ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ. ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರ ಮೇಡ್ ಇನ್ ಬೆಂಗಳೂರು. ಈ ಚಿತ್ರದ ಬನ್ನಿರೆ ಬೆಂಗಳೂರಿಗೆ .. ಎಂಬ ಹಾಡನ್ನು ಹಿರಿಯ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರು. ಈ ಹಾಡನ್ನು ಹನ್ನೊಂದು ಭಾಷೆಗಳನ್ನು ಬಳಸಿ ರಚಿಸಲಾಗಿದೆ.
ಗಾಯಕರಾದ ಶ್ರೀಹರ್ಷ, ಕಂಬದ ರಂಗಯ್ಯ, ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘಾ ಕುಲಕರ್ಣಿ, ಪೂಜಾ ರಾವ್, ರಾಕೇಶ್ ಪೂಜಾರಿ ಮುಂತಾದವರು ಈ ಹಾಡನ್ನು ಮಧುರವಾಗಿ ಹಾಡಿದ್ದಾರೆ.
ಅಶ್ವಿನ್ ಪಿ ಕುಮಾರ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಬಾಲಕೃಷ್ಣ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರವನ್ನು ಪ್ರದೀಪ್ ಶಾಸಿ ನಿರ್ದೇಶಿಸಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬ ಐಟಿ ಕಂಪನಿ ಕೆಲಸ ಬಿಟ್ಟು, ಹೊಸ ಕಂಪನಿ ಆರಂಭಿಸು ತ್ತಾನೆ. ಅದಕ್ಕಾಗಿ ಹೂಡಿಕೆದಾರರನ್ನು ಹುಡುಕುತ್ತಾನೆ. ಸಿಗದಿದ್ದಾಗ ಗ್ಯಾಂಗ್ ಸ್ಟರ್ ಬಳಿ ಹಣ ಪಡೆಯುತ್ತಾನೆ. ಮುಂದೇನಾಗುತ್ತದೆ ಎಂಬುದೆ ಚಿತ್ರದ ಕಥೆ. ಹಿರಿಯ ನಟರಾದ ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ.