Sunday, 24th November 2024

ಮೆಟಡೊರ್‌ನಲ್ಲಿ ಬದುನಿಕ ಪಯಣ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ಮೆಟಡೊರ್ ಸಿನಿಮಾವೂ ಒಂದು. ಶೀರ್ಷಿಕೆ ಕೇಳಿದಾಕ್ಷಣ ನಮಗೆಲ್ಲಾ ಹಳೆಯ ವಾಹನದ ನೆನಪು ಬರುತ್ತದೆ. ಅದರಲ್ಲಿ ಪ್ರಯಾಣಿಸಿದ ಸಿಹಿ ನೆನಪುಗಳು ಕಾಡುತ್ತವೆ. ಹಾಗಂತ ಇದು ವಾಹನದ ಹಿಂದೆ ಸಾಗುವ ಕಥೆಯಲ್ಲ, ಬದಲಾಗಿ ಇಲ್ಲಿ ಜೀವನದ ಕಥೆ ಇದೆ. ಮಾತ್ರವಲ್ಲ ನಾವು ಮಾಡಿದ ಕರ್ಮಗಳು ನಮ್ಮನ್ನು ಹೇಗೆ ಕಾಡುತ್ತವೆ ಎಂಬು ದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸುದರ್ಶನ್ ಜಿ ಶೇಖರ್.

ಅಷ್ಟಕ್ಕೂ ಏನದು ಕರ್ಮ ಎಂಬುದರ ಕುರಿತಾಗಿ ಸುದರ್ಶನ್, ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ಮೆಟಡೊರ್ ಮೂಲಕ ಏನು ಹೇಳಲು ಹೊರಟ್ಟಿದ್ದೀರಾ?
ಸುದರ್ಶನ್ : ಮೆಟಡೊರ್ ನಾವೆಲ್ಲಾ ಪ್ರಯಾಣಿಸಿದ ವಾಹನ. ಅದರ ನೆನಪು ನಮ್ಮ ಮನದಲ್ಲಿ ಹಾಗೇ ಉಳಿದಿದೆ. ಅಂತೆಯೇ ನಮ್ಮ ಬದುಕು ಕೂಡ ಮೆಟಡೊರ್‌ನಲ್ಲಿ ಸಾಗುವ ಪಯಣದಂತೆ. ನಮ್ಮ ಜೀವನವನ್ನು ನಿರ್ಧರಿಸಲು ಮೇಲೊಬ್ಬ ಚಾಲಕ ನಿರುತ್ತಾನೆ. ಆತ ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ನೋಡುತ್ತಿರುತ್ತಾನೆ. ತಪ್ಪು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆ ವಿಧಿಸುತ್ತಾನೆ. ಅದು ಎಲ್ಲೂ ಅಲ್ಲ, ಇಲ್ಲಿಯೇ ಈ ಜನ್ಮದಲ್ಲಿಯೇ, ನಾವು ಮಾಡಿದ ಕರ್ಮಗಳ ಮೂಲಕ. ಅದು ಹೇಗೆ ಎಂಬು ದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನಮಾಡಿದ್ದೇನೆ.

ವಿ.ಸಿ : ಚಿತ್ರದಲ್ಲಿ ಕಥೆಗಳ ಗುಚ್ಚವೇ ಇದೆಯಲ್ಲ ? 
ಸುದರ್ಶನ್ : ಹೌದು, ಒಂದೇ ಕಥೆಯನ್ನು ಎಳೆಯುತ್ತಾ ಹೋದರೆ, ಪ್ರೇಕ್ಷಕರಿಗೆ ಬೋರ್ ಹೊಡೆಸಬಹುದು ಎಂಬ ಉದ್ದೇಶದಿಂದ
ಐದು ಕಥೆಗಳನ್ನು ಹೊತ್ತು ತಂದಿದ್ದೇವೆ. ಈ ಎಲ್ಲಾ ಕಥೆಗಳು ಒಂದೇ ಆಯಾಮದಲ್ಲಿವೆ. ಅದು ಕರ್ಮದ ವಿಚಾರಗಳನ್ನೇ ಹೇಳುತ್ತಾ ತೆರೆಯಲ್ಲಿ ಸಾಗುತ್ತವೆ. ಎಲ್ಲಾ ಕಥೆಗಳಿಗೂ ಒಂದು ಲಿಂಕ್ ಇದ್ದು, ಕಡೆಗೆ ಒಂದೇ ಕ್ಲೈಮ್ಯಾಕ್ಸ್‌ನಲ್ಲಿ ಮುಗಿಯುತ್ತವೆ.

