ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಮದಗಜ ಚಿತ್ರ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣ ಗೊಳಿಸಿದೆ. ಡಿಸೆಂಬರ್ 3 ರಂದು ಮದಗಜ ಭರ್ಜರಿಯಾಗಿ ತೆರೆಗೆ ಬರಲಿದೆ.
ಸದ್ಯ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಿನ್ನಾಳ ರಾಜ್ ಸಾಹಿತ್ಯದಲ್ಲಿ ರಚನೆಯಾಗಿರುವ ಈ ಶೀರ್ಷಿಕೆ ಗೀತೆ ಸಂತೋಷ್ ವೆಂಕಿ ದನಿಯಲ್ಲಿ ಮೂಡಿಬಂದಿದೆ. ರವಿಬಸ್ರೂರು ಅವರ ಸಂಗೀತ ಹಾಡಿಗೆ ಮತ್ತಷ್ಟು ಮೆರಗು ನೀಡಿದೆ. ಮದಗಜ ಮಾಸ್ ಸಿನಿಮಾವಾಗಿದ್ದು, ಮುರಳಿ ಮತ್ತೆ ಆಕ್ಷನ್‌ನಲ್ಲಿ ಮಿಂಚಿದ್ದಾರೆ. ತನ್ನ ತಂಟೆಗೆ ಬಂದ ದುರುಳರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟುತ್ತಾರೆ. ಅದು ಚಿತ್ರದ ಹಾಡಿನಲ್ಲಿ ಸ್ಪಷ್ಟವಾಗಿದೆ.
ಟ್ರೇಲರ್, ಹಾಡಿನ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿದ್ದ ಮದಗಜ ಈಗ ಟೈಟಲ್ ಸಾಂಗ್ ಮೂಲಕ ಮತ್ತಷ್ಟು ಕಾತರತೆ ಹೆಚ್ಚಿಸಿದೆ. ಶ್ರೀಮುರಳಿಗೆ ಜತೆಗೆಯಾಗಿ ಮುಗುಳು ನಗೆ ಬೆಡಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು, ದೇವಯಾನಿ, ರಂಗಾಯಣ ರಘು, ಗರುಡ ರಾಮ್, ಶಿವರಾಜ್ ಕೆ.ಆರ್.ಪೇಟೆ, ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಹಿಂದೆ ಅಯೋಗ್ಯ ಚಿತ್ರವನ್ನು ನಿರ್ದೆಶಿಸಿ ಸೈಎನಿಸಿಕೊಂಡ ಮಹೇಶ್ ಕುಮಾರ್ ಮದಗಜನಿಗೆ ಆಕ್ಷನ್ ಕಟ್ ಹೇಳಿದ್ದಾರೆ.