೇಕು ಎಂದು ಅನ್ನಿಸಿತು. ಪ್ರವೀಣ್‌ಗಾಗಿಯೇ ಕಥೆ ರಚಿಸಿದೆ. ಪ್ರವೀಣ್ ಅಭಿನಯ ತರಬೇತಿ ಪಡೆದಿದ್ದರಿಂದ ಕಥೆಗೆ ತಕ್ಕಂತೆ ಅಭಿನಯಿಸಿದ್ದಾರೆ.

ವಿ.ಸಿ: ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ ?
ಶಶಾಂಕ್ : ನಾಯಕಿಯ ಪಾತ್ರಕ್ಕೆ ಮುಗ್ಧತೆಯ ಹುಡುಗಿ ಬೇಕಿತ್ತು. ಆ ಪಾತ್ರಕ್ಕೆ ರಚನಾ ಇಂದರ್ ಆಯ್ಕೆಯಾದರು. ರಚನಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೋಪಾಲ್ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಹೊಸ ಕಲಾವಿದರಿಗೆ ಆದ್ಯತೆ ನೀಡಿದ್ದೇವೆ.

ಗೋಕರ್ಣದಲ್ಲಿ ಇಡೀ ಚಿತ್ರದ ಕಥೆ ಸಾಗುತ್ತದೆ. ಹಾಗಾಗಿ ಕರಾವಳಿ ತೀರದಲ್ಲಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಮೊಗ್ಗಿನ ಮನಸು ಚಿತ್ರವನ್ನು ಕರಾವಳಿ ತೀರದಲ್ಲಿಯೇ ಶೂಟ್ ಮಾಲಾಗಿತ್ತು. ಈಗ ಹದಿನಾರು ವರುಷಗಳ ಬಳಿಕ ಮತ್ತೆ ಕೋಸ್ಟಲ್
ಪ್ರದೇಶದ ಪ್ರೇಮ ಕಥೆಯನ್ನು ತೆರೆಯಲ್ಲಿ ಕಟ್ಟಿಕೊಡುತ್ತಿದ್ದೇನೆ.