Saturday, 14th December 2024

ರಾಣಾನಾಗಿ ಬಂದ ಶ್ರೇಯಸ್ ಮಂಜು

ಪ್ರಶಾಂತ್.ಟಿ.ಆರ್

ರಾಣಾ, ಈ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ಪಂಚಿಂಗ್ ಇದೆ. ಈಗ ಈ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬಂದಿದೆ. ಶ್ರೇಯಸ್ ಮಂಜು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮಾಸ್ ಆಗಿ ಮಿಂಚಿದ್ದಾರೆ. ರಾಣಾ
ಸಾಹಸ ಪ್ರಧಾನ ಕಥೆಗೆ ಸೀಮಿತವಾಗಿಲ್ಲ.

ಇಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ. ಒಳ್ಳೆಯ ಸೋಷಿಯಲ್ ಮೆಸೇಜ್ ಕೂಡ ಅಡಕ ವಾಗಿದೆ. ಈ ಎಲ್ಲಾ ಅಂಶಗಳನ್ನು ಬೆರೆಸಿ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್. ನಿರ್ದೇಶಕ ನಂದಕಿಶೋರ್ ಸಿನಿಮಾ ಎಂದಾಕ್ಷಣ ಅಲ್ಲಿ
ಸಾಹಸ ಪ್ರಧಾನ ಕಥೆ ಇರುವುದು ಖಚಿತವಾಗುತ್ತದೆ. ಅಂತೆಯೇ ಇಲ್ಲಿಯೂ ಭರ್ಜರಿ ಆಕ್ಷನ್ ದೃಶ್ಯಗಳಿವೆ. ಇದರಲ್ಲಿ ಶ್ರೇಯಸ್ ಅದ್ಭುತವಾಗಿ ಅಭಿನಯಿಸಿದ್ದಾರೆ.

ಅದೆಲ್ಲವೂ ಟ್ರೇಲರ್‌ನಲ್ಲಿ ಸ್ಪಷ್ಟವಾಗಿದೆ. ಒಂದು ಗಟ್ಟಿ ಕಥೆ ಚಿತ್ರದಲ್ಲಿರುವುದು ಸಾಬೀತಾಗುತ್ತದೆ. ಅದರಲ್ಲಿಯೂ ಚಂದನ್ ಶೆಟ್ಟಿ ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೊಸ ಮೆರುಗು ತುಂಬಿದೆ.

ಹೊಸಕಥೆ ಹೊಸತನ
ಇಲ್ಲಿ ನಾಯಕ ಪೊಲೀಸ್ ಅಧಿಕಾರಿ. ಸಾಮಾನ್ಯವಾಗಿ ಪೊಲೀಸ್ ಆಫೀಸರ್ ಎಂದಾಕ್ಷಣ ಆ ಪಾತ್ರಕ್ಕೆ ಒಂದಷ್ಟು ಬಿಲ್ಡಪ್ ಕೂಡ ಇರುತ್ತದೆ. ಆದರೆ ಈ ಚಿತ್ರದಲ್ಲಿ ವಿಭಿನ್ನತೆ ಇದೆ. ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಹೇಗಿರುತ್ತಾರೆ ಅದೇ ರೀತಿ ತೆರೆಗೆ ತಂದಿದ್ದಾರೆ. ಉನ್ನತ ಧ್ಯೇಯ ಹೊಂದಿದ ಯುವಕನೊಬ್ಬ, ಪೊಲೀಸ್ ಆಫೀಸರ್ ಆಗಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾನೆ.

ಸಮಾಜಘಾತುಕರನ್ನು ಹೇಗೆ ಹೆಡೆಮುರಿ ಕಟ್ಟಿತ್ತಾನೆ ಎಂಬುದನ್ನು ಚಿತ್ರದಲ್ಲಿ ಬಲು ಅಚ್ಚು ಕಟ್ಟಾಗಿ ತೋರಿಸಲಾಗಿದೆ. ಅದಕ್ಕೆ ನೈಜತೆಯ ಸ್ಪರ್ಶ ನೀಡಲಾಗಿದೆ.

