Saturday, 14th December 2024

ಚಂದನವನಕ್ಕೆ ಬಂದು ಮನಸಾಗಿದೆ ಎಂದ ಅಭಯ್

ಕನ್ನಡ ಚಿತ್ರರಂಗದಲ್ಲಿ ಹೊಸಬರ ಹೊಸ ಹೊಸ ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ಮನಸಾಗಿದೆ ಚಿತ್ರವೂ ಒಂದು. ಚಿತ್ರದ ಶಿರ್ಷಿಕೆ ಕೇಳಿದಾಕ್ಷಣ ಇದು ಲವ್ ಸ್ಟೋರಿಯ ಸಿನಿಮಾ ಎಂಬುದು ಮನದಟ್ಟಾಗುತ್ತದೆ. ಈ ಚಿತ್ರದಲ್ಲಿ ಮಂಡ್ಯದ ಹುಡುಗ ಅಭಯ್ ನಾಯಕನಾಗಿ ನಟಿಸಿದ್ದು, ಚಂದನವನಕ್ಕೆ
ಪರಿಚಿತರಾಗುತ್ತಿದ್ದಾರೆ. ತ್ರಿಕೋನಾ ಪ್ರೇಮ ಕಥೆಯ ಚಿತ್ರಕಥೆ ಇದಾಗಿದ್ದು, ಒಳ್ಳೆಯ ಸಾಮಾಜಿಕ ಸಂದೇಶವನ್ನು ಹೊತ್ತು ತಂದಿದೆ. ತಮ್ಮ ಚೊಚ್ಚಲ
ಚಿತ್ರದ ಬಗ್ಗೆ ಅಭಯ್ ವಿ.ಸಿನಿಮಾಸ್ ನೊಂದಿಗೆ ಮಾತನಾಡಿದ್ದಾರೆ.

? ವಿ.ಸಿ : ಮನಸಾಗಿದೆ ಚಿತ್ರದ ಮೂಲಕ ಏನು ಹೇಳಲು ಹೊರಟ್ಟಿದ್ದೀರಿ?
? ಅಭಯ್ : ಮನಸಾಗಿದೆ ತ್ರಿಕೋನಾ ಪ್ರೇಮ ಕಥೆಯ ಚಿತ್ರ. ಹಾಗಂತ ಮಾಮೂಲಿ ಪ್ರೇಮ ಕಥೆ ಇಲ್ಲಿಲ್ಲ. ವಿಭಿನ್ನ ನೆಲೆಗಟ್ಟಿನ ಸ್ಟೋರಿ ಚಿತ್ರದಲ್ಲಿದೆ. ಪ್ರೀತಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಕಳೆದುಕೊಂಡು ಪ್ರೀತಿಯನ್ನು  ಅರಸುತ್ತಾ ಹೋದ ನಾಯಕನಿಗೆ ಮತ್ತೊಂದು ಪ್ರೀತಿ ಎದುರಾಗುತ್ತದೆ. ಆ ಪ್ರೀತಿಗೆ ಆತ ಮಾರು ಹೋಗುತ್ತಾನಾ ಅಥವಾ ತನ್ನ ಮೊದಲ ಪ್ರೀತಿಯನ್ನೇ
ಅರಸುತ್ತಾ ಮುಂದೆ ಸಾಗುತ್ತಾನಾ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಚಿತ್ರದಲ್ಲಿ ಇಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ್ದೇವೆ.

? ವಿ.ಸಿ: ನಿಮಗೆ ನಟನೆಯ ಆಸಕ್ತಿ ಹೇಗೆ ಚಿಗುರಿತು?
? ಅಭಯ್ : ನನ್ನ ತಂದೆ ಸುಮಾರು ಹದಿನೈದು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ನನಗೂ ಬಾಲ್ಯದಿಂದಲೇ ಸಿನಿಮಾ ಪ್ರೀತಿ ಚಿಗುರಿತು. ಚಿಕ್ಕಂದಿ ನಲ್ಲೇ ಸಿನಿಮಾದಲ್ಲಿ ಬರುವ ಡೈಲಾಗ್, ಸ್ಟೆಂಟ್‌ಗಳನ್ನು ಅಭ್ಯಾಸ ಮಾಡಲು ಆರಂಭಿಸಿದೆ. ನನ್ನ ಬಯಕೆಯಂತೆ ಏಳು ವರ್ಷಗಳ ಹಿಂದೆ ತೆರೆಗೆ ಬಂದ ಬರ್ತ್ ಚಿತ್ರದಲ್ಲಿ ಬಾಲ ನಟನಾಗಿ ನಟಿಸುವ ಅವಕಾಶ ಅರಸಿ ಬಂತು. ಈ ಚಿತ್ರದಲ್ಲಿ ನಾಯಕನ ತಮ್ಮನಾಗಿ ಕಾಣಿಸಿಕೊಂಡಿದ್ದೆ.