ವಿ.ಸಿ : ಕಥೆಗಳ ಬಗ್ಗೆ ಹೇಳುವುದಾದರೆ ?
ಸುದರ್ಶನ್ : ಮೊದಲು ಮಟ್ಕಾ ದಂಧೆಯಲ್ಲಿ ವ್ಯಕ್ತಿಯೊಬ್ಬ ಮೋಸ ಮಾಡಿ ಹೇಗೆ ಹಣ ಸಂಪಾದಿಸುತ್ತಾನೆ. ಆ ಮೋಸವೇ ಮುಂದೆ ಆತನಿಗೆ ಹೇಗೆ ಮುಳುವಾಗುತ್ತದೆ ಎಂಬುದನ್ನು ಸಸ್ಪೆನ್ಸ್ ಮೂಲಕ ಹೇಳಲಾಗಿದೆ. ಇನ್ನು ಹಣದಾಸೆಗಾಗಿ ಅಮಾಯಕ ರನ್ನೆಲ್ಲಾ ಹತ್ಯೆ ಮಾಡುವ ಸುಪಾರಿ ಕಿಲ್ಲರ್ ಜೀವನದಲ್ಲಿ ಹೇಗೆ ನರಳುತ್ತಾನೆ ಎಂಬುದನ್ನು ತೋರಿಸಲಾಗಿದೆ. ಇದರ ಜತೆಗೆ ಲೋಭಿಯಾದ ವ್ಯಕ್ತಿಯೊಬ್ಬ ಕಳ್ಳತನದಿಂದ ಹೇಗೆ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುತ್ತಾನೆ.

ಆ ಪಾಪ ಆತನನ್ನು ಹೇಗೆ ಕಾಡುತ್ತದೆ ಎಂಬ ಅಂಶವನ್ನು ತೆರೆಯಲ್ಲಿ ಕಟ್ಟಿಕೊಡಲಾಗಿದೆ. ಇದೆಲ್ಲಕ್ಕಿಂತ ಮನಮುಟ್ಟು ಕಥೆ ಶಾಲಾ ಮಗುವಿನದ್ದು. ಆ ಊರಲ್ಲಿ ಇರುವುದು ಒಂದೇ ಶಾಲೆ, ಆದರೆ ಅಲ್ಲಿ ಯಾರೂ ಶಿಕ್ಷಕರಿಲ್ಲ. ಹಾಗಾಗಿ ಆ ಶಾಲೆಯನ್ನು ಮುಚ್ಚ ಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಆ ಮಗುವಿಗೆ ಶಿಕ್ಷಣ ಕಲಿಯುವ ಆಸೆ. ಅಂತು ಛಲದಿಂದ ಶಾಲೆ ಮುಚ್ಚದಂತೆ ಮಗು ಏನು ಮಾಡುತ್ತದೆ ಎಂಬ ಕಥೆ ಇದೆ. ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ಹೇಳಲಾಗಿದೆ. ಇದರ ಜತೆಗೆ ಕ್ಯಾನ್ಸರ್ ರೋಗಿಯ ಕಥೆ ಯನ್ನು ಕಾಮಿಡಿಯ ಮೂಲಕ ಕಟ್ಟಿಕೊಡಲಾಗಿದೆ. ರೋಗಿಯಾದವನು ತನ್ನ ಮನಸ್ಥೈರ್ಯದಿಂದ ಹೇಗೆ ಗುಣಮುಖನಾಗು ತ್ತಾನೆ ಎಂಬ ಅಂಶವೂ ಕಥೆಯಲ್ಲಿ ಅಡಕವಾಗಿದೆ.

ವಿ.ಸಿ : ಕಥೆ ಹೊಳೆದಿದ್ದು ಹೇಗೆ ?
ಸುದರ್ಶನ್ : ಮಹಾಭಾರತದ ಕಥೆ ಓದುವಾಗ, ನನ್ನನ್ನು ಬಹುವಾಗಿ ಕಾಡಿದ್ದು ಧೃತರಾಷ್ಟರನ ಪಾತ್ರ. ಅಂದ ಧೃತರಾಷ್ಟ್ರ ನನ್ನು ಕರ್ಮಗಳು ಹೇಗೆ ಕಾಡಿದವು ಎಂಬ ಅಂಶ ನನ್ನನ್ನು ಸೆಳೆಯಿತು. ಹಾಗಾಗಿ ಕರ್ಮದ ಕಥೆಯನ್ನು ಹೇಳುವ ನಿಟ್ಟಿನಲ್ಲಿ ಈ ಚಿತ್ರವನ್ನು ಸಿದ್ಧಪಡಿಸಿದೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾವಾಗಿದ್ದು, ಪ್ರಸ್ತುತ ನಮ್ಮ ಸುತ್ತಮುತ್ತ ನಡೆಯುವ ಘಟನೆ ಗಳೇ ಚಿತ್ರದಲ್ಲಿವೆ.

ವಿ.ಸಿ: ತಾರಾಗಣದ ಬಗ್ಗೆ ಹೇಳುವುದಾದರೆ?
ಸುದರ್ಶನ್ : ಚಿತ್ರದಲ್ಲಿ ಬಹುತೇಕ ನೀನಾಸಂ ಪ್ರತಿಭೆಗಳೆ ನಟಸಿದ್ದಾರೆ. ಶ್ರೇಯಾ, ರವಿ ಮೈಸೂರು ಹಲವರು ನಟಿಸಿದ್ದಾರೆ. ಕವಿತಾ ಗೌಡ ಚಿತ್ರ ಪ್ರಮೋಷನ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.