Sunday, 15th December 2024

ರಾಧೆ ಶ್ಯಾಮನ ರೊಮ್ಯಾಂಟಿಕ್ ಗಾನ

ಪ್ರಭಾಸ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ ಸಂಕ್ರಾತಿ ಹಬ್ಬಕ್ಕೆ ಗ್ರ್ಯಾಂಡ್ ಎಂಟ್ರಿಕೊಡಲಿದೆ. ಅದಕ್ಕೂ ಮೊದಲೇ ಚಿತ್ರದ ಹಾಡು ಬಿಡುಗೆಯಾಗಿದ್ದು, ಸಂಗೀತ ಪ್ರಿಯರ ಮನಸೂರೆಗೊಂಡಿದೆ.

ಆಶಿಕಿ ಆ ಗಯಿ… ಎನ್ನುವ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಕೇಳಲು ಮಧುರ ವಾಗಿ ಮೂಡಿಬಂದಿದೆ. ಈ ರೊಮ್ಯಾಂಟಿಕ್ ಸಾಂಗ್ ಹಿಂದಿಯಲ್ಲಿ ಮೊದಲು ಬಿಡುಗಡೆ ಯಾಗಿದೆ. ವಿಶೇಷ ಎಂದರೆ ರಾಧೆ ಶ್ಯಾಮ ಕನ್ನಡದಲ್ಲೂ ಬಿಡುಗಡೆ ಯಾಗುತ್ತಿದ್ದು, ಕರಾವಳಿ ಬೆಡಗಿ ಪೂಜಾ ಹೆಗ್ಡೆಯನ್ನು ಕನ್ನಡದಲ್ಲಿಯೂ ಕಣ್ತುಂಬಿಕೊಳ್ಳಬಹುದಾಗಿದೆ.

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೋಡಿಯನ್ನು ತೆರೆಮೇಲೆ ನೋಡಲು ಕನ್ನಡಿಗರೂ ಕಾಯುತ್ತಿದ್ದಾರೆ. ಕನ್ನಡ ಸಿನಿಪ್ರಿಯರಿಗಾಗಿ ರಾಧೆ ಶ್ಯಾಮ್ ಚಿತ್ರತಂಡ ರೊಮ್ಯಾಂಟಿಕ್ ಸಾಂಗ್ ಅನ್ನು ಕನ್ನಡದಲ್ಲಿಯೂ ರಿಲೀಸ್ ಮಾಡಿದೆ. ನಗುವಂತ ತಾರೆಯೇ… ಹಾಡು
ಇದಾಗಿದ್ದು, ಕನ್ನಡಿಗರ ಮನಸೂರೆಗೊಂಡಿದೆ.

ರಾಧೆ ಶ್ಯಾಮ್ ಸಿನಿಮಾದ ನಗುವಂತ ತಾರೆಯೇ ಹಾಡು ನೋಡುಗರ ಕಣ್ಣುಗಳಿಗೆ ತಂಪು ನೀಡಿದೆ. ವಿದೇಶದ ಸುಂದರ  ಪ್ರೇಕ್ಷಣೀಯ ಸ್ಥಳಗಳನ್ನು ಈ ಹಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಸುಂದರ ಸ್ಥಳಗಳಲ್ಲಿ ಬೈಕ್ ರೈಡಿಂಗ್ ಮಾಡಿ ಸಿನಿಪ್ರಿಯರಿಗೆ ಮುದ ನೀಡಿದ್ದಾರೆ. ಈ ರೊಮ್ಯಾಂಟಿಕ್ ಜೋಡಿ ಈ ಹಾಡಿನ ಮೂಲಕ ಜಾದು ಮಾಡುತ್ತಿದೆ. ಹಾಗಾಗಿಯೇ ಈ ಹಾಡನ್ನು ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತದೆ.

ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ, ಸೂರಜ್ ಸಂತೋಷ್ ದನಿಯಾಗಿದ್ದಾರೆ. ಧನಂಜಯ್ ಸಾಹಿತ್ಯ ದಲ್ಲಿ ಹಾಡು ಮೂಡಿಬಂದಿದೆ. ರಾಧೆ ಶ್ಯಾಮ್ ೭೦ರ ದಶಕದಲ್ಲಿ ನಡೆಯುವ ಸುಂದರ ಪ್ರೇಮ ಕಥೆಯ ಚಿತ್ರವಾಗಿದೆ. ಪ್ರಭಾಸ್ ಈ ಚಿತ್ರದಲ್ಲಿ ವಿಕ್ರಮಾದಿತ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರ ಭವಿಷ್ಯವನ್ನು ಹೇಳುವ ವಿಶೇಷ ಪ್ರತಿಭೆ ಹೊಂದಿರುವ
ಸೂಪರ್ ನ್ಯಾಚುರಲ್ ಪವರ್ ಇರುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್ ತೆರೆಯ ಮೇಲೆ ದರ್ಶನ ನೀಡಲಿದ್ದಾರೆ. ರಾಧಾ ಕೃಷ್ಣ ಕುಮಾರ್ ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಧೆ ಶ್ಯಾಮ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.