ಮುಂದೆ ನಾನು ನಾಯಕನಾಗಿ ನಟಿಸಬೇಕು ಎಂಬ ಆಸೆ ಮನದಲ್ಲಿ ಬೇರೂರಿತು. ಇದಕ್ಕೆ ಪೂರಕ ಎಂಬಂತೆ, ನನ್ನ ತಂದೆ ಒಳ್ಳೆಯ ಕಥೆ ಬರೆದರು. ಆ ಚಿತ್ರವನ್ನು ತೆರೆಗೆ ತರಲು ನಿರ್ಧರಿಸಿದರು. ಆ ಚಿತ್ರದಲ್ಲಿ ನಾನೇ ನಾಯಕನಾಗುವಂತೆ ತಿಳಿಸಿದರು. ನಾನು ಸಂತೋಷದಿಂದ ಒಪ್ಪಿಕೊಂಡೆ. ಮನಸಾಗಿದೆ ಸಿನಿಮಾದ ಮೂಲಕ ನಾಯಕನಾಗಿ ನಿಮ್ಮ ಮುಂದೆ ಬಂದಿದ್ದೇನೆ.

? ವಿ.ಸಿ : ಚೊಚ್ಚಲ ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?
? ಅಭಯ್ : ಮನಸಾಗಿದೆ ಚಿತ್ರದ ಕಥೆ ಕೇಳಿದಾಕ್ಷಣ ನನ್ನ ಮನಸ್ಸಿನಲ್ಲೇ ತಯಾರಿ ಆರಂಭಿಸಿದೆ. ಈ ಚಿತ್ರಕ್ಕಾಗಿ ಒಂದೂವರೆ ವರ್ಷದ ಹಿಂದೆಯೇ ತಯಾರಿ ಆರಂಭಿಸಿದ್ದೆ. ಚಿಕ್ಕಂದಿನಲ್ಲಿಯೇ ನೃತ್ಯ ಕಲಿತಿದ್ದರಿಂದ ಈ ಸಿನಿಮಾದಲ್ಲಿ ಅಂದುಕೊಂಡಂತೆ ನೃತ್ಯ ಮಾಡಲು ಸಾಧ್ಯವಾಯಿತು. ಸ್ಟೆಂಟ್ಸ್‌ಗಾಗಿ ಸಾಕಷ್ಟು ತರಬೇತಿ ಪಡೆದೆ. ನಮ್ಮ ಚಿತ್ರಕ್ಕೆ ಥ್ರಿಲ್ಲರ್ ಮಂಜು ಸರ್ ಸಾಹಸ ನಿರ್ದೇಶನ ಮಾಡುತ್ತಾರೆ ಎಂದಾಗ ನನಗೆ ಹೊಸ ಶಕ್ತಿ ತುಂಬಿತು. ಅವರು
ಪ್ರತಿಯೊಂದು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಿ ಧೈರ್ಯ ತುಂಬಿದರು. ಹಾಗಾಗಿ ನಾನೇ ಯಾವುದೇ ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಚಿತ್ರದಲ್ಲಿ ಎರಡು ಭರ್ಜರಿ ಸಾಹಸ ದೃಶ್ಯಗಳಿವೆ. ಅವು ಅದ್ಭುತವಾಗಿ ಮೂಡಿಬಂದಿವೆ. ಅವುಗಳನ್ನು ತೆರೆಯಲ್ಲಿಯೇ ನೋಡಿದರೆ ಚೆಂದ. ಒಟ್ಟಿನಲ್ಲಿ ಮನಸಾಗಿದೆ ಎಲ್ಲಾ ಸಿನಿಪ್ರಿಯರಿಗೆ ಮನಕ್ಕೊಪ್ಪುವ ಚಿತ್ರವಾಗಿದೆ.