ಫಿಸಿಕ್ಸ್ ಟೀಚರ್ ಹೀಗೊಂದು ವಿಭಿನ್ನ ಶೀರ್ಷಿಕೆಯ ಸಿನಿಮಾ ಈ ವಾರ ತೆರೆಗೆ ಬಂದಿದೆ. ಚಿತ್ರದ ಟೈಟಲ್ ಕೇಳಿದಾಕ್ಷಣ, ಇದು ಫಿಸಿಕ್ಸ್ ಶಿಕ್ಷಕನ ಕುರಿತ ಸಿನಿಮಾ ಇರಬೇಕು ಅನ್ನಿಸುತ್ತದೆ. ಅಂತೆಯೇ ಇಲ್ಲಿಯೂ ಒಂದಷ್ಟು ಫಿಸಿಕ್ಸ್ ಅಂಶಗಳಿವೆ. ಜತೆಗೆ
ಭೌತಶಾಸ್ತ್ರ ಶಿಕ್ಷಕನ ಕುರಿತ ಸ್ವಾರಸ್ಯಕರ ಸಂಗತಿಗಳು ಚಿತ್ರದಲ್ಲಿವೆ. ಅದು ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ. ರಂಗಭೂಮಿಯಲ್ಲಿ ನಟಿಸಿ, ಚಿತ್ರರಂಗದಲ್ಲಿಯೂ ಕಾರ್ಯನಿರ್ವಹಿಸಿದ ಅನುಭ ವವಿರುವ ಸುಮುಖ ಈ ಚಿತ್ರದ ಮೂಲಕ ಚಂದನವನದಲ್ಲಿ ಸದ್ಧು ಮಾಡಲು ಸಿದ್ಧವಾಗುತ್ತಿದ್ದಾರೆ. ಹಾಗಂತ ಸುಮುಖ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿಯೂ ಸ್ಯಾಂಡಲ್ ವುಡ್‌ಗೆ ಪರಿಚಯ ವಾಗುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರದಲ್ಲಿ ಹಲವು ಹೊಸ ವಿಚಾರವನ್ನು ಹೇಳಿದ್ದಾರೆ. ಫಿಸಿಕ್ಸ್ ಟೀಚರ್ ಚಿತ್ರದ ಕುರಿತು ಸುಮುಖ ವಿ. ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್ : ಫಿಸಿಕ್ಸ್ ಟೀಚರ್ ಇದು ಭೌತಶಾಸದ ಶಿಕ್ಷಕನ ಕಥೆಯೇ ?
ಸುಮುಖ : ಚಿತ್ರದಲ್ಲಿ ನಾಯಕ ಭೌತಶಾಸದ ಶಿಕ್ಷಕ. ಹಾಗಂತ ಚಿತ್ರದಲ್ಲಿ ಭೌತವಿಜ್ಞಾ ನದ ಕಥೆ ಇಲ್ಲ. ಬದಲಾಗಿ ವಿಭಿನ್ನ ಅಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕ ತಾರ್ಕಿಕ ಸ್ವಭಾವದವನು. ಎಲ್ಲಾ ವಿಚಾರಕ್ಕೂ ವಾದ ಮಾಡುವ ಗುಣದವನು. ಯಾವ ವಿಚಾರವನ್ನು ಸುಲಭವಾಗಿ ನಂಬದೇ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಚರ್ಚೆ ನಡೆಸಿ ಬಳಿಕ ಒಪ್ಪುವ ಜಾಯಮಾನ ಆತನದ್ದು. ಹೀಗಿರುವಾಗ ತನಗೆ ಅರಿವಿಲ್ಲ ದಂತೆ ಒಂದಷ್ಟು ಘಟನೆಗಳು ಕಾಡುತ್ತವೆ.