ಕ್ಯೂಟ್ ಲವ್ ಸ್ಟೋರಿ
ಇಲ್ಲಿ ಆಕ್ಷನ್ ಅಬ್ಬರದ ಜತೆಗೆ ನವಿರಾದ ಪ್ರೇಮಕಥೆಯೂ ಇದೆ. ಅಂದುಕೊಂಡಿದ್ದನ್ನು ಸಾಧಿಸಲು ಹೊರಟ ಯುವಕನಿಗೆ ಪ್ರೇಯಸಿ ಹೇಗೆ ನೆರವಾಗುತ್ತಾಳೆ ಎಂಬುದನ್ನು ಮನಮುಟ್ಟುವಂತೆ ಹೇಳಲಾಗಿದೆ. ಚಿತ್ರದಲ್ಲಿ ಶ್ರೇಯಸ್ ಜತೆಯಾಗಿ ರೀಷ್ಮಾ ನಾಣಯ್ಯ ಬಣ್ಣಹಚ್ಚಿದ್ದಾರೆ. ಚಿತ್ರದುದ್ದಕ್ಕೂ ಮುದ್ದಾಗಿ ಕಂಗೊಳಿಸಿದ್ದಾರೆ. ಇದಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚವಂತೆ ಮಾಡಿವೆ. ಕೆಲವು ಹಾಡುಗಳಲ್ಲಿ ಶ್ರೇಯಸ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ.

ಯಾರು ಆ ಸೂರಿ
ರಾಣ ಚಿತ್ರದ ಟ್ರೇಲರ್ ನೋಡಿದರೆ ಕೇಳಿ ಬರುವ ಹೆಸರೆ ಸೂರಿ. ಅಷ್ಟಕ್ಕೂ ಈ ಸೂರಿ ಯಾರು, ಆತ ಖಳನೆ. ಸಮಾಜಕ್ಕೆ ಒಳಿತು ಮಾಡುವವನೆ. ಹೀಗೆ ಹಲವು ಪ್ರಶ್ನೆಗಳು ಕಾಡುತ್ತವೆ. ಸೂರಿಯ ಬಗ್ಗೆ ತಿಳಿಯಲು ಸಿನಿಮಾ ನೋಡಲೇಬೇಕು. ಸೂರಿ ಹಾಗೂ ರಾಣನ ನಡುವೆ ನಡೆಯುವ ರೋಚಕ ಕಥೆ ಚಿತ್ರದಲ್ಲಿದೆ ಎಂಬುದು ಬಹುತೇಕ ಖಚಿತವಾಗಿದೆ.

*

ನಾನು ನಟಿಸಿದ ಸಿನಿಮಾಗಳು ತೆರೆಗೆ ಬಂದು ಮೂರು ವರ್ಷಗಳೇ ಕಳೆದಿವೆ. ಈಗ ಮತ್ತೆ ಪ್ರೇಕ್ಷಕರೆದುರಿಗೆ ಬರುತ್ತಿದ್ದೇನೆ ಎಂಬ ಸಂತಸ ನನಗಿದೆ. ಈ ಚಿತ್ರ ನನಗೆ ಬಹಳ ವಿಶೇಷವಾ ಗಿದೆ. ಪಡ್ಡೆ ಹುಲಿಗಿಂತ ಈ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದೇನೆ
ಎಂಬ ನಂಬಿಕೆ ನನ್ನಲ್ಲಿದೆ. ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿ ನಿಮ್ಮ ಮುಂದೆ ಬಂದಿದ್ದೇನೆ. ಕನ್ನಡ ಜನತೆ ನನ್ನ ಕೈಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ.
-ಶ್ರೇಯಸ್ ಮಂಜು