ಕೆಜಿಎಫ್ ಚಾಪ್ಟರ್ ೨ ಎಲ್ಲೆಡೆ ಧೂಳ್ ಎಬ್ಬಿಸುತ್ತಿದೆ. ದೇಶ ವಿದೇಶಗಳಲ್ಲಿಯೂ ಚಿತ್ರ ಅದ್ಭುತ ಪ್ರದರ್ಶನ ಕಾಣು ತ್ತಿದ್ದು, ಪ್ರೇಕ್ಷಕರ ಮನಗೆದ್ದಿದೆ.
ಮಾತ್ರವಲ್ಲ ಸಿನಿಮಾ ದಿಗ್ಗಜರೂ ಕೂಡ ಕೆಜಿಎಫ್ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಮಿಳಿನ ಪ್ರಸಿದ್ಧ ನಿರ್ದೇಶಕ ಎಸ್.ಶಂಕರ್ ಕೆಜಿಎಫ್ ೨ ಚಿತ್ರವನ್ನು ವೀಕ್ಷಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಒಂದು ಅದ್ಭುತ ಚಿತ್ರ, ನಿರ್ದೇಶಕರು ಆ ಚಿತ್ರವನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಸ್ಟೋರಿ, ಡೈಲಾಗ್ ಡೆಲಿವರಿ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ ಎಂದಿದ್ದಾರೆ.
ನಿರ್ದೇಶಕ ಶಂಕರ್ ಚಿತ್ರದ ಬಗ್ಗೆ ಹೇಳಿದ್ದನ್ನು ಕಂಡು ಯಶ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಮುಂದೆ ನಿರ್ದೇಶಕ ಶಂಕರ್, ಯಶ್ಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರಾ ಎಂದು ಕುತೂಹಲಗೊಂಡಿದ್ದಾರೆ. ಈ ಹಿಂದೆ ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ಯಶ್ ಪಾಲ್ಗೊಂಡಿದ್ದರು. ಈ ಸಂದರ್ಭ ಯಶ್ಗೆ ನೀವು ಮಣಿರತ್ನಂ ಅಥವಾ ಶಂಕರ್ ಈ ಇಬ್ಬರಲ್ಲಿ ಯಾವ ನಿರ್ದೇಶಕರನ್ನು ಆಯ್ದುಕೊಳ್ಳುತ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು.
ಇದಕ್ಕೆ ಯಶ್, ಶಂಕರ್ ಎಂದು ಹೇಳಿದ್ದರು. ಹಾಗಾಗಿ ಮುಂದೆ ಶಂಕರ್ ನಿರ್ದೇಶನದಲ್ಲಿಯೇ ಯಶ್ ಅವರ ಸಿನಿಮಾ ಮೂಡಿಬರಲಿದೆ ಎನ್ನಲಾಗುತ್ತಿತ್ತು.
ಈ ಇಬ್ಬರ ಕಾಂಬಿನೇಷನ್ನಲ್ಲಿ ಐತಿಹಾಸಿಕ ಕಥೆಯ ಅದ್ಭುತ ಚಿತ್ರವೊಂದು ಸೆಟ್ಟೇರಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ ಶಂಕರ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದರು. ಮುಂದೆ ನಿರ್ದೇಶಕ ಶಂಕರ್ ಹಾಗೂ ಯಶ್ ಚಿತ್ರ ಸೆಟ್ಟೇರಿದರೂ ಅಚ್ಚರಿಯಿಲ್ಲ.