ಆತನನ್ನು ಕಾಡುವ ಘಟನೆಗಳೇನು, ಇದಕ್ಕೂ ನಾಯಕನಿಗೂ ಸಂಬಂಧ ಏನು ಎಂಬ ಅಂಶಗಳು ಕುತೂಹಲ ಮೂಡಿಸುತ್ತಾ ಸಾಗುತ್ತವೆ. ಅದರ ಜತೆಗೆ ಭಾವನಾತ್ಮಕತೆಗೂ ಒತ್ತು ನೀಡಲಾಗಿದೆ.
ವಿ.ಸಿ : ಚಿತ್ರದಲ್ಲಿ ಹಾರರ್ ಕಥೆಯೂ ಇದೆಯೇ ?
ಸುಮುಖ : ಹೌದು, ಒಂದಷ್ಟು ಹಾರರ್ ಟಚ್ ಕೂಡ ಚಿತ್ರಲ್ಲಿದೆ. ಯಾವ ವಿಚಾರವನ್ನು ನಾಯಕ ನಂಬುವುದಿಲ್ಲವೋ, ಅದೇ ವಿಚಾರಗಳು ಅವನನ್ನು ಹೇಗೆ ಬಿಡದೆ ಕಾಡುತ್ತವೆ ಎನ್ನುವ ಇಂಟರೆಸ್ಟಿಂಗ್ ಕಥೆ ಚಿತ್ರದಲ್ಲಿ ಸಾಗುತ್ತದೆ. ಹಾರರ್ ಅಂಶಗಳೇ ಕಥೆಗೆ ಟ್ವಿಸ್ಟ್ ಕೊಡುತ್ತದೆ. ಪ್ರೇಕ್ಷಕರನ್ನು ಕುತೂಹಲದ ಅಲೆಯಲ್ಲಿ ತೇಲಿಸುತ್ತಾ ತೆರೆಯಲ್ಲಿ ಚಿತ್ರ ಸಾಗುತ್ತದೆ.
ವಿ.ಸಿ : ಕಥೆ ಹೊಳೆದಿದ್ದು ಹೇಗೆ ?
ಸುಮುಖ : ನಾನು ಮೊದಲಿನಿಂದಲೂ ಸಿನಿಮಾ ಪ್ರಿಯ. ಹಾಗಾಗಿ ಬಹುತೇಕ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಸಿನಿಮಾ ವೀಕ್ಷಿಸುತ್ತಿದ್ದೆ. ಸಿನಿಮಾದ ಕಥೆ, ಅದನ್ನು ತೆರೆಗೆ ತಂದ ರೀತಿ, ಪ್ರೇಕ್ಷಕರ ಅಭಿರುಚಿ, ಅವರು ಮೆಚ್ಚುವ ಕಥೆಗಳು ಹೀಗೆ ಎಲ್ಲಾ ವಿಚಾರಗಳ ಬಗ್ಗೆಯೂ ಗಮನಿಸುತ್ತಿದ್ದೆ. ಆಗಲೇ ನಾನು ಯಾಕೆ ಸಿನಿಮಾ ನಿರ್ದೇಶನ ಮಾಡಬಾರದು ಎಂದು ಅನ್ನಿಸಿತು. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಹೆಣೆದೆ. ಫಿಸಿಕ್ಸ್ ಟೀಚರ್ ಸ್ಟೋರಿ ಸಿದ್ಧವಾಯಿತು. ನಾನೇ ನಾಯಕನಾಗಿಯೂ ನಟಿಸಿದೆ. ಎಲ್ಲಿಯೂ ಕಾಪ್ರಮೈಸ್ ಆಗದೆ. ಕಥೆ ಬಯಸಿದ ಎಲ್ಲವನ್ನೂ ಒದಗಿಸಿದೆ. ಅಂದುಕೊಂಡಂತೆ ಚಿತ್ರವೂ ಮೂಡಿಬಂದಿದೆ.
ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಸಿನಿಮಾವನ್ನು ಪ್ರೇಕ್ಷಕರು ಖಂಡಿತಾ ಮೆಚ್ಚುತ್ತಾರೆ ಎಂಬ ನಿರೀಕ್ಷೆಯೂ ನನಗಿದೆ.