ಬೆಂಗಳೂರು: ಪುಟ್ಟಕ್ಕನ ಮಕ್ಕಳು(Puttakkana Makkalu) ಸೀರಿಯಲ್(serial) ಪುಟ್ಟಕ್ಕ ಎಂದರೆ ಸಾಕು, ಎಷ್ಟೋ ಮಂದಿ ಮಹಿಳೆಯರು ಹೆಮ್ಮೆ ಪಡುವುದು ಇದೆ. ಸೀರಿಯಲ್ ಪುಟ್ಟಕ್ಕನನ್ನೇ ನಿಜಜೀವನದ ಪುಟ್ಟಕ್ಕ ಎಂದುಕೊಂಡಿರುವ ಮಹಿಳೆಯರು ಸಾಕಷ್ಟು ಮಂದಿ ಇದ್ದಾರೆ. ಈ ಪುಟ್ಟಕ್ಕ ತನ್ನ ಹೆಣ್ಣುಮಕ್ಕಳನ್ನು ಸಾಕಲು ಏಕಾಂಗಿಯಾಗಿ ಹೋರಾಟ ಮಾಡಿದ್ದನ್ನು ನೆನಪಿಸಿಕೊಂಡು, ತಮ್ಮ ಜೀವನಗಾಥೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ ಮಹಿಳೆಯರು ಅದೆಷ್ಟೋ ಮಂದಿ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂತೆ ನಡೆದಾಗ, ವೇದಿಕೆ ಮೇಲೆ ನೀವೇ ನಮಗೆ ಮಾದರಿ, ನಮ್ಮದೂ ಇದೇ ಕಥೆ ಎಂದು ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಎದುರು ಕಣ್ಣೀರಾಗಿದ್ದಾರೆ ಹಲವರು. ಇದು ಕೇವಲ ಧಾರಾವಾಹಿಯಲ್ಲ, ನಮ್ಮ ಬದುಕಿನ ಚಿತ್ರಣ, ನಿಜ ಜೀವನಕ್ಕೆ ತೀರಾ ಹತ್ತಿರವಾಗಿರುವ ಕಥೆ ಎಂದು ಕೆಲವು ಹೇಳಿದ್ದರೆ, ತಮ್ಮ ಗಂಡ ಕೈಕೊಟ್ಟು ಹೋದಾಗ, ಅಕಾಲದಲ್ಲಿ ಸಾವನ್ನಪ್ಪಿದಾಗ ತಮ್ಮ ಮಕ್ಕಳನ್ನು ಕಷ್ಟಪಟ್ಟು ಸಾಕಿದ ಬಗೆಯನ್ನು ಹೇಳಿಕೊಂಡಿದ್ದಾರೆ. ಆದ್ದರಿಂದ ಈ ಪುಟ್ಟಕ್ಕ ಅದೆಷ್ಟೋ ಮಂದಿಗೆ ದಾರಿದೀವಿಗೆಯಾದವಳು, ಮನೆಮನೆ ಮಾತಾದವಳು.
ಆದರೆ ಇದೀಗ ಯಾಕೋ ಎಲ್ಲವೂ ಏರುಪೇರು ಆಗುತ್ತಿದ್ದು, ಸ್ನೇಹ ಪಾತ್ರದ ಅಂತ್ಯದ ನಂತರ ಬಹಳಷ್ಟು ತಿರುವುಗಳನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ ತೆಗೆದುಕೊಳ್ಳುತ್ತಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಜಿಲ್ಲಾಧಿಕಾರಿಯಾದ ಸ್ನೇಹಾ ಹೆಚ್ಚು ದಿನ ಬದುಕಲಿಲ್ಲ. ಭೀಕರ ಅಪಘಾತದಲ್ಲಿ ಆಕೆ ಪ್ರಾಣ ಚೆಲ್ಲುತ್ತಾಳೆ. ಸೀರಿಯಲ್ ವೀಕ್ಷಕರಿಗೂ ಇದು ಅರಗಿಸಿಕೊಳ್ಳದ ದೃಶ್ಯವಾಗಿತ್ತು. ಎಷ್ಟೋ ಮಂದಿ ಇನ್ಮುಂದೆ ಈ ಧಾರಾವಾಹಿ ನೋಡಲ್ಲ ಎಂದೇ ಹೇಳಿಕೊಂಡಿದ್ದರು. ಸ್ನೇಹಾ ಇಲ್ಲದ ಸೀರಿಯಲ್ ನಮಗೆ ಬೇಡ ಎಂದಿದ್ದರು. ಆದರೆ, ಕಥೆ ಮುಂದೆ ಸಾಗಲೇಬೇಕು. ಪಾತ್ರಗಳೂ ಬದಲಾಗಲೇಬೇಕು. ಈ ಬದಲಾವಣೆಗೆ ಜನ ಮತ್ತೆ ಒಗ್ಗಿಕೊಂಡಿದ್ದಾರೆ. ಟಿಆರ್‌ಪಿ ರೇಸ್‌ನಲ್ಲಿಯೂ ಈ ಸೀರಿಯಲ್ ಈಗ ಮುಂದಡಿ ಇರಿಸಿದೆ.
ಸದ್ಯ ಸ್ನೇಹಾ ಸತ್ತ ಬಳಿಕ ಕಂಠಿ ಬಹಳ ಬದಲಾಗಿದ್ದಾನೆ. ಕಂಠಿ ಸ್ಥಿತಿಯನ್ನು ನೋಡಲು ಆಗದೆ ಅನೇಕ ಜನ ಅಭಿಮಾನಿಗಳು ಮರುಕಪಡುತ್ತಿದ್ದಾರೆ. ಸ್ನೇಹಾ ಬದಲಿಗೆ ಮತ್ತೋರ್ವ ಪಾತ್ರಧಾರಿ ಎಂಟ್ರಿ ಆಗಿದೆ ಆದರೆ ಆಕೆಯನ್ನು ನೋಡಿದರೆ ಕಂಠಿ ಉರಿದು ಬೀಳುತ್ತಾನೆ. ಆತನಿಗೆ ಸ್ನೇಹಾ ಮೇಲೆ ಬಹಳಷ್ಟು ಸೇಡು. ಅದ್ಯಾಕೋ ಗೊತ್ತಿಲ್ಲ ಸ್ನೇಹಾ ಹೆಸರಿರುವ ಹುಡುಗಿಯ ಮೇಲೆ ಹಲ್ಲು ಮಸೆಯುತ್ತಿರುತ್ತಾನೆ.
ಆದರೀಗ ಹೊಸ ಸ್ನೇಹಾಳು ಕಂಠಿ ವಿರುದ್ದ ಸಿಡಿಸಿಡಿದೆದ್ದಿದ್ದು, ಸಿಂಗಾರಮ್ಮನ ಮಗನ ಅಟ್ಟಾಡಿಸಿಕೊಂಡು ಓಡುತ್ತಿದ್ದ ಕಂಠಿಯನ್ನು ಸ್ನೇಹಾ ತಡೆದಿದ್ದಾಳೆ.. ಇಷ್ಟು ದಿನ ಸಾಹೇಬ್ರೇ… ಸಾಹೇಬ್ರೇ ಎಂದು ಕಂಠಿಯ ಹಿಂದೆ ಮುಂದೆ ತಿರುಗುತ್ತಿದ್ದ ಸ್ನೇಹಾಳ ಈ ರುದ್ರ ಅವತಾರ ನೋಡಿ ಕಂಠಿಯೂ ಶಾಕ್ ಆಗಿದ್ದು, ಈ ಹೊಡೆದಾಟ ಬಡಿದಾಟ ಎಲ್ಲ ಬಿಟ್ಟು ಮನೆಯವರಿಗೋಸ್ಕರ ಬದುಕುವಂತೆ ಸ್ನೇಹಾ ಕಂಠಿಗೆ ತಾಕೀತು ಮಾಡುತ್ತಿದ್ದಾಳೆ…
ಸದ್ಯ ಈ ದೃಶ್ಯದ ಪ್ರೋಮೋವನ್ನು ಜೀ ಕನ್ನಡ ಹಂಚಿಕೊಂಡಿದ್ದು, ವೀಕ್ಷಕರು ಕೂಡ ಸ್ನೇಹಾ ಗರಂ ಆಗಿರುವುದನ್ನು ಕಂಡು ಬೆರಗಾಗಿದ್ದಾರೆ. ಇನ್ನು ಕಿರುತೆರೆ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಬಿಗ್ ಸರ್ಪ್ರೈಸ್ ನೀಡುತ್ತಿದೆ. ಇಷ್ಟು ದಿನ ವಾರದ ಐದು ದಿನಗಳಲ್ಲಿ ಅರ್ಧರ್ಧ ಗಂಟೆಗಳ ಕಾಲ ಪ್ರಸಾರ ಕಾಣುತ್ತಿದ್ದ ಸೀರಿಯಲ್‌ಗಳೀಗ ಒಂದು ಗಂಟೆಯಂತೆ ಪ್ರಸಾರವಾಗಲಿದೆ. ಜನಪ್ರಿಯ ಧಾರಾವಾಹಿಗಳಿಂದ ಮನೆ ಮಾತಾಗಿರುವ ಜೀ ಕನ್ನಡ, ವಾರವಿಡೀ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಧಾರಾವಾಹಿಗಳ ಮೂಲಕ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ.
ಈ ಸುದ್ದಿಯನ್ನು ಓದಿ: Isa Guha: ಜಸ್‌ಪ್ರೀತ್ ಬುಮ್ರಾ ಕ್ಷಮೆ ಕೇಳಿದ ಇಶಾ ಗುಹಾ