Sunday, 24th November 2024

ಸಂಗೀತ ಪ್ರೇಮಿಯ ಹೃದಯದ ಮಿಡಿತ ರೇಮೊ

ಪ್ರಶಾಂತ್‌ ಟಿ.ಆರ್‌

ಚಂದನವನದಲ್ಲಿ ಕಾತರತೆ ಹೆಚ್ಚಿಸಿರುವ ಮ್ಯೂಸಿಕಲ್ ಕಹಾನಿಯ ರೇಮೊ ತೆರೆಗೆ ಬರಲು ಸಿದ್ಧವಾಗಿದೆ. ನವಿರಾದ ಪ್ರೇಮಕಥೆಯ ರೇಮೊ ಟೀಸರ್‌ನಲ್ಲಿಯೇ ಸದ್ದು ಮಾಡುತ್ತಿದೆ. ಹಾಡಿನ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಹಿಂದೆ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಮನಗೆದ್ದಿದ್ದ ನಟ ಇಶಾನ್ ಈಗ ರೇಮೊ ಮೂಲಕ ಸ್ಯಾಂಡಲ್‌ವುಡ್‌ ನಲ್ಲಿಯೂ ಮಿಂಚಲು ಸಿದ್ಧವಾಗಿದ್ದಾರೆ.

ಇನ್ನೇನು ಬೆಳ್ಳಿತೆರೆಗೆ ಬರಲಿರುವ ರೇಮೊ ಅದಕ್ಕೂ ಮೊದಲೇ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಇಶಾನ್ ವಿ.ಸಿನಿ ಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್ : ರೇಮೊ ಶಿರ್ಷಿಕೆಯೇ ಡಿಫರೆಂಟ್ ಆಗಿದೆಯಲ್ಲ ?
ಇಶಾನ್ : ಇದು ಮ್ಯೂಸಿಕಲ್ ಜರ್ನಿಯ ಸಿನಿಮಾ. ಇಲ್ಲಿ ಲವ್, ಸೆಂಟಿಮೆಂಟ್, ಫ್ಯಾಮಿಲಿ ಎಲಿಮೆಂಟ್ಸ್ ಎಲ್ಲವೂ ಮಿಳಿತವಾಗಿವೆ. ಚಿತ್ರದ ನಾಯಕನ ಹೆಸರು ರೇವಂತ್, ನಾಯಕಿ ಮೋಹನಾ ಹಾಗಾಗಿ ಈ ಇಬ್ಬರ ಹೆಸರು ಹೊಂದಾಣಿಕೆಯಾಗಲಿ ಎಂದು ಈ ಶೀರ್ಷಿಕೆಯನ್ನು ಇಡಲಾಗಿದೆ. ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ಸಂಗೀತ ಪ್ರೇಮಿಗಳು ಅವರ ಸುತ್ತ ಚಿತ್ರದ ಕಥೆ ಸಾಗುತ್ತದೆ.

ವಿ.ಸಿ: ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ ?
ಇಶಾನ್ : ಚಿತ್ರದಲ್ಲಿ ನನ್ನದು ರೇವಂತ್ ಎನ್ನುವ ಪಾತ್ರ. ಆತ ಸಂಗೀತ ಪ್ರೇಮಿ. ಸಂಗೀತವೇ ಆತನ ಉಸಿರು. ಆತನ ಬಾಳಲ್ಲಿ ಹುಡುಗಿ ಸಿಕ್ಕಾಗ ಏನಾಗುತ್ತದೆ. ಅದರಲ್ಲಿಯೂ ಆಕೆ ಸಂಗೀತ ಪ್ರೇಮಿಯಾದರೆ ಆತನ ಬದುಕಿನಲ್ಲಿ ಹೇಗೆ ಹೊಸತನ ತರುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಮ್ಯೂಸಿಕಲ್ ಜರ್ನಿಯ ಜತೆಗೆ -ಮಿಲಿ ಸೆಂಟಿಮೆಂಟ್ ಕಥೆಯೂ ಚಿತ್ರದಲ್ಲಿ ಬೆರೆತಿದೆ.

ವಿ.ಸಿ : ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ ?
ಇಶಾನ್ : ನಿರ್ದೇಶಕರು ಬಂದು ಕಥೆ ಹೇಳಿದಾಗ ಕುತೂಹಲ ಹೆಚ್ಚಿತು. ಹೊಸತನ ಇರುವುದು ತಿಳಿಯಿತು. ಈ ಚಿತ್ರದಲ್ಲಿ ನಟಿಸಲೇಬೇಕು ಎಂದು ನಿರ್ಧರಿಸಿದೆ, ಅಂತೆಯೇ ನಟಿಸಲು ಸಂತಸದಿಂದಲೇ ಒಪ್ಪಿದೆ. ಅದರಲ್ಲೂ ಮ್ಯೂಸಿಕಲ್ ಜರ್ನಿಯ ಕಥೆ ಎಂದಾಕ್ಷಣ ಮರುಮಾತಾಡದೆ ಒಪ್ಪಿಕೊಂಡೆ. ನಿರ್ದೇಶಕರು ಚಿತ್ರವನ್ನು ಬಲು ಅಚ್ಚುಕಟ್ಟಾಗಿ ತೆರೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದ್ಭುತ ವಾದ ಮೇಕಿಂಗ್ ಚಿತ್ರದಲ್ಲಿದೆ. ಸಿನಿಮಾದ ದೃಶ್ಯ ವೈಭವ ತೆರೆಯಲ್ಲಿ ಶ್ರೀಮಂತವಾಗಿ ಮೂಡಿಬಂದಿದೆ.

ವಿ.ಸಿ : ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು ?
ಇಶಾನ್ : ಕಥೆಗೆ ತಕ್ಕಂತೆ ತಯಾರಿ ನಡೆಸಿದೆ. ಈ ಚಿತ್ರಕ್ಕಾಗಿ ಹೊಸ ಗೆಟಪ್ ತಾಳಿದೆ. ರ‍್ಯಾಪರ್ ಅಂದ ಮೇಲೆ ಒಂದಷ್ಟು ಕೇಶ ರಾಶಿ ಇರಬೇಕಿತ್ತು. ಅಂತೆಯೇ ಹೇರ್ ಸ್ಟೈಲ್ ಮಾಡಿಕೊಂಡೆ. ರೇಮೊಗಾಗಿ ಮತ್ತಷ್ಟು ವರ್ಕ್‌ಔಟ್ ಮಾಡಿದೆ. ಒಬ್ಬ ಸಂಗೀತ ಪ್ರೇಮಿ ಯಾಗಿ ಚಿತ್ರದಲ್ಲಿ ನಟಿಸಿದ್ದು ನನಗೆ ಅಪಾರ ಸಂತಸ ತಂದಿದೆ. ರೇಮೊ ಸಿನಿಮಾವನ್ನು ಪ್ರೇಕ್ಷಕರು ಖಂಡಿತಾ ಮೆಚ್ಚುತ್ತಾರೆ ಎಂಬ ನಂಬಿಕೆ ನನಗಿದೆ.

ವಿ.ಸಿ : ಸಿನಿಮಾದ ಹಾಡುಗಳ ಬಗ್ಗೆ ಹೇಳುವುದಾದರೆ
ಇಶಾನ್ : ಹಾಡುಗಳು ಚಿತ್ರದ ಜೀವಾಳ. ಕಥೆಗೆ ಪೂರಕವಾಗುವಂತೆ ಹಾಡು ಗಳು ಮೂಡಿಬಂದಿವೆ. ಎಲ್ಲಾ ಹಾಡುಗಳು ಕೇಳಲು ಮಧುರವಾಗಿವೆ. ಅದರಲ್ಲೂ ಎರಡು ಹಾಡುಗಳು ಅದ್ಭುತವಾಗಿವೆ. ಅದ್ಧೂರಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